Vinod Raj: ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್ ರಾಜ್! ಹೀಗಿದೆ ಮೆಚ್ಚುವ ಕೆಲಸದ ಹಿಂದಿರುವ ಅಸಲಿ ಕಾರಣ
ಸ್ಯಾಂಡಲ್‌ವುಡ್ ಚಿತ್ರೋದ್ಯಮ ಕಂಡ ದಂತಕತೆ, ಹಿರಿಯ ನಟಿ ಲೀಲಾವತಿ ಇಲ್ಲವಾಗಿ ಒಂದೂವರೆ ತಿಂಗಳಾಗುತ್ತ ಬಂತು. ಇದೀಗ ಶುಭ ಸಂಕ್ರಮಣದ ಈ ಸಂದರ್ಭದಲ್ಲಿ ಅಮ್ಮನ ಹೆಸರಿನಲ್ಲಿ ಮೆಚ್ಚುವ ಕೆಲಸಕ್ಕೆ ಕೈ ಹಾಕಿದ್ದಾರೆ ಪುತ್ರ ವಿನೋದ್ ರಾಜ್. ಅದಕ್ಕೆ ಲಕ್ಷ ಲಕ್ಷ ಹಣವನ್ನೂ ಸುರಿಯುತ್ತಿದ್ದಾರೆ.
Leelavathi memorial: ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲೀಲಾವತಿ ನಿಧನರಾಗಿ ಒಂದೂವರೆ ತಿಂಗಳಾಗುತ್ತ ಬಂತು. ಪುಟ್ಟ ಮಗುವಿನಂತೆ ಹೆತ್ತು ಹೊತ್ತ ಅಮ್ಮನನ್ನು ಕೊನೇ ಕಾಲದಲ್ಲಿಯೂ ಕಾಳಜಿ ಮಾಡಿದ್ದರು ಪುತ್ರ ವಿನೋದ್ ರಾಜ್. ಇದೀಗ ಇದೇ ವಿನೋದ್ ರಾಜ್ ಅಮ್ಮನ ಸಮಾಧಿ ಸ್ಥಳವನ್ನೇ ಸ್ಮಾರಕವನ್ನಾಗಿಸಲು ಹೊರಟಿದ್ದಾರೆ. ಅಮ್ಮನನ್ನು ಕಳೆದುಕೊಂಡ ಕೆಲ ದಿನಗಳ ಬಳಿಕವೇ ಇಂಥದ್ದೊಂದು ನಿರ್ಧಾರಕ್ಕೆ ಬಂದು ಅನುಷ್ಠಾನಕ್ಕೂ ಮುಂದಾಗಿದ್ದಾರೆ.
ಡಿಸೆಂಬರ್ 8ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅದಾದ ಬಳಿಕ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಸ್ಯಾಂಡಲ್‌ವುಡ್ ಮಾತ್ರವಲ್ಲದೇ, ಅವರ ಅಭಿಮಾನಿಗಳೂ ಹಿರಿಯ ನಟಿಯನ್ನು ಕೊನೆಯದಾಗಿ ಕಣ್ತುಂಬಿಕೊಂಡಿದ್ದರು. ಅದಾದ ನಂತರ ತೆರೆದ ವಾಹನದಲ್ಲಿ ಸೋಲದೇವನಹಳ್ಳಿಗೆ ಬಂದು, ಅಲ್ಲಿಂದ ಹೂಗಳಿಂದ ಕೂಡಿದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತಂದು ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಹಾಗೇ ಅಂತ್ಯಕ್ರಿಯೆಗೊಂಡ ಜಾಗದಲ್ಲಿಯೇ ಇದೀಗ ಬೃಹತ್ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದಾರೆ ಪುತ್ರ ವಿನೋದ್ ರಾಜ್.
ಕೆಲ ದಿನಗಳ ಹಿಂದಷ್ಟೇ ಅಮ್ಮನ ಸ್ಮಾರಕ ಮಾಡುವ ಬಗ್ಗೆ ವಿನೋದ್ ರಾಜ್ ಹೇಳಿಕೊಂಡಿದ್ದರು. ಅದರಂತೆ, ಸಂಕ್ರಾಂತಿಯ ಶುಭ ದಿನವೇ ಅಮ್ಮ ಮಲಗಿದ ಜಾಗದ ಪಕ್ಕದಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಈ ಪೂಜೆ ವೇಳೆ ಪತ್ನಿ ಅನು ಮತ್ತು ಪುತ್ರ ಯುವರಾಜ್ ಸಹ ಹಾಜರಿದ್ದರು. ಈ ಸ್ಮಾರಕ ಹೇಗಿರಲಿದೆ ಎಂಬುದಕ್ಕೂ ಕಿರು ಪ್ರತಿಕೃತಿ ನಿರ್ಮಾಣ ಮಾಡಲಾಗಿತ್ತು. ಗುದ್ದಲಿ ಪೂಜೆ ಬಳಿ ಅದಕ್ಕೂ ಆ ಪ್ರತಿಕೃತಿಗೆ ಪೂಜೆ ಸಲ್ಲಿಸಲಾಗಿತ್ತು.
ಸ್ಮಾರಕ ನಿರ್ಮಾಣಕ್ಕೆ ಬಜೆಟ್ ಎಷ್ಟು?
ಗುದ್ದಲಿ ಪೂಜೆಯ ಬಳಿಕ ವಿನೋದ್ ರಾಜ್ ಈ ಸ್ಮಾರಕದ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ. ಜತೆಗೆ ಎಷ್ಟು ದಿನಗಳಲ್ಲಿ ಇದು ನಿರ್ಮಾಣವಾಗಲಿದೆ ಎಂದೂ ಹೇಳಿದ್ದಾರೆ. ಒಟ್ಟು 55 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ. ಲೀಲಾವತಿ ಅವರ ವಿಶೇಷ ಫೋಟೋಗಳೂ ಸ್ಮಾರಕ ಆವರಣದಲ್ಲಿ ಕಾಣಿಸಲಿವೆ. ನಟಿಸಿದ ಎಲ್ಲ ಸಿನಿಮಾಗಳ ಮಾಹಿತಿಯೂ ಇಲ್ಲಿರಲಿದೆಯಂತೆ. ಇಂದಿನಿಂದ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಸ್ಮಾರಕ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಗುದ್ದಲಿ ಪೂಜೆಯ ಕಾರ್ಯಕ್ರಮದಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಸಹ ಭಾಗವಹಿಸಿದ್ದರು.