ಮೂವರು ನಾಯಕಿಯರು, ಲವ್‌ ಸ್ಟೋರಿ ಇಲ್ಲ! ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ನಲ್ಲಿ ವರಲಕ್ಷ್ಮಿ ಶರತ್‌ ಕುಮಾರ್‌ ಪಾತ್ರವೇನು?
ಕನ್ನಡ ಸುದ್ದಿ  /  ಮನರಂಜನೆ  /  ಮೂವರು ನಾಯಕಿಯರು, ಲವ್‌ ಸ್ಟೋರಿ ಇಲ್ಲ! ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ನಲ್ಲಿ ವರಲಕ್ಷ್ಮಿ ಶರತ್‌ ಕುಮಾರ್‌ ಪಾತ್ರವೇನು?

ಮೂವರು ನಾಯಕಿಯರು, ಲವ್‌ ಸ್ಟೋರಿ ಇಲ್ಲ! ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ನಲ್ಲಿ ವರಲಕ್ಷ್ಮಿ ಶರತ್‌ ಕುಮಾರ್‌ ಪಾತ್ರವೇನು?

Sudeep Max Movie: ಮ್ಯಾಕ್ಸ್‌ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಜತೆ ಮುಖ್ಯ ಪಾತ್ರದಲ್ಲಿ ವರಲಕ್ಷ್ಮಿ ಶರತ್‌ ಕುಮಾರ್‌ ನಟಿಸಿದ್ದಾರೆ. ಲವ್‌ ಸ್ಟೋರಿ ಇಲ್ಲದ ಸಿನಿಮಾದಲ್ಲಿ ವರಲಕ್ಷ್ಮಿಯ ಪಾತ್ರವೇನು? ಹೇಗೆ ನಟಿಸಿದ್ದಾರೆ? ಎಂದು ತಿಳಿದುಕೊಳ್ಳೋಣ ಬನ್ನಿ.

ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ನಲ್ಲಿ ವರಲಕ್ಷ್ಮಿ ಶರತ್‌ ಕುಮಾರ್‌ ಪಾತ್ರವೇನು?
ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ನಲ್ಲಿ ವರಲಕ್ಷ್ಮಿ ಶರತ್‌ ಕುಮಾರ್‌ ಪಾತ್ರವೇನು?

ಮ್ಯಾಕ್ಸ್‌ ಸಿನಿಮಾದಲ್ಲಿ ನಟಿ ವರಲಕ್ಷ್ಮಿ ಶರತ್‌ ಕುಮಾರ್‌ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್‌ಗೆ ಇವರು ಪ್ರೇಯಸಿಯಾಗಿ ನಟಿಸಿದ್ದಾರೆ ಎಂದುಕೊಳ್ಳುವವರು ಇರಬಹುದು. ಇವರಲ್ಲದೆ ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ ಕೂಡ ನಟಿಸಿದ್ದಾರೆ. ಈ ಮೂವರಲ್ಲಿ ಸಿನಿಮಾದಲ್ಲಿ ಸುದೀಪ್‌ಗೆ ಲವರ್‌ ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಇದಕ್ಕೆ ಉತ್ತರ, ಇವರು ಮೂವರೂ ಅಲ್ಲ. ಅಸಲಿಗೆ, ಮ್ಯಾಕ್ಸ್‌ ಸಿನಿಮಾದಲ್ಲಿ ಲವ್‌ ಸ್ಟೋರಿ ಇಲ್ಲವೇ ಇಲ್ಲ ಎನ್ನುವುದನ್ನು ಗಮನಿಸಬೇಕು. ಮ್ಯಾಕ್ಸ್‌ ಸಂಪೂರ್ಣವಾಗಿ ಆಕ್ಷನ್‌ ಮತ್ತು ಥ್ರಿಲ್ಲರ್‌ ಮೂವಿ.  ಈ ಸಿನಿಮಾ ಕೇವಲ ಒಂದು ರಾತ್ರಿಯಲ್ಲಿ ನಡೆದುಬಿಡುವ ಘಟನೆ.  ಈ ಸಿನಿಮಾದಲ್ಲಿ ಪ್ರೀತಿ ಪ್ರೇಮ ಪ್ರಣಯಕ್ಕೆ ಸ್ಥಳವಿಲ್ಲ.  ಯಾರ ಕನಸಿನಲ್ಲೂ ಲವ್‌ ಸ್ಟೋರಿ ಬರೋದಿಲ್ಲ. ಹಾಡಿನಲ್ಲೂ ಹೀರೋ ಹೀರೋಯಿನ್‌ ಕುಣಿಯವ ದೃಶ್ಯವಿಲ್ಲ.

