Dr Rajkumar Birthday: ಭಾಳ ಒಳ್ಳೆವ್ರು ಅಣ್ಣಾವ್ರು , ಡಾ. ರಾಜ್‌ಕುಮಾರ್‌ ಅವರನ್ನು ಅಣ್ಣಾವ್ರು ಎಂದೇಕೆ ಕರೆಯುತ್ತಾರೆ? ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಮನರಂಜನೆ  /  Dr Rajkumar Birthday: ಭಾಳ ಒಳ್ಳೆವ್ರು ಅಣ್ಣಾವ್ರು , ಡಾ. ರಾಜ್‌ಕುಮಾರ್‌ ಅವರನ್ನು ಅಣ್ಣಾವ್ರು ಎಂದೇಕೆ ಕರೆಯುತ್ತಾರೆ? ಇಲ್ಲಿದೆ ಉತ್ತರ

Dr Rajkumar Birthday: ಭಾಳ ಒಳ್ಳೆವ್ರು ಅಣ್ಣಾವ್ರು , ಡಾ. ರಾಜ್‌ಕುಮಾರ್‌ ಅವರನ್ನು ಅಣ್ಣಾವ್ರು ಎಂದೇಕೆ ಕರೆಯುತ್ತಾರೆ? ಇಲ್ಲಿದೆ ಉತ್ತರ

ಏಪ್ರಿಲ್‌ 24 ವರನಟ ದಿ. ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬ. ರಾಜ್‌ಕುಮಾರ್‌ ಅವರನ್ನು ಅಣ್ಣಾವ್ರು ಎಂದು ಕರೆಯುತ್ತಾರೆ. ಸ್ಯಾಂಡಲ್‌ವುಡ್‌ಗೆ, ಕರುನಾಡಿಗೆ ಅಣ್ಣ, ಹಿರಿಯ ಸಹೋದರನಂತೆ ಇದ್ದ ಡಾ. ರಾಜ್‌ಕುಮಾರ್‌ ಅವರ ಕೆಲವೊಂದು ಗುಣಗಳೂ ಈ ಹೆಸರು ಬರಲು ಪ್ರಮುಖ ಕಾರಣವೆನ್ನಬಹುದು.

ಡಾ. ರಾಜ್‌ಕುಮಾರ್‌ ಅವರನ್ನು ಅಣ್ಣಾವ್ರು ಎಂದೇಕೆ ಕರೆಯುತ್ತಾರೆ?
ಡಾ. ರಾಜ್‌ಕುಮಾರ್‌ ಅವರನ್ನು ಅಣ್ಣಾವ್ರು ಎಂದೇಕೆ ಕರೆಯುತ್ತಾರೆ?

ಬೆಂಗಳೂರು: ಇಂದು ದಿವಂಗತ ಡಾ. ರಾಜ್‌ಕುಮಾರ್‌ ಜನ್ಮದಿನ. ಏಪ್ರಿಲ್‌ 24, 1929ರಂದು ತಾಳವಾಡಿ ತಾಲೂಕಿನಲ್ಲಿ ದೊಡ್ಡಗಾಜನೂರಿನಲ್ಲಿ ಸಿಂಗನಲ್ಲೂರು ಪುಟ್ಟಸ್ವಾಮಿ ಮುತ್ತುರಾಜ್‌ ಜನಿಸಿದರು. ಮುತ್ತತಿಯ ದೇಗುಲದ ದೇವರಾದ ಮುತ್ತತಿ ರಾಯನ ಹೆಸರನ್ನು ಇವರಿಗೆ ಇಡಲಾಗಿತ್ತು. ಡಾ. ರಾಜ್‌ಕುಮಾರ್‌ ಅಭಿಮಾನಿಗಳ ಪ್ರಕಾರ ಇವರನ್ನು ಅಣ್ಣಾವ್ರು ಎಂದು ಕರೆಯಲು ಹಲವು ಕಾರಣಗಳಿವೆ. ಕ್ವೋರಾದಲ್ಲಿ ಗೌತಮ್‌ ಎಂಬ ಬಳಕೆದಾರರು ಡಾ. ರಾಜ್‌ಕುಮಾರ್‌ ಅವರನ್ನು ಅಣ್ಣಾವ್ರು ಎಂದು ಕರೆಯಲು ಕಾರಣವಾದ ಹಲವು ಅಂಶಗಳನ್ನು ಪಟ್ಟಿ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲೂ ಡಾ. ರಾಜ್‌ಕುಮಾರ್‌ಗೆ ಅಣ್ಣಾವ್ರು ಎಂಬ ಹೆಸರು ಬರಲು ಕಾರಣವಾದ ಹಲವು ಅಂಶಗಳನ್ನು ಚರ್ಚಿಸಲಾಗಿದೆ. ದಿ. ಡಾ. ರಾಜ್‌ಕುಮಾರ್‌ ಅವರಲ್ಲಿದ್ದ ಆದರ್ಶಪ್ರಾಯ ಗುಣಗಳೇ ಅವರನ್ನು ಕನ್ನಡಿಗರ ಹಿರಿಯ ಸಹೋದರನ ಸ್ಥಾನಕ್ಕೆ ತಂದುನಿಲ್ಲಿಸಿದೆ.

ರಾಜ್‌ಕುಮಾರ್‌ ಅವರನ್ನು ಅಣ್ಣಾವ್ರು ಎಂದೇಕೆ ಕರೆಯುತ್ತಾರೆ?

ಡಾ. ರಾಜ್‌ಕುಮಾರ್‌ ಉತ್ತಮ ಗಾಯಕ ಮತ್ತು ನಟ. ತಮ್ಮ ಸಿನಿಮಾಗಳಲ್ಲಿ ತಾವೇ ಹಾಡುತ್ತಿದ್ದರು. ಮದ್ಯಪಾನ, ಧೂಮಪಾನ ಮಾಡುವಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಪರದೆಯ ಮೇಲೆ ಮಾತ್ರವಲ್ಲದೆ ಪರದೆಯ ಹಿಂದೆಯೂ ಇವರು ಮದ್ಯಪಾನ ಮಾಡುತ್ತಿರಲಿಲ್ಲ.

ಸಿನಿಮಾ ಸಂಭಾಷಣೆಗಳಲ್ಲಿ ಕೆಟ್ಟ ಪದಗಳನ್ನು ಆಡುತ್ತಿರಲಿಲ್ಲ. ತಮ್ಮ ಸುಂದರವಾದ ಕನ್ನಡದಲ್ಲಿಯೇ ಎದುರಾಳಿಗಳಿಗೆ ಕಠೋರವಾಗಿ ಬುದ್ಧಿವಾದ ಹೇಳುತ್ತಿದ್ದರು. ತಮ್ಮದೇ ಶೈಲಿಯಲ್ಲಿ ಫೈಟಿಂಗ್‌ ಮಾಡುತ್ತಿದ್ದರು. ಯಾರ ಬಗ್ಗೆಯೂ ನಿಂದನೀಯ ಮತ್ತು ಅಸಭ್ಯ ಪದಗಳನ್ನು ಬಳಸಲಿಲ್ಲ. ಮಹಿಳೆಯರ ಬಗ್ಗೆ ಎಂದೂ ಕೆಟ್ಟ ಭಾಷೆ ಬಳಸಲಿಲ್ಲ. ತೆರೆಯ ಮೇಲೆ ಆದರ್ಶಪ್ರಾಯ ವ್ಯಕ್ತಿತ್ವವನ್ನು ಹೊಂದಿದ್ದರು. ನಿಜಜೀವನದಲ್ಲೂ ಇಂತಹದ್ದೇ ವ್ಯಕ್ತಿತ್ವದಿಂದ ಎಲ್ಲರಿಗೂ ಹಿರಿಯ ಸಹೋದರನಾದರು.

