ಶುಭ ಲಗ್ನದಲ್ಲಿ ಮಾಂಗಲ್ಯಧಾರಣೆ ಮಾಡಿ ಪತ್ನಿ ಸೋನಲ್ ಮೊಂತೆರೋ ಹಣೆಗೆ ಮುತ್ತಿಟ್ಟ ತರುಣ್ ಸುಧೀರ್ VIDEO
ತರುಣ್ ಸುಧೀರ್ ಮತ್ತು ಸೋನಲ್ ಮೊಂತೆರೋ ಜೋಡಿಯ ಕಲ್ಯಾಣ ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಭಾನುವಾರ (ಆಗಸ್ಟ್ 11) ಬೆಳಗ್ಗೆ 10:50 ರಿಂದ 11:35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿದಿದ್ದಾರೆ.
Tharun Sudhir Sonal Monteiro Wedding: ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮೊಂತೆರೋ ಜೋಡಿಯ ಕಲ್ಯಾಣ ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಭಾನುವಾರ (ಆಗಸ್ಟ್ 11) ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿದಿದ್ದಾರೆ. ಕುಟುಂಬಸ್ತರು, ಸ್ಯಾಂಡಲ್‌ವುಡ್‌ನ ಆಪ್ತರ ಸಮ್ಮುಖದಲ್ಲಿ ಸೋನಲ್ ಕೊರಳಿಗೆ ಮಾಂಗಲ್ಯಧಾರಣೆ ಮಾಡಿ, ಹಣೆಗೆ ಮುತ್ತಿಕ್ಕಿದ್ದಾರೆ ತರುಣ್ ಸುಧೀರ್.
ಕಳೆದ ಮೂರು ದಿನಗಳಿಂದ ಶುರುವಾದ ಈ ಮದುವೆ ಸಂಭ್ರಮ, ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗೀತ್ ಸೇರಿ ನಿನ್ನೆ (ಆಗಸ್ಟ್ 10) ಅದ್ಧೂರಿಯಾಗಿ ಆರತಕ್ಷತೆ ನಡೆದಿತ್ತು. ಸ್ಯಾಂಡಲ್‌ವುಡ್‌ನ ಬಹುತೇಕ ಸಿನಿಮಾ ಕಲಾವಿದರು, ಆಪ್ತರು, ತಂತ್ರಜ್ಞರು ಆಗಮಿಸಿ ನವ ಜೋಡಿಗೆ ಆಶೀರ್ವದಿಸಿದ್ದರು. ಇದೀಗ ಮದುವೆ ಸಂಭ್ರಮಕ್ಕೂ ಗಣ್ಯರ ಆಗಮನವಾಗಿದೆ. ರಾಜಕೀಯ ಸೇರಿ ಪರಭಾಷೆ ಸಿನಿಮಾ ಕಲಾವಿದರೂ ಆಗಮಿಸಿ ತರುಣ್- ಸೋನಲ್‌ಗೆ ಶುಭ ಹಾರೈಸಿದ್ದಾರೆ.
ಬಹುಭಾಷಾ ನಟ ಜಗಪತಿ ಬಾಬು, ಹೈದರಾಬಾದ್‌ನಿಂದ ತರುಣ್ ಸುಧೀರ್ ಅವರ ಮದುವೆಗೆ ಆಗಮಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಮಾಡಿದ್ದ ರಾಬರ್ಟ್ ಮತ್ತು ಕಾಟೇರ ಸಿನಿಮಾಗಳಲ್ಲಿ ಖಳನಾಗಿ ಜಗಪತಿ ಬಾಬು ನಟಿಸಿದ್ದರು. ಇದೀಗ ಇದೇ ನಿರ್ದೇಶಕನ ಮದುವೆಗೆ ಆಗಮಿಸಿ ನವ ಜೋಡಿಗೆ ಹರಸಿ ಹಾರೈಸಿದ್ದಾರೆ.
ಇದೆಲ್ಲದಕ್ಕಿಂತ ಹೆಚ್ಚಾಗಿ, ಇಡೀ ಮದುವೆಯ ಬಹುತೇಕ ಉಸ್ತುವಾರಿಯನ್ನು ತರುಣ್ ಸುಧೀರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನೆನಪಿರಲಿ ಪ್ರೇಮ್, ಶರಣ್ ಮತ್ತು ಕ್ಯಾಮರಾಮನ್ ಸುಧಾಕರ್ ವಹಿಸಿಕೊಂಡಿದ್ದಾರೆ. ಸ್ನೇಹಿತನ ಮದುವೆಯನ್ನು ಮನೆ ಮದುವೆ ಅನ್ನೋ ರೀತಿಯಲ್ಲಿ ಮುಂದೆ ನಿಂತು ನಡೆಸಿಕೊಡುತ್ತಿದ್ದಾರೆ. ಕಳೆದೊಂದು ವಾರದಿಂದ ಮದುವೆ ಕೆಲಸದಲ್ಲಿಯೇ ಇವರೆಲ್ಲರೂ ನಿರತರಾಗಿದ್ದಾರೆ.