Kannada News  /  Entertainment  /  Sandalwood News Vamsha Vriksha Kannada Movie Co Director Rangayana First Director Bv Karanth 94th Birthday Rsm

ವಂಶವೃಕ್ಷ ಸಿನಿಮಾ ನಿರ್ದೇಶಕ, ಮೈಸೂರು ರಂಗಾಯಣದ ಮೊದಲ ನಿರ್ದೇಶಕ ಬಿವಿ ಕಾರಂತ್‌ 94ನೇ ಜನ್ಮದಿನದ ಸವಿನೆನಪು

ರಂಗಕರ್ಮಿ ಬಿವಿ ಕಾರಂತರ 94ನೇ ಹುಟ್ಟುಹಬ್ಬ
ರಂಗಕರ್ಮಿ ಬಿವಿ ಕಾರಂತರ 94ನೇ ಹುಟ್ಟುಹಬ್ಬ

ಮೈಸೂರಿನಲ್ಲಿ ರಂಗಶಿಕ್ಷಣ ಸಂಸ್ಥೆ ಸ್ಥಾಪಿಸಲು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿ ಅದರಲ್ಲಿ ಯಶಸ್ವಿ ಕೂಡಾ ಆದರು. ಮೈಸೂರಿನ 'ರಂಗಾಯಣ'ಕ್ಕೆ ಆ ಹೆಸರು ಇಟ್ಟವರು ಇದೇ ಕಾರಂತರು. 1995 ವರೆಗೆ ಕಾರಂತರು ರಂಗಾಯಣದ ಮುಖ್ಯಸ್ಥರಾಗಿದ್ದರು.

ಕನ್ನಡ ಚಿತ್ರರಂಗಕ್ಕೆ ಅನೇಕ ದಿಗ್ಗಜರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರಲ್ಲಿ ಅನೇಕರು ಇಂದು ನಮ್ಮೊಂದಿಗೆ ಇಲ್ಲ. ಅದರಲ್ಲಿ ಖ್ಯಾತ ರಂಗಕರ್ಮಿ ಬಿವಿ ಕಾರಂತರು ಕೂಡಾ ಒಬ್ಬರು. ಇಂದು ಚಿತ್ರರಂಗ ಹಾಗೂ ರಂಗಭೂಮಿಗೆ ಅತ್ಯಮೂಲ್ಯ ಕೊಡುಗೆ ನೀಡಿದ ಬಿವಿ ಕಾರಂತರು ಜನಿಸಿದ ದಿನ. ಈ ವಿಶೇಷ ದಿನದಂದು ಕಾರಂತರ ಅಭಿಮಾನಿಗಳು ಅವರನ್ನು ಸ್ಮರಿಸುತ್ತಿದ್ಧಾರೆ.

ಟ್ರೆಂಡಿಂಗ್​ ಸುದ್ದಿ

19 ಸೆಪ್ಟೆಂಬರ್‌ 1929 ರಂದು ಜನನ

ಬಾಬುಕೋಡಿ ವೆಂಕಟರಮಣ ಕಾರಂತರು ಬಿವಿ ಕಾರಂತ ಎಂದೇ ಫೇಮಸ್.‌ ಸಿನಿಮಾ ನಿರ್ದೇಶಕರಾಗಿ, ನಟನಾಗಿ, ಬರಹಗಾರನಾಗಿ ಗುರುತಿಸಿಕೊಂಡಿದ್ದಾರೆ. ಬಿವಿ ಕಾರಂತರು 19 ಸೆಪ್ಟೆಂಬರ್‌ 1929 ರಂದು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಬಾಬುಕೋಡಿ ಎಂಬಲ್ಲಿ ಜನಿಸಿದರು. ಬಾಲ್ಯದಿಂದಲೇ ಅವರಿಗೆ ರಂಗಭೂಮಿ ಬಗ್ಗೆ ಒಲವಿತ್ತು. 3 ನೇ ತರಗತಿಯಲ್ಲಿರುವಾಗಲೇ ಅವರು 'ನನ್ನ ಗೋಪಾಲ' ಎಂಬ ನಾಟಕದಲ್ಲಿ ನಟಿಸಿದ್ದರು. ರಂಗಭೂಮಿ ಬಗ್ಗೆ ಒಲವು ಹೆಚ್ಛಾಗುತಿದ್ದಂತೆ ಮನೆ ಬಿಟ್ಟ ಕಾರಂತರು ಗುಬ್ಬಿ ವೀರಣ್ಣ ನಾಟಕ ಕಂಪನಿಗೆ ಸೇರಿಕೊಂಡರು. ಡಾ. ರಾಜ್‌ಕುಮಾರ್‌ ಕೂಡಾ ಅದೇ ನಾಟಕ ಕಂಪನಿಯಲ್ಲಿದ್ದು, ಅವರೊಂದಿಗೆ ಕಾರಂತರು ಕೆಲವು ವರ್ಷಗಳ ಕಾಲ ಜೊತೆಯಾಗಿ ಕೆಲಸ ಮಾಡಿದರು.

ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಸಕ್ರಿಯರಾಗಿದ್ದ ರಂಗಕರ್ಮಿ

ಗುಬ್ಬಿ ವೀರಣ್ಣ ಅವರ ಸಲಹೆ ಮೇರೆಗೆ ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಕಾರಂತರು ಲಲಿತ ಕಲೆಯಲ್ಲಿ ಪದವಿ ಪಡೆದರು. ಜೊತೆಗೆ ಹಿಂದೂಸ್ತಾನಿ ಸಂಗೀತ ಕಲಿತರು. ನಂತರದ ದಿನಗಳಲ್ಲಿ ತಮ್ಮ ಪತ್ನಿ ಪ್ರೇಮಾ ಕಾರಂತ ಅವರೊಂದಿಗೆ ಸೇರಿ ಬೆಂಗಳೂರಿನಲ್ಲಿ 'ಬೆನಕ' ಎಂಬ ರಂಗಭೂಮಿ ತಂಡವನ್ನು ಕಟ್ಟಿದರು. ಮೈಸೂರಿನಲ್ಲಿ ರಂಗಶಿಕ್ಷಣ ಸಂಸ್ಥೆ ಸ್ಥಾಪಿಸಲು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿ ಅದರಲ್ಲಿ ಯಶಸ್ವಿ ಕೂಡಾ ಆದರು. ಮೈಸೂರಿನ 'ರಂಗಾಯಣ'ಕ್ಕೆ ಆ ಹೆಸರು ಇಟ್ಟವರು ಇದೇ ಕಾರಂತರು. 1995 ವರೆಗೆ ಕಾರಂತರು ರಂಗಾಯಣದ ಮುಖ್ಯಸ್ಥರಾಗಿದ್ದರು.

ಇತರ ಭಾಷೆಗಳ ರಂಗಭೂಮಿಗೂ ಕೊಡುಗೆ

ತಮ್ಮ ವೃತ್ತಿ ಜೀವನದಲ್ಲಿ ಕಾರಂತರು 100ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಪಂಜಾಬಿ, ಗುಜರಾತಿ ನಾಟಕಗಳಿಗೂ ಅವರು ನಿರ್ದೇಶನ ಮಾಡಿದ್ದರು. ಗಿರೀಶ್‌ ಕಾರ್ನಾಡರ ಹಯವದನ, ಕತ್ತಲೆ ಬೆಳಕು, ಹುಚ್ಚು ಕುದುರೆ, ಇವಮ್‌ ಇಂದ್ರಜಿತ್‌, ಸಂಕ್ರಾಂತಿ, ಜೋಕುಮಾರಸ್ವಾಮಿ, ಸತ್ತವರ ನೆರಳು, ಗೋಕುಲ ನಿರ್ಗಮನ ಬಹಳ ಹೆಸರಾದವು.

26 ಸಿನಿಮಾಗಳಿಗೆ ಸಂಗೀತ ನಿರ್ದೇಶನ

ಕನ್ನಡ ಸಿನಿಮಾರಂಗಕ್ಕೂ ಅವರು ನೀಡಿದ ಕೊಡುಗೆ ಅಪಾರ. ಸುಮಾರು 26 ಸಿನಿಮಾಗಳಿಗೆ ಬಿವಿ ಕಾರಂತರು ಸಂಗೀತ ನೀಡಿದ್ದಾರೆ. ಗಿರೀಶ್‌ ಕಾರ್ನಾಡರ ಜೊತೆ ಸೇರಿ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಸಿನಿಮಾಗಳನ್ನು ಬಿವಿ ಕಾರಂತರು ನಿರ್ದೇಶಿಸಿದ್ದಾರೆ. ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯನ್ನು ಅವರು ಸಿನಿಮಾವನ್ನಾಗಿ ಮಾಡಿದ್ದರು. ಬಹುತೇಕ ಅವರ ಹುಟ್ಟೂರಾದ ಮಂಚಿ ಪರಿಸರದಲ್ಲಿ ಅದರ ಶೂಟಿಂಗ್ ನಡೆದಿತ್ತು. ರಂಗಭೂಮಿ ಹಾಗೂ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಕಾರಂತರಿಗೆ ಪದ್ಮಶ್ರೀ, ಕಾಳಿದಾಸ್‌ ಸಮ್ಮಾನ್‌, ಗುಬ್ಬಿ ವೀರಣ್ಣ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿವೆ. ವಂಶವೃಕ್ಷ ಚಿತ್ರದ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡಾ ಲಭಿಸಿದೆ.

ಪ್ರಾಸ್ಟೇಟ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಿವಿ ಕಾರಂತರು 1 ಸೆಪ್ಟೆಂಬರ್‌ 2002ರಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.