ಉಪೇಂದ್ರರ ಯುಐ ಸಾಮಾನ್ಯ ಸಿನಿಮಾ ಅಲ್ವಂತೆ; ವಿಆರ್, ಮೋಷನ್ -ಫೇಶಿಯಲ್ ಕ್ಯಾಪ್ಚರ್.. ಅವತಾರ್‌ನಂತಹ ತಂತ್ರಜ್ಞಾನ ಬಳಸಿದ್ದಾರಂತೆ ಬುದ್ಧಿವಂತ
ಸ್ಯಾಂಡಲ್‌ವುಡ್‌ನ ಬುದ್ಧಿವಂತ ನಟ ನಿರ್ದೇಶಕ ಉಪೇಂದ್ರರ ಮುಂದಿನ ಯುಐ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಯುಐ ಟೀಸರ್‌ನಿಂದಾಗಿ ಈ ಸಿನಿಮಾ ಬಳಸಿರುವ ತಂತ್ರಜ್ಞಾನದ ಕುರಿತು ಚರ್ಚೆಯಾಗುತ್ತಿದೆ. ಅವತಾರ್ ಸಿನಿಮಾಕ್ಕೆ ಬಳಸಿದಂತಹ ತಂತ್ರಜ್ಞಾನಗಳನ್ನು ಉಪೇಂದ್ರ ಬಳಸಿದ್ದಾರೆ ಎನ್ನಲಾಗಿದೆ.
ಉಪೇಂದ್ರ ನಟನೆ ಮತ್ತು ನಿರ್ದೇಶನದ ಯುಐ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಸ್ಯಾಂಡಲ್‌ವುಡ್‌ನ ಬುದ್ಧಿವಂತ ನಟ ಕನ್ನಡಕ್ಕೆ ಭಿನ್ನ ಸಿನಿಮಾಗಳನ್ನು ಪರಿಚಯಿಸಿದ ಇತಿಹಾಸ ಹೊಂದಿರುವವರು. ಯುಐ ಟೀಸರ್ ನೋಡಿದಾಗ ಇದೇನೋ ಡಿಫರೆಂಟ್ ಇದೆ, ಇದರಲ್ಲಿ ಏನೋ ಸ್ಪೆಷಲ್ ಇದೆ ಎಂಬ ಭಾವ ಎಲ್ಲರಲ್ಲಿಯೂ ಮೂಡಿತ್ತು. ಯೂಟ್ಯೂಬ್‌ನಲ್ಲೂ ಎಐ ಟೀಸರ್ ನಂಬರ್1ನಲ್ಲಿ ಟ್ರೆಂಡಿಂಗ್‌ನಲ್ಲಿತ್ತು. ಈ ಟೀಸರ್ ಒಂದು ಸಾರಿ ನೋಡಿದರೆ ಸಾಲದು ಹತ್ತು ಹಲವು ಸಲ ನೋಡುವಂತೆ ಇತ್ತು.
ಟೀಸರ್ ಆರಂಭವಾದಗ ಅನ್ಯಗ್ರಹದ ಜೀವಿಗಳಂತೆ ಕಾಣಿಸುವ ಇಬ್ಬರು ಕಾಣಿಸಿದ್ದರು. ಈ ಸೀನ್ ನೋಡಿದಾಗ ಯುಐ ನೋಡುತ್ತ ಇದ್ದೆವೋ ಅಥವಾ ಹಾಲಿವುಡ್‌ನ ಅವತಾರ್ ನೋಡ್ತಾ ಇದ್ದೇವೋ ಎಂಬ ಸಂದೇಹ ಸಾಕಷ್ಟು ಜನರಲ್ಲಿ ಮೂಡಿತ್ತು. ಹೌದು, ಉಪೇಂದ್ರರ ನೂತನ ಯುಐ ಸಿನಿಮಾಕ್ಕೆ ಅವತಾರ್: ವೇ ಆಫ್ ವಾಟರ್‌ನಂತಹ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಕುರಿತು ಕೆಲವು ತಿಂಗಳ ಹಿಂದೆ ದಿ ಫೆಡರಲ್ ಎಂಬ ಸುದ್ದಿತಾಣಕ್ಕೆ ಯುಐ ಸಿನಿಮಾದ ಸಹ ನಿರ್ಮಾಪಕ ನವೀನ್ ಮನೋಹರನ್ ಮಾಹಿತಿ ನೀಡಿದ್ದರು.
