ನಟ ಕೆ ಶಿವರಾಮ್‌ ನಿಧನ, ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ಐಎಎಸ್‌ ಸ್ಥಾನಕ್ಕೇರಿದ ಭಾರತದ ಮೊದಲ ಸಾಧಕ ಇನ್ನಿಲ್ಲ-sandalwood news veteran kannada actor k shivaram death bureaucrat turned actor who cleared ias exam in kannada pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಟ ಕೆ ಶಿವರಾಮ್‌ ನಿಧನ, ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ಐಎಎಸ್‌ ಸ್ಥಾನಕ್ಕೇರಿದ ಭಾರತದ ಮೊದಲ ಸಾಧಕ ಇನ್ನಿಲ್ಲ

ನಟ ಕೆ ಶಿವರಾಮ್‌ ನಿಧನ, ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದು ಐಎಎಸ್‌ ಸ್ಥಾನಕ್ಕೇರಿದ ಭಾರತದ ಮೊದಲ ಸಾಧಕ ಇನ್ನಿಲ್ಲ

Actor K Shivaram Death: ಕಳೆದ ಹಲವು ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕನ್ನಡ ನಟ, ಮಾಜಿ ಐಎಎಸ್‌ ಅಧಿಕಾರಿ ಕೆ. ಶಿವರಾಮ್‌ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಇವರು ಕನ್ನಡದಲ್ಲಿಯೇ ಐಎಎಸ್‌ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದ ಭಾರತದ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ನಟ, ಮಾಜಿ ಐಎಎಸ್‌ ಅಧಿಕಾರಿ ಕೆ ಶಿವರಾಮ್‌ ನಿಧನ
ನಟ, ಮಾಜಿ ಐಎಎಸ್‌ ಅಧಿಕಾರಿ ಕೆ ಶಿವರಾಮ್‌ ನಿಧನ

ಬೆಂಗಳೂರು: ಕನ್ನಡದ ಹಿರಿಯ ನಟ, ಮಾಜಿ ಐಎಎಸ್‌ ಅಧಿಕಾರಿ ಕೆ. ಶಿವರಾಮ್‌ ನಿಧನರಾಗಿದ್ದಾರೆ. ಹೃದಯ ಮತ್ತು ಇತರೆ ಆರೋಗ್ಯ ತೊಂದರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಇವರು ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಕೆ ಶಿವರಾಮ್‌ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ನಿನ್ನೆಯೇ ಅವರ ಅಳಿಯ ಮಾಹಿತಿ ನೀಡಿದ್ದರು. ಕಳೆದ ಕೆಲವು ದಿನಗಳಿಂದ ಇವರ ಆರೋಗ್ಯ ಏರುಪೇರಾಗಿತ್ತು. ಹೃದಯಾಘಾತವೂ ಆಗಿತ್ತು. ಲೋ ಬಿಪಿ ಇತ್ಯಾದಿ ತೊಂದರೆಗಳನ್ನು ಎದುರಿಸುತ್ತಿದ್ದರು.

“ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಐಎಎಸ್ ಪರೀಕ್ಷೆ ಬರೆದು ಭಾರತೀಯ ಆಡಳಿತ ಸೇವೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶ್ರೀ ಕೆ.ಶಿವರಾಮ್ ಅವರು ಇಂದು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ನಟರಾಗಿಯೂ ಹಲವು ಚಿತ್ರಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗಕ್ಕೆ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ.

"ಶ್ರೀ ಕೆ ಶಿವರಾಮ್ ನಮ್ಮ ರಾಜ್ಯದ ಐಎಎಸ್ ಅಧಿಕಾರಿಗಳಾಗಿದ್ದರು. ಕನ್ನಡದಲ್ಲಿಯೇ ಬರೆದು ಮೊತ್ತಮೊದಲಿಗೆ ಐಎಎಸ್ ಗಿಟ್ಟಿಸಿದ ಖ್ಯಾತಿ ಇವರದಾಗಿತ್ತು. ನಾನು ನಾನು ಬೆಂಗಳೂರು ನಗರ ಪಾಲಿಕೆ ಸದಸ್ಯನಾಗಿದ್ದಾಗ ಶಿವರಾಂ ರವರು ನಗರ ಪಾಲಿಕೆಯಲ್ಲಿ ಉಪ ಆಯುಕ್ತ (ಅಭಿವೃದ್ಧಿ) (Deputy Commissioner (Devt) ಆಗಿ ಸೇವೆ ಸಲ್ಲಿಸುತ್ತಿದ್ದರು. ಒಟ್ಟಿಗೆ ಅದೆಷ್ಟೋ ಬಾರಿ ವಿವಿಧ ಸ್ಥಳ ಪರಿಶೀಲನೆ ನಡೆಸಿದ್ದೇವೆ, ಸಮಸ್ಯೆ ಬಗೆಹರಿಸಲು ಚರ್ಚಿಸಿದ್ದೇವೆ. ನಂತರ ನಾನು ಶಾಸಕನಾದಾಗ ಅವರು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿದ್ದಾಗ ಅನೇಕ ಬಾರಿ ಭೇಟಿಯಾಗಿದ್ದೆವು. ಅವರ ಪ್ರಜಾಮುಖಿ ನಡವಳಿಕೆ ನನಗೆ ಬಹಳ ಇಷ್ಟವಾಗಿತ್ತು. ಅವರ ನಿವೃತ್ತಿಯ ನಂತರ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ ಕೆಲಕಾಲದ ನಂತರ ನಮ್ಮ ಪಕ್ಷಕ್ಕೆ ಸೇರಿದ್ದರು. ಅವರ ಸಮುದಾಯದ ಕೆಲವು ಜಾಥಾ ಗಳ ಚಾಲನೆಗೆ ನನ್ನನ್ನು ಆಹ್ವಾನಿಸಿದ್ದರು ಸಹ. ಅವರು ಇಂದು ನಿಧನರಾಗಿದ್ದಾರೆ. ಅಧಿಕಾರಿಯಾಗಿ ಮತ್ತು ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ಕೊಡಲು ರಾಜಕೀಯ ಕ್ಷೇತ್ರದಿಂದ ಸೇವೆ ಸಲ್ಲಿಸುತ್ತಿದ್ದ ಶಿವರಾಂ ಅವರ ಆತ್ಮಕ್ಕೆ ಸದ್ದತಿ ದೊರಕಲಿ ಎಂದು ಕೋರುತ್ತೇನೆ" ಎಂದು ರಾಜಕಾರಣಿ ಸುರೇಶ್‌ ಕುಮಾರ್‌ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಕೆ ಶಿವರಾಮ್‌ ಜೀವನಚರಿತ್ರೆ

