ತಮಗಾಗಿ ಬರೆದ ಕಸ್ತೂರಿ ನಿವಾಸ ಕಥೆಯನ್ನು ಶಿವಾಜಿ ಗಣೇಶನ್‌ ತಿರಸ್ಕರಿಸಿದ್ದೇಕೆ; ಶೂಟಿಂಗ್‌ ನಿಲ್ಲಿಸಲು ಕೆಸಿಎನ್‌ ಗೌಡ್ರು ಹೇಳಲು ಕಾರಣವೇನು?
ಕನ್ನಡ ಸುದ್ದಿ  /  ಮನರಂಜನೆ  /  ತಮಗಾಗಿ ಬರೆದ ಕಸ್ತೂರಿ ನಿವಾಸ ಕಥೆಯನ್ನು ಶಿವಾಜಿ ಗಣೇಶನ್‌ ತಿರಸ್ಕರಿಸಿದ್ದೇಕೆ; ಶೂಟಿಂಗ್‌ ನಿಲ್ಲಿಸಲು ಕೆಸಿಎನ್‌ ಗೌಡ್ರು ಹೇಳಲು ಕಾರಣವೇನು?

ತಮಗಾಗಿ ಬರೆದ ಕಸ್ತೂರಿ ನಿವಾಸ ಕಥೆಯನ್ನು ಶಿವಾಜಿ ಗಣೇಶನ್‌ ತಿರಸ್ಕರಿಸಿದ್ದೇಕೆ; ಶೂಟಿಂಗ್‌ ನಿಲ್ಲಿಸಲು ಕೆಸಿಎನ್‌ ಗೌಡ್ರು ಹೇಳಲು ಕಾರಣವೇನು?

ಸಿನಿಮಾ ಅರ್ಧ ಭಾಗ ಚಿತ್ರೀಕರಣ ಮಾಡಿದ ನಂತರ ಒಮ್ಮೆ ಗೌಡರು ದೊರೈ ಭಗವಾನ್‌ ಬಳಿ ಬಂದು ಶೂಟಿಂಗ್‌ ನಿಲ್ಲಿಸುವಂತೆ ಹೇಳಿದ್ದಾರೆ. ಇದ್ದಕ್ಕಿದ್ದಂತೆ ಶೂಟಿಂಗ್‌ ನಿಲ್ಲಿಸಲು ಹೇಳಿದ್ದು ದೊರೈ ಭಗವಾನ್‌ಗೆ ಶಾಕ್‌ ಆಗಿದೆ.

 'ಕಸ್ತೂರಿ ನಿವಾಸ' ಕಥೆಯನ್ನು ರಿಜೆಕ್ಟ್‌ ಮಾಡಿದ್ದ ತಮಿಳು ನಟ ಶಿವಾಜಿ ಗಣೇಶನ್‌
'ಕಸ್ತೂರಿ ನಿವಾಸ' ಕಥೆಯನ್ನು ರಿಜೆಕ್ಟ್‌ ಮಾಡಿದ್ದ ತಮಿಳು ನಟ ಶಿವಾಜಿ ಗಣೇಶನ್‌ (PC: Classic Movies, Facebook)

ಡಾ. ರಾಜ್‌ಕುಮಾರ್‌ ಅಭಿನಯದ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ 'ಕಸ್ತೂರಿ ನಿವಾಸ' ಕೂಡಾ ಒಂದು. ಚಿತ್ರದ ಕಥೆ, ಸಂಭಾಷಣೆ, ಹಾಡುಗಳು ಎಲ್ಲವೂ ಕನ್ನಡ ಸಿನಿಪ್ರಿಯರ ಮನಸ್ಸು ಗೆದ್ದಿತ್ತು. ಈ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್‌ ಅವರ ಭುಜದ ಮೇಲೆ ಬಿಳಿ ಪಾರಿವಾಳ ಕೂರುವ ದೃಶ್ಯವನ್ನು ಹಾಗೂ ಹಾಡಿನ ಸಾಲುಗಳನ್ನು ಪುನೀತ್‌ ರಾಜ್‌ಕುಮಾರ್‌ ಅಭಿನಯದ 'ರಾಜಕುಮಾರ' ಚಿತ್ರದಲ್ಲಿ ಕೂಡಾ ಬಳಸಿಕೊಳ್ಳಲಾಗಿತ್ತು. ಆದ್ದರಿಂದ ಈ ಎರಡೂ ಸಿನಿಮಾಗಳು ಸಿನಿಮಾಭಿಮಾನಿಗಳಿಗೆ ಬಹಳ ವಿಶೇಷ ಎಂದೇ ಹೇಳಬಹುದು.

ತಮಗಾಗಿ ಬರೆದ ಕಥೆಯನ್ನು ರಿಜೆಕ್ಟ್‌ ಮಾಡಿದ್ದ ಶಿವಾಜಿ ಗಣೇಶನ್‌

ಅಸಲಿಗೆ 'ಕಸ್ತೂರಿ ನಿವಾಸ' ಕಥೆ ಬರೆದಿದ್ದು ತಮಿಳು ಖ್ಯಾತ ನಟ ಶಿವಾಜಿ ಗಣೇಶನ್‌ ಅವರಿಗಾಗಿ. ಜಿ ಬಾಲಸುಬ್ರಮಣ್ಯಂ ಕಥೆಯನ್ನು ಶಿವಾಜಿ ಗಣೇಶನ್‌ ಬಳಿ ಹೇಳಿದಾಗ ಅವರು ಇಂಪ್ರೆಸ್‌ ಆದರೂ, ಸಿನಿಮಾದಲ್ಲಿ ನಟಿಸಲು ಒಪ್ಪಲಿಲ್ಲ. ತಮಿಳು ಸಿನಿಮಾಭಿಮಾನಿಗಳು ನಾಯಕ ಸಾಯುವುದನ್ನು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕೆ ಶಿವಾಜಿ ಗಣೇಶನ್‌ ಈ ಸಿನಿಮಾವನ್ನು ರಿಜೆಕ್ಟ್‌ ಮಾಡಿದರು. ಈ ಕಥೆ ಕೇಳಿದ ನೂರ್‌ ಸಾಹೇಬ್‌ ಎಂಬ ನಿರ್ಮಾಪಕರು, 25 ಸಾವಿರ ನೀಡಿ ಜಿ ಬಾಲಸುಬ್ರಮಣ್ಯಂ ಬಳಿ ಕಥೆಯನ್ನು ಖರೀದಿಸಿದರು. ನಂತರ ಅದನ್ನು ಕನ್ನಡ ನಿರ್ದೇಶಕರಾದ ದೊರೈ ಭಗವಾನ್‌ ಅವರಿಗೆ 38 ಸಾವಿರಕ್ಕೆ ಮಾರಿದರು.

ನಿರ್ಮಾಪಕ ಕೆಸಿಎನ್‌ ಗೌಡರು ಈ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದೆ ಬಂದರು. ಸಿನಿಮಾ ಅರ್ಧ ಭಾಗ ಚಿತ್ರೀಕರಣ ಮಾಡಿದ ನಂತರ ಒಮ್ಮೆ ಗೌಡರು ದೊರೈ ಭಗವಾನ್‌ ಬಳಿ ಬಂದು ಶೂಟಿಂಗ್‌ ನಿಲ್ಲಿಸುವಂತೆ ಹೇಳಿದ್ದಾರೆ. ಇದ್ದಕ್ಕಿದ್ದಂತೆ ಶೂಟಿಂಗ್‌ ನಿಲ್ಲಿಸಲು ಹೇಳಿದ್ದು ದೊರೈ ಭಗವಾನ್‌ಗೆ ಶಾಕ್‌ ಆಗಿದೆ. ಆದರೆ ಈ ಚಿತ್ರವನ್ನು ಕಲರ್‌ನಲ್ಲಿ ತೆಗೆಯಬೇಕು ಅನ್ನೋದು ಕೆಸಿಎನ್‌ ಗೌಡರ ಆಸೆ ಆಗಿತ್ತು. ಆದ್ದರಿಂದ ಈಗ ತೆಗೆದಿರುವುದನ್ನು ಬಿಟ್ಟು ಸಿನಿಮಾವನ್ನು ಮೊದಲಿನಿಂದ ಮತ್ತೆ ಕಲರ್‌ನಲ್ಲಿ ತೆಗೆಯಿರಿ, ಖರ್ಚಿನ ಬಗ್ಗೆ ನಿಮಗೆ ಚಿಂತೆ ಬೇಡ ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ನಮಗೂ ನಿಮಗೂ ವಾದ ಬೇಡ, ಒಮ್ಮೆ ರಾಜ್‌ಕುಮಾರ್‌ ಅವರನ್ನು ಕೇಳೋಣ ಎಂದು ಎಲ್ಲರೂ ಅಣ್ಣಾವ್ರ ಬಳಿ ಅಭಿಪ್ರಾಯ ಕೇಳಿದ್ದಾರೆ.

