B Jayashree Birthday: ಜೀವನ ಏರು ಪೇರಿನ ಗಾಯನ; ಹಿರಿಯ ನಟಿ, ರಂಗಭೂಮಿ ಕಲಾವಿದೆ ಪದ್ಮಶ್ರೀ ಪುರಸ್ಕೃತೆ ಬಿ ಜಯಶ್ರೀ 73ನೇ ಜನ್ಮದಿನ
ಸಿನಿಮಾ ಹಾಗೂ ರಂಗಭೂಮಿಯಲ್ಲಿ ಸಾಕಷ್ಟು ಸಾಧನೆ ಮಾಡಿದ ಜಯಶ್ರೀ, ವೈಯಕ್ತಿಕ ಜೀವನದಲ್ಲಿ ಬಹಳಷ್ಟು ನೋವು ಕಂಡಿದ್ದಾರೆ. ತಮ್ಮವರಿಂದಲೇ ಹಿಂಸೆಗೆ ಒಳಗಾಗಿದ್ದಾರೆ. ಕೆ ಆನಂದ್ ರಾಜು ಎಂಬುವರನ್ನು ಕೈ ಹಿಡಿದ ಜಯಶ್ರೀಗೆ ಓರ್ವ ಪುತ್ರಿ ಇದ್ದಾರೆ.
ರಂಗಭೂಮಿ ಕಲಾವಿದೆ, ಕಂಚಿನ ಕಠದ ಗಾಯಕಿ, ನಟಿ ಬಿ ಜಯಶ್ರೀ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸ್ಯಾಂಡಲ್‌ವುಡ್ ಹಿರಿಯ ನಟಿ ಇಂದು 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಿ ಜಯಶ್ರೀ ಅವರಿಗೆ ಸ್ಯಾಂಡಲ್‌ವುಡ್ ಗಣ್ಯರು, ರಂಗಭೂಮಿ ಕಲಾವಿದರು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.
ಗುಬ್ಬಿ ವೀರಣ್ಣನವರ ಮೊಮ್ಮಗಳು
ಬಿ ಜಯಶ್ರೀ ಹುಟ್ಟಿದ್ದು 9 ಜೂನ್ 1950. ಇವರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣ ಅವರ ಮೊಮ್ಮಗಳು. ನನ್ನ ಬಾಲ್ಯ ಉತ್ತಮವಾಗಿರಲಿಲ್ಲ ಎಂದು ಜಯಶ್ರೀ ಅನೇಕ ಇಂಟರ್‌ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಜಯಶ್ರೀ ಅವರ ಮನೆಯಲ್ಲಿ ಬಹುತೇಕ ಎಲ್ಲರೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಜಯಶ್ರೀ ಶಾಲೆಗೆ ಹೋಗಲಿಲ್ಲ. ''ಆಗ ಶಾಲೆಗೆ ಹೋಗುವ ಮಕ್ಕಳನ್ನು ನೋಡಿದರೆ ನನಗೆ ಬಹಳ ನೋವಾಗುತ್ತಿತ್ತು. ನಾನೂ ಓದಬೇಕು, ಸ್ನೇಹಿತರೊಂದಿಗೆ ಬೆರೆಯಬೇಕು ಎಂಬ ಆಸೆ ಇತ್ತು. ಆದರೆ ನನಗೆ ನಮ್ಮ ಗುಬ್ಬಿ ಕಂಪನಿಯೇ ಎಲ್ಲವೂ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ತಾಯಿಗೂ ನೋವು ಇದೆ. ಮುಂದಿನ ದಿನಗಳಲ್ಲಿ ತಾತನವರ ಬಳಿ ಆಸೆ ಹೇಳಿಕೊಂಡೆ. ನಂತರ ಅವರು ನನ್ನನ್ನು ಸ್ಕೂಲ್‌ಗೆ ಕಳಿಸಿದರು.''
ಬಬ್ರುವಾಹನ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ
''ಪಿಯುಸಿವೆರಗೂ ಓದಿದೆ. ಆಗಲೇ ನನಗೆ ಹೊರಗಿನ ಜನರ ಪರಿಚಯ ಆಯ್ತು. ರಂಗಭೂಮಿ ದಿಗ್ಗಜರ, ಸಿನಿಮಾ ನಿರ್ದೇಶಕರು, ಕಲಾವಿದರು ಪರಿಚಯ ಆದರು. ಕೆಲವು ದಿನಗಳ ಕಾಲ ರಂಗಭೂಮಿಯಿಂದ ದೂರವಿದ್ದ ನಾನು ಸಿನಿಮಾ ಪ್ರಪಂಚಕ್ಕೆ ಹತ್ತಿರವಾದೆ. ಮೊದಲ ಬಾರಿಗೆ 'ಬಬ್ರುವಾಹನ' ಚಿತ್ರದಲ್ಲಿ ಕಾಂಚನ ಅವರಿಗೆ ಧ್ವನಿ ನೀಡಿದೆ. ಅಲ್ಲಿಂದ ನನ್ನ ಸಿನಿ ಪಯಣ ಆರಂಭವಾಯ್ತು. 'ಎಮ್ಮೆ ತಮ್ಮಣ್ಣ' ಚಿತ್ರದ ಮೂಲಕ ನಟನೆ ಆರಂಭಿಸಿದೆ'' ಎಂದು ಜಯಶ್ರೀ ಸಾಕಷ್ಟು ಸಂದರ್ಶನಗಳಲ್ಲಿ ತಮ್ಮ ಹಿನ್ನೆಲೆ ಹೇಳಿಕೊಂಡಿದ್ದಾರೆ.
ಬಿ ಜಯಶ್ರೀ ಅನೇಕ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಅನೇಕ ನಟಿಯರಿಗೆ ಕಂಠದಾನ ಮಾಡಿದ್ದಾರೆ. ಸನಾದಿ ಅಪ್ಪಣ್ಣ, ಹುಲಿಯ ಹಾಲಿನ ಮೇವು, ಕವಿರತ್ನ ಕಾಳಿದಾಸ, ಶಬ್ಧವೇಧಿ ಸಿನಿಮಾಗಳಲ್ಲಿ ಜಯಪ್ರದಾಗೆ, ವಸಂತಗೀತ, ಜ್ವಾಲಾಮುಖಿ ಸಿನಿಮಾಗಳಲ್ಲಿ ಗಾಯತ್ರಿ ಅವರಿಗೆ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಮೂರು ಜನ್ಮ, ಚಕ್ರವ್ಯೂಹ ಸಿನಿಮಾಗಳಲ್ಲಿ ಅಂಬಿಕಾ ಸೇರಿದಂತೆ ಜಯಶ್ರೀ ಅಂದಿನ ಹಲವು ನಟಿಯರಿಗೆ ವಾಯ್ಸ್ ಡಬ್ ಮಾಡಿದ್ದಾರೆ.
ಪದ್ಮಶ್ರೀ ಪುರಸ್ಕಾರ
ಚಿತ್ರರಂಗ , ರಂಗಭೂಮಿಯಲ್ಲಿ ಜಯಶ್ರೀ ಅವರ ಸಾಧನೆಗೆ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಡಾಕ್ಟರೇಟ್ ಪ್ರಶಸ್ತಿ ಪಡೆದಿದ್ದಾರೆ. 2010ರಲ್ಲಿ ರಾಜ್ಯಸಭೆ ಸದಸ್ಯೆಯಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ. 2013 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಸಿನಿಮಾ ಹಾಗೂ ರಂಗಭೂಮಿಯಲ್ಲಿ ಸಾಕಷ್ಟು ಸಾಧನೆ ಮಾಡಿದ ಜಯಶ್ರೀ, ವೈಯಕ್ತಿಕ ಜೀವನದಲ್ಲಿ ಬಹಳಷ್ಟು ನೋವು ಕಂಡಿದ್ದಾರೆ. ತಮ್ಮವರಿಂದಲೇ ಹಿಂಸೆಗೆ ಒಳಗಾಗಿದ್ದಾರೆ. ಕೆ ಆನಂದ್ ರಾಜು ಎಂಬುವರನ್ನು ಕೈ ಹಿಡಿದ ಜಯಶ್ರೀಗೆ ಓರ್ವ ಪುತ್ರಿ ಇದ್ದಾರೆ. ಸುಷ್ಮಾ ಕೂಡಾ ಸಿನಿಮಾ ನಟಿ, ರಂಗಭೂಮಿ ಕಲಾವಿದೆ ಆಗಿ ಗುರುತಿಸಿಕೊಂಡಿದ್ದಾರೆ. ಇವರೊಂದಿಗೆ ಜಯಶ್ರೀ ರುದ್ರಾಣಿ ಎಂಬ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.
ಹಿರಿಯ ಕಲಾವಿದೆ ಜಯಶ್ರೀ ಅವರಿಗೆ ಹಿಂದುಸ್ತಾನ್ ಟೈಮ್ಸ್ ಕನ್ನಡ ವೆಬ್‌ಸೈಟ್ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು.