ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಜತೆಗೆ ಪೆನ್‌ಡ್ರೈವ್ ಬಳಗ ಸೇರಿಕೊಂಡ ಕನಸಿನ ರಾಣಿ ಮಾಲಾಶ್ರೀ
ಸೆಬಾಸ್ಟಿಯನ್ ಡೇವಿಡ್ ನಿರ್ದೇಶನದ ಪೆನ್‌ಡ್ರೈವ್ ಸಿನಿಮಾದಿಂದ ಹೊಸ ಅಪ್‌ಡೇಟ್ ಹೊರಬಿದ್ದಿದೆ. ತನಿಷಾ ಕುಪ್ಪಂಡ ಮತ್ತು ಮಾಲಾಶ್ರೀ ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾದ ಮುಹೂರ್ತ ಇದೀಗ ನೆರವೇರಿದೆ.
Pendrive Movie Launch: ಬಿಗ್‌ಬಾಸ್ ಕನ್ನಡ ಸೀಸನ್ 10ರ ಬಳಿಕ ಮುನ್ನೆಲೆಗೆ ಬಂದವರು ನಟಿ ತನಿಷಾ ಕುಪ್ಪಂಡ. ಈ ಹಿಂದೆ ಸಾಕಷ್ಟು ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ನಟಿಸಿದ್ದರೂ, ದೊಡ್ಡ ಮಟ್ಟದ ಫೇಮ್ ಸಿಕ್ಕಿರಲಿಲ್ಲ. ಆದರೆ, ಬಿಗ್‌ಬಾಸ್‌ನಲ್ಲಿ ತಮ್ಮ ಖಡಕ್ ಮಾತು, ವ್ಯಕ್ತಿತ್ವದ ಮೂಲಕವೇ ನಾಡಿನ ಗಮನ ಸೆಳೆದವರು ತನಿಷಾ. ಬಿಗ್‌ಬಾಸ್ ಬಳಿಕ ಸಾಕಷ್ಟು ಸಿನಿಮಾ ಅವಕಾಶ ಪಡೆಯುತ್ತಿರುವ ತನಿಷಾ, ಸದ್ಯ ಪೆನ್‌ಡ್ರೈವ್ ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಶೀರ್ಷಿಕೆ ಅನಾವರಣ ಮಾಡಿಕೊಂಡಿದ್ದ ಈ ಚಿತ್ರ ಇದೀಗ ಮುಹೂರ್ತ ಮುಗಿಸಿಕೊಂಡಿದೆ.
ಆರ್ ಹೆಚ್ ಎಂಟರ್ಪ್ರೈಸಸ್ ಬ್ಯಾನರ್‌ನಲ್ಲಿ ಎನ್ ಹನುಮಂತರಾಜು ಹಾಗೂ ಲಯನ್ ಎಸ್ ವೆಂಕಟೇಶ್, ಪೆನ್‌ಡ್ರೈವ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಲವು ಸಿನಿಮಾ ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದ ಸೆಬಾಸ್ಟಿನ್ ಡೇವಿಡ್ ಪೆನ್‌ಡ್ರೈವ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಅಭಿನಯದ ಪೆನ್ ಡ್ರೈವ್ ಚಿತ್ರದ ಪ್ರಮುಖಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಸಹ ಅಭಿನಯಿಸುತ್ತಿರುವುದು ವಿಶೇಷ.
ಚಾಮುಂಡಿ, ದುರ್ಗಿ ಮುಂತಾದ ಆಕ್ಷನ್ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಆಕ್ಷನ್ ಕ್ವೀನ್ ಎಂದು ಜನಪ್ರಿಯರಾಗಿರುವ ಮಾಲಾಶ್ರೀ ಹಾಗೂ ಬಿಗ್ ಬಾಸ್ ನಂತರ ಬೆಂಕಿ ಅಂತಲೇ ಕರೆಯಲ್ಪಡುವ ತನಿಷಾ ಕುಪ್ಪಂಡ ಇಬ್ಬರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಕಾರಣಕ್ಕೆ ಅಭಿಮಾನಿ ವಲಯದಲ್ಲಿ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ.
ನಿಮಿಷಾಂಬ ದೇಗುಲದಲ್ಲಿ ಮುಹೂರ್ತ
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇ ಗೌಡ ಆರಂಭ ಫಲಕ ತೋರಿದರು. ಹಿರಿಯ ವಕೀಲ ರೇವಣ್ಣ ಸಿದ್ದಯ್ಯ ಕ್ಯಾಮೆರಾ ಚಾಲನೆ ಮಾಡಿದರು. ಮಾಲಾಶ್ರೀ ಸಹ ಮುಹೂರ್ತದಲ್ಲಿದ್ದರು. ಆನಂತರ ಚಿತ್ರತಂಡದವರು ಹಾಗೂ ಗಣ್ಯರು ಸೇರಿ ಅಲ್ಲಿ ಉಪಸ್ಥಿತರಿದ್ದ ಮಹಿಳೆಯರಿಗೆ ಮಂಗಳದ್ರವ್ಯ ಸಮೇತ ಸೀರೆ ನೀಡಿದರು.
ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ
ವಿಭಿನ್ನ ಕಥಾಹಂದರ ಹೊಂದಿರುವ ಪೆನ್‌ಡ್ರೈವ್ ಚಿತ್ರವನ್ನು ಹದಿನೈದು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ಸೆಬಾಸ್ಟಿನ್ ಡೇವಿಡ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮಾಲಾಶ್ರೀ, ತನಿಷಾ ಕುಪ್ಪಂಡ, ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ನಾಗೇಶ್ ಸಂಕಲನದ ಜತೆಗೆ ಸಂಭಾಷಣೆಯನ್ನು ಬರೆಯುತ್ತಿದ್ದಾರೆ. ಡಾ. ವಿ.ನಾಗೇಂದ್ರ ಪ್ರಸಾದ್ ಗೀತರಚನೆ ಹಾಗೂ ಸಂಗೀತ ನಿರ್ದೇಶನ ನೀಡಲಿದ್ದಾರೆ.