ನಟ ಜಗ್ಗೇಶ್ ಚಿತ್ರರಂಗದಿಂದ ಬ್ಯಾನ್ ಆದಾಗ ಪಂಚೆ ಎತ್ತಿಕಟ್ಟಿ ಮುಂದೆ ಬಂದವರು ರಾಜ್‌ಕುಮಾರ್! ಅಷ್ಟಕ್ಕೂ ಆವತ್ತು ಏನಾಯ್ತು?
ನಟ ಜಗ್ಗೇಶ್ ಅವರ ವೃತ್ತಿ ಬದುಕಿನ ಆರಂಭದಲ್ಲಿಯೇ ದುರ್ಘಟನೆಯೊಂದು ನಡೆದಿತ್ತು. ಪೋಷಕ ನಟರಿಂದ ನಾಯಕನ ಸ್ಥಾನಕ್ಕೆ ಲಗ್ಗೆ ಇಡುತ್ತಿದ್ದ ಜಗ್ಗೇಶ್, ನಿರ್ಮಾಪಕರ ಮೇಲೆ ಕೈ ಮಾಡಿದ್ದರು. ಬ್ಯಾನ್ ಬಿಸಿಯೂ ಹೆಚ್ಚಾಗಿತ್ತು. ಆಗ ಮಧ್ಯ ಪ್ರವೇಶಿಸಿದ್ದು ಡಾ. ರಾಜ್‌ಕುಮಾರ್.
S Narayan about Jaggesh Ban: ಡಾ. ರಾಜ್‌ಕುಮಾರ್ ಅಂದರೆ ಅದೊಂದು ಮೇರು ಪರ್ವತ. ಕರುಣೆ, ದಯಾಗುಣದ ಬೃಹತ್ ಆಲದ ಮರ. ಇಂಡಸ್ಟ್ರಿಯಲ್ಲಿ ಏನೇ ಸಮಸ್ಯೆಗಳಿದ್ದರೂ, ಅವರ ನೇತೃತ್ವದಲ್ಲಿ, ಅವರ ಸಮ್ಮುಖದಲ್ಲಿ ಬಗೆ ಹರಿದ ಎಷ್ಟೋ ಪ್ರಸಂಗಗಳಿವೆ. ಚಿತ್ರೋದ್ಯಮ ಮಾತ್ರವಲ್ಲ ರಾಜ್ಯದ ಗಂಭೀರ ವಿಚಾರಗಳಿಗೂ ಅವರು ಧ್ವನಿಗೂಡಿಸಿ, ಚಳವಳಿಗಳನ್ನೇ ಮಾಡಿದ ಉದಾಹರಣೆಗಳಿವೆ. ರಾಜ್‌ಕುಮಾರ್ ಅವರನ್ನು ಹತ್ತಿರದಿಂದ ನೋಡಿದವರು, ಅವರ ಜತೆಗೆ ಕೆಲಸ ಮಾಡಿದವರು ಇಂದಿಗೂ ಅವರ ಉದಾತ್ತ ಗುಣಗಳನ್ನೇ ನೆನಪಿಸಿಕೊಳ್ಳುತ್ತಿರುತ್ತಾರೆ. ಇದೀಗ ಆವತ್ತು ನಟ ಜಗ್ಗೇಶ್ ಚಿತ್ರೋದ್ಯಮದಿಂದ ಬ್ಯಾನ್ ಆದಾಗ ಮುಂದೆ ಬಂದವರು ಯಾರು ಎಂಬುದನ್ನು ನಿರ್ದೇಶಕ ಎಸ್ ನಾರಾಯಣ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಎಸ್ ನಾರಾಯಣ್ ನೆನಪಿಸಿಕೊಂಡಿದ್ದು ಹೀಗೆ
