Ekam Web Series: ರಕ್ಷಿತ್ ಶೆಟ್ಟಿ ನಿರ್ಮಾಣದ ಏಕಂ ವೆಬ್ಸಿರೀಸ್ ರಿಲೀಸ್; ವೀಕ್ಷಣೆ ಎಲ್ಲಿ, ಪಾವತಿಸಬೇಕಾದ ಹಣವೆಷ್ಟು?
ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ನಿರ್ಮಾಣದ ಕನ್ನಡ ವೆಬ್ ಸೀರಿಸ್ ಏಕಂ ಪ್ರೇಕ್ಷಕರ ಮುಂದೆ ಬಂದಿದೆ. ಒಟಿಟಿಯಲ್ಲಿ ಬಿಡುಗಡೆಯಾಗುವ ಬದಲು, ತನ್ನದೇ ಸ್ವಂತ ವೇದಿಕೆಯಲ್ಲಿ ರಿಲೀಸ್ ಆಗಿದೆ. ಹಾಗಾದರೆ, ಈ ವೆಬ್ ಸರಣಿಯಲ್ಲಿ ಎಲ್ಲಿ, ಹೇಗೆ ನೋಡಬಹುದು ಎಂಬುದಕ್ಕೆ ಇಲ್ಲಿದೆ ವಿವರ.

Ekam Web Series: ರಕ್ಷಿತ್ ಶೆಟ್ಟಿ ನಿರ್ಮಾಣದ, ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕನ್ನಡ ವೆಬ್ ಸೀರಿಸ್ ಏಕಂ ಪ್ರೇಕ್ಷಕರ ಮುಂದೆ ಬಂದಿದೆ. ಆದರೆ ಯಾವುದೇ OTT ಪ್ಲಾಟ್ಫಾರ್ಮ್ನಲ್ಲಿ ಈ ಸಿರೀಸ್ ವೀಕ್ಷಿಸಲು ಅವಕಾಶವಿಲ್ಲ. ಈ ಸರಣಿಯನ್ನು ವೆಬ್ಸೈಟ್ ಮೂಲಕ ಬಿಡುಗಡೆ ಮಾಡಲಾಗಿದೆ. www.ekumdiseries.com ವೆಬ್ಸೈಟ್ನಲ್ಲಿ ಮಾತ್ರ ಏಕಂ ವೆಬ್ಸರಣಿಯನ್ನು ವೀಕ್ಷಿಸಬಹುದಾಗಿದೆ.
ಏಕಂ ವೆಬ್ ಸರಣಿಯನ್ನು ಯಾವ ಒಟಿಟಿಯಲ್ಲಿ ವೀಕ್ಷಿಸಬಹುದು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅಮೆಜಾನ್ ಪ್ರೈಮ್ ವಿಡಿಯೋ, ನೆಟ್ಫ್ಲಿಕ್ಸ್, ಜಿಯೋ ಸಿನಿಮಾ, ಜೀ 5, ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಸೇರಿದಂತೆ ಯಾವುದೇ ಒಟಿಟಿಗಳಲ್ಲಿ ಈ ವೆಬ್ ಸರಣಿ ಬಿಡುಗಡೆಯಾಗುತ್ತಿಲ್ಲ. ಬದಲಿಗೆ ಸ್ವತಂ ವೇದಿಕೆ ಸೃಷ್ಟಿಸಿಕೊಂಡು ಅದರಲ್ಲಿಯೇ ಈ ಸಿರೀಸ್ ಬಿಡುಗಡೆಯಾಗಿದೆ. ಒಟಿಟಿ ಕಂಪನಿಗಳು ಕನ್ನಡದ ವೆಬ್ ಸರಣಿಗಳನ್ನು ತಾತ್ಸಾರದಿಂದ ನೋಡುತ್ತಿವೆ. ಇದರಿಂದ ನೊಂದ ರಕ್ಷಿತ್ ಶೆಟ್ಟಿ ಮತ್ತವರ ತಂಡ ಸ್ವಂತ ಒಟಿಟಿ ತಾಣದ ಮೂಲಕ ಈ ವೆಬ್ ಸರಣಿಯನ್ನು ಬಿಡುಗಡೆ ಮಾಡಿದೆ.
149 ರೂಪಾಯಿ ನೀಡಿ..
ಹಾಗೆಂದ ಮಾತ್ರಕ್ಕೆ ಆ ವೆಬ್ಸೈಟ್ನಲ್ಲಿಯೂ ಏಕಂ ಸರಣಿಯು ಉಚಿತವಾಗಿ ನೋಡಲು ಸಾಧ್ಯವಿಲ್ಲ. ekamtheseries.com ಎಂಬ ವೆಬ್ಸೈಟ್ನಲ್ಲಿ ಈ ವೆಬ್ ಸರಣಿಯನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತರು 149 ರೂಪಾಯಿ ನೀಡಿ ಈ ವೆಬ್ಸೈಟ್ ಚಂದಾದಾರಾಗಬಹುದು. ಒಂದು ಸಿನಿಮಾ ಟಿಕೆಟ್ ದರದಲ್ಲಿ ಏಕಂನ ಎಲ್ಲಾ ಸರಣಿಗಳನ್ನು ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ದೊರಕಲಿದೆ. ಈ ರೀತಿ ಚಂದಾದಾರರಾದವರಿಗೆ ಚಿಲ್ಡ್ರನ್ ಆಫ್ ಸಿನೆಮಾ ಎಂಬ ಡಾಕ್ಯುಮೆಂಟರಿಯ 4 ಎಪಿಸೋಡ್ ನೋಡುವ ಅವಕಾಶ ದೊರಕಲಿದೆ. ಇದರೊಂದಿಗೆ ಏಕಂನ ಎಲ್ಲಾ ಎಪಿಸೋಡ್ಗಳ ಮೂಲ ಸ್ಕ್ರಿಪ್ಟ್ ಮತ್ತು ಸ್ಕ್ರೀನ್ಪ್ಲೇ ಕೂಡ ದೊರಕಲಿದೆ. ಇದರೊಂದಿಗೆ ಏಕಂ ತಂಡದ ಜತೆ ಸಂವಾದದಲ್ಲಿ ಭಾಗಿಯಾಗುವ ಅವಕಾಶವೂ ದೊರಕಲಿದೆ.
ಆಂಥಾಲಜಿ ಗುಚ್ಛ
ಏಕಂ ಒಂದು ಆಂಥಾಲಜಿ ಸರಣಿಯಾಗಿ ಬಿಡುಗಡೆಯಾಯಿಗಿದೆ. ಸಾಮಾಜಿಕ ಅಸಮಾನತೆಗಳು, ಜಾತಿ ತಾರತಮ್ಯ ಮತ್ತು ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಭಾವನಾತ್ಮಕ ಕಥೆಯನ್ನು ಹಲವು ಗುಚ್ಛಗಳ ರೀತಿಯಲ್ಲಿ ಏಕಂ ವೆಬ್ ಸರಣಿಯಲ್ಲಿ ಹೊಂದಿಸಲಾಗಿದೆ. ಕನ್ನಡದ ಹಲವು ಪ್ರಮುಖ ನಟರು ಮತ್ತು ನಿರ್ದೇಶಕರು ಈ ಸಿರೀಸ್ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರಕಾಶ್ ರಾಜ್, ರಾಜ್ ಬಿ ಶೆಟ್ಟಿ, ಕಿಶೋರ್, ಪ್ರಕಾಶ್ ತುಮ್ಮಿನಾಡ್, ರೇವತಿ ಸೇರಿ ಇನ್ನೂ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಏಳು ಕಂತುಗಳು
ಏಕಂ ಸರಣಿಯು ಒಟ್ಟು ಏಳು ಕಂತುಗಳೊಂದಿಗೆ ಬಿಡುಗಡೆಯಾಗಿದೆ. ಪ್ರತಿ ಸಂಚಿಕೆಗೆ ಬೇರೆ ಬೇರೆ ಹೆಸರನ್ನು ನೀಡಲಾಗಿದೆ. ವಿಭಿನ್ನ ಕಥೆಗಳೊಂದಿಗೆ ಆರಂಭವಾದ ಈ ಸಿರೀಸ್ಗೆ ಸುಮಂತ್ ಭಟ್ ಮತ್ತು ಸಂದೀಪ್ ಪಿಎಸ್ ನಿರ್ದೇಶಕರು. 2020ರಲ್ಲಿಯೇ ಚಿತ್ರೀಕರಣ ಮುಗಿಸಿಕೊಂಡಿರುವ ಏಕಂ ಸಿರೀಸ್ಅನ್ನು ಒಟಿಟಿ ಕಂಪನಿಗಳು ಖರೀದಿಸದ ಹಿನ್ನೆಲೆಯಲ್ಲಿ, ತನ್ನದೇ ಸ್ವಂತ ವೇದಿಕೆ ಸೃಷ್ಟಿಸಿಕೊಂಡು ರಿಲೀಸ್ ಮಾಡಿದ್ದಾರೆ ನಿರ್ಮಾಪಕರು.
ದಕ್ಷಿಣದ ಭಾಷೆಗಳಲ್ಲಿ
ಇಬ್ಬರು ಸಂಗೀತ ನಿರ್ದೇಶಕರು ಮತ್ತು ನಾಲ್ವರು ಛಾಯಾಗ್ರಾಹಕರು ಏಕಂ ವೆಬ್ ಸರಣಿಗೆ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿನ ಪ್ರತಿಕ್ರಿಯೆಯನ್ನು ಆಧರಿಸಿ, ಮುಂದಿನ ದಿನಗಳಲ್ಲಿ ಈ ಸರಣಿಯನ್ನು ದಕ್ಷಿಣದ ಇತರ ಭಾಷೆಗಳಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ.