ಮುಖ್ಯಮಂತ್ರಿ ಚಂದ್ರು ಅವರ ಒಂದು ಕಣ್ಣು ಇಂದಿಗೂ ಕಾಣಿಸಲ್ಲ! 1991ರಲ್ಲಿ ಟೈಗರ್‌ ಪ್ರಭಾಕರ್‌ ಸಿನಿಮಾ ಶೂಟಿಂಗ್‌ ವೇಳೆ ನಡೆದಿತ್ತು ದುರಂತ-sandalwood news veteran actor mukhyamantri chandrus one eye is still not visible entertainment news in kannada mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮುಖ್ಯಮಂತ್ರಿ ಚಂದ್ರು ಅವರ ಒಂದು ಕಣ್ಣು ಇಂದಿಗೂ ಕಾಣಿಸಲ್ಲ! 1991ರಲ್ಲಿ ಟೈಗರ್‌ ಪ್ರಭಾಕರ್‌ ಸಿನಿಮಾ ಶೂಟಿಂಗ್‌ ವೇಳೆ ನಡೆದಿತ್ತು ದುರಂತ

ಮುಖ್ಯಮಂತ್ರಿ ಚಂದ್ರು ಅವರ ಒಂದು ಕಣ್ಣು ಇಂದಿಗೂ ಕಾಣಿಸಲ್ಲ! 1991ರಲ್ಲಿ ಟೈಗರ್‌ ಪ್ರಭಾಕರ್‌ ಸಿನಿಮಾ ಶೂಟಿಂಗ್‌ ವೇಳೆ ನಡೆದಿತ್ತು ದುರಂತ

ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ಪೋಷಕ ನಟರಲ್ಲಿ ಮುಖ್ಯಮಂತ್ರಿ ಚಂದ್ರು ಸಹ ಒಬ್ಬರು. ದಶಕಗಳಿಂದ ಸಿನಿಮಾರಂಗದಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ. ಆದರೆ, ಇದೇ ನಟನ ಒಂದು ಕಣ್ಣು ಇಂದಿಗೂ ದೃಷ್ಟಿಹೀನ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಆ ದುರಂತ ಹೇಗೆ ನಡೆಯಿತು ಎಂಬ ಬಗ್ಗೆ ಮುಖ್ಯಮಂತ್ರಿ ಚಂದ್ರು ನೆನಪಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ಪೋಷಕ ನಟರಲ್ಲಿ ಮುಖ್ಯಮಂತ್ರಿ ಚಂದ್ರು ಸಹ ಒಬ್ಬರು. ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಇದೇ ನಟನ ಒಂದು ಕಣ್ಣು ಇಂದಿಗೂ ದೃಷ್ಟಿಹೀನ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.
ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ಪೋಷಕ ನಟರಲ್ಲಿ ಮುಖ್ಯಮಂತ್ರಿ ಚಂದ್ರು ಸಹ ಒಬ್ಬರು. ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಇದೇ ನಟನ ಒಂದು ಕಣ್ಣು ಇಂದಿಗೂ ದೃಷ್ಟಿಹೀನ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. (Image/ Kalamadhyama YouTube, cinestaan)

Mukhyamantri Chandru: ಅದು 1991ರ ಸಮಯ. ಬೆಂಗಳೂರಿನಲ್ಲಿ ಟೈಗರ್‌ ಪ್ರಭಾಕರ್‌ ನಾಯಕನಾಗಿ ನಟಿಸಿದ್ದ ಸೆಂಟ್ರಲ್‌ ರೌಡಿ ಸಿನಿಮಾ ಶೂಟಿಂಗ್‌ ನಡೆಯುತ್ತಿತ್ತು. ಆ ಸಿನಿಮಾದಲ್ಲಿ ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ಕೃಷ್ಣೇಗೌಡರು, ಸುಧೀರ್‌ ಸೇರಿ ಇನ್ನೂ ಹಲವರು ಪಾತ್ರಧಾರಿಗಳು ನಟಿಸುತ್ತಿದ್ದರು. ರಾಮಮೂರ್ತಿ ಆ ಸಿನಿಮಾದ ನಿರ್ದೇಶಕರು. ಆ ಚಿತ್ರದ ಚಿತ್ರೀಕರಣದ ವೇಳೆಯೇ ಒಂದು ದುರಂತ ನಡೆದಿತ್ತು. ಆ ದುರಂತದಿಂದ ಪೋಷಕ ನಟ ಮುಖ್ಯಮಂತ್ರಿ ಚಂದ್ರು ಅವರು ಒಂದು ಕಣ್ಣನ್ನೇ ಕಳೆದುಕೊಂಡರು. ಆ ಘಟನೆ ನಡೆದಿದ್ದು ಹೇಗೆ? ಏನೆಲ್ಲ ಆಯ್ತು? ಇಲ್ಲಿದೆ ನೋಡಿ ವಿವರ.