ಈಗಿನ ತಲೆಮಾರು ತಪ್ಪದೇ ಡಾ. ರಾಜ್‌ಕುಮಾರ್‌ ಅವರ ಸಿನಿಮಾಗಳನ್ನು ನೋಡಬೇಕು. ಅವರ ಮಾತಿನ ಶೈಲಿ, ಕನ್ನಡದ ಮೇಲಿನ ಪ್ರೀತಿ ಅಭಿಮಾನ, ಬದುಕಿನ ಪಾಠಗಳನ್ನು ಹೇಳುವ ರೀತಿ ಆಪ್ತವಾಗಿದೆ. ಕನ್ನಡದ ಸರಿಯಾದ ಉಚ್ಚಾರಣೆಯನ್ನು ತಿಳಿಯಬಯಸುವವರು ಡಾ. ರಾಜ್‌ಕುಮಾರ್‌ ಸಿನಿಮಾಗಳನ್ನು ನೋಡಬೇಕು. ಕನ್ನಡ ಮತ್ತು ಕನ್ನಡಿಗರ ಅನಭಿಷಿಕ್ತ ರಾಯಭಾರಿಯಾಗಿದ್ದಾರೆ.

ರಾಜ್‌ಕುಮಾರ್‌ ಅವರನ್ನು ಅಣ್ಣಾವ್ರು ಎಂದು ಕರೆಯಲು ಕಾರಣವಾಗುವ ಇನ್ನೊಂದು ಅಂಶ ಅವರ ಸರಳತೆ. ಅಷ್ಟೊಂದು ಹಿಟ್‌ ಸಿನಿಮಾಗಳನ್ನು ನೀಡಿದರೂ ಡಾ. ರಾಜ್‌ಕುಮಾರ್‌ ಸರಳತೆಯ ಮೂರ್ತಿ. ಹಮ್ಮುಬಿಮ್ಮು ಅವರಿಂದ ಮಾರುದ್ದದೂರ. ಸದಾ ಬಿಳಿ ಅಂಗಿ ಮತ್ತು ಬಿಳಿ ಪಂಚೆ ಧರಿಸುತ್ತಿದ್ದರು. ತನ್ನ ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು. "ಅಭಿಮಾನಿ ದೇವರುಗಳೇ" ಎಂದು ಅವರ ಧ್ವನಿಯನ್ನು ಕೇಳುವುದು ಖುಷಿಯ ವಿಚಾರ. ಈ ರೀತಿ ಅಭಿಮಾನಿಗಳನ್ನು ದೇವರು ಎಂದು ಕರೆದ ಏಕೈಕ ನಟ ಅವರೆಂದು ಡಾ. ರಾಜ್‌ಕುಮಾರ್‌ ಅಭಿಮಾನಿ ಗೌತಮ್‌ ಆರ್‌. ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ನಾಡಿನ ದೊಡ್ಡ ಸ್ಟಾರ್‌ ಆಗಿದ್ದರೂ ಯಾವುದೇ ಜಾಹೀರಾತುಗಳಲ್ಲಿ ನಟಿಸಿ ದುಡ್ಡು ಮಾಡಲಿಲ್ಲ. ನಂದಿನಿ ಹಾಲಿನ ಜಾಹೀರಾತಿನಲ್ಲಿ ಉಚಿತವಾಗಿ ನಟಿಸಿದ್ದಾರೆ. ಮರಣದ ಬಳಿಕವೂ ನೇತ್ರದಾನ ಮಾಡಿದರು. ರಾಜಕೀಯಕ್ಕೆ ಪ್ರವೇಶಿಸಲಿಲ್ಲ. ಮಕ್ಕಳಲ್ಲಿಯೂ ರಾಜಕೀಯ ಪ್ರವೇಶಿಸಿದಂತೆ ಮನವಿ ಮಾಡಿಕೊಂಡಿದ್ದರು. ಹೀಗೆ, ಇಂತಹ ನೂರಾರು ಗುಣಗಳಿಂದ, ಆದರ್ಶವಾದ ಜೀವನದಿಂದ ಎಲ್ಲರಿಗೂ ದಿವಂಗತ ಡಾ. ರಾಜ್‌ಕುಮಾರ್‌ ಅಣ್ಣಾವ್ರು ಆಗಿದ್ದಾರೆ.

Whats_app_banner