ಕೆ ಶಿವರಾಮ್‌ ಅವರು ರಾಮನಗರ ಜಿಲ್ಲೆಯ ಉರಗಲ್ಲಿಯಲ್ಲಿ 1953ರ ಏಪ್ರಿಲ್‌ 6ರಂದು ಜನಿಸಿದರು. ಇವರ ತಂದೆ ದಿ. ಕೆ. ಕೆಂಪಯ್ಯ ಪ್ರತಿಭಾನ್ವಿತ ನಾಟಕಗಾರರಾಗಿದ್ದರು. ತನ್ನ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬಳಿಕ ಬೆಂಗಳೂರಿನ ಮಲ್ಲೇಶ್ವರಂ ಸರಕಾರಿ ಶಾಲೆಯಲ್ಲಿ ಹೈಸ್ಕೂಲ್‌ ಓದಿದಾರೆ. 1972ರಲ್ಲಿ ಇವರು ಟೈಪಿಂಗ್‌ ಮತ್ತು ಶಾರ್ಟ್‌ಹ್ಯಾಂಡ್‌ ಕೋರ್ಸ್‌ ಕಲಿತರು. ಇದರಿಂದ ಇವರಿಗೆ ಸರಕಾರಿ ಉದ್ಯೋಗ ದೊರಕಿತು.

1973ರಲ್ಲಿ ಇವರು ಭಾರತದ ಅಪರಾಧ ತನಿಖಾ ಇಲಾಖೆಯಲ್ಲಿ ಪೊಲೀಸ್‌ ರಿಪೋರ್ಟರ್‌ ಆಗಿ ಉದ್ಯೋಗ ಪಡೆದರು. ಸೇವೆಯಲ್ಲಿರುವಾಗಲೇ ಇವರು ವಿವಿ ಪುರಂ ಸಂಜೆ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಇವರು ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

1985ರಲ್ಲಿ ಇವರು ಕೆಎಎಸ್‌ ಪರೀಕ್ಷೆ ಉತ್ತೀರ್ಣರಾದರು. ಡೆಪ್ಯುಟಿ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ಹುದ್ದೆ ಪಡೆದರು. 1986ರಲ್ಲಿ ಇವರು ಕರ್ನಾಟಕ ಆಡಳಿತ ಸೇವೆ ಪರೀಕ್ಷೆಯಲ್ಲಿ ಮೊದಲ ರಾಂಕ್‌ ಪಡೆದರು. ಇದರಿಂದ ಇವರಿಗೆ ಅಸಿಸ್ಟೆಂಟ್‌ ಕಮಿಷನರ್‌ ಆಫ್‌ ಪೊಲೀಸ್‌ ಹುದ್ದೆ ದೊರಕಿತು. ಇದೇ ಸಮಯದಲ್ಲಿ ತನ್ನ ಬಾಲ್ಯದ ಕನಸಾದ ಐಎಎಸ್‌ ಹುದ್ದೆಯನ್ನು ಪಡೆದರು. ಕನ್ನಡ ಭಾಷೆಯಲ್ಲಿ ಐಎಎಸ್‌ ಪರೀಕ್ಷೆ ಬರೆದ ಭಾರತದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಇವರಿಗೆ ಡಾ. ಶೇಖರ್‌ ಪಾಟೀಲ್‌ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರು ರಾಜಕೀಯ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಕನ್ನಡದಲ್ಲಿಯೇ ಐಎಎಸ್‌ ಪರೀಕ್ಷೆ ಬರೆದು ಯಶಸ್ಸು ತನ್ನದಾಗಿಸಿಕೊಂಡಿದ್ದರು. ಸರಕಾರಿ ಉದ್ಯೋಗ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.

ಕೆ ಶಿವರಾಮ್‌ ನಟಿಸಿದ ಸಿನಿಮಾಗಳು

ಐಐಎಸ್‌ ಅಧಿಕಾರಿಯಾಗುವ ತನ್ನ ಬಾಲ್ಯದ ಕನಸನ್ನು ಈಡೇರಿಸಿಕೊಂಡಿದ್ದ ಕೆ ಶಿವರಾಮ್‌ ಬಳಿಕ ನಟನೆಯತ್ತ ವಾಲಿದ್ದರು. ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾದಲ್ಲಿ ನಟಿಸಿದ್ದರು. 1996ರಲ್ಲಿ ತೆರೆಕಂಡ ವಸಂತಕಾವ್ಯ ಸಿನಿಮಾದಲ್ಲಿ ಕೆ ಶಿವರಾಮ್‌ ನಟಿಸಿದ್ದರು. ಖಳನಾಯಕ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್‌, ಟೈಗರ್‌, ನಾಗ, ಓ ಪ್ರೇಮ ದೇವತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.