ಅದು ಮೇ 7ನೇ ತಾರೀಖು. ಆವತ್ತು ಮುಖ್ಯಮಂತ್ರಿ ಚಂದ್ರು ಅವರ ಪತ್ನಿಯ ಬರ್ತಡೇ. ಮುನಿಸಿಕೊಂಡಿದ್ದ ಅಕ್ಕತಂಗಿಯರನ್ನೆಲ್ಲ ಒಂದು ಮಾಡುವ ಉದ್ದೇಶಕ್ಕೆ ಮುಖ್ಯಮಂತ್ರಿ ಚಂದ್ರು ಅವರ ಪತ್ನಿ, ಬರ್ತ್‌ಡೇ ನೆಪದಲ್ಲಿ ದೊಡ್ಡ ಪಾರ್ಟಿ ಆಯೋಜಿಸಿದ್ದರು. ಒಟ್ಟು 30 ಜನರಿಗೆ ಆಹ್ವಾನ ನೀಡಲಾಗಿತ್ತು. ಇತ್ತ ಸೆಂಟ್ರಲ್‌ ರೌಡಿ ಚಿತ್ರದ ಶೂಟಿಂಗ್‌ ವೇಳೆ, ಒರಿಜಿನಲ್‌ ರಿವಾಲ್ವರ್‌ನಿಂದ ಡಮ್ಮಿ ಬುಲೆಟ್‌ ಹಾಕಿ ಪ್ರಭಾಕರ್‌ಗೆ ಶೂಟ್‌ ಮಾಡುವ ಸೀನ್‌ ಇತ್ತು. ಒಂದು ಸಲ ಟ್ರೈ ಮಾಡಿದರೂ ಅದು ಸಿಡಿಯಲಿಲ್ಲ. ಕಣ್ಣಿನ ಹತ್ತಿರಕ್ಕೆ ಹಿಡಿದು ಶೂಟ್‌ ಮಾಡಿದಾಗ, ಹಿಂದಿನ ಬದಿಯಿಂದ ಬೆಂಕಿ ಕಿಡಿ ಮುಖ್ಯಮಂತ್ರಿ ಚಂದ್ರು ಅವರ ಕಣ್ಣಿಗೆ ಸಿಡಿಯಿತು. ಅಷ್ಟೇ, ಮುಂದಾಗಿದ್ದು ಮಹಾ ದುರಂತ!

"ಕಾಪರ್‌ ತುಣುಕುಗಳು ಕಣ್ಣನ್ನೇ ಪೀಸ್‌ ಮಾಡಿತ್ತು. ಸಿಡಿದ ರಭಸಕ್ಕೆ ಆ ಕಣ್ಣಲ್ಲಿ ರಕ್ತ ಬರುತ್ತಿದ್ದರೆ, ಈ ಕಣ್ಣಲ್ಲಿ ನೀರು ಬರ್ತಿತ್ತು. ಶೂಟಿಂಗ್‌ ಪ್ಯಾಕ್‌ಅಪ್‌ ಮಾಡಿ ಆಸ್ಪತ್ರೆಗೆ ಹೋದಾಗ 8 ಗಂಟೆ ಆಗಿತ್ತು. ದೊಡ್ಡಣ್ಣ ಮತ್ತು ಕೃಷ್ಣೇಗೌಡರು ನನ್ನ ಜತೆಗಿದ್ದರು. ರೆಟೀನಾ ಹೋಗಿದೆ, ತುಂಬ ಡ್ಯಾಮೇಜ್‌ ಆಗಿದೆ ಎಂದು ಡಾಕ್ಟರ್‌ ಹೇಳಿದರು. ಕಣ್ಣಿಗೆ ಹೊಲಿಗೆ ಹಾಕಬೇಕಾಗುತ್ತದೆ. ವಿಷನ್‌ ಬೇಕಾದರೆ, ಕಣ್ಣಿನ ಗುಡ್ಡೆ ಕೆಳಗಿನ ಮೂಲೆಗೆ ಬಂದು ಕೂರುತ್ತದೆ ಎಂದರು ಡಾಕ್ಟರ್‌. ಕೊನೆಗೆ ನಿಮಗೆ ಎರಡೂ ಕಣ್ಣು ಬೇಕಾ, ಒಂದೇ ಕಣ್ಣು ನಡಿಯುತ್ತಾ ಎಂದು ಡಾಕ್ಟರ್‌ ಕೇಳಿದ್ರು"

