ನಾನೇ ಬೆಳೆಸಿದವ್ರು ನನ್ನ ಅನ್ನ ಕಿತ್ಕೊಂಡ್ರು! ಅಂದಿನಿಂದ ಅದು ಕೊಚ್ಚೆ ಅಂತ ದೂರವೇ ಉಳಿದಿದ್ದೇನೆ; ಕುರಿ ಸುನೀಲ್ ಸಿಟ್ಟು ಯಾರ ಮೇಲೆ?
ಆ ವ್ಯಕ್ತಿಯ ಹೆಸರನ್ನೂ ಈ ವೇಳೆ ಎತ್ತಬಾರದು. ಅವರ ಹೆಸರು ಹೇಳಿದ್ರೆ ಮತ್ತೆ ನಮಗೇ ಶನಿ ಅಂಟಿಕೊಂಡು ಬಿಡುತ್ತೆ. ಹಾಗಾಗಿ ಅವರನ್ನು ದೂರ ಇಟ್ಟಿದ್ದೀನಿ ಎನ್ನುತ್ತಲೇ ಕುರಿ ಪ್ರತಾಪ್ ನಡುವಿನ ಮುನಿಸಿನ ಬಗ್ಗೆ ಹಳೇ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ಕುರಿ ಸುನೀಲ್.

Kuri Sunil: ಕಿರುತೆರೆಯ ಫ್ರಾಂಕ್ ಶೋ ಮೂಲಕ ನಾಡಿನ ಗಮನ ಸೆಳೆದವರಲ್ಲಿ ಕುರಿ ಸುನೀಲ್ ಅವರೂ ಒಬ್ಬರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕುರಿ ಬಾಂಡ್‌ನಿಂದಲೇ ದೊಡ್ಡ ಮಟ್ಟದ ಮನ್ನಣೆಯನ್ನೂ ಪಡೆದು, ಅಲ್ಲಿಂದ ಸಿನಿಮಾ ಅಂಗಳಕ್ಕೂ ಬಂದು ಗಟ್ಟಿಯಾಗಿ ನಿಂತರು ಕುರಿ ಸುನೀಲ್. ಪುನೀತ್ ರಾಜ್‌ಕುಮಾರ್ ಅವರ ಅಜಯ್ ಸಿನಿಮಾ ಮೂಲಕ ಬೆಳ್ಳಿತೆರೆಗೂ ಪದಾರ್ಪಣೆ ಮಾಡಿದರು. ಅಲ್ಲಿಂದ ಶುರುವಾದ ನಗುವಿನ ಪಯಣ, ಇಂದಿಗೂ ಓಡುತ್ತಲೇ ಇದೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಕುರಿ ಸುನೀಲ್ ಇಂದಿಗೂ ಹತ್ತಾರು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.
ಆದರೆ, ಹೀಗೆ ನಗು ಉಕ್ಕಿಸುವ ಇವರ ಹಿಂದೆ ನೋವಿನ ಕಥೆ ಇದೆ. ಆರಂಭದಲ್ಲಿ ತನ್ನ ಆಪ್ತರು ಎಂದು ಹೇಳಿಕೊಂಡು, ತನ್ನ ಜತೆಗೆ ಕೆಲಸಕ್ಕೆ ಸೇರಿಸಿಕೊಂಡಿದ್ದ ಕೆಲವರು, ಇದೇ ಸುನೀಲ್ ಅವರಿಗೆ ಮೋಸ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಕುರಿ ಸುನೀಲ್ ಅವರೇ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ನಾನೇ ಬೆಳೆಸಿದವರು, ನನ್ನ ಅನ್ನವನ್ನೇ ಕಿತ್ತುಕೊಂಡ್ರು ಎಂದು ಕುರಿ ಸುನೀಲ್ ಬೇಸರದಲ್ಲಿಯೇ ಮಾತನಾಡಿದ್ದಿದೆ. ಇದೀಗ ಆ ವ್ಯಕ್ತಿ ಯಾರು, ಕುರಿ ಸುನೀಲ್‌ಗೆ ಯಾರ ಮೇಲೆ ಸಿಟ್ಟು? ಅದನ್ನು ಅವರೇ ಹೇಳಿಕೊಂಡಿದ್ದಾರೆ.
