Friday Movie Release: ಸ್ಯಾಂಡಲ್‌ವುಡ್‌ನಲ್ಲಿ ಈ ವಾರ 2 ಸಿನಿಮಾ ಬಿಡುಗಡೆ; ನಿರೀಕ್ಷೆ ಹೆಚ್ಚಿಸಿದ ಕಾಂಗರೂ, ಉಸಿರೇ ಉಸಿರೇ
Upcoming Movies in Kannada: ಮೇ 3ರಂದು ಸ್ಯಾಂಡಲ್‌ವುಡ್‌ನಲ್ಲಿ ಆದಿತ್ಯ, ರಂಜಿನಿ ರಾಘವನ್ ನಟನೆಯ ಕಾಂಗರೂ ಮತ್ತು ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿರುವ ಉಸಿರೇ ಉಸಿರೇ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿವೆ.
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಆದರೆ, ಬಿಡುಗಡೆಯಾಗುತ್ತಿರುವುದು ಎರಡೇ ಎರಡು ಸಿನಿಮಾಗಳಾಗಿದ್ದರೂ, ಈ ಎರಡು ಸಿನಿಮಾಗಳು ನಿರೀಕ್ಷೆ ಹೆಚ್ಚಿಸಿವೆ. ಆದಿತ್ಯ ನಟನೆಯ ಕಾಂಗಾರೂ ಮತ್ತು ಬಿಗ್‌ಬಾಸ್ ಮಾಜಿ ಸ್ಪರ್ಧಿ ರಾಜೀವ್ ಹನು ನಟನೆಯ ಉಸಿರೇ ಉಸಿರೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಉಸಿರೇ ಉಸಿರೇ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದಾರೆ.
ಮೇ 3ರಂದು ಕಾಂಗರೂ ರಿಲೀಸ್
ಆದಿತ್ಯ ನಾಯಕ ನಟನಾಗಿ ನಟಿಸಿರುವ ಕಾಂಗರೂ ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗುತ್ತದೆ. ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಿಶೋರ್ ಮೇಗಳಮನೆ ನಿರ್ದೇಶನದಲ್ಲಿ ಈ ಸಿನಿಮಾ ನಿರ್ಮಿಸಲಾಗಿದೆ. ಚೆನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲಾರ ಮಂಡ್ಯ ಹಾಗೂ ಕೆ.ಜಿ.ಆರ್.ಗೌಡ ಎಂಬ ಸ್ನೇಹಿತರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕಾಂಗರೂ ಸಿನಿಮಾದಲ್ಲಿ ಆದಿತ್ಯ ಅವರಿಗೆ ನಾಯಕಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದಾರೆ. ಬೆಂಗಳೂರು, ಶೃಂಗೇರಿ, ಚಿಕ್ಕಮಗಳೂರು, ಕೊಪ್ಪ ಹಾಗೂ ಹೊರನಾಡು ಮುಂತಾದ ಕಡೆ ಸಿನಿಮಾದ ಶೂಟಿಂಗ್ ಮಾಡಿದ್ದೇವೆ ಎಂದು ನಿರ್ದೇಶಕ ಕಿಶೋರ್ ಮೇಗಳಮನೆ ಮಾಹಿತಿ ನೀಡಿದ್ದಾರೆ.
ಉಸಿರೇ ಉಸಿರೇ ಈ ಶುಕ್ರವಾರ ಬಿಡುಗಡೆ
ನಟ ರಾಜೀವ್ ಹನು ನಾಯಕನಾಗಿ ನಟಿಸಿರುವ ಉಸಿರೇ ಉಸಿರೇ ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿರುವುದರಿಂದ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಎನ್ ಗೊಂಬೆ ಬ್ಯಾನರ್‌ನಲ್ಲಿ ಪ್ರದೀಪ್ ಯಾದವ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿ.ಎಂ. ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ. ಉಸಿರೇ ಉಸಿರೇ ಚಿತ್ರದಲ್ಲಿ ರಾಜೀವ್ ನಾಯಕನಾಗಿ ನಟಿಸಿದ್ದಾರೆ. ದೇವರಾಜ್, ತಾರಾ, ಬ್ರಹ್ಮಾನಂದಂ, ಅಲಿ ಮುಂತಾದ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಾಜೀವ್, ಶ್ರೀಜಿತ ಘೋಶ್, ಡೈನಾಮಿಕ್ ಸ್ಟಾರ್ ದೇವರಾಜ್, ತಾರಾ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಮಂಜು ಪಾವಗಡ, ಶೈನಿಂಗ್ ಸೀತಾ ರಾಮ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚುನಾವಣೆಯ ಕಾರಣದಿಂದ ಕಳೆದ ಕೆಲವು ವಾರಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಬಿಡುಗಡೆ ಕಡಿಮೆಯಾಗಿದೆ. ಇದೇ ಸಮಯದಲ್ಲಿ ಹೊರಗಡೆ ಬಿಸಿಲು ಹೆಚ್ಚಾಗಿದ್ದು, ಮನೆಯಿಂದ ಹೊರಕ್ಕೆ ಹೋಗುವವರ ಸಂಖ್ಯೆಯೂ ಕಡಿಮೆಯಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ತಮಿಳಿನಲ್ಲಿ ಅಕ್ರನ್, ಹಿಂದಿಯಲ್ಲಿ ಲೈಫ್ ಏಕ್ ಸೆಟಲ್‌ಮೆಂಟ್, ಮರಾಠಿಯಲ್ಲಿ ರುದ್ರ,ಹಿಂದಿಯಲ್ಲಿ ದಿ ಇಂಡಿಯನ್ ಸ್ಟೋರಿ, ತೆಲುಗಿನಲ್ಲಿ ನೀನು ವಿಲೈಯಾಡು ಸೇರಿದಂತೆ ಭಾರತದಲ್ಲಿ ಕೆಲವೇ ಕೆಲವು ಸಿನಿಮಾಗಳು ರಿಲೀಸ್ ಆಗುತ್ತಿವೆ.
ಹೀಗಿದ್ದರೂ, ಮೇ 10ರಂದು ಅಂದರೆ ಮುಂದಿನ ವಾರ ಹಲವು ಸಿನಿಮಾಗಳು ರಿಲೀಸ್ ಆಗಲಿವೆ. ಬಾಲಿವುಡ್‌ನಲ್ಲಿ ಶ್ರೀಕಾಂತ್, 4ಎನ್6, ಗ್ರೇ ಗೇಮ್ಸ್ ಮುಂತಾದ ಸಿನಿಮಾಗಳು ರಿಲೀಸ್ ಆಗಲಿವೆ. ಕನ್ನಡದಲ್ಲಿ ರಾಮನ ಅವತಾರವೆಂಬ ಸಿನಿಮಾ ಬಿಡುಗಡೆಯಾಗುತ್ತಿದೆ.
ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳು
ಈ ಶುಕ್ರವಾರ ಅಂದರೆ ಮೇ 3ರ ಬಳಿಕ ಹಲವು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಅಜಯ್ ದೇವಗನ್ ನಟನೆಯ ಸೈತಾನ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ದಿ ಫಾಲ್ ಗೈ ಎಂಬ ಹಾಲಿವುಡ್ ಸಿನಿಮಾವು ರಿಲೀಸ್ ಆಗಲಿದೆ. ಇದರೊಂದಿಗೆ ಹಲವು ವೆಬ್ ಸರಣಿಗಳು ಈ ವಾರ ರಿಲೀಸ್ ಆಗುತ್ತಿವೆ. ಹೆಚ್ಚಿನ ವಿವರ ಪಡೆಯಲು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.