ಕರ್ನಾಟಕದಲ್ಲಿ ಈಗಾಗಲೇ ಕೆಜಿಎಫ್‌ನಂತಹ ಹಲವು ಸಿನಿಮಾಗಳು ತಂತ್ರಜ್ಞಾನದ ಹೊಸ ಸಾಧ್ಯತೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪ್ರಯತ್ನಿಸಿವೆ. ಆದರೆ, ಇವೆಲ್ಲಕ್ಕಿಂತ ಉಪೇಂದ್ರ ಒಂದು ಹೆಜ್ಜೆ ಮುಂದಕ್ಕೆ ಹೋದಂತೆ ಕಾಣಿಸುತ್ತದೆ. ಕಳೆದ ವರ್ಷ ಯುಐ ಸಿನಿಮಾದ ಬಿಹ್ಯಾಂಡ್ ದಿ ಸೀನ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಸಾಮಾನ್ಯವಾಗಿ ಚಿತ್ರದ ಶೂಟಿಂಗ್ ಸಮಯದಲ್ಲಿ ಲೈಟ್ ಕ್ಯಾಮೆರಾ ಆಕ್ಷನ್ ಎಂದು ಹೇಳಲಾಗುತ್ತದೆ. ಆದರೆ, ಆ ವಿಡಿಯೋದಲ್ಲಿ ಉಪೇಂದ್ರ ಅವರು ಮಾನಿಟರ್, ಮೊಕೊಬಾಟ್, ಸ್ಟೈಪ್, ಜಿಎಫ್‌ಎಂ, ಪ್ರೊಬ್, 360 ಡಿಗ್ರಿ ಕ್ಯಾಮೆರಾ, ಲೈಟ್ಸ್, ಸ್ಮೋಕ್, ಫೈರ್, ರೋಲ್ ಕ್ಯಾಮೆರಾ, ಸ್ಟಡಿ ಕ್ಯಾಮ್ ಮೂವ್ ಆಂಡ್ ಆಕ್ಷನ್ ಎಂದಿದ್ದರು.
ದಿ ಫೆಡರಲ್ ವರದಿ ಪ್ರಕಾರ ಯುಐ ಸಿನಿಮಾವು ಅವತಾರ್: ದಿ ವಾಟರ್‌ಗೆ ಬಳಸಿದಂತಹ ತಂತ್ರಜ್ಞಾನ ಬಳಸುತ್ತಿದೆ. "ಈ ಸಿನಿಮಾದ ಒಟ್ಟಾರೆ ಸೀಕ್ವೆನ್ಸ್‌ಗಳು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಶೂಟ್ ಮಾಡಲಾಗುತ್ತದೆ. ಇದು ಸಿನಿಮಾದ ಒಂದು ಪ್ರಮುಖ ಹೈಲೈಟ್. ಅಂದರೆ, ಚಿತ್ರೀಕರಣದ ಪರಿಸರವನ್ನು 3ಡಿ ತಂತ್ರಜ್ಞಾನದ ಮೂಲಕ ನಿರ್ಮಿಸಲಾಗುತ್ತದೆ. ಇಂತಹ ವಿಧಾನ ಬಳಸುವ ಭಾರತದ ಮೊದಲ ಸಿನಿಮಾ. ಅವತಾರ್: ದಿ ವೇ ಆಫ್ ವಾಟರ್ ಸಿನಿಮಾಕ್ಕೆ ಇಂಡಸ್ಟ್ರಿಯಲ್ ಲೈಟ್ ಆಂಡ್ ಮ್ಯಾಜಿಕ್ ಕ್ರಿಯೇಷನ್ ಬಳಸಿದಂತಹ ವರ್ಚುವಲ್ ರಿಯಾಲಿಟಿ ಟೆಕ್ನಾಲಜಿಯನ್ನು ಇದಕ್ಕೆ ಬಳಸಲಾಗುತ್ತದೆ" ಎಂದು ದಿ ಫೆಡರಲ್ ಸುದ್ದಿಪತ್ರಿಕೆಗೆ ನವೀನ್ ಮನೋಹರನ್ ಮಾಹಿತಿ ನೀಡಿದ್ದರು.