ಕುರಿ ಸುನೀಲ್ ಸಿಟ್ಟು ಯಾರ ಮೇಲೆ?
ಈ ಬಗ್ಗೆ ಇತ್ತೀಚೆಗಷ್ಟೇ ಸ್ಮಾರ್ಟ್ ಸ್ಕ್ರೀನ್ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕುರಿ ಸುನೀಲ್, ಆ ವ್ಯಕ್ತಿಯ ಹೆಸರನ್ನೂ ಹೇಳದೇ ಮಾತು ಆರಂಭಿಸಿದ್ದಾರೆ. "ಆ ವ್ಯಕ್ತಿಯ ಹೆಸರನ್ನೂ ಈ ವೇಳೆ ಎತ್ತಬಾರದು. ಅವರ ಹೆಸರು ಹೇಳಿದ್ರೆ ಮತ್ತೆ ನಮಗೇ ಶನಿ ಅಂಟಿಕೊಂಡು ಬಿಡುತ್ತೆ. ಹಾಗಾಗಿ ಅವರನ್ನು ದೂರ ಇಟ್ಟಿದ್ದೀನಿ. ನನ್ನನ್ನು ಯಾರೆಲ್ಲ ತುಳಿದ್ರೋ ಇದೀಗ ಅವರೇ ಡೌನ್ ಆಗಿದ್ದಾರೆ. ಯಾಕೆಂದರೆ, ನನಗೇನು ಅವಕಾಶಗಳು ಕಡಿಮೆ ಆಗಿಲ್ಲ. ಇಂದಿಗೂ ನನ್ನ 18 ಚಿತ್ರಗಳು ಬಿಡುಗಡೆ ಆಗಬೇಕಿದೆ. ನಾನು ಒಳ್ಳೆಯ ದಾರಿಯಲ್ಲಿ ಬಂದಿದ್ದೇನೆ. ಒಳ್ಳೆಯದೇ ಆಗುತ್ತಿದೆ"
"ಚಿಕ್ಕಣ್ಣ ಮತ್ತು ಪ್ರತಾಪ್‌ಗೆ ನಾನು ಬೈದಿದ್ದಕ್ಕೆ ನನಗೆ ಅವಕಾಶ ಕಡಿಮೆ ಆಗಿದ್ಯಾ? ಹಾಗೇನೂ ಆಗಿಲ್ಲ. ಅವರಿಗೆ ಅವಕಾಶ ಕೊಡಿಸಿದ್ದೇ ನಾನು. ಬಕೆಟ್ ಹಿಡಿಯೋರಿಗೆ, ಬಕೆಟ್ ಇರೋವರೆಗೂ ಮಾತ್ರ ಅವಕಾಶ. ಆದರೆ, ನಾವು ಬಕೆಟ್ ಹಿಡಿದವರಲ್ಲ. ನಮಗೆ ದೇವ್ರು ಅವಕಾಶ ಕೊಟ್ಟಿದ್ದಾನೆ. ಸಿನಿಮಾಗಳಲ್ಲಿ ಗುಂಪುಗಾರಿಕೆ ಶುರುವಾಗಿದೆ. ನಿರ್ಮಾಪಕರು ತಮಗೆ ಯಾರೆಲ್ಲ ಬೇಕೋ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು, ಜನರಿಗೆ ಯಾರು ಬೇಕೋ ಅವರಿಗೆ ಅವಕಾಶ ಕೊಡುತ್ತಿಲ್ಲ. ವಿಪರ್ಯಾಸ ಏನೆಂದರೆ, ಕೊನೆಗೆ ಅವರೇ ಕೂತ್ಕೊಂಡು ಸಿನಿಮಾ ನೋಡ್ತಿದ್ದಾರೆ. "
ನಾನೇ ಬೆಳೆಸಿದವ್ರು ನನ್ನ ಅನ್ನ ಕಿತ್ಕೊಂಡ್ರು
"ಅವಕಾಶ ಕೊಡಿಸಲು ಆಗಿಲ್ಲ ಅಂದ್ರೂ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡಬಾರದು. ನನಗೆ ಬರೋ ಅವಕಾಶ ನಮಗೆ ಬಂದೇ ಬರುತ್ತವೆ. ದೀಪ ಆರುವಾಗ ಜಾಸ್ತಿ ಉರಿಯುತ್ತಂತೆ. ಅವರಿಬ್ಬರು ಮಾಡಿದ ತಪ್ಪು ಗೊತ್ತಾಗಿದೆ. ಅದಕ್ಕೆ ಎಲ್ಲ ದಾಖಲೆಗಳೂ ನನ್ನ ಬಳಿ ಇವೆ. ಕಾಲ್ ರೆಕಾರ್ಡ್‌ಗಳು ನನ್ನ ಬಳಿ ಇವೆ. ಅಲ್ಲಿ ಕೊಚ್ಚೆ ಇದೆ ಅಂದ ಮೇಲೆ ಅದರಿಂದ ದೂರ ಉಳಿಯೋದೆ ಸೂಕ್ತ. ಕೊಚ್ಚೆಗೆ ಕಲ್ಲು ಹಾಕಿ ನಾವ್ಯಾಕೆ ಗಲೀಜಾಗಬೇಕು. ಅಷ್ಟಕ್ಕೂ ಅವರಿಗೆ ಅವಕಾಶ ಕೊಡಿಸಿದ್ದೇ ನಾನು, ಅದನ್ನು ಹೇಳಿಕೊಂಡರೆ ಎಲ್ಲಿ ಅವರಿಗೆ ಅವಮಾನ ಆಗಿಬಿಡುತ್ತೋ ಅನ್ನೋ ಭಯ ಇರಬೇಕು. ನಾನೇ ಬೆಳೆಸಿದವ್ರು ನನ್ನ ಅನ್ನ ಕಿತ್ಕೊಂಡ್ರು"
ನನ್ನ ನಟನಾ ಜೀವನದಲ್ಲೂ ರಾಜಕೀಯ ನಡೆದಿದೆ
"ನನ್ನ ನಟನಾ ಜೀವನದಲ್ಲಿಯೂ ರಾಜಕೀಯ ನಡೆದಿದೆ. ದೊಡ್ಡ ದೊಡ್ಡವರ ಮುಂದೆ ಹೋಗಿ ನನ್ನ ಬಗ್ಗೆ ತುಂಬ ಮಾತನಾಡಿದ್ದಾರೆ. ಆದರೆ, ಮುಂದೊಂದು ದಿನ ಅದು ಅವರಿಗೂ ಸತ್ಯ ತಿಳಿಯಲಿದೆ. ಹೊಟ್ಟೆ ತುಂಬಿದವ್ನು ಯಾವತ್ತೂ ನಿರ್ಮಾಪಕರಿಗೆ ಆಶೀರ್ವಾದ ಮಾಡಲ್ಲ. ಹೊಟ್ಟೆ ಹಸಿದವನಿಗೆ ಚಾನ್ಸ್ ಕೊಡಿ ನಿಮಗೆ ಮನದುಂಬಿ ಹಾರೈಸುತ್ತಾನೆ. ನಾಲ್ಕೈದು ಲಕ್ಷ ಕೊಟ್ಟು ಹಾಸ್ಯಕಲಾವಿದರನ್ನು ಕರೆಸಿಕೊಳ್ಳುತ್ತೀರಿ. ನಮಗೆ ಬರೀ 20 ಸಾವಿರ ಕೊಡಿ, ನಿಮಗೆ ಹೇಗೆ ಬೇಕೋ ಹಾಗಿ ನಟಿಸಿ ತೋರಿಸ್ತಿವಿ. ನಮಗೂ ಅನ್ನದಾತ ಕೈಹಿಡಿದಿದ್ದಾನೆ" ಎಂದಿದ್ದಾರೆ ಕುರಿ ಸುನೀಲ್.
