ಸೂಲಗಿತ್ತಿ ಬದುಕು ಬವಣೆಯ ಸುತ್ತ ತಿರುಗುವ ʻತಾಯವ್ವʼ ಚಿತ್ರ ಈ ವಾರ ತೆರೆಗೆ
ಗೀತಪ್ರಿಯಾ ಮೊದಲ ಬಾರಿಗೆ ನಿರ್ಮಿಸಿ ಜತೆಗೆ ನಾಯಕಿಯಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ತಾಯವ್ವ' ಚಿತ್ರ ರಾಜ್ಯದಾದ್ಯಂತ ನಾಳೆ (ಮೇ. 30) ತೆರೆಗೆ ಬರಲಿದೆ.

ನವ ಪ್ರತಿಭೆ ಗೀತಪ್ರಿಯಾ ಮೊದಲ ಬಾರಿಗೆ ನಿರ್ಮಿಸಿ ಜೊತೆಗೆ ನಾಯಕಿಯಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ತಾಯವ್ವ' ಚಿತ್ರ ರಾಜ್ಯದಾದ್ಯಂತ ನಾಳೆ (ಮೇ. 30) ತೆರೆಗೆ ಬರಲಿದೆ. ಸುಮಾರು ಮೂರು ದಶಕದ ಹಿಂದೆಯೇ 'ತಾಯವ್ವ' ಎಂಬ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬಂದಿದ್ದು, ಆ ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಮತ್ತು ನಟ ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಈಗ ಅದೇ 'ತಾಯವ್ವ' ಹೆಸರಿನಲ್ಲಿ ಹೊಸ ಚಿತ್ರ ತಯಾರಾಗಿದ್ದು, ಇದೇ ಶುಕ್ರವಾರ ತೆರೆಗೆ ಬರಲಿದೆ.
ಇನ್ನು 'ತಾಯವ್ವ' ಚಿತ್ರದ ಹೆಸರೇ ಹೇಳುವಂತೆ, ಇದು ಅಪ್ಪಟ ಗ್ರಾಮೀಣ ಸೊಗಡಿನ, ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಸಾಮಾಜಿಕ ಕಳಕಳಿಯ ಚಿತ್ರ. ಗ್ರಾಮೀಣ ಪ್ರದೇಶದ ಸೂಲಗಿತ್ತಿ ಮಹಿಳೆಯೊಬ್ಬಳು ಹೇಗೆ ಹೆಣ್ಣುಮಕ್ಕಳ ರಕ್ಷಣೆ ಮಾಡಿ, ಸಮಾಜಕ್ಕೆ ಮಾದರಿಯಾಗುತ್ತಾಳೆ ಎಂಬ ವಿಷಯದ ಸುತ್ತ 'ತಾಯವ್ವ' ಚಿತ್ರದ ಕಥಾಹಂದರ ಸಾಗುತ್ತದೆ. ಚಿತ್ರದಲ್ಲಿ 'ತಾಯವ್ವ' ಪಾತ್ರದಲ್ಲಿ ಗೀತಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಶಿಕ್ಷಣ ಕ್ಷೇತ್ರದಿಂದ ಸಿನಿಮಾದತ್ತ..
'ತಾಯವ್ವ' ಚಿತ್ರದಲ್ಲಿ ಮೊದಲ ಬಾರಿಗೆ 'ತಾಯವ್ವ'ನಾಗಿ ಸೂಲಗಿತ್ತಿ ಪಾತ್ರದಲ್ಲಿ ಗೀತಪ್ರಿಯಾ ಅಭಿನಯಿಸಿದ್ದಾರೆ. ನಟಿಯಾಗಿ ಗೀತಪ್ರಿಯಾ ಅವರಿಗೆ ಇದು ಮೊದಲ ಅನುಭವ. ಸುಮಾರು ಮೂರುವರೆ ದಶಕಗಳಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಗೀತಪ್ರಿಯಾ, ಇದೇ ಮೊದಲ ಬಾರಿಗೆ ತೆರೆಮೇಲೆ 'ತಾಯವ್ವ'ನಾಗಿ ಅಭಿನಯಿಸುವುದರ ಈ ಸಿನಿಮಾದ ಗೀತೆಗಳಿಗೂ ತಾವೇ ಧ್ವನಿಯಾಗಿದ್ದಾರೆ.
ಜಾನಪದ ಶೈಲಿಯಲ್ಲಿ ಮೂಡಿ ಬಂದಿರುವ 'ತಾಯವ್ವ' ಚಿತ್ರದ ಹಾಡುಗಳಿಗೆ ಗೀತಪ್ರಿಯಾ ಅವರೇ ಧ್ವನಿಯಾಗಿದ್ದಾರೆ. 'ಅಮರ ಫಿಲಂಸ್' ಬ್ಯಾನರಿನಲ್ಲಿ ನಿರ್ಮಾಣವಾಗಿರುವ 'ತಾಯವ್ವ' ಚಿತ್ರಕ್ಕೆ ಸಾತ್ವಿಕ ಪವನ್ ಕುಮಾರ್ ನಿರ್ದೇಶನ ಮಾಡಿದ್ದಾರೆ.
ಸಾಮಾಜಿಕ ಕಳಕಳಿ, ಕಲಾತ್ಮಕತೆಯೇ ʼತಾಯವ್ವʼ ಚಿತ್ರಕ್ಕೆ ಪ್ರೇರಣೆ ಎಂಬುದು ನಿರ್ಮಾಪಕಿ ಗೀತ ಪ್ರಿಯಾ ಅವರ ಅಭಿಪ್ರಾಯ. ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದ ಗೀತಪ್ರಿಯಾ ಅವರಿಗೆ ʼತಾಯವ್ವʼ ಚಿತ್ರವನ್ನು ಮಾಡಲು ಪ್ರೇರಣೆ ನೀಡಿದ್ದು, ಏಕಕಾಲಕ್ಕೆ ನಟಿ, ನಿರ್ಮಾಪಕಿ ಮತ್ತು ಗಾಯಕಿಯಾಗುವಂತೆ ಮಾಡಲು ಸಾಮಾಜಿಕ ಕಳಕಳಿಯ ಕಲಾತ್ಮಕ ಚಿತ್ರಗಳು ಕಾರಣವಂತೆ! ಗ್ರಾಮೀಣ ಭಾಗದ ಸಾಮಾನ್ಯ ಹೆಣ್ಣೊಬ್ಬಳ ಹಿಂದಿನ ಅಸಾಮಾನ್ಯ ಶಕ್ತಿ ಏನು ಎಂಬುದನ್ನು ಈ ಸಿನಿಮಾದಲ್ಲಿ ನೋಡಬಹುದಂತೆ.