ಮ್ಯಾಕ್ಸ್‌ ಸಿನಿಮಾದಲ್ಲಿ ಯಾವುದಕ್ಕೂ ಇರಲಿ ಎಂದು ಹೆಚ್ಚು ಹಾಡುಗಳನ್ನು ತುರುಕಿಲ್ಲ. ಸೆಂಟಿಮೆಂಟ್‌ಗೆ ಇರಲಿ ಎಂದು ಲವ್‌ ಸ್ಟೋರಿಯನ್ನೂ ಹಾಕಿಲ್ಲ. ಸಂಜೆಯಿಂದ ಮರುದಿನ ಬೆಳಗ್ಗಿನ ತನಕ ನಡೆಯುವ ಘಟನೆಗಳ ಸುತ್ತವೇ ಚಿತ್ರ ಸುತ್ತುತ್ತದೆ. ಈ ಸಿನಿಮಾದಲ್ಲಿ ಸುದೀಪ್‌, ವರಲಕ್ಷ್ಮಿ ಶರತ್ ಕುಮಾರ್, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುನಿಲ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ಮ್ಯಾಕ್ಸ್‌ನಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಪಾತ್ರವೇನು?

ಈಗಾಗಲೇ ಸಿನಿಮಾ ನೋಡಿದ ಜನರು ವರಲಕ್ಷ್ಮಿ ವಿಲನ್‌ ಪಾತ್ರದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ. ಹಾಗಂತ, ಈ ಸಿನಿಮಾದಲ್ಲಿ ವರಲಕ್ಷ್ಮಿ ಖಡಕ್‌ ರೌಡಿಯಲ್ಲ. ವರಲಕ್ಷ್ಮಿ ಶರತ್ ಕುಮಾರ್ ಅವರು ರೂಪಾ ಎಂಬ ಕ್ರೈಮ್‌ ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ನಟಿಸಿದ್ದಾರೆ. ಕ್ರೈಮ್‌ ಇನ್‌ಸ್ಪೆಕ್ಟರ್‌ ಅಂದರೆ, ಸುದೀಪ್‌ ರೀತಿ ಪೊಲೀಸ್‌ ಪಾತ್ರ. ಆದರೆ, ಇವರು ಈ ಸಿನಿಮಾದಲ್ಲಿ ಒಳ್ಳೆಯವರಲ್ಲ. ಕೆಟ್ಟ ರಾಜಕಾರಣಿಗಳು ಮತ್ತು ರೌಡಿಗಳ ಜತೆ ಕೈ ಜೋಡಿಸಿರುವ ಕರಪ್ಟ್‌ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ, ಇವರು ಈ ಸಿನಿಮಾದ ವಿಲನ್‌ ಕೂಡ ಹೌದು.

ತೆಲುಗು ನಟ ಸುನಿಲ್‌ ಇಲ್ಲಿ ಪ್ರಮುಖ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ಆತನಿಗೆ ಬೆಂಬಲ ನೀಡುವ ರೂಪಾ ಖಡಕ್‌ ಆಗಿಯೇ ನಟಿಸಿದ್ದಾರೆ. ಈಕೆ ರೌಡಿಗಳ ಜತೆ ಇದ್ದು ಒಳ್ಳೆಯದನ್ನೇ ಮಾಡುವ ಪೊಲೀಸ್‌ ಆಗಿರಬಹುದೇ ಎಂಬ ಅನುಮಾನ ಆರಂಭದಲ್ಲಿ ಉಂಟಾಗುತ್ತದೆ. ಆದರೆ, ಆ ರೀತಿ ಆಗುವುದಿಲ್ಲ. ಬಹುತೇಕ ಎಲ್ಲಾ ಪೊಲೀಸರು ಅನಿವಾರ್ಯವಾಗಿ ರೌಡಿಗಳೊಂದಿಗೆ, ರಾಜಕಾರಣಿಗಳೊಂದಿಗೆ ಒಂದಲ್ಲ ಒಂದು ರೀತಿ ಕೈ ಜೋಡಿಸುತ್ತಾರೆ. ಆದರೆ, ಸುದೀಪ್‌ ಟೀಮ್‌ನಲ್ಲಿ ಕೆಲವರು ಮಾತ್ರ ಪಕ್ಕಾ ಪೊಲೀಸ್‌ ಆಗಿರುತ್ತಾರೆ.

