Tadviruddha Teaser: ಕುತೂಹಲಕ್ಕೆ ದೂಡುವ ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್ ನಟನೆಯ ತದ್ವಿರುದ್ಧ ಚಿತ್ರದ ಟೀಸರ್
Tadviruddha Teaser: ತದ್ವಿರುದ್ಧ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಸ್ವಚ್ಛ ಕನ್ನಡದ ಮಾತಿನಿಂದ ಹಾಗೂ ತಮ್ಮ ಅಮೋಘ ಅಭಿನಯದಿಂದ ಜನಪ್ರಿಯರಾಗಿರುವ ಸುಚೇಂದ್ರ ಪ್ರಸಾದ್, ಹಿರಿಯ ನಟಿ ಸುಮನ್ ರಂಗನಾಥ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Tadviruddha Kannada Movie Teaser: ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು ಯಶಸ್ಸು ಕಂಡಿರುವ ಸಾಕಷ್ಟು ಉದಾಹರಣೆಗಳಿವೆ. ಅಂತಹುದೇ ವಿಭಿನ್ನ ಕಂಟೆಂಟ್‌ವುಳ್ಳ ತದ್ವಿರುದ್ಧ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಸ್ವಚ್ಛ ಕನ್ನಡದ ಮಾತಿನಿಂದ ಹಾಗೂ ತಮ್ಮ ಅಮೋಘ ಅಭಿನಯದಿಂದ ಜನಪ್ರಿಯರಾಗಿರುವ ಸುಚೇಂದ್ರ ಪ್ರಸಾದ್, ಹಿರಿಯ ನಟಿ ಸುಮನ್ ರಂಗನಾಥ್ ಹಾಗೂ ವಿಕ್ರಮ್ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಚಾರ್ಮಿಯನ್ ಮೋಷನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ವಿನೋದ್ ಜೆ ರಾಜ್ ನಿರ್ದೇಶಿಸಿದ್ದಾರೆ.
ಯಶೋಗಾಥೆ ಎಂಬ ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರ ತದ್ವಿರುದ್ಧ. ವಾಸ್ತವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದೆ " ತದ್ವಿರುದ್ಧ " ಎಂದು ಶೀರ್ಷಿಕೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ನಿರ್ದೇಶಕ ವಿನೋದ್ ಜೆ ರಾಜ್, ಇದೊಂದು 90 ಕಾಲಘಟ್ಟದಲ್ಲಿ ನಡೆಯುವ ಕಥೆ. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರವಾದರೂ ಕ್ರೌರ್ಯವನ್ನು ವೈಭವಿಕರಿಸಿಲ್ಲ. ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ ಸೇರಿದಂತೆ ಐದು ಮುಖ್ಯಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ.
ಸಕಲೇಶಪುರದಲ್ಲೇ ಪೂರ್ತಿ ಚಿತ್ರೀಕರಣ ನಡೆದಿದೆ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಪಕರು ಚಿತ್ರ ನಿರ್ಮಾಣ ಮಾಡಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರು ಸಹಕಾರ ನೀಡಿದ್ದಾರೆ. ಹಾಡಿಲ್ಲದ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತವೇ ಹೈಲೆಟ್ ಎನ್ನುತ್ತಾರೆ. ಕಥೆ, ಚಿತ್ರಕಥೆ, ಛಾಯಾಗ್ರಹಣ, ಸಂಕಲನದ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಯಾಗಿ ನಿಭಾಯಿಸಿರುವ ನಿರ್ದೇಶಕರು ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದ್ದಾರೆ.
ಸುಚೇಂದ್ರ ಪ್ರಸಾದ್ ಏನಂದ್ರು?
ಹೊಸಚಿಗುರು ಹಳೇ ಬೇರು ಸಮ್ಮಿಶ್ರಣ ಈ ಚಿತ್ರ ಎಂದು ಮಾತನಾಡಿದ ನಟ ಸುಚೇಂದ್ರ ಪ್ರಸಾದ್, ಸಿದ್ದ ಸೂತ್ರಗಳನ್ನು ಪಕ್ಕಕ್ಕಿರಿಸಿ ಮಾಡಿರುವ ಚಿತ್ರವಿದು. ಹಾಗಾಗಿ ಸ್ವಲ್ಪ ಈ ಚಿತ್ರ ಭಿನ್ನ. ಸಿನಿಮಾ ತಂತ್ರವನ್ನು ಬಿಟ್ಟು ಬೇರೆ ಯಾವ ತಂತ್ರಗಾರಿಕೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ಹೇರಿಲ್ಲ. ಹಾಗಾಗಿ ಇದು ವಿಭಿನ್ನ ಅಂತಲೂ ಹೇಳಬಹುದು. ಈ ವಿಭಿನ್ನ ಕಥೆಯ ಈ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ ಎಂದರು.
ನಿರ್ದೇಶಕರು ಹೇಳಿದ ತಕ್ಷಣ ಕಥೆ ಇಷ್ಟವಾಯಿತು. ನನ್ನ ಪಾತ್ರ ಚೆನ್ನಾಗಿದೆ. ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಎಲ್ಲರೂ ನಮ್ಮ ಚಿತ್ರವನ್ನು ನೋಡಿ ಎಂದರು ನಟಿ ಸುಮನ್ ರಂಗನಾಥ್.
ಚಿತ್ರದಲ್ಲಿ ಅಭಿನಯಿಸಿರುವ ವಿಕ್ರಮ್, ಐಶ್ವರ್ಯ ಬಿ ಶೆಟ್ಟಿ, ಸುವಿನ ಗೌಡ, ಪೂಜಾ ಗೌಡ, ಅಭಿಲಾಶ್ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಕೆ.ಆರ್ ರವಿಚಂದ್ರ, ಐಶ್ವರ್ಯ ಬಿ ಶೆಟ್ಟಿ ಚಿತ್ರದ ಕುರಿತು ಮಾತನಾಡಿದರು.