‘ಐಶ್ವರ್ಯಾ ರೈಗೆ ಹೋದಲೆಲ್ಲಾ ಮಗಳೇ ಬಾಲಂಗೋಚಿ..’; ಸ್ಟಾರ್‌ ಕಿಡ್‌ ಸಂಪ್ರದಾಯದ ಬಗ್ಗೆ ಮಾಳವಿಕಾ ಅವಿನಾಶ್ ಬೇಸರ-sandalwood news there is no law that star kids become stars actress malavika avinash post about star kids mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಐಶ್ವರ್ಯಾ ರೈಗೆ ಹೋದಲೆಲ್ಲಾ ಮಗಳೇ ಬಾಲಂಗೋಚಿ..’; ಸ್ಟಾರ್‌ ಕಿಡ್‌ ಸಂಪ್ರದಾಯದ ಬಗ್ಗೆ ಮಾಳವಿಕಾ ಅವಿನಾಶ್ ಬೇಸರ

‘ಐಶ್ವರ್ಯಾ ರೈಗೆ ಹೋದಲೆಲ್ಲಾ ಮಗಳೇ ಬಾಲಂಗೋಚಿ..’; ಸ್ಟಾರ್‌ ಕಿಡ್‌ ಸಂಪ್ರದಾಯದ ಬಗ್ಗೆ ಮಾಳವಿಕಾ ಅವಿನಾಶ್ ಬೇಸರ

Malavika Avinash: ಸ್ಟಾರ್‌ ಕಿಡ್ಸ್‌ ಸಂಪ್ರದಾಯದ ಬಗ್ಗೆ ನಟಿ ಮಾಳವಿಕಾ ಅವಿನಾಶ್‌ ಸುದೀರ್ಘ ಬರಹದ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮಕ್ಕೆ ಮಗಳನ್ನು ಕರೆತಂದಿದ್ದ ಐಶ್ವರ್ಯಾ ನಡೆದೆ ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಕಲಾವಿದರ ಮಕ್ಕಳ ಬಗ್ಗೆ ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್‌ ವಿಶೇಷ ಬರಹವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸಿನಿಮಾ ಕಲಾವಿದರ ಮಕ್ಕಳ ಬಗ್ಗೆ ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್‌ ವಿಶೇಷ ಬರಹವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. (instagram\ Malavika avinash)

Malavika Avinash Post about Star Kids: ಸ್ಯಾಂಡಲ್‌ವುಡ್‌ ನಟಿ ಮತ್ತು ರಾಜಕಾರಣಿ ಮಾಳವಿಕಾ ಅವಿನಾಶ್‌ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರು. ತಮಗನಿಸಿದ್ದ ಅನಿಸಿಕೆ ಅಭಿಪ್ರಾಯಗಳನ್ನು ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿರುತ್ತಾರೆ. ಇತ್ತೀಚೆಗಷ್ಟೇ ಬೆಂಗಳೂರು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಉತ್ತರ ಭಾರತದ ಮಹಿಳೆಯ ಬಗ್ಗೆಯೂ ಕೊಂಚ ಬಿರುಸಾಗಿಯೇ ಪೋಸ್ಟ್‌ ಹಂಚಿಕೊಂಡಿದ್ದರು. ಈಗ ಸಿನಿಮಾ ಸ್ಟಾರ್‌ ಕಲಾವಿದರ ಮಕ್ಕಳ ಬಗ್ಗೆ ಬರಹವೊಂದನ್ನು ಹಂಚಿಕೊಂಡಿದ್ದಾರೆ ಮಾಳವಿಕಾ. ಇಲ್ಲಿದೆ ಆ ಬರಹ.

ಮಾಳವಿಕಾ ಅವಿನಾಶ್‌ ಹೇಳಿದ್ದೇನು?

ಮಕ್ಕಳನ್ನು ಹ್ಯಾಂಡ್‌ ಬ್ಯಾಗಿನಂತೆ ಜತೆಯಲ್ಲಿ ಎಲ್ಲಾ ಕಡೆ ಕರ್ಕೊಂಡು ಹೋಗೋದೆಂತ ಸಂಸ್ಕೃತಿ? ಆಫೀಸಿಗೆ, ಆಫೀಸ್ ಟೂರಿಗೆ ಹೋದಾಗ ಮಕ್ಕಳನ್ನು ಕರ್ಕೊಂಡು ಹೋದರೆ ಸುಮ್ಮನ್ನಿರುತ್ತಾರೆಯೇ ಬಾಸು? ಮಿಕ್ಕವರಿಗೆ ಆಫೀಸಿದ್ದ ಹಾಗೆ ನಮಗೆ ಶೂಟಿಂಗ್, ಕಾರ್ಯಕ್ರಮಗಳು, ಫೋಟೊ ಶೂಟ್ ಇಂತಹವೆಲ್ಲಾ!

ನಿಮ್ಮ ಯಾವುದೋ insecurity/ ಅಸುರಕ್ಷತೆಯ ಕಾರಣ, ಹರೆಯದ ಹುಡುಗಿಯರನ್ನು ಕರ್ಕೊಂಡು ಹೋಗೊದ್ರಿಂದ ಆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ತಾವು ತಮ್ಮ ತಾಯಿಯಂತೆ ತಲೆಯೊಳಗೆ ಸ್ಟಾರ್ ಆಗುತ್ತಾರೆ ಆ ಮಕ್ಕಳು. ತಾಯಿ ಹಾಕಿದ ಪರಿಶ್ರಮ, ಪಟ್ಟ ಕಷ್ಟ ಯಾವುದೂ ಆ ಮಕ್ಕಳಿಗೆ ಗೊತ್ತಿರುವುದಿಲ್ಲ. ಗೊತ್ತಾಗುವುದು ಬೇಡ. ಈ ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆಯೇ ತಾವೂ ಹೀರೋಯಿನ್ ಆಗುವ ಕನಸು ಕಾಣುತ್ತಾರೆ. ತನ್ನ ಪೊಸಿಶನ್ನನ್ನು ಬಳಸಿಕೊಂಡು, ಆ ತಾಯಿ ಒಂದು ಪಿಕ್ಚರನ್ನೂ ಆ ಮಗ/ಮಗಳಿಗೆ ಕೊಡಿಸಿಬಿಡಬಹುದೇನೊ. ಶೂಟಿಂಗಲ್ಲಿ ತಾಯಿ ಮಾಡಿರುವ ಐವತ್ತು ಸಿನಿಮಾಗಳನ್ನು ತಾನೇ ಮಾಡಿದ್ದೇನೇನೊ ಎಂಬ ಆಟಿಟ್ಯೂಡ್. ಜತೆಗೆ ಏಳೆಂಟು ಜನ, ಕೈಗೊಬ್ಬ ಕಾಲ್ಗೊಬ್ಬ. ತಾಯಿ ಮೊದಲ ಚಿತ್ರ ಮಾಡುವಾಗ ಹಾಕಿದ್ದ ಹರಕಲು ಬಟ್ಟೆ ಚಪ್ಪಲಿ, ಯಾವುದೂ ಈ ಮಕ್ಕಳಿಗೆ ಗೊತ್ತಿರುವುದಿಲ್ಲ.

ತೆರೆಯ ಮೇಲೆ ಕಾಣುತ್ತಿದ್ದಂತೆಯೇ, ಅಯ್ಯೊ, ಇವಳು ತಾಯಿಯಂತೆ ಎಲ್ಲಿದ್ದಾಳೆ ಎಂಬ ಕಂಪ್ಯಾರಿಸನ್ ಶುರುವಾಗುತ್ತೆ. ಅವಳೆಂತಹ ಸುಂದರಿ, ಡ್ಯಾನ್ಸರ್, ಪರ್ಫಾಮರ್… ಮಗಳೇನೂ ಸುಖ ಇಲ್ಲ ಎಂದು ಸಾರಾಸಗಟಾಗ ತೆಗೆದು ಹಾಕಿಬಿಡುತ್ತಾರೆ ಪ್ರೇಕ್ಷಕರು. ಪಿಕ್ಚರ್ ಓಡಿದರೆ ಸರಿ. ಓಡದೆ ಹೋದರೆ, ಮುಂದಿನ ಹತ್ತು, ಇಪ್ಪತ್ತು ಮೂವತ್ತು ವರ್ಷಗಳು, ತಾನ್ಯಾಕೆ ತಾಯಿಯಂತಿಲ್ಲ, ತಾಯಿಯಂತೆ ಸ್ಟಾರಾಗಲಿಲ್ಲ ಎಂಬ ಕೊರಗು.

ಸ್ಟಾರ್ ಮಕ್ಕಳಾಗಿ ಹುಟ್ಟುವುದು ಅದೃಷ್ಟವೇ. ಆದರೆ ಅದನ್ನೇ ಬದುಕೆಂದುಕೊಳ್ಳಬಾರದಿರಬೇಕು ಮಕ್ಕಳು. ತಮ್ಮದೊಂದು ವ್ಯಕ್ತಿತ್ವ, ಬದುಕು, ಗುರಿ ಇವೆಲ್ಲವೂ ಇರಬೇಕೆಂಬುದನ್ನು ಸ್ಟಾರ್ ತಂದೆ ತಾಯಂದಿರೂ ಮಕ್ಕಳಿಗೆ ಮನವಿ ಮಾಡಿಕೊಡಬೇಕು. ಎಲ್ಲರಂತೆ ಸಾಮಾನ್ಯ ಬದುಕನ್ನು ಬದುಕುವ ಅವಕಾಶ ಮಾಡಿಕೊಡಬೇಕು. ಜಾಕಿ ಚಾನ್, ತಾನು ಮಗನನ್ನು ಬೆಳೆಸುವುದರಲ್ಲಿ ಸೋತಿದ್ದೇನೆ ಎಂಬುದನ್ನು ಎಲ್ಲೊ ಹೇಳಿಕೊಂಡದ್ದನ್ನು ನೋಡಿದ ನೆನಪು. ಜೇಸೀ ಚಾನ್‌ಗೀಗ 41ವರ್ಷ. ಬದುಕಲ್ಲಿ ಏನು ಆಗಿಲ್ಲ, ಸೋತ ನಟ ಅಷ್ಟೆ. ಜಾಕೀ ಎಂತ ಲೆಜೆಂಡ್, ಮಗ ನೋಡಿ.

ಸ್ಟಾರ್ ಮಕ್ಕಳು ಸ್ಟಾರ್ ಆಗಿಯೇ ಆಗುತ್ತಾರೆ ಎಂಬ ಶಾಸನವೇನಿಲ್ಲ. ಸೋತ ಎಷ್ಟೊ ಮಕ್ಕಳನ್ನು, ನಾನೇ ನೋಡಿದ್ದೇನೆ. ಹೋದಲ್ಲೆಲ್ಲಾ ಮಕ್ಕಳನ್ನು ಕೊಂಡು ಹೋಗುವ ಅಭ್ಯಾಸವನ್ನು ನಮ್ಮ ಸ್ಟಾರ್ ಗಳು ಕಡಿಮೆ ಮಾಡಿಕೊಳ್ಳಬೇಕು. ಮಕ್ಕಳ ಬೆಳವಣಿಗೆಯಲ್ಲಿ ಈ ರೀತಿಯ ಹಸ್ತಕ್ಷೇಪ ಮಾಡುವುದೂ ಒಂದು ರೀತಿಯಲ್ಲಿ ಅವರ ಬಾಲ್ಯ ಯೌವ್ವನದ ಮೇಲೆ ಮಾಡುವ ಪ್ರಹಾರವೇ.

ಪ್ರಪಂಚದಲ್ಲಿ ಎಲ್ಲವೂ ಇದೆ ಮಗಳೇ, ನನ್ನ ಆಯ್ಕೆಯ ಬದುಕು ಇದು, ನಿನ್ನದು ಇದೇ ಆಗಬಹುದು ಬೇರೆಯದಾಗಬಹುದು ಅಂತ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಕರ್ತವ್ಯವೇ. ನಾನು ಓದಿಲ್ಲ, ನೀನು ಮೊದಲು ಓದು. ಆಮೇಲೆ ಸ್ಟಾರಾಗೊ ಯೋಚನೆ ಮಾಡು. ಮುಖ್ಯವಾಗಿ ಸ್ಟಾರ್ ಆಗುವುದಕ್ಕೆ ಒಂದು ಎಕ್ಸ್ ಫ್ಯಾಕ್ಟರ್ ಇರುತ್ತದೆ. ಅದು ಅವರವರ ಅದೃಷ್ಟದ ಪರೀಕ್ಷೆ. ಗೆದ್ದರೂ ಸೋತರೂ ನೀನು ಕುಗ್ಗದೆ ಬದುಕಲ್ಲಿ ಗೆಲ್ಲ ಬೇಕು ಎಂದೂ ಎಷ್ಟೊ ಸ್ಟಾರ್ ಮಕ್ಕಳಿಗೆ ಹೇಳಬೇಕೆಂದು ನನಗೆ ಮನಸ್ಸಾಗುತ್ತಗೆ. “ಸಾಕು ಬೇರೆಯವರ ಉಸಾಬರಿ. ನಿನ್ನ ಕೆಲಸ ನೀನು ನೋಡು. ನಿನ್ನ ಪ್ರಾಕ್ಟಿಕಲ್ ಪ್ರದರ್ಶನವನ್ನು ಸ್ವೀಕರಿಸುವ ಮನಸ್ಥಿತಿ ಅವರಿಗಿರುವುದಿಲ್ಲ”, ಅಂತ ಅವಿನಾಶ್ ಸುಮ್ಮನಾಗಿಸುತ್ತಾರೆ. ಇಷ್ಟಕ್ಕೂ ಕ್ರಿಕೆಟ್ ಸ್ಟಾರ್ಸ್ ಮಕ್ಕಳೇನು ಅವರಂತೆ ಸ್ಟಾರ್ಸಾಗುವುದಿಲ್ಲವಲ್ಲ. ಭಗವಂತ ನಮಗೆ ಅಂತ ಒಂದು ಮಾರ್ಗವನ್ನು ಮುಂಚೆಯೇ ನಿರ್ಧರಿಸುತ್ತಾನೆ.

ತಾಯಿ, ವಿಶ್ವ ಸುಂದರಿ, ಹೋದಲೆಲ್ಲಾ ಆ ಪುಟ್ಟ ಹುಡುಗಿ ಬಾಲಂಗೋಚಿಯಂತೆ… ಒಂದು ಬದಿಯಲ್ಲಿ ಆಕೆಯನ್ನು ತಯಾರು ಮಾಡಿದ ಸ್ಟೈಲಿಸ್ಟ್, ಹೇರ್ ಡ್ರೆಸ್ಸರ್, ಮೇಕಪ್ ಮಾಡಿದವರು, ಮತ್ತೊಂದು ಕಡೆ ಆ ಹುಡುಗಿ… ಇದೆಂತಹ ಅವಸ್ಥೆ. ಆ ಮಗುವಿಗೆ, ಶಾಲೆ, ಓದು ಏನೂ ಇರುವುದಿಲ್ಲವೆ? ಹೀಗೆ ತಾಯಿಯ ಜಗತ್ತೆಲ್ಲ ಜತೆ ತಿರುಗಾಡುತ್ತಾಳಲ್ಲಾ? ತಾಯಿಗೆ ಹಾಗೆ ಉಡುಗೆ ತೊಟ್ಟು ಪೋಸ್ ಕೊಡುವುದು, ಅವಳ ವೃತ್ತಿ! ಈ ಮಗುವಿಗಲ್ಲೇನು ಕೆಲಸ? ಯಾಕೊ ಆ ದೃಶ್ಯವನ್ನು ನೋಡಿ ಬೇಜಾರಾಯಿತು. ನಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ನಾವೇ ಬಳಸಿಕೊಂಡುಬಿಡುತ್ತೇವಾ?

mysore-dasara_Entry_Point