Bharjari Ghandu: ಬರಗಾಲದ ನಡುವೆ ತಂಪೆರೆದ ರಘು ದೀಕ್ಷಿತ್ ಹಾಡು; ಕಿರಣ್ ರಾಜ್ ಅಭಿನಯದ ಭರ್ಜರಿ ಗಂಡು ಸಿನಿಮಾದ ಮಳೆಹಾಡು ಕೇಳಿ
Bharajari Ghandu Movie Song: ಕಿರಣ್ ರಾಜ್ ಅಭಿನಯದ ಭರ್ಜರಿ ಗಂಡು ಸಿನಿಮಾದ ಹುಯ್ಯೋ ಹುಯ್ಯೋ ಮಳೆರಾಯ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಖ್ಯಾತ ಗಾಯಕ ರಘು ದೀಕ್ಷಿತ್ ತಮ್ಮ ಮಧುರ ಕಂಠದಲ್ಲಿ ಮೂಡಿಬಂದಿದೆ.
ಬೆಂಗಳೂರು: ಈಗ ಬರಗಾಲ. ಎಲ್ಲೆಡೆ ನೀರಿಗೆ ತತ್ವಾರ. ಈ ಸಂದರ್ಭದಲ್ಲಿ ರಾಜ್ಯದ ಕೆಲವು ಕಡೆ ತುಸು ಮಳೆ ಸುರಿದ ಸುದ್ದಿ ಕೇಳಿದರೂ ಜನರಿಗೆ ಖುಷಿಯಾಗುತ್ತದೆ. ಇದೇ ಸಮಯದಲ್ಲಿ ರಘು ದೀಕ್ಷಿತ್ ತಮ್ಮ ಮಧುರ ಕಂಠದಲ್ಲಿ ಹುಯ್ಯೋ ಹುಯ್ಯೋ ಮಳೆರಾಯ ಎಂದು ಹಾಡಿದ್ದಾರೆ. ಕಿರುತೆರೆ ಲೋಕದಲ್ಲಿ ತಮ್ಮದೇ ಅದ ಛಾಪು ಮೂಡಿಸಿರುವ ಕಿರಣ್ ರಾಜ್ ಅಭಿನಯದ ಭರ್ಜರಿ ಗಂಡು ಸಿನಿಮಾ ಇದೇ ಏಪ್ರಿಲ್ 5ರಂದು ರಿಲೀಸ್ ಆಗುತ್ತಿದೆ. ಅದಕ್ಕೆ ಮೊದಲು ಇದೀಗ ಚಿತ್ರತಂಡ ಭರ್ಜರಿ ಗಂಡು ಸಿನಿಮಾದ ಹುಯ್ಯೋ ಹುಯ್ಯೋ ಮಳೆರಾಯ ಹಾಡನ್ನು ಬಿಡುಗಡೆ ಮಾಡಿದೆ.
ಪ್ರಸಿದ್ಧ್ ನಿರ್ದೇಶನದ ಈ ಚಿತ್ರಕ್ಕಾಗಿ ಡಾ. ವಿ.ನಾಗೇಂದ್ರ ಪ್ರಸಾದ್ ಈ ಹಾಡು ಬರೆದಿದ್ದಾರೆ. " ಹುಯ್ಯೋ ಹುಯ್ಯೋ ಮಳೆರಾಯ" ಹಾಡು ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಖ್ಯಾತ ಗಾಯಕ ರಘು ದೀಕ್ಷಿತ್ ಈ ಹಾಡನ್ನು ಹಾಡಿದ್ದಾರೆ. ಗುಮ್ಮಿನೇನಿ ವಿಜಯ್ ಸಂಗೀತ ನೀಡಿರುವ ಈ ಹಾಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಎಲ್ಲಾ ಕಡೆ ಬಿಸಿಲು ಹೆಚ್ಚಾಗಿದ್ದು, ನೀರಿನ ಬವಣೆ ಹೆಚ್ಚಿದೆ. ಈ ಸಂದರ್ಭದಲ್ಲಿ ಉತ್ತಮ ಮಳೆಯಾಗಿ ನೀರಿನ ಬವಣೆ ದೂರವಾಗಲಿ ಎಂದು ಚಿತ್ರದ ನಾಯಕ ಕಿರಣ್ ರಾಜ್ ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವರ ಬಳಿ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದಾರೆ.
ಟೀಸರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ "ಭರ್ಜರಿ ಗಂಡು" ಏಪ್ರಿಲ್ 5 ಕ್ಕೆ ಚಿತ್ರಮಂದಿರಗಳಿಗೆ ಬರಲಿದ್ದಾನೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಪ್ರಸಿದ್ದ್ ಸಿನಿಮಾಸ್, ಮದನ್ ಗೌಡ ಹಾಗೂ ಅನಿಲ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ, ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ವೆಂಕಿ ಯುಡಿವಿ ಸಂಕಲನವಿರುವ ಈ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ.
ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಯಶಾ ಶಿವಕುಮಾರ್ ಇದ್ದಾರೆ. ರಮೇಶ್ ಭಟ್ , ರಾಕೇಶ್ ರಾಜ್, ಸುರೇಖ, ವೀಣಾ ಸುಂದರ್, ಜಯಶ್ರೀ, ನಾಗೇಶ್ ರೋಹಿತ್ ನಾಗೇಶ್, ಸೌರಭ್ ಕುಲಕರ್ಣಿ, ಮಡೆನೂರು ಮನು, ಗೋವಿಂದೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಈ ವಾರ ಬಹುನಿರೀಕ್ಷಿತ ಯುವ ಸಿನಿಮಾ ರಿಲೀಸ್ ಆಗುತ್ತಿದೆ. ಯುವ ರಾಜ್‌ಕುಮಾರ್ ನಟನೆಯ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದೆ. ರಾಕ್ಷಸ ತಂತ್ರ, ತೂತು ಕಾಸು, ದಿಲ್ ಖುಷ್, ಲೈನ್ ಮ್ಯಾನ್, ಯುವ, ಅವತಾರ ಪುರುಷ, ಪವರ್, ಭರ್ಜರಿ ಗಂಡು, ನೈಟ್ ಕರ್ಫ್ಯೂ, ಲವ್ ಯು ಶಂಕರ್, ರಾಮ ಆಂಡ್ ರಾಮು, ಕಿರಿಕ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.