Spandana Vijay: ಮಿತಭಾಷಿ, ಅಡುಗೆ ಮಾಡುವುದರಲ್ಲಿ ಎಕ್ಸ್‌ ಪರ್ಟ್‌; ತುಳುನಾಡು ಹುಡುಗಿ ಸ್ಪಂದನಾ ಕುರಿತಾದ ಆಸಕ್ತಿಕರ ವಿಚಾರಗಳು ಇಲ್ಲಿವೆ
ಕನ್ನಡ ಸುದ್ದಿ  /  ಮನರಂಜನೆ  /  Spandana Vijay: ಮಿತಭಾಷಿ, ಅಡುಗೆ ಮಾಡುವುದರಲ್ಲಿ ಎಕ್ಸ್‌ ಪರ್ಟ್‌; ತುಳುನಾಡು ಹುಡುಗಿ ಸ್ಪಂದನಾ ಕುರಿತಾದ ಆಸಕ್ತಿಕರ ವಿಚಾರಗಳು ಇಲ್ಲಿವೆ

Spandana Vijay: ಮಿತಭಾಷಿ, ಅಡುಗೆ ಮಾಡುವುದರಲ್ಲಿ ಎಕ್ಸ್‌ ಪರ್ಟ್‌; ತುಳುನಾಡು ಹುಡುಗಿ ಸ್ಪಂದನಾ ಕುರಿತಾದ ಆಸಕ್ತಿಕರ ವಿಚಾರಗಳು ಇಲ್ಲಿವೆ

ಅನೇಕ ಇಂಟರ್‌ವ್ಯೂಗಳಲ್ಲಿ ವಿಜಯ ರಾಘವೇಂದ್ರ ಹೇಳಿರುವಂತೆ ಸ್ಪಂದನಾ ಮಿತಭಾಷಿ, ಬಹಳ ನಾಚಿಕೆಯ ಸ್ವಭಾವದವರು. ಫ್ಯಾಮಿಲಿ, ಆತ್ಮೀಯರ ಕಾರ್ಯಕ್ರಮ ಬಿಟ್ಟರೆ ಬೇರೆ ಎಲ್ಲೂ ಹೋಗುತ್ತಿರಲಿಲ್ಲ. ಮಾಧ್ಯಮಗಳ ಮುಂದೆ ಎದುರಾಗಿದ್ದು ಬಹಳ ಅಪರೂಪ.

ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ
ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಮರಳಿ ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಭಾನುವಾರ ರಾತ್ರಿ ಬ್ಯಾಂಕಾಕ್‌ನಲ್ಲಿ ಮೃತಪಟ್ಟಿದ್ದ ಸ್ಪಂದನಾ ಅವರ ಮೃತದೇಹವನ್ನು ಬ್ಯಾಂಕಾಕ್‌ನಲ್ಲಿ ಪೋಸ್ಟ್‌ ಮಾರ್ಟಂ ಮಾಡಲಾಗಿದೆ. ಅಲ್ಲಿನ ನಿಯಮಗಳನ್ನು ಮುಗಿಸಿ ಮಂಗಳವಾರ ರಾತ್ರಿ ಬೆಂಗಳೂರಿಗೆ ಪಾರ್ಥಿವ ಶರೀರವನ್ನು ತರಲಾಗಿದೆ.

ಕಾರ್ಗೋ ವಿಮಾನ ನಿಲ್ದಾಣದಲ್ಲಿ ವಿಜಯ ರಾಘವೇಂದ್ರ ಹಾಗೂ ಕುಟುಂಬದವರು ಸ್ಪಂದನಾ ಮೃತದೇಹವನ್ನು ಮಲ್ಲೇಶ್ವರಂನ ತಂದೆ ನಿವಾಸಕ್ಕೆ ತಂದಿದ್ದು ಮಧ್ಯಾಹ್ನ 2ವರೆಗೂ ಸ್ಪಂದನಾ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಿವರಾಜ್‌ಕುಮಾರ್‌ ದಂಪತಿ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಉಮಾಶ್ರೀ, ದೊಡ್ಡಣ್ಣ, ರಂಗಾಯಣ ರಘು, ಸುಧಾರಾಣಿ, ಸೃಜನ್‌ ಲೋಕೇಶ್‌, ಗಿರಿಜಾ ಲೋಕೇಶ್‌, ಪ್ರಿಯಾಂಕಾ ಉಪೇಂದ್ರ, ಶರಣ್‌, ಗಾಯಕ ವಿಜಯ್‌ ಪ್ರಕಾಶ್‌, ರಾಧಿಕಾ ಕುಮಾರಸ್ವಾಮಿ ಹಾಗೂ ಇನ್ನಿತರರು ಸ್ಪಂದನಾ ಅಂತಿಮ ದರ್ಶನ ಪಡೆದಿದ್ದಾರೆ.

ಬೆಳ್ತಂಗಡಿ ಮೂಲದ ಸ್ಪಂದನಾ

ಸ್ಪಂದನಾ ಮೂಲತ: ಬೆಳ್ತಂಗಡಿಯವರು. ತಂದೆ ನಿವೃತ್ತ ಪೊಲೀಸ್‌ ಅಧಿಕಾರಿ ಬಿಕೆ ಶಿವರಾಂ ಬೆಂಗಳೂರಿನ ಮಲ್ಲೇಶ್ವರಂನಲ್ಲೇ ನೆಲೆಸಿದ್ದರು. ಸ್ಪಂದನಾ ಓದಿದ್ದು ಕೂಡಾ ಬೆಂಗಳೂರಿನಲ್ಲಿ. ಸ್ಪಂದನಾ ಮಾತೃಭಾಷೆ ತುಳು. 2006ರಲ್ಲಿ ಸ್ಪಂದನಾ ಕಾಫಿ ಡೇಯಲ್ಲಿದ್ದಾಗ ಮೊದಲ ಬಾರಿ ವಿಜಯ್‌ ರಾಘವೇಂದ್ರ, ಅವರನ್ನು ನೋಡಿದ್ದಾರೆ. ಮೊದಲ ನೋಟದಲ್ಲೇ ವಿಜಯ್‌ಗೆ ಸ್ಪಂದನಾ ಇಷ್ಟವಾಗಿದ್ದಾರೆ. ಆದರೆ ಆಕೆ ಯಾರು ಎಂಬುದು ವಿಜಯ್‌ಗೆ ಗೊತ್ತಿರಲಿಲ್ಲ. ಅದಾದ 3 ವರ್ಷಗಳ ಬಳಿಕ ಮತ್ತೆ ವಿಜಯ್‌ ರಾಘವೇಂದ್ರ ಮತ್ತೊಂದು ಕಡೆ ಸ್ಪಂದನಾ ಅವರನ್ನು ನೋಡಿದ್ದಾರೆ. ಇಂದು ಮಾತನಾಡಿಸದಿದ್ದರೆ ಇನ್ನೆಂದೂ ಮಾತನಾಡಿಸಲು ಆಗುವುದಿಲ್ಲ ಎಂದುಕೊಂಡ ರಾಘು ಆಕೆಯ ಬಳಿ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ. ಅಂದಿನ ಇವರ ಪರಿಚಯ ಪ್ರೀತಿಗೆ ತಿರುಗಿದೆ.

ಅಪ್ಪನ ಮುದ್ದಿನ ಮಗಳು ಅಚ್ಚು

ಸ್ಪಂದನಾ ಅವರನ್ನು ಸ್ನೇಹಿತರು, ಕುಟುಂಬದ ಇತರ ಸದಸ್ಯರು ಹೆಸರಿಡಿದು ಕರೆಯುತ್ತಿದ್ದರೂ ಅವರ ಅಪ್ಪ ಹಾಗೂ ಆತ್ಮೀಯರು ಮಾತ್ರ ಅಚ್ಚು ಎಂದೇ ಕರೆಯುತ್ತಿದ್ದರು. ಸ್ಪಂದನಾಗೆ ಅಣ್ಣ ಇದ್ದಾರೆ. ರಕ್ಷಿತ್‌ ಶಿವರಾಂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಸ್ಪಂದನಾ ಕೂಡಾ ಅಣ್ಣನ ಪರವಾಗಿ ಪ್ರಚಾರ ನಡೆಸಿದ್ದರು. ಮಗಳನ್ನು ತಂದೆ, ತಾಯಿ ಬಹಳ ಮುದ್ದಾಗಿ ಬೆಳೆಸಿದ್ದರು. ಅಣ್ಣನಿಗೆ ಕೂಡಾ ತಂಗಿ ಎಂದರೆ ಪಂಚ ಪ್ರಾಣ.

26 ಆಗಸ್ಟ್‌ 2007 ರಲ್ಲಿ ಮದುವೆ

ಬಿಕೆ ಶಿವರಾಮ್‌ ಆತ್ಮೀಯರಾದ ನಿರ್ದೇಶಕಿ ಆಶಾರಾಣಿ ವಿಜಯ್‌ ರಾಘವೇಂದ್ರ ಹಾಗೂ ಸ್ಪಂದನಾ ಲವ್‌ ಸ್ಟೋರಿಯನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಒಮ್ಮೆ ಸ್ಪಂದನಾ ಕಾರಿನಲ್ಲಿ ಕುಳಿತು ಯುವಕನೊಬ್ಬನ ಜೊತೆ ಮಾತನಾಡುತ್ತಿದ್ದನ್ನು ನೋಡಿ ನನಗೆ ಗಾಬರಿ ಆಯ್ತು. ಕೊನೆಗೆ ಆ ಹುಡುಗ ವಿಜಯ ರಾಘವೇಂದ್ರ ಎಂಬ ವಿಷಯ ತಿಳಿಯಿತು. ತಂದೆಗೆ ಹೇಳಬೇಕು ಎಂದುಕೊಳ್ಳುವಷ್ಟರಲ್ಲಿ ಅವರಿಗೆ ವಿಷಯ ಗೊತ್ತಾಗಿದೆ. ಇಬ್ಬರ ಮನೆಯವರೂ ಒಪ್ಪಿ ಮದುವೆ ನಿಶ್ಚಯ ಮಾಡಿದ್ದಾರೆ. 20 ಏಪ್ರಿಲ್‌ 2007ರಲ್ಲಿ ನಿಶ್ಚಿತಾರ್ಥ ನಡೆದರೆ, 26 ಆಗಸ್ಟ್‌ 2007ರಲ್ಲಿ ಮದುವೆ ನೆರವೇರಿದೆ. 2010ರಲ್ಲಿ ಈ ಮುದ್ದಾದ ದಂಪತಿಗೆ ಜನಿಸಿದ ಗಂಡು ಮಗುವಿಗೆ ಶೌರ್ಯ ಎಂದು ಹೆಸರಿಟ್ಟಿದ್ದಾರೆ.

ಮಿತಭಾಷಿ ಸ್ಪಂದನಾ

ಅನೇಕ ಇಂಟರ್‌ವ್ಯೂಗಳಲ್ಲಿ ವಿಜಯ ರಾಘವೇಂದ್ರ ಹೇಳಿರುವಂತೆ ಸ್ಪಂದನಾ ಮಿತಭಾಷಿ, ಬಹಳ ನಾಚಿಕೆಯ ಸ್ವಭಾವದವರು. ಫ್ಯಾಮಿಲಿ, ಆತ್ಮೀಯರ ಕಾರ್ಯಕ್ರಮ ಬಿಟ್ಟರೆ ಬೇರೆ ಎಲ್ಲೂ ಹೋಗುತ್ತಿರಲಿಲ್ಲ. ಮಾಧ್ಯಮಗಳ ಮುಂದೆ ಎದುರಾಗಿದ್ದು ಬಹಳ ಅಪರೂಪ. ಅಂತದ್ದರಲ್ಲಿ ಆಕೆ ವೀಕೆಂಡ್‌ ವಿತ್‌ ಕಾರ್ಯಕ್ರಮಕ್ಕೆ ಮಗನೊಂದಿಗೆ ಬಂದಾಗ ವಿಜಯ್‌ ರಾಘವೇಂದ್ರ ಭಾವುಕರಾಗಿ ಕಣ್ಣೀರಿಟ್ಟಿದ್ದರು. ಥ್ಯಾಂಕ್ಸ್‌ ಚಿನ್ನ ಎಂದಿದ್ದರು.