ಒಟ್ಟಾರೆ ಇಂದು ಬಿಡುಗಡೆಯಾದ ಮ್ಯಾಕ್ಸ್‌ ಸಿನಿಮಾದಲ್ಲಿ ವರಲಕ್ಷ್ಮಿ ಶರತ್‌ ಕುಮಾರ್‌ ಪಾತ್ರದ ಕುರಿತು ಸಿನಿಪ್ರೇಕ್ಷಕರಿಗೆ ಇದ್ದ ಅನುಮಾನ ಬಗೆಹರಿದಿದೆ. ಇದೇ ಸಮಯದಲ್ಲಿ ಈ ಸಿನಿಮಾದಲ್ಲಿ ನಟಿಸಿದ ಇನ್ನಿಬ್ಬರು ನಟಿಯರ ಪಾತ್ರವೂ ಗಮನ ಸೆಳೆಯುತ್ತದೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ ಈ ಸಿನಿಮಾದಲ್ಲಿ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್‌ ಟೀಮ್‌ನಲ್ಲಿ ಇವರು ನಟಿಸಿದ್ದಾರೆ. ಅಂದಹಾಗೆ, ಸುದೀಪ್‌ ನಟನೆಯ ಮಾಣಿಕ್ಯ ಸಿನಿಮಾದಲ್ಲಿಯೂ ವರಲಕ್ಷ್ಮಿ ಶರತ್‌ ಕುಮಾರ್‌ ನಟಿಸಿದ್ದರು.

ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಇಂದು ಬೆಳಗ್ಗೆ 6 ಗಂಟೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಸುದೀಪ್‌ ಅಭಿಮಾನಿಗಳು ಈ ಸಿನಿಮಾವನ್ನು ಕೊಂಡಾಡಿದ್ದಾರೆ. ಆದರೆ, ಕೆಲವರು ಈ ಸಿನಿಮಾ ನಿರೀಕ್ಷೆಯಷ್ಟು ಚೆನ್ನಾಗಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಈಗಾಗಲೇ ಈ ಸಿನಿಮಾವನ್ನು ನೋಡಿ ವಿಮರ್ಶೆಯನ್ನು ಪ್ರಕಟಿಸಿದೆ. "ಚಿತ್ರದಲ್ಲಿ ಅಲ್ಲಲ್ಲಿ ಕೆಲವೊಂದು ಟ್ವಿಸ್ಟ್‌ಗಳೂ ಇವೆ. ತನ್ನ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇಲ್ಲಿ ಸುದೀಪ್‌ ಸಂಪೂರ್ಣವಾಗಿ ಆಕ್ಷನ್‌ ಮೋಡ್‌ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಕೊನೆಯವರೆಗೂ ಒಂದೇ ರೀತಿ ಕಾಣಿಸಿದ್ದಾರೆ. ಒಟ್ಟಾರೆ ಮ್ಯಾಕ್ಸ್‌ ಸಿನಿಮಾದಲ್ಲಿ ಮ್ಯಾಕ್ಸಿಮಮ್‌ ಫೈಟಿಂಗ್‌ ಇದೆ. ಮಿನಿಮಮ್‌ ಸೆಂಟಿಮೆಂಟ್‌ ಇದೆ. ಕಾಮಿಡಿ ಝೀರೋ ಇದೆ. "ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್‌ ಸಿನಿಮಾ" ಬಯಸುವವರಿಗೆ ಮ್ಯಾಕ್ಸ್‌ ತುಸು ನಿರಾಸೆ ಮೂಡಿಸಬಹುದು. "ಫ್ಯಾನ್ಸ್‌ ಎಂಟರ್‌ಟೇನ್‌ಮೆಂಟ್‌ ಮೂವಿ" ಬಯಸುವವರಿಗೆ ಮ್ಯಾಕ್ಸ್‌ ಖುಷಿ ಕೊಡಬಹುದು" ಎಂದು ಎಚ್‌ಟಿ ಕನ್ನಡ ವಿಮರ್ಶೆ ಅಭಿಪ್ರಾಯ ಪಟ್ಟಿದೆ. ಪೂರ್ತಿ ವಿಮರ್ಶೆ ಓದಲು ಇಲ್ಲಿ ಕ್ಲಿಕ್‌ ಮಾಡಿ.