"ಜಗ್ಗೇಶ್ ಆವತ್ತು ಆಗತಾನೇ ಬೆಳೆಯುತ್ತಿದ್ದರು. ಪೋಷಕ ಪಾತ್ರಗಳಿಂದ ನಾಯಕನಟನಾಗಿ ಎಂಟ್ರಿಕೊಡುತ್ತಿದ್ದರು. ಯಾವುದೋ ಒಂದು ಸಂದರ್ಭ ನಿರ್ಮಾಪಕರಿಗೂ ಜಗ್ಗೇಶ್ ಅವರಿಗೂ ಘರ್ಷಣೆ ಆಗಿದೆ. ಘರ್ಷಣೆ ಆಗುತ್ತಿದ್ದಂತೆ, ನಿರ್ಮಾಪಕರ ಸಂಘ ಜಗ್ಗೇಶ್ ಅವರನ್ನು ಬ್ಯಾನ್ ಮಾಡಿದೆ. ಆವತ್ತು ಧ್ವನಿ ಎತ್ತಿದ್ದು ನಮ್ಮೆಲ್ಲರ ನೆಚ್ಚಿನ ವರನಟ ಡಾ. ರಾಜ್‌ಕುಮಾರ್. ಕಲಾವಿದರನ್ನು ಬ್ಯಾನ್ ಮಾಡುವ ಹಕ್ಕು ಯಾರಿಗೂ ಇಲ್ಲ. ಆ ಕೆಲಸ ಯಾರೂ ಮಾಡಲು ಹೋಗಬೇಡಿ. ಆ ತಪ್ಪಿಗೆ ಏನೋ ಒಂದು ಶಿಕ್ಷೆ ಇರುತ್ತೆ. ಅದನ್ನು ಕೊಟ್ಟುಬಿಡಿ ಸಾಕು. ಬ್ಯಾನ್ ಗೀನ್ ಎಲ್ಲ ಏನಕ್ಕೆ. ನಿಮಗೆ ಅವರ ಜತೆ ಸಿನಿಮಾ ಮಾಡೋಕೆ ಇಷ್ಟ ಇಲ್ವಾ? ಬಿಟ್ಟುಬಿಡಿ. ಬೇರೆ ಯಾರಾದವರ ಜತೆಗೆ ಸಿನಿಮಾ ಮಾಡಿ. ಯಾರೂ ಯಾರನ್ನೂ ಬ್ಯಾನ್ ಮಾಡಬೇಡಿ. ಆ ಹಕ್ಕು ಯಾರಿಗೂ ಇಲ್ಲ ಎಂದು ಅಣ್ಣಾವ್ರು ಮುಂದೆ ಬಂದು ಹೇಳಿದ್ರು. ಅಲ್ಲಿಂದ ಆ ರೀತಿಯ ಪ್ರಕರಣಗಳು ಅವರು ಇರುವ ವರೆಗೂ ಮತ್ತೆ ನಡೆಯಲಿಲ್ಲ.
ಬ್ಯಾನ್ ಬಗ್ಗೆ ಈ ಹಿಂದೆ ಜಗ್ಗೇಶ್ ಹೇಳಿದ್ದೇನು?
"ಈಗಿನ ಸಿನಿಮಾ ಇಂಡಸ್ಟ್ರಿ ಆ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇಂಥ ಪುಣ್ಯಾತ್ಮರು ಇದ್ದ ಕಾಲದಲ್ಲಿದ್ದ ಸಿನಿಮಾರಂಗ ಇದಲ್ಲಾರೀ.. ಕಷ್ಟ ಅಂತ ಬಂದರೆ ರಾಜ್‌ಕುಮಾರ್ ಪಂಚೆ ಎತ್ತಿಕೊಂಡು ನಿಲ್ಲುತ್ತಿದ್ರು. ಈಗ್ಯಾಕೆ ಈ ಮಾತು ಹೇಳ್ತಿದ್ದೀನಿ ಅಂದ್ರೆ, ಒಬ್ಬ ನಿರ್ಮಾಪಕರು ಒಂದು ಸಿನಿಮಾಗೋಸ್ಕರ ನಮ್ಮ ಮನೆಗೆ ಬಂದು ನನ್ನ ಹೆಂಡತಿಯ ಬಗ್ಗೆ ಕೆಟ್ಟ ಮಾತಂದುಬಿಟ್ಟ. ಆಗ ಮಧ್ಯೆ ರಾತ್ರಿಯಾಗಿತ್ತು. ನಾನಾವಾಗ ಯಂಗ್‌ಸ್ಟರ್, ಆಗಿದ್ದಾಗಲಿ ಎಂದು ದೊಣ್ಣೆಯಿಂದ ಹೊಡೆದುಬಿಟ್ಟಿದ್ದೆ. ಆಗ ಕೈ ಮಾಡಬಾರದಿತ್ತು. ಅದು ತಪ್ಪೇ. ಆಗ ಇಡೀ ಸಿನಿಮಾ ಇಂಡಸ್ಟ್ರಿ ನನ್ನನ್ನು ಬ್ಯಾನ್ ಮಾಡಿದ್ರು"