ಈ ಸಿನಿಮಾದಲ್ಲಿ ನಟಿಸುವ ಉಪೇಂದ್ರರನ್ನು 200 ಕ್ಯಾಮೆರಾಗಳನ್ನು ಬಳಸಿ ಸ್ಕ್ಯಾನ್ ಮಾಡಲಾಗಿದೆಯಂತೆ. ಈ ರೀತಿ ಸ್ಕ್ಯಾನ್‌ಗೆ ಒಳಗಾದ ಮೊದಲ ಕನ್ನಡ ನಟರೆಂಬ ಹಿರಿಮೆಗೆ ಉಪೇಂದ್ರ ಪಾತ್ರರಾಗಲಿದ್ದಾರೆ. ಸುಮಾರು 100 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿರುವ ಈ ಸಿನಿಮಾದಲ್ಲಿ 14 ಸಾವಿರಕ್ಕೂ ಹೆಚ್ಚು ವಿಎಫ್‌ಎಕ್ಸ್ ಶಾಟ್‌ಗಳು ಇರುತ್ತವೆಯಂತೆ. ಮೋಷನ್ ಕ್ಯಾಪ್ಚರ್, ಫೇಶಿಯಲ್ ಕ್ಯಾಪ್ಚರ್ ಮತ್ತು ವರ್ಚುವಲ್ ರಿಯಾಲಿಟಿಯಂತಹ ಆಧುನಿಕ ತಂತ್ರಜ್ಞಾನಗಳನ್ನು ಈ ಸಿನಿಮಾದ ಶೂಟಿಂಗ್‌ಗೆ ಬಳಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದರು. ಇದೇ ಸಮಯದಲ್ಲಿ ಚಿತ್ರದ ಕೆಲವೊಂದು ಭಾಗಗಳಿಗಾಗಿ ಬೆಂಗಳೂರು, ಮೈಸೂರು ಮತ್ತು ಹೈದರಾಬಾದ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಬೆಂಗಳೂರಿನ ನೈಸ್ ರಸ್ತೆ ಪಕ್ಕ ಸುಮಾರು ಎಂಟು ಎಕರೆ ಪ್ರದೇಶದಲ್ಲಿ ಶೂಟಿಂಗ್ ಸೆಟ್ ಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಸಿನಿಮಾ ತಂಡ ಏನು ಮಾಡುತ್ತಿದೆ ಎಂದು ಸೆಟ್‌ನಲ್ಲಿರುವ ಸಾಕಷ್ಟು ಜನರಿಗೆ ಗೊತ್ತಾಗುತ್ತಿಲ್ಲವಂತೆ. ಒಟ್ಟಾರೆ, ಸುಧಾರಿತ ತಂತ್ರಜ್ಞಾನಗಳ ಜತೆ ಯಾರಿಗೂ ಸಾಟಿಯಿಲ್ಲದ ಉಪ್ಪಿ ಮೈಂಡ್ ಸೇರಿ ಸಿನಿ ಪ್ರೇಕ್ಷಕರಿಗೆ ಏನೋ ವಿಭಿನ್ನವಾದ ಕಂಟೆಂಟ್ ದೊರಕೋದಂತೂ ಖಾತ್ರಿ.