ಕನ್ನಡ ಸುದ್ದಿ  /  Entertainment  /  Sandalwood News Upcoming Kannada Movies April 2024 Mukta Manasu Dance Karnataka Season 5 Contestent Now Hero Pcp

Upcoming Movies: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-5ರ ಸ್ಪರ್ಧಿ ಈಗ ಹೀರೋ; ಮುಕ್ತ ಮನಸ್ಸು ಸಿನಿಮಾ ಈ ತಿಂಗಳು ಬಿಡುಗಡೆ

Upcoming Kannada Movies: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-5ರ ಸ್ಪರ್ಧಿಯಾಗಿದ್ದ ಮೈಸೂರಿನ ಮೋಹನ್‌ ರಂಗನಾಥ್ ಮತ್ತು . ಕ್ಲಾಸಿಕಲ್ ಡ್ಯಾನ್ಸರ್ ಮಾನ್ಯ ನಟನೆಯ ಮುಕ್ತ ಮನಸ್ಸು ಎಂಬ ಸಿನಿಮಾ ಈ ತಿಂಗಳು ಬಿಡುಗಡೆಯಾಗುವ ಸೂಚನೆ ದೊರಕಿದೆ.

ಮುಕ್ತ ಮನಸ್ಸು ಸಿನಿಮಾ ಈ ತಿಂಗಳು ಬಿಡುಗಡೆ
ಮುಕ್ತ ಮನಸ್ಸು ಸಿನಿಮಾ ಈ ತಿಂಗಳು ಬಿಡುಗಡೆ

ಬೆಂಗಳೂರು: ಕನ್ನಡ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡ ಅನೇಕ ಪ್ರತಿಭೆಗಳು ಸಿನಿಮಾರಂಗಕ್ಕೂ ಆಗಮಿಸುತ್ತಿದ್ದಾರೆ. ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-5ರ ಸ್ಪರ್ಧಿಯಾಗಿದ್ದ ಮೈಸೂರಿನ ಮೋಹನ್‌ ರಂಗನಾಥ್ ಮುಕ್ತ ಮನಸ್ಸು ಎಂಬ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಮೋಹನ್‌ ರಂಗನಾಥ್‌ ನಾಯಕನಟನಾಗಿರುವ ಮುಕ್ತ ಮನಸ್ಸು ಸಿನಿಮಾದ ಕುರಿತು ಚಿತ್ರತಂಡ ಒಂದಿಷ್ಟು ಮಾಹಿತಿ ಹಂಚಿಕೊಂಡಿದೆ.

ಮುಕ್ತ ಮನಸ್ಸು ಹೊಸಬರ ಸಿನಿಮಾ. ಈ ಚಿತ್ರಕ್ಕೆ "ಕೇಳದೇ ನಿಮಗೀಗ" ಎಂಬ ಟ್ಯಾಗ್‌ಲೈನ್‌ ಇದೆ. ಎಸ್.ಎಲ್.ಜೆ. ಪ್ರೋಡಕ್ಷನ್ಸ್ ಅಡಿಯಲ್ಲಿ ಮೈಸೂರು ಮೂಲದ ವೆಂಕಟೇಶ್ ಬಂಡವಾಳ ಹೂಡಿದ್ದು, ಬೋರೇಗೌಡ-ಲೋಕೇಶ್-ಜಿ.ಎನ್.ವೀಣಾ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಈ ಸಿನಿಮಾದ ರಚನೆ ಆರ್.ಸಿ.ರಂಗಶೇಖರ್ ಅವರದ್ದು. ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಕೂಡ ಇವರದ್ದೇ.

ಮುಕ್ತ ಮನಸ್ಸು ಟ್ರೇಲರ್‌ ಬಿಡುಗಡೆ

ಮುಕ್ತ ಮನಸ್ಸು ಸಿನಿಮಾದ ಪ್ರಚಾರದ ಮೊದಲ ಹಂತವಾಗಿ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಸಮಾರಂಭ ನಡೆದಿದೆ. "ನಾನು ರಂಗಭೂಮಿ ಕಲಾವಿದ. ಸತತ 25 ವರ್ಷಗಳ ಕಾಲ ರಂಗಾಯಣದಲ್ಲಿ ಕೆಲಸ ಮಾಡಿ, ಡಾ.ರಾಜ್‌ಕುಮಾರ್ ಫಿಲಿಂ ಶಾಲೆಯಲ್ಲಿ ಕೋರ್ಸ್ ಮಾಡಿದ್ದೇನೆ. ಇದೆಲ್ಲಾ ಅನುಭವದಿಂದ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದೇನೆ. ಪ್ರೇಮಿಗಳು ಯಾರೇ ಆಗಿರಲಿ. ಮುಕ್ತವಾಗಿ ಯಾವುದೇ ತರಹದ ಕಲ್ಮಶ ಇಲ್ಲದ ಪ್ರೀತಿಯು ಹೇಗೆ ಕೊನೆ ತನಕ ಉಳಿದುಕೊಳ್ತದೆ. ಅದು ಹೇಗಿರುತ್ತದೆ. ಹಳ್ಳಿಯಿಂದ ಪಟ್ಟಣಕ್ಕೆ ಓದಲು ಬರುವ ಆಕೆಗೆ ಪಯಣದಲ್ಲಿ ಒಬ್ಬನೊಂದಿಗೆ ಲವ್ ಬೆಸೆಯುತ್ತದೆ. ಮನೆಯಲ್ಲಿ ವಿರೋದ ಎದುರಾದಾಗ ಮುಕ್ತ ಮನಸುಗಳ ಪ್ರೀತಿ ಯಾವ ಹಂತಕ್ಕೆ ತಲುಪುತ್ತದೆ. ಕೊನೆಗೆ ಇಬ್ಬರು ಒಂದಾಗುತ್ತಾರಾ? ಎಂಬುದನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಲಾಗಿದೆ. ಅಲ್ಲದೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ" ಎಂದು ನಿರ್ದೇಶಕ ಆರ್.ಸಿ.ರಂಗಶೇಖರ್ ಹೇಳಿದ್ದಾರೆ.