ಪಂಚೆ ಎತ್ತಿಕಟ್ಟಿ ನಿಂತೇಬಿಟ್ರು ಅಣ್ಣಾವ್ರು
"ಆಗ ನಾನು ನೊಂದುಕೊಂಡು ಡಾ. ರಾಜ್‌ಕುಮಾರ್ ಮನೆಗೆ ಹೋದೆ. ಏನಣ್ಣ ಇದು? ಹಿಂಗಾದ್ರೆ ಮುಂದೆ ನಮ್ ಗತಿ ಏನು? ಅಂದೆ. ನೀವ್ಯಾರು ನಂಬಲ್ಲ, ಅಣ್ಣಾವ್ರು ಉಪ್ಪಿಟ್ಟು ತಿಂತಿದ್ರು. ಎದ್ದು ನಿಂತು ಪಂಚೆ ಕಟ್ಟಿಯೇಬಿಟ್ರು. ಏನ್ರಿ ಪಾರ್ವತಿಯವ್ರೇ ಏನಿದೆಲ್ಲ? ಅಂದ್ರು. ಅಂಬರೀಶ್‌ನ್ನ ಕರೀರಿ ಅಂದ್ರು. ಅವರೂ ಕಾರ್ ತಗೊಂಡು ಬಂದೇಬಿಟ್ರು. ಎಷ್ಟೋ ಮಂದಿ ಕಲಾವಿದರೆಲ್ಲ ಒಂದು ಕಡೆ ಸೇರಿದ್ರು. ಇದ್ಯಾಕೆ ಹೇಳಿದೆ ಅಂದ್ರೆ ಆಗೆಲ್ಲ ಅಷ್ಟೊಂದು ಒಗ್ಗಟ್ಟಿತ್ತು.
ಈಗಿನ ಸಿನಿಮಾ ಇಂಡಸ್ಟ್ರಿ ಆ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇಂಥ ಪುಣ್ಯಾತ್ಮರು ಇದ್ದ ಕಾಲದಲ್ಲಿದ್ದ ಸಿನಿಮಾರಂಗ ಇದಲ್ಲಾರೀ.. ಆಗ ಏನೇ ಸಮಸ್ಯೆ ಇದ್ದರೂ ಎಲ್ಲರೂ ಒಂದಾಗುತ್ತಿದ್ದರು. ಇದೀಗ ಆ ಕಾಲ ಊಹಿಸಲೂ ಅಸಾಧ್ಯ. ಆಗ ಕಷ್ಟ ಸುಖಕ್ಕೆ ಎಲ್ಲರೂ ಜತೆಯಾಗ್ತಿದ್ರು. ಬೇಡಿ ಬ್ಯಾನ್ ಮಾಡುವ ನಿರ್ಧಾರ ಮಾಡಬೇಡಿ ಅದನ್ನು ವಾಪಸ್ ಪಡೆಯಿರಿ ಎಂದು ನಿರ್ಮಾಪಕರ ಮುಂದೆ ಎಲ್ಲರೂ ಬೇಡಿಕೊಂಡ್ರು. ಆಮೇಲೆ ಬ್ಯಾನ್ ಹಿಂಪಡೆದರು" ಹೀಗೆ ಆವತ್ತಿನ ಘಟನೆ ಬಗ್ಗೆ ಜಗ್ಗೇಶ್ ಈ ಹಿಂದೆ ವೇದಿಕೆ ಮೇಲೆ ನೆನಪಿಸಿಕೊಂಡಿದ್ದರು.
ವಿಭಾಗ