ಸ್ಪಂದನಾ ಕುರಿತ ಮತ್ತಷ್ಟು ಆಸಕ್ತಿಕರ ವಿಚಾರಗಳು

ಸ್ಪಂದನಾಗೆ 'ಹೃದಯ ಹಾಡಿತು' ಚಿತ್ರದ ನಲಿಯುತಾ ಹೃದಯ ಹಾಡನು ಹಾಡಿತು.. ಹಾಡೆಂದರೆ ಬಹಳ ಇಷ್ಟ. ಕುಕಿಂಗ್‌ನಲ್ಲಿ ಬಹಳ ಆಸಕ್ತಿ. ಸ್ಪಂದನಾ ಅಂತಿಮ ದರ್ಶನ ಪಡೆಯುವಾಗ ನಟ ಶರಣ್‌ ಕೂಡಾ ಆಕೆಯ ಅಡುಗೆ ಕೈ ರುಚಿಯನ್ನು ಹೊಗಳಿದ್ದರು. ನಾನ್‌ ವೆಜ್‌ ಅಡುಗೆಯನ್ನು ಸ್ಪಂದನಾ ಬಹಳ ಚೆನ್ನಾಗಿ ಮಾಡುತ್ತಿದ್ದರಂತೆ. 2ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಮಯದಲ್ಲಿ ಸ್ಪಂದನಾ, ತಮ್ಮ ತಂದೆ ಶಿವರಾಂ, ಮಗ ಶೌರ್ಯ ಹಾಗೂ ಪತಿ ವಿಜಯ ರಾಘವೇಂದ್ರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಇದೇ ರೀತಿ ಅನೇಕ ಸರ್‌ಪ್ರೈಸ್‌ಗಳನ್ನು ವಿಜಯ್‌ಗೆ ನೀಡಿದ್ದರಂತೆ ಸ್ಪಂದನಾ. ಅವರಿಗೆ ಆ ರೀತಿ ಸರ್‌ಪ್ರೈಸ್‌ ಕೊಡುವುದು ಅಂದ್ರೆ ಬಹಳ ಇಷ್ಟವಂತೆ. ಕ್ರೇಜಿಸ್ಟಾರ್‌ ಅಭಿನಯದ 'ಅಪೂರ್ವ' ಸಿನಿಮಾದಲ್ಲಿ ಸ್ಪಂದನಾ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಪತಿ ವಿಜಯ ರಾಘವೇಂದ್ರ ನಟನೆಯ 'ಕಿಸ್ಮತ್‌' ಚಿತ್ರವನ್ನು ನಿರ್ಮಿಸುವ ಮೂಲಕ ಸ್ಪಂದನಾ ನಿರ್ಮಾಪಕಿಯಾಗಿ ಕೂಡಾ ಗುರುತಿಸಿಕೊಂಡಿದ್ದರು.

39 ವರ್ಷ ವಯಸ್ಸಿಗೆ ಸ್ಪಂದನಾ ಮರೆಯಾಗಿ, ಎಲ್ಲರನ್ನೂ ದುಃಖದ ಮಡುವಿಗೆ ನೂಕಿದ್ದಾರೆ. ಪ್ರೀತಿಯ ಪತ್ನಿಯನ್ನು ಕಳೆದುಕೊಂಡು ವಿಜಯ ರಾಘವೇಂದ್ರ ಕಂಗಾಲಾಗಿದ್ದಾರೆ. ಇಂದು 2 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶವಿದ್ದು ಸಂಜೆ 4 ಗಂಟೆಗೆ ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅಂತ್ಯಸಂಸ್ಕಾರ ನೆರವೇರಲಿದೆ.

Whats_app_banner