ರೀ ಶೂಟ್‌ ಮಾಡಲು ಒಪ್ಪದ ಡಾ ರಾಜ್‌ಕುಮಾರ್‌

ಲಕ್ಷಾಂತರ ಹಣ ಖರ್ಚು ಮಾಡಿ, ಅದನ್ನು ಮತ್ತೆ ಮೊದಲಿನಿಂದ ತೆಗೆದು ಹಣ ವ್ಯಯಿಸುವುದು ನನಗೆ ಸರಿ ಎನಿಸುತ್ತಿಲ್ಲ. ಇದು ಶಿವಾಜಿ ಗಣೇಶನ್‌ ಅವರು ರಿಜೆಕ್ಟ್‌ ಮಾಡಿದ ಸಿನಿಮಾ. ನಮ್ಮ ಕನ್ನಡ ಸಿನಿಪ್ರಿಯರು ಹೇಗೆ ಸ್ವೀಕರಿಸುತ್ತಾರೋ ಏನೋ. ಜನರು ಕಪ್ಪು ಬಿಳುಪಾ, ಕಲರ್‌ ಸಿನಿಮಾನಾ ಅಂತ ನೋಡೋದಿಲ್ಲ, ಅವರು ನೋಡುವುದು ಕಥೆಯನ್ನು. ಸಿನಿಮಾ ರೀ ಶೂಟ್‌ ಮಾಡೋದು ಬೇಡ, ಹಣ ಎಲ್ಲರ ಶ್ರಮ ಎರಡೂ ವ್ಯರ್ಥ ಆಗೋದು ನನಗೂ ಇಷ್ಟವಿಲ್ಲ ಎಂದು ಅಣ್ಣಾವ್ರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ರೀ ಶೂಟ್‌ ಮಾಡುವ ಕನಸು ಕಂಡಿದ್ದ ಗೌಡರು ಬೇಸರವಾದರೂ ಅಣ್ಣಾವ್ರು ಹಾಗೂ ದೊರೈ ಭಗವಾನ್‌ ಮಾತಿಗೆ ಒಪ್ಪಿ ಸುಮ್ಮನಾಗಿದ್ದಾರೆ.

29 ಜನವರಿ 1971 ರಂದು ಸಿನಿಮಾ ತೆರೆ ಕಂಡಾಗ ಆರಂಭದಲ್ಲಿ ಜನರಿಂದ ಹೇಳಿಕೊಳ್ಳುವಂತ ಪ್ರತಿಕ್ರಿಯೆ ದೊರೆಯಲಿಲ್ಲ. ಆದರೆ ಮುಂದಾಗಿದ್ದೇ ಬೇರೆ. ಸಿನಿಮಾ ಮೌತ್‌ ಟಾಕ್‌ನಿಂದಲೇ ಹಿಟ್‌ ಆಯ್ತು. ಆ ಸಮಯದಲ್ಲೇ ಕೆಸಿಎನ್‌ ಗೌಡರು ಸಿನಿಮಾಗೆ 3.5 ಲಕ್ಷ ಖರ್ಚು ಮಾಡಿದ್ದರು. ಸಿನಿಮಾ ಹಿಟ್‌ ಆಗಿ ನಿರ್ಮಾಪಕರಿಗೆ ಲಾಭ ಕೂಡಾ ತಂದುಕೊಡ್ತು. ಜಿಕೆ ವೆಂಕಟೇಶ್‌ ಅವರ ಸಂಗೀತ ಮೋಡಿ ಮಾಡಿತ್ತು. ಜಯಂತಿ, ಆರತಿ, ರಾಜಾ ಶಂಕರ್‌, ನರಸಿಂಹರಾಜು, ಬಾಲಕೃಷ್ಣ, ಕೆಎಸ್‌ ಅಶ್ವತ್ಥ್‌, ವಿಜಯಶ್ರೀ ಸೇರಿದಂತೆ ಎಲ್ಲರ ನಟನೆಯನ್ನು ಜನರು ಮೆಚ್ಚಿದರು.

ಮತ್ತೆ ತಮಿಳಿನಲ್ಲಿ ತಯಾರಾದ ಸಿನಿಮಾ

ರವಿವರ್ಮನ ಪಾತ್ರ ಎಲ್ಲರಿಗೂ ಇಷ್ಟವಾಗಿತ್ತು. ಆಶ್ಚರ್ಯ ಎಂದರೆ ಶಿವಾಜಿ ಗಣೇಶನ್‌ ಬೇಡ ಎಂದಿದ್ದ ಸಿನಿಮಾ ಮತ್ತೆ ತಮಿಳಿನಲ್ಲಿ ಸೆಟ್ಟೇರಿತು. 25 ಸಾವಿರಕ್ಕೆ ಮಾರಾಟವಾಗಿದ್ದ ಕಥೆ ಮತ್ತೆ ತಮಿಳಿಗೆ 2 ಲಕ್ಷಕ್ಕೆ ಮಾರಾಟವಾಯ್ತು. 'ಅವಂದಾನ್‌ ಮನಿದಾನ್‌' ಸಿನಿಮಾ ತಮಿಳಿನಲ್ಲಿ ತಯಾರಾಗಿ 1975ರಲ್ಲಿ ತೆರೆ ಕಂಡಿತು. ಇದು ಶಿವಾಜಿ ಗಣೇಶನ್‌ ಅವರ 100ನೇ ಸಿನಿಮಾ ಅನ್ನೋದು ವಿಶೇಷ. ತಮಿಳರಿಗೆ ಸಿನಿಮಾ ಇಷ್