"ನನ್ನ ಪ್ರೋಫೆಷನ್‌ ಬಂದು ಸಿನಿಮಾ, ನಾಟಕ ರಾಜಕೀಯ. ಹೀಗಿರುವಾಗ ನನಗೆ ಕಣ್ಣು ತುಂಬ ಮಹತ್ವದ್ದು. ಹೇಗಾದರೂ ಮಾಡಿ ಸರಿಮಾಡಿ ಎಂದು ಕೇಳಿಕೊಂಡೆ. ಆಗ ದೃಷ್ಟಿ ಬರುವುದು ಶೇ 10 ಮಾತ್ರ ಗ್ಯಾರಂಟಿ ಕೊಡಬಹುದು ಎಂದರು. ನಾನು ಸರಿ ಎಂದು ಹೇಳಿದೆ. ಟ್ರೀಟ್‌ಮೆಂಟ್‌ಗೂ ಮುನ್ನ ಮನೆಯವರಿಂದ ಒಂದು ಸಹಿ ಬೇಕು ಎಂದು ಕೇಳಿದರು. ನಾನು ಅದಕ್ಕೆ, ಮನೆಯವರನ್ನು ಕರೆಸಲು ಆಗಲ್ಲ. ಅಲ್ಲಿ ಫ್ಯಾಮಿಲಿ ಪಾರ್ಟಿ ನಡೆಯುತ್ತಿದೆ. ಅವರನ್ನು ಕರೆಸಿದರೂ, ಬಿಟ್ಟರೂ ಇದೇ ಆಗೋದು ಎಂದು ಕೇಳಿಕೊಂಡೆ. ಕೊನೆಗೆ ಆಪರೇಷನ್‌ಗೆ ದೊಡ್ಡಣ್ಣ ಗಾರ್ಡಿಯನ್‌ ಆಗಿ ಸಹಿ ಹಾಕಿದ"

"ಸರಿಯಾಗಿ ಮೂರುವರೆ ಗಂಟೆಗಳ ಕಾಲ ಆಪರೇಷನ್‌ ನಡೆಯಿತು. ಕಣ್ಣೀಗೆ 26 ಹೊಲಿಗೆಗಳನ್ನು ಹಾಕಿದ್ರು. ಒರಿಜಿನಲ್‌ ಕಣ್ಣಿಗೆ ಲೈಫ್‌ ಸಿಕ್ತು. ಆದರೆ ದೃಷ್ಟಿ ಇಲ್ಲ. ಎರಡೂ ಕಣ್ಣಿಗೆ ಅನಸ್ತೇಷಿಯಾ ಇಂಜೆಕ್ಷನ್‌ ಕೊಟ್ಟು, ಕಣ್ಣುಗಳು ಮೂಮೆಂಟ್‌ ಆಗದಂತೆ ಪಟ್ಟಿ ಸುತ್ತಿದ್ದರು. ಬರೋಬ್ಬರಿ 10 ಗಂಟೆಗಳ ಕಾಲ ರೆಸ್ಟ್‌ನಲ್ಲಿದ್ದೆ. ಕೊನೆಗೆ ಮನೆಗೆ ವಿಷಯ ತಿಳಿಸಿದ್ವಿ. ಮನೆಯವಳದ್ದು ಗೊಳೋ ಅಂತ ಅಳು. ಡಾಕ್ಟರ್‌ ಹೇಗೋ ಸಮಾಧಾನ ಪಡಿಸಿದ್ರು"

"ಕೊನೆಗೆ ಎಲ್ಲರ ಸಮ್ಮುಖದಲ್ಲಿ ಬೆಳಗ್ಗೆ ಕಣ್ಣಿನ ಪಟ್ಟಿ ಬಿಚ್ಚಿದರು. ಎರಡರ ಪೈಕಿ ಒಂದು ಕಣ್ಣಿನ ದೃಷ್ಟಿ ಹೋಗಿತ್ತು. ಇನ್ನೊಂದರದ್ದು ದೃಷ್ಟಿ ಸರಿಯಿತ್ತು. ಸರಿಯಾಗಿ ಒಂದು ತಿಂಗಳು ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದೆ. ಒಂದೂವರೆ ತಿಂಗಳು ಶೂಟಿಂಗ್‌ ಮಾಡಬೇಡಿ ಎಂದಿದ್ದರು. ನನ್ನ ಈ ಚಿಕಿತ್ಸೆಗೆಂದು ಆ ಸಿನಿಮಾ ನಿರ್ಮಾಪಕರೂ ಒಂದಷ್ಟು ದುಡ್ಡು ಕೊಟ್ಟರು. ಇದು ನನ್ನ ಸಂಕಟಗಳಲ್ಲಿ ಸಂಕಟ ಎಂದು ಕಲಾಮಾಧ್ಯಮ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ 34 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಮುಖ್ಯಮಂತ್ರಿ ಚಂದ್ರು.