ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ; A ಚಿತ್ರದ ನೆನಪುಗಳನ್ನು ಮೆಲುಕು ಹಾಕಿದ ಚಾಂದನಿ
ಉಪೇಂದ್ರ ನಟಿಸಿ, ನಿರ್ದೇಶಿಸಿದ A ಸಿನಿಮಾ ಮೇ 17ರಂದು ಮರು ಬಿಡುಗಡೆ ಆಗುತ್ತಿದೆ. ಈ ನಿಮಿತ್ತ ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದ ನಟಿ ಚಾಂದನಿ, ಈಗ ಮತ್ತೆ ಅಂದಿನ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
Chandini About A: ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ "A". ಉಪೇಂದ್ರ ಅವರು ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದ ಈ ಚಿತ್ರದ ನಾಯಕಿಯಾಗಿ ಚಾಂದಿನಿ ಅಭಿನಯಿಸಿದ್ದರು. 2024 ರ ಮೇ 17 ರಂದು A ಚಿತ್ರ ರೀ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ನಾಯಕಿ ಚಾಂದನಿ ಚಿತ್ರದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಇದು ನಾಯಕಿ ಚಾಂದಿನಿ ಜೀವನವೆನ್ನೇ ಬದಲಿಸಿದ ಒಂದು ಸಿನಿಮಾ. ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲು ಸಿನಿಮಾ ಅಂದರೆ ತಪ್ಪಾಗಲಾರದು. ಈ ರೀತಿಯಲ್ಲೂ ಸಿನಿಮಾ ಮಾಡಬಹುದು ಅಂತ ಸಿನಿಮಾ ಜಗತ್ತಿಗೆ ಉಪೇಂದ್ರ ರವರು ತೋರಿಸಿಕೊಟ್ಟರು. ಈ ಸಿನಿಮಾ ಆ ಕಾಲಕ್ಕೆ ಹೇಗೆ ಪ್ರಸ್ತುತವೋ, ಈ ಕಾಲಕ್ಕೂ ಕೂಡ ಈ ಸಿನಿಮಾ ಸಲ್ಲುತ್ತದೆ.
ಒಳ್ಳೆಯ ಕಥೆ ಸಿಕ್ಕರೆ ಮತ್ತೆ ನಟಿಸುವೆ
ನಾಯಕಿ ಚಾಂದಿನಿ "A" ಸಿನಿಮಾದಲ್ಲಿ ಹೇಗಿದ್ದರೋ, ಈಗಲು ಹಾಗೆ ಇದ್ದಾರೆ. ಅದಕ್ಕೆ ಅವರು ನೀಡುವ ಕಾರಣ, "ನನ್ನ ಜೀವನವನ್ನೇ ಬದಲಿಸಿದಂತಹ ಸಿನಿಮಾ ಅದು. ಅದರಿಂದ ನನಗೆ ಸಿಕ್ಕ ಕನ್ನಡ ಜನರ ಪ್ರೀತಿ ಹಾಗೂ ಆ ಸಿನಿಮಾದ ಅ ಒಂದು ಫೇಮಸ್ ಡೈಲಾಗ್ "GOD IS GREAT" ಅನ್ನುವ ಹಾಗೆ, ಈ ಎರಡರ ಆಶೀರ್ವಾದದಿಂದ ನಾನು ಇವತ್ತಿಗೂ A ಚಾಂದಿನಿ ರೀತಿಯಲ್ಲೆ ಇದ್ದೀನಿ. ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ A" ಅಂತಾರೆ ನಾಯಕಿ.
"ಪ್ರಬುದ್ಧ ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಗ್ಗೆ ವರ್ಣಿಸಲು ಪದಗಳೇ ಇಲ್ಲ. ಅಂದಿಗೂ ಇಂದಿಗೂ ನನ್ನ ಮೆಚ್ಚಿನ ನಿರ್ದೇಶಕ ಉಪೇಂದ್ರ ಅವರು. ಗುರುಕಿರಣ್ ಅವರ ಸಂಗೀತದಲ್ಲಿ ಮೂಡಿಬಂದಿರುವ A ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ಕನ್ನಡಿಗರು A ಚಿತ್ರದಿಂದ ಇಲ್ಲಿಯವರೆಗೂ ನನಗೆ ತೋರುತ್ತಿರುವ ಪ್ರೀತಿಗೆ ಚಿರ ಋಣಿ"
"ಇಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಮೇ 17 ಚಿತ್ರ ರೀ ರಿಲೀಸ್ ಆಗುತ್ತಿದೆ. ಈಗಲೂ ಭರ್ಜರಿ ಯಶಸ್ಸು ಕಾಣಲಿದೆ ಎಂದು ತಿಳಿಸಿದ ನಾಯಕಿ ಚಾಂದಿನಿ, ಒಳ್ಳೆಯ ಕಥೆ ಸಿಕ್ಕರೆ ಕನ್ನಡ ಚಿತ್ರಗಳಲ್ಲಿ ನಟಿಸುತ್ತೇನೆ" ಎನ್ನುತ್ತಾರೆ.
ಮತ್ತೆ ತೆರೆಮೇಲೆ A ಸಿನಿಮಾ
ರಿಯಲ್ ಸ್ಟಾರ್ ಉಪೇಂದ್ರ ಸದ್ಯ UI ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಪೋಸ್ಟರ್, ಹಾಡಿನ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದಾರೆ ಉಪೇಂದ್ರ. ಇದೆಲ್ಲದರ ಬೆನ್ನಲ್ಲೇ, ಈ ಸಿನಿಮಾದಿಂದ ಏನಾದರೂ ಹೊಸ ಅಪ್ಡೇಟ್ ಸಿಗಲಿದೆಯೇ ಎಂದು ಫ್ಯಾನ್ಸ್ ಕಾತರದಿಂದ ಕಾದಿದ್ದಾರೆ. ಆದರೆ, ಹಾಗೆ ಕಾದಿದ್ದ ಅಭಿಮಾನಿಗಳಿಗೆ ಯೂಐ ಬದಲು ಬೇರೆಯದೇ ಟ್ರೀಟ್ ನೀಡಿದ್ದಾರೆ. ಸದ್ದಿಲ್ಲದೆ ಸ್ಯಾಂಡಲ್ವುಡ್ನ ಕಲ್ಟ್ ಕ್ಲಾಸಿಕ್ A ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.
ಆಗಿನ ಕಾಲದಲ್ಲಿಯೇ 20 ಕೋಟಿ ಕಲೆಕ್ಷನ್
1998ರಲ್ಲಿ ಸ್ವತಃ ಉಪೇಂದ್ರ ನಾಯಕನಾಗಿ ನಟಿಸಿ ನಿರ್ದೇಶಿಸಿದ್ದ A ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಕಲೆಕ್ಷನ್ ವಿಚಾರದಲ್ಲಿಯೂ ದಾಖಲೆ ಬರೆದಿತ್ತು. ಇದೀಗ 26 ವರ್ಷಗಳ ಹಿಂದಿನ ಈ ಸಿನಿಮಾವನ್ನು ಮತ್ತೆ ತೆರೆಮೇಲೆ ತರಲು ನಿರ್ಮಾಪಕರು ಪ್ಲಾನ್ ಮಾಡಿದ್ದಾರೆ. ಅದರಂತೆ, ಮುಂದಿನ ವಾರ ಮೇ 17ರಂದು A ಸಿನಿಮಾ ಮತ್ತೆ ತೆರೆಮೇಲೆ ಬರಲಿದೆ. ಬಿ ಜಗನ್ನಾಥ್, ಬಿ. ಜಿ ಮಂಜುನಾಥ್ ಈ ಸಿನಿಮಾ ನಿರ್ಮಾಣ ಮಾಡಿದ್ದರು. ಆಗಿನ ಕಾಲದಲ್ಲಿ 1ಕೋಟಿ 25 ಲಕ್ಷ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 20 ಕೋಟಿ ಕಲೆಕ್ಷನ್ ಮಾಡಿತ್ತು.