‘ರಾಜ್‌ಕುಮಾರ್, ಬಾಲಣ್ಣ, ನರಸಿಂಹರಾಜು, ಇವರ್ಯಾರೂ ಉತ್ತಮ ಕಲಾವಿದರಲ್ಲವೆ? ಅವರಿಗ್ಯಾಕೆ ಈ ಪ್ರಶಸ್ತಿ ಬರಲಿಲ್ಲ’
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಈ ನಡುವೆ ಕನ್ನಡದ ಮೇರುನಟರಾದ ರಾಜ್‌ಕುಮಾರ್, ಬಾಲಣ್ಣ, ನರಸಿಂಹರಾಜು, ಇವರ್ಯಾರೂ ಉತ್ತಮ ಕಲಾವಿದರಲ್ಲವೆ? ಅವರಿಗ್ಯಾಕೆ ಈ ಪ್ರಶಸ್ತಿ ಬರಲಿಲ್ಲ? ಎಂಬ ವಿಚಾರದ ಬಗ್ಗೆ ಸಾಹಿತಿ ಹಾಗೂ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಬರೆದುಕೊಂಡಿದ್ದಾರೆ.
National film Awards 2024: ಡಾ ರಾಜ್‌ಕುಮಾರ್ ಸೇರಿ ಅದೆಷ್ಟೋ ಕನ್ನಡದ ಮೇರು ನಟರಿಗೆ ಈ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಅರಸಿ ಬರಲೇ ಇಲ್ಲ ಏಕೆ? ಇಲ್ಲಿಯವರೆಗೂ ಆ ಸಮ್ಮಾನಕ್ಕೆ ಪಾತ್ರರಾಗಿದ್ದು ಕೇವಲ ನಾಲ್ವರು ನಟರು ಮಾತ್ರ. 1975ರಲ್ಲಿ 23ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ವೇಳೆ ಚೋಮನ ದುಡಿ ಚಿತ್ರದ ನಟನೆಗಾಗಿ ಎಂ ವಿ ವಾಸುದೇವ್ ರಾವ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಅದಾದ ಬಳಿಕ 1986ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ತಬರನ ಕಥೆ ಚಿತ್ರಕ್ಕಾಗಿ ಬಹುಭಾಷಾ ನಟ ಚಾರುಹಾಸನ್ ಶ್ರೀನಿವಾಸನ್ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು.
2015ರಲ್ಲಿ ತೆರೆಗೆ ಬಂದಿದ್ದ ನಾನು ಅವನಲ್ಲ ಅವಳು ಸಿನಿಮಾದ ನಟನೆಗೆ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಅದಾದ ಮೇಲೆ ಕಾಂತಾರ ಸಿನಿಮಾದ ನಟನೆಗೆ ರಿಷಬ್ ಶೆಟ್ಟಿ ಅವರಿಗೆ ಸಿಕ್ಕಿದ್ದು ನಾಲ್ಕನೇ ಬಾರಿ. ಇದೀಗ ಈ ಪ್ರಶಸ್ತಿ ಬಗ್ಗೆಯೇ ರಾಜ್‌ಕುಮಾರ್ ಕುಟುಂಬದ ಆಪ್ತ ಮತ್ತು ನಿರ್ದೇಶಕ ಪ್ರಕಾಶ್ ರಾಜ್ ಮೇಹು ಇದೊಂದು ಹುನ್ನಾರ ಎಂದಿದ್ದಾರೆ.
ಶನಿವಾರವಷ್ಟೇ 2024ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದೆ. 2022ರ ಜನವರಿ 1ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ, ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಬಿಡುಗಡೆ ಆಗಿದೆ. ಅದರಲ್ಲೂ ಈ ಸಲದ ರಾಷ್ಟ್ರ ಪ್ರಶಸ್ತಿಯ ಪಟ್ಟಿಯಲ್ಲಿ ಕನ್ನಡದ ಸಿನಿಮಾಗಳು ರಾಷ್ಟ್ರ ಮಟ್ಟದಲ್ಲಿ ಮಿಂಚುಹರಿಸಿವೆ. ಕಾಂತಾರ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿ ಪಾಲಾದರೆ, ಅತ್ಯುತ್ತಮ ಮನರಂಜನಾ ಚಿತ್ರ ವಿಭಾಗದಲ್ಲಿಯೂ ಕಾಂತಾರ ಸಿನಿಮಾ ಗೆದ್ದಿದೆ.
ಹೊಂಬಾಳೆ ಫಿಲಂಸ್‌ಗೆ 4 ಅವಾರ್ಡ್ಸ್
ಇದಷ್ಟೇ ಅಲ್ಲ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ ಇನ್ನೊಂದು ಸಿನಿಮಾ ಕೆಜಿಎಫ್ ಚಾಪ್ಟರ್ 2 ಸಹ ಎರಡು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ ಮತ್ತು ಸಾಹಸ ನಿರ್ದೇಶನದ ವಿಭಾಗದಲ್ಲಿ ಕೆಜಿಎಫ್ ಸಿನಿಮಾ ಅವಾರ್ಡ್ ಪಡೆದಿದೆ. ಈ ಮೂಲಕ ಒಂದೇ ನಿರ್ಮಾಣ ಸಂಸ್ಥೆಯ ಎರಡು ಸಿನಿಮಾಗಳಿಗೆ ಒಟ್ಟು ನಾಲ್ಕು ಪ್ರಶಸ್ತಿ ಸಿಕ್ಕಿವೆ. ಅದೇ ರೀತಿ ನಾನ್ ಫೀಚರ್ ಸಿನಿಮಾ ವಿಭಾಗದಲ್ಲಿಯೂ ಮೂರು ಪ್ರಶಸ್ತಿಗಳು ಈ ಸಲ ಕನ್ನಡಕ್ಕೆ ಬಂದಿವೆ.
ನಾನ್ ಫೀಚರ್ ವಿಭಾಗದಲ್ಲಿ 3 ಪ್ರಶಸ್ತಿಗಳು
‘ಮಧ್ಯಂತರ’ ಚಿತ್ರಕ್ಕಾಗಿ ‘ಅತ್ಯುತ್ತಮ ಸಂಕಲನ’ ವಿಭಾಗದಲ್ಲಿ ಸಂಕಲನಕಾರ ಸುರೇಶ್ ಅರಸ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದೇ ಚಿತ್ರದ ನಿರ್ದೇಶನಕ್ಕಾಗಿ ಬಸ್ತಿ ದಿನೇಶ್ ಶೆಣೈ ಅವರಿಗೆ ‘ಬೆಸ್ಟ್ ಡೆಬ್ಯೂ ಫಿಲ್ಮ್ ಆಫ್ ಎ ಡೈರೆಕ್ಟರ್’ ಪ್ರಶಸ್ತಿ ಲಭಿಸಿದೆ. ಕನ್ನಡದ ‘ರಂಗ ವೈಭೋಗ’ ಚಿತ್ರಕ್ಕೆ ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಸಿನಿಮಾ ಪ್ರಶಸ್ತಿ ಲಭಿಸಿದೆ. ಈ ಚಿತ್ರವನ್ನ ಸುನೀಲ್ ಪುರಾಣಿಕ್ ನಿರ್ಮಿಸಿ, ನಿರ್ದೇಶಿಸಿದ್ದಾರೆ.
ಅಣ್ಣಾವ್ರಿಗೇಕೆ ಈ ಪ್ರಶಸ್ತಿ ಬರಲಿಲ್ಲ?
ರಿಷಬ್ ಶೆಟ್ಟರೂ ಸೇರಿದಂತೆ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಚೋಮನದುಡಿ ವಾಸುದೇವರಾವ್, ಚಾರು ಹಾಸನ್ (ತಮಿಳು ನಟರಾದರೂ ಅವರು ರಾಷ್ಟ್ರೀಯ ಪ್ರಶಸ್ತಿ ಪಡೆದದ್ದು ಗಿರೀಶ್ ಕಾಸರವಳ್ಳಿ ಅವರ ಕನ್ನಡ ಚಿತ್ರ ತಬರನಕಥೆ ಚಿತ್ರಕ್ಕೆ) ಸಂಚಾರಿ ವಿಜಯ್, ಈಗ ರಿಷಬ್.
90 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕನ್ನಡ ಬೆಳ್ಳಿ ಪರದೆ ಕಂಡದ್ದು ಈ ಮೂರು-ನಾಲ್ಕು ಉತ್ತಮ ಕಲಾವಿದರನ್ನು ಮಾತ್ರವೆ? ಅನ್ನುವ ಪ್ರಶ್ನೆ ಮೂಡುವುದು ಸಹಜ!
ಡಾ.ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು, ಇವರ್ಯಾರೂ ಉತ್ತಮ ಕಲಾವಿದರಲ್ಲವೆ? ಅವರಿಗ್ಯಾಕೆ ಈ ಪ್ರಶಸ್ತಿ ಬರಲಿಲ್ಲ!!! ಅನ್ನುವ ಪ್ರಶ್ನೆ ಹಲವರ ಮನದಲ್ಲಿ ಮೂಡುತ್ತಿದೆ.
ಬಹಳ ಕಾಲದವರೆಗೆ ಕಮರ್ಷಿಯಲ್ ಸಿನಿಮಾಗಳನ್ನು ರಾಷ್ಟ್ರೀಯ ಪ್ರಶಸ್ತಿಗಳಿಗೆ ಪರಿಗಣಿಸುತ್ತಲೇ ಇರಲಿಲ್ಲ ಹಾಗಾಗಿ ಈ ಮೇಲಿನ ಉತ್ತಮೋತ್ತಮ ಕಲಾವಿದರು ಈ ಪ್ರಶಸ್ತಿಯಿಂದ ವಂಚಿತರಾದರು. "ಕಸ್ತೂರಿ ನಿವಾಸ" ಚಿತ್ರದ ಅಭಿನಯಕ್ಕೆ ರಾಜಕುಮಾರ್ ಅವರಿಗೆ ರಾಷ್ಟ್ರ ಪ್ರಶಸ್ತಿ ಅಂತ ಆಲ್ ಇಂಡಿಯ ರೇಡಿಯೋನಲ್ಲಿ ರಾತ್ರಿ ಸುದ್ದಿ ಬರುತ್ತದೆ, ಬೆಳಿಗ್ಗೆ ಅವರ ಬದಲಾಗಿ ಎಂಜಿಆರ್ ಹೆಸರು ಅನೌನ್ಸಾಗುತ್ತದೆ!!!. "ಸನಾದಿ ಅಪ್ಪಣ್ಣ" ಚಿತ್ರದ ಅಭಿನಯಕ್ಕೆ ಅಣ್ಣಾವ್ರ ಹೆಸರು ಫೈನಲ್ ಹಂತದವರೆಗೂ ಬಂದು ಈ ಚಿತ್ರದಲ್ಲಿ ಹಾಡುಗಳಿವೆ ಹಾಗಾಗಿ ಇದು ಕಮರ್ಷಿಯಲ್ ಸಿನಿಮಾ ಅನಿಸಿಕೊಳ್ಳುತ್ತದೆ ಆದ್ದರಿಂದ ಇದನ್ನು ಪ್ರಶಸ್ತಿಗೆ ಪರಿಗಣಿಸಬಾರದು ಅಂತ ತೀರ್ಮಾನಿಸಲಾಯ್ತಂತೆ!!! ಆದ್ದರಿಂದ ಇದರ ಹಿಂದಿನ ಹುನ್ನಾರಗಳನ್ನ ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು.
ಮತ್ತೊಮ್ಮೆ ಎಲ್ಲರಿಗೂ ಅಭಿನಂದಿಸುತ್ತ, ಈ ಪ್ರಶಸ್ತಿಗಳು ಬಂದಿರುವುದೇ ಹೋಮ-ಹವನಗಳಿಂದ ಅಂದುಬಿಟ್ಟು ಅವರ ಶ್ರಮಕ್ಕೆ, ಅವರ ಪ್ರತಿಭೆಗೆ ಯಾರೂ ಅವಮಾನ ಮಾಡಬೇಡಿ ಅನ್ನುವ ಮನವಿಯೊಂದಿಗೆ...
ಪ್ರಕಾಶರಾಜ್ ಮೇಹು, ಸಾಹಿತಿ- ಚಲನಚಿತ್ರ ನಿರ್ದೇಶಕ
ವಿಭಾಗ