ಕೊನೆಗೂ ಯಶ್ ಕೂದಲಿಗೆ ಬಿತ್ತು ಕತ್ತರಿ!; ಅಂಬಾನಿ ಕುಟುಂಬದ ಮದುವೆಗೆ ‘ಟಾಕ್ಸಿಕ್’ ಲುಕ್‌ನಲ್ಲಿ ಎಂಟ್ರಿ ಕೊಟ್ಟ ರಾಕಿಂಗ್ ಸ್ಟಾರ್
ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಜೋಡಿಯ ಅದ್ಧೂರಿ ವಿವಾಹಕ್ಕೆ ಮುಂಬೈಗೆ ದಂಪತಿ ಸಮೇತ ಆಗಮಿಸಿದ್ದಾರೆ ನಟ ಯಶ್ ಮತ್ತು ರಾಧಿಕಾ ಪಂಡಿತ್. ಈ ವೇಳೆ ಟಾಕ್ಸಿಕ್ ಚಿತ್ರದ ಲುಕ್‌ನಲ್ಲಿ ನಟ ಯಶ್ ಪ್ರತ್ಯಕ್ಷರಾಗಿ ಫ್ಯಾನ್ಸ್‌ಗೆ ಸರ್ಪ್ರೈಸ್ ನೀಡಿದ್ದಾರೆ.

Yash New Hairstyle: ರಾಕಿಂಗ್ ಸ್ಟಾರ್ ಯಶ್ ಕನ್ನಡದ ಮಣ್ಣಿನ, ಕರುನಾಡಿನ ನಟನಾದರೂ, ಪ್ಯಾನ್ ಇಂಡಿಯಾ ಮಾತ್ರವಲ್ಲದೆ, ಜಾಗತಿಕ ಸಿನಿಮಾ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದಾರೆ. ಅದೇ ಹಾದಿಯಲ್ಲಿ ಟಾಕ್ಸಿಕ್ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಇಲ್ಲಿಯವರೆಗೂ ಈ ಸಿನಿಮಾದ ಶೀರ್ಷಿಕೆ ಟೀಸರ್ ಒಂದನ್ನು ಹೊರತುಪಡಿಸಿದರೆ, ಬೇರಾವ ಮಾಹಿತಿ ಹೊರಬಿದ್ದಿಲ್ಲ. ಎಲ್ಲವನ್ನೂ ಗೌಪ್ಯವಾಗಿಯೇ ಇರಿಸಿಕೊಂಡಿದೆ ಚಿತ್ರತಂಡ. ಈ ಚಿತ್ರದಲ್ಲಿ ಯಶ್ ಲುಕ್ ಹೇಗಿರಲಿದೆ ಎಂಬ ಸುಳಿವೂ ಸಿಕ್ಕಿರಲಿಲ್ಲ. ಇದೀಗ ಆ ಕಾಯುವಿಕೆಗೆ ಬ್ರೇಕ್ ಬಿದ್ದಿದೆ. ಟಾಕ್ಸಿಕ್ ಚಿತ್ರದ ಯಶ್ ಲುಕ್ ರಿವೀಲ್ ಆಗಿದೆ.
ಗೀತು ಮೋಹನದಾಸ್ ನಿರ್ದೇಶನದ ಟಾಕ್ಸಿಕ್
ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಟಾಕ್ಸಿಕ್ ಸಿನಿಮಾ ಮೂಡಿಬರುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ, ಇನ್ನೇನು ಶೀಘ್ರದಲ್ಲಿಯೇ ಶೂಟಿಂಗ್‌ಗೆ ಹೊರಡಲಿದೆ. ಇನ್ನು ಕೆಲ ಮೂಲಗಳ ಮಾಹಿತಿ ಪ್ರಕಾರ, ಈಗಾಗಲೇ ಗೋವಾದಲ್ಲಿ ಒಂದಷ್ಟು ಭಾಗದ ಶೂಟಿಂಗ್ ಸಹ ಮುಗಿದಿದೆ ಎಂದೂ ಹೇಳಲಾಗುತ್ತಿದೆ. ಆ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಇನ್ನು ಹೊರಬಿದ್ದಿಲ್ಲ. ಇದೀಗ ಯಶ್ ಹೊಸ ಲುಕ್ ಮತ್ತಷ್ಟು ಕುತೂಹಲ ಮೂಡಿಸಿದೆ.
ಕೂದಲ ವಿಚಾರಕ್ಕೆ ಸುದ್ದಿಯಾಗಿದ್ದ ಯಶ್
ತ್ತೀಚಿನ ದಿನಗಳಲ್ಲಿ ನಟ ಯಶ್ ಸಿನಿಮಾ ವಿಚಾರವಾಗಿ, ಬೆಂಗಳೂರಿನಲ್ಲಿ ಇರವುದಕ್ಕಿಂತ ಹೆಚ್ಚು ಮುಂಬೈನಲ್ಲಿಯೇ ತಂಗಿದ್ದಾರೆ. ಹೀಗಿರುವಾಗಲೇ ಮುಂಬೈನ ವಿಮಾನ ನಿಲ್ದಾಣದ ಬಳಿ ನಟ ಯಶ್ ಅವರ ಹೊಸ ಲುಕ್ ನೋಡಿದವರು ನಿಬ್ಬೆರಗಾಗಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ, ಉದ್ದ ಕೂದಲಿನಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದರು ಯಶ್. ಹಿಪ್ಪಿ ಗೆಟಪ್‌ನಲ್ಲಿಯೂ ಗಮನ ಸೆಳೆದಿದ್ದರು. ಇದೀಗ ಆ ಉದ್ದ ಕೂದಲಿಗೆ ಕತ್ತರಿ ಬಿದ್ದಿದೆ. ಮತ್ತಷ್ಟು ಖಡಕ್ ಆಗಿ, ಹ್ಯಾಂಡಸಮ್ ಲುಕ್‌ನಲ್ಲಿ ಯಶ್ ಎದುರಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರ ಈ ಹೊಸ ಫೋಟೋಗಳು ವೈರಲ್ ಆಗ್ತಿದ್ದಂತೆ, ಕೊನೆಗೂ ಟಾಕ್ಸಿಕ್ ಲುಕ್ ರಿವೀಲ್ ಮಾಡಿದ್ರಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಹಾಕುತ್ತಿದ್ದಾರೆ. ಇನ್ನು ಕೆಲವರು ಈ ಲುಕ್ ಟಾಕ್ಸಿಕ್ ಸಿನಿಮಾಕ್ಕಾ ಅಥವಾ ರಾಮಾಯಣ ಸಿನಿಮಾಕ್ಕಾ ಎಂಬ ಗೊಂದಲವೂ ಅಭಿಮಾನಿಗಳನ್ನು ಕಾಡುತ್ತಿದೆ. ಅಂದಹಾಗೆ, ನಿತೀಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರಲಿರುವ ರಾಮಾಯಣ ಚಿತ್ರಕ್ಕೆ ನಿರ್ಮಾಪಕನಾಗಿಯೂ ಯಶ್ ಪಾಲುದಾರರಾಗಿದ್ದಾರೆ.
ಅನಂತ್ ಅಂಬಾನಿ ಮದುವೆಗೆ ಯಶ್‌ಗೆ ಆಹ್ವಾನ
ಸದ್ಯ ಹೊಸ ಹೇರ್‌ಸ್ಟೈಲ್‌ನಲ್ಲಿ ನಟ ಯಶ್ ಎದುರಾಗಿದ್ದು, ಮುಂಬೈನ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಯಶ್ ಮುಂಬೈಗೆ ಬರಲು ಕಾರಣ; ಅಂಬಾನಿ ಕುಟುಂಬದ ಮದುವೆ. ಹೌದು, ಇಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಕಲ್ಯಾಣ. ಈ ಅದ್ಧೂರಿ ಮದುವೆಗೆ ಸ್ಯಾಂಡಲ್‌ವುಡ್‌ನಿಂದ ಯಶ್‌ಗೆ ಆಹ್ವಾನ ಹೋಗಿದೆ. ಈ ನಿಮಿತ್ತ ಮದುವೆಗೆ ಹಾಜರಾಗಲು ಪತ್ನಿ ರಾಧಿಕಾ ಪಂಡಿತ್ ಜತೆಗೆ ಮುಂಬೈಗೆ ಹಾರಿದ್ದಾರೆ ಯಶ್. ಇದೇ ವೇಳೆ ಹೊಸ ಅವತಾರದಲ್ಲಿ ಎದುರಾಗಿ ಅಚ್ಚರಿ ಮೂಡಿಸಿದ್ದಾರೆ.

ವಿಭಾಗ