ಕುರಿ ಸುನೀಲ್ Vs ಕುರಿ ಪ್ರತಾಪ್
ಕುರಿ ಸುನೀಲ್ ಮತ್ತು ಕುರಿ ಪ್ರತಾಪ್ ನಡುವಿನ ಮುನಿಸಿಗೆ ಕಾರಣವೇನು? ಈ ವಿಚಾರವನ್ನುಈ ಹಿಂದೆಯೇ ಸುನೀಲ್ ಹೇಳಿಕೊಂಡಿದ್ದಾರೆ. "ಅದಾಗಲೇ ಅಪ್ಪ ತೀರಿಕೊಂಡಿದ್ರು. ಅಣ್ಣ ಅತ್ತಿಗೆ ಬೇರೆ ಮನೆ ಮಾಡಿದ್ರು. ನಾನು ಅಮ್ಮನನ್ನು ನೋಡಿಕೊಳ್ಳಬೇಕು. ಜವಾಬ್ದಾರಿ ಬಂದಿತ್ತು. ಸಂಪಾದನೆ ಮಾಡಲೇಬೇಕಿತ್ತು. ಹೀಗಿರುವಾಗ ಶಿವಕಾಶಿ ಸಿನಿಮಾ ಒಪ್ಪಿಕೊಂಡಿದ್ದೆ. ಸುದೀರ್ಘ ಎರಡು ವರ್ಷ ಆ ಸಿನಿಮಾ ಶೂಟಿಂಗ್ ನಡೆಯಿತು. ನಾನು ಮತ್ತು ಕುರಿ ಪ್ರತಾಪ್ ಇಬ್ಬರೂ ಕಾಂಬಿನೇಷನ್‌ನಲ್ಲಿ ಮಾಡ್ತಾ ಇದ್ವಿ. ಈ ಸಿನಿಮಾದಿಂದಲೇ ನಮ್ಮ ನಡುವೆ ಜಗಳ ಶುರುವಾಯ್ತು.
ಆಗ ನಾನು ತುಂಬ ಬಿಜಿ ಇದ್ದೆ. ಆ ಚಿತ್ರದ ಡೇಟ್ಸ್ ತುಂಬ ವೇರಿಯೇಷನ್ ಆಗ್ತಿತ್ತು. ಆ ಗ್ಯಾಪ್‌ನಲ್ಲಿ ನಾನು ಬೇರೆ ಸಿನಿಮಾ ಒಪ್ಪಿಕೊಳ್ಳುತ್ತಿದ್ದೆ. ಆದರೆ, ಎಲ್ಲೂ ಡೇಟ್ಸ್ ಕೊಡಬೇಡ ಅಂತ ಪ್ರತಾಪ್ ಹೇಳ್ತಿದ್ದ. ನೀನು ಡೇಟ್ಸ್ ಕೊಟ್ಟರೆ, ನಿನ್ನ ಜಾಗಕ್ಕೆ ಚಿಕ್ಕಣ್ಣನ ಹಾಕ್ಕೊಂಡ್ಬಿನಿ ಅಂದ. ಅಂದಿನಿಂದಲೇ ನಮ್ಮಿಬ್ಬರ ನಡುವೆ ಶುರುವಾಯ್ತು. ಅವನಿಗೆ ಅವಕಾಶ ಕೊಡಿಸಿದ್ದೇ ನಾನು, ನನ್ನನ್ನೇ ಬಿಟ್ಟು ಚಿಕ್ಕಣ್ಣನನ್ನು ಹಾಕ್ಕೊಳ್ತಿನಿ ಅಂದ್ರೆ ಏನರ್ಥ?" ಎಂದು ಈ ಹಿಂದೆಯೇ ಕುರಿ ಪ್ರತಾಪ್ ನಡುವಿನ ಮುನಿಸಿನ ಬಗ್ಗೆ ಕುರಿ ಸುನೀಲ್ ಹೇಳಿಕೊಂಡಿದ್ದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