ಚಿತ್ರದ ಹೀರೋ ಮತ್ತು ಹೀರೋಯಿನ್‌

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-5ರ ಸ್ಪರ್ಧಿಯಾಗಿದ್ದ ಮೈಸೂರಿನ ಮೋಹನ್‌ ರಂಗನಾಥ್ ಮುಕ್ತ ಮನಸ್ಸು ಸಿನಿಮಾದ ಹೀರೋ ಆಗಿ ನಟಿಸಿದ್ದಾರೆ. ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ಬೆಂಗಳೂರಿನ ಮಾನ್ಯ ನಾಯಕಿಯಾಗಿ ನಟಿಸಿದ್ದಾರೆ. ತಾರಾಗಣದಲ್ಲಿ ಶೋಭರಾಜ್, ರಮೇಶ್‌ಪಂಡಿತ್, ಅಪರ್ಣ, ನಾಗರತ್ನ, ಸೆಂಚೂರಿಗೌಡ, ಜಾನು, ಮಂಜುಬಿಳಿಗೆರೆ, ಮಧು ಮುಂತಾದವರು ಮುಕ್ತ ಮನಸ್ಸು ಸಿನಿಮಾದಲ್ಲಿ ನಟಿಸಿದ್ದಾರೆ.

ಟ್ರೇಲರ್‌ ನೋಡಿದಾಗ ಕಲಾವಿದರ ಅಭಿನಯ ಕೊರತೆ ಕಾಣುತ್ತಿಲ್ಲ. ಅನ್ನದಾತರು ಕಂಜೂಸು ಮಾಡದೆ ಖರ್ಚು ಮಾಡಿದ್ದಾರೆ. ಅದಕ್ಕೆ ಗುಣಮಟ್ಟ ಚೆನ್ನಾಗಿ ಮೂಡಿ ಬಂದಿದೆ. ಅವರುಗಳ ಪ್ರಯತ್ನ ಮುಗಿದಿದೆ. ಇನ್ನು ಮಾಧ್ಯಮದವರು ಚಿತ್ರವನ್ನು ಕನ್ನಡದ ಮನಸುಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಈಗ ದೇಶದಲ್ಲಿ ಎಲ್ಲಾ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಇದೆ. ಸದ್ಯ ಸಾಮಾಜಿಕ ಜಾಲತಾಣಗಳ ಸದ್ದು ಜೋರಾಗಿದೆ. ನೀವುಗಳು ಹೊಸಬರ ಚಿತ್ರಗಳಿಗೆ ಉತ್ತಮ ರೀತಿಯಲ್ಲಿ ಪೋಸ್ಟ್ ಮಾಡಿದರೆ ಲಕ್ಷಾಂತರ ಜನರು ನೋಡುತ್ತಾರೆ. ಗೆದ್ದ ಸಿನಿಮಾಗಳು ಒಳ್ಳೆಯದಾಗಿರುವುದಿಲ್ಲ. ಸೋತ ಚಿತ್ರಗಳು ಕೆಟ್ಟದ್ದು ಅಂತ ಹೇಳಲಾಗದು. ಯಾವುದೋ ಕಾರಣಕ್ಕೆ ಗೆಲುವು ಅಥವಾ ಸೋತಿರಬಹುದು. ಮಾಧ್ಯಮದವರು ಕನ್ನಡ ಚಿತ್ರಗಳನ್ನು ಅದರಲ್ಲೂ ಹೊಸಬರನ್ನು ಪ್ರೋತ್ಸಾಹಿಸುವ ಕಾಯಕ ಈಗಲೂ ಮುಂದುವರೆಸಬೇಕು ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣಗೌಡ ಮನವಿ ಮಾಡಿದ್ದಾರೆ.

ಈ ಸಿನಿಮಾದ ಐದು ಹಾಡುಗಳಿಗೆ ವಿನುಮನಸು ಸಂಗೀತವಿದೆ. ಛಾಯಾಗ್ರಹಣ ರವಿ, ಸಾಹಸ ಕೌರವ ವೆಂಕಟೇಶ್ ಮತ್ತು ಪ್ರಮೋದ್-ಸತ್ಯ ನೃತ್ಯ ನಿರ್ದೇಶನ ನೀಡಿದ್ದಾರೆ. ಈ ಸಿನಿಮಾವನ್ನು ಮೈಸೂರು, ಮಂಡ್ಯದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಈ ತಿಂಗಳು ಮುಕ್ತ ಮನಸ್ಸು ಸಿನಿಮಾವನ್ನು ರಿಲೀಸ್‌ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

IPL_Entry_Point