Rakshasa: ಪ್ರಜ್ವಲ್‌ ದೇವರಾಜ್‌ ರಾಕ್ಷಸ ತೆಲುಗು ಹಾದಿ ಸುಗಮ; ಭಾರೀ ಮೊತ್ತಕ್ಕೆ ಥಿಯೇಟರ್ ಹಕ್ಕು ಮಾರಾಟ
ಕನ್ನಡ ಸುದ್ದಿ  /  ಮನರಂಜನೆ  /  Rakshasa: ಪ್ರಜ್ವಲ್‌ ದೇವರಾಜ್‌ ರಾಕ್ಷಸ ತೆಲುಗು ಹಾದಿ ಸುಗಮ; ಭಾರೀ ಮೊತ್ತಕ್ಕೆ ಥಿಯೇಟರ್ ಹಕ್ಕು ಮಾರಾಟ

Rakshasa: ಪ್ರಜ್ವಲ್‌ ದೇವರಾಜ್‌ ರಾಕ್ಷಸ ತೆಲುಗು ಹಾದಿ ಸುಗಮ; ಭಾರೀ ಮೊತ್ತಕ್ಕೆ ಥಿಯೇಟರ್ ಹಕ್ಕು ಮಾರಾಟ

ನಟ ಪ್ರಜ್ವಲ್‌ ದೇವರಾಜ್‌ ನಟನೆಯ ರಾಕ್ಷಸ ಸಿನಿಮಾ ಈಗಾಗಲೇ ಟೀಸರ್‌ ಮೂಲಕವೇ ಸದ್ದು ಮಾಡುತ್ತಿದೆ. ಇನ್ನೇನು ಶಿವರಾತ್ರಿಗೆ ಈ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ಅದಕ್ಕೂ ಮೊದಲು ಈ ಸಿನಿಮಾದ ತೆಲುಗು ಥಿಯೇಟರ್‌ ಹಕ್ಕುಗಳಿಗೆ ಒಳ್ಳೆಯ ಬೇಡಿಕೆ ಬಂದಿದೆ.

ರಾಕ್ಷಸ ತೆಲುಗು ಥಿಯೇಟರ್‌ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ
ರಾಕ್ಷಸ ತೆಲುಗು ಥಿಯೇಟರ್‌ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ

Rakshasa Kannada Movie: ಪ್ರತಿ ಸಿನಿಮಾಗಳಲ್ಲಿಯೂ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ರಂಜಿಸುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರಾಕ್ಷಸ ಅವತಾರವೆತ್ತಿರುವುದು ಗೊತ್ತೇ ಇದೆ. ಅಂದರೆ ಈ ಚಿತ್ರದಲ್ಲಿ ಅವರು ಡಿಫರೆಂಟ್ ಗೆಟಪ್ ಧರಿಸಿದ್ದಾರೆ. ಶಿವರಾತ್ರಿ ಹಬ್ಬಕ್ಕೆ ತೆರೆಗೆ ಬರುತ್ತಿರುವ ರಾಕ್ಷಸ ಸಿನಿಮಾದಿಂದ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. ತೆಲುಗಿನಲ್ಲಿಯೂ ಬಿಡುಗಡೆಯಾಗುತ್ತಿರುವ ಈ ಚಿತ್ರದ ಥಿಯೇಟರ್ ಹಕ್ಕನ್ನು ‌ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ತನ್ನದಾಗಿಸಿಕೊಂಡಿದೆ. ತೆಲುಗು ಪ್ರೇಕ್ಷಕರಿಗೆ ರಾಕ್ಷಸ ಸಿನಿಮಾವನ್ನು ಈ ಸಂಸ್ಥೆ ತಲುಪಿಸಲಿದೆ.

"ಇತ್ತೀಚೆಗೆ ಕನ್ನಡ ಸಿನಿಮಾಗಳು ವ್ಯಾಪಾರವಾಗ್ತಿರುವುದೇ ಕಡಿಮೆ. ಹೀಗಿದ್ದರೂ ಈಗಾಗಲೇ ಕನ್ನಡ ಥಿಯೇಟರ್ ರೈಟ್ಸ್ ಬಿಕರಿಯಾಗಿದೆ. ಈಗ ಬರೀ ಟೀಸರ್, ಟ್ರೇಲರ್, ಕಂಟೆಂಟ್ ನೋಡಿಯೇ ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ಒಳ್ಳೆಯ ಮೊತ್ತಕ್ಕೆ ಹಕ್ಕನ್ನು ತಮ್ಮದಾಗಿಸಿಕೊಂಡಿದೆ. ಹಲವಾರು ಹೊಸತನಗಳನ್ನು ಹೊಂದಿರುವ ಈ ಸಿನಿಮಾ ಮೇಲೆ ಭರವಸೆಯಿಟ್ಟು ವಿತರಣೆ ಹಕ್ಕನ್ನು ಪಡೆದುಕೊಂಡಿದೆ. ಇದು ಸಂತಸ ತಂದಿದೆ" ಎಂದು ನಿರ್ಮಾಪಕರಾಗಿರುವ ದೀಪು ಬಿ.ಎಸ್ ಖುಷಿ ಹಂಚಿಕೊಂಡಿದ್ದಾರೆ.

ಮಮ್ಮಿ ಖ್ಯಾತಿಯ ಲೋಹಿತ್‌ ನಿರ್ದೇಶನ

ಕಂಟೆಂಟ್ ಮೆಚ್ಚಿಕೊಂಡೇ ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ತೆಲುಗು ಥಿಯೇಟರ್ ಹಕ್ಕು ಖರೀದಿ ಮಾಡಿರುವುದು ಇದು ಚಿತ್ರತಂಡಕ್ಕೆ ಸಿಕ್ಕಿರುವ ಆರಂಭಿಕ ಗೆಲುವು ಎಂದರು ತಪ್ಪಾಗಲಿಕ್ಕಿಲ್ಲ. ಕನ್ನಡ ಭಾಷೆಯ ಥಿಯೇಟರ್ ಹಕ್ಕು ಹಾಗೂ ಆಡಿಯೋ ಹಕ್ಕು ಕೂಡ ಒಳ್ಳೆ ಮೊತ್ತಕ್ಕೆ ಬಿಕರಿಯಾಗಿದ್ದು, ಇಡೀ ರಾಕ್ಷಸ ಟೀಂ ಖುಷಿಗೊಂಡಿದೆ. ರಾಕ್ಷಸ ವಿಶೇಷವಾದ ಸಿನಿಮಾವಾಗಿದೆ. ಇದು ಟೈಮ್ ಲೂಪ್ ಕಾನ್ಸೆಪ್ಟ್ ಇರುವ ಚಿತ್ರ. ಕನ್ನಡದಲ್ಲಿ ಈ ರೀತಿಯ ಚಿತ್ರ ಬಂದೇ ಇಲ್ಲ. ಮೊದಲ ಬಾರಿಗೆ ಈ ರೀತಿಯ ಚಿತ್ರ ಬರ್ತಿದೆ. ಮಮ್ಮಿ, ದೇವಕಿ ಚಿತ್ರಗಳನ್ನ ಡೈರೆಕ್ಟರ್ ಮಾಡಿರೋ ಲೋಹಿತ್ ಈ ರಾಕ್ಷಸ ಚಿತ್ರ ನಿರ್ದೇಶನ ಮಾಡಿದ್ದಾರೆ.

ಪ್ರಜ್ವಲ್ ದೇವರಾಜ್‌ ಅವರು ಭಿನ್ನ ಗೆಟಪ್ ತಾಳಿರುವ ಈ ಸಿನಿಮಾದ ಪಾತ್ರವರ್ಗದಲ್ಲಿ ಶೋಭರಾಜ್, ವತ್ಸಲಾ ಮೋಹನ್, ಆರ್ನ ರಾಥೋಡ್, ಸಿದ್ಲಿಂಗು ಶ್ರೀಧರ್ ಮುಂತಾದ ಕಲಾವಿದರು ನಟಿಸಿದ್ದಾರೆ. ಚಿತ್ರದ ಶೇಕಡ 80ರಷ್ಟು ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾಡಲಾಗಿದೆ. ಇನ್ನುಳಿದ ದೃಶ್ಯಗಳ ಚಿತ್ರೀಕರಣವನ್ನು ರಾಮೇಶ್ವರಂ, ಗೋವಾ ಹಾಗೂ ಬೆಂಗಳೂರಿನಲ್ಲಿ ನಡೆಸಲಾಗಿದೆ.

ಶಿವರಾತ್ರಿಗೆ ತೆರೆಗೆ

ಶಾನ್ವಿ ಎಂಟರ್‌ಟೇನ್ಮೆಂಟ್ ಮೂಲಕ ದೀಪು ಬಿ.ಎಸ್. ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನವೀನ್ ಮತ್ತು ಮಾನಸಾ ಕೆ. ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಜೇಬಿನ್ ಪಿ. ಜೋಕಬ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವಿನೋದ್ ಅವರ ಸಾಹಸ ನಿರ್ದೇಶನ, ವರುಣ್ ಉನ್ನಿ ಅವರ ಸಂಗೀತ ನಿರ್ದೇಶನ, ಅವಿನಾಶ್ ಬಸುತ್ಕರ್ ಅವರ ಹಿನ್ನಲೆ ಸಂಗೀತ ಹಾಗೂ ರವಿಚಂದ್ರನ್ ಸಿ. ಅವರ ಸಂಕಲನ ಈ ಚಿತ್ರಕ್ಕಿದೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ‘ರಾಕ್ಷಸ’ ಸಿನಿಮಾ ರಿಲೀಸ್ ಆಗಲಿದೆ. ಶಿವರಾತ್ರಿ ದಿನದಂದು ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳಿಗೆ ಥಿಯೇಟರ್ಗಳಲ್ಲಿ ಭರ್ಜರಿ ಮನರಂಜನೆ ಸಿಗಲಿದೆ.

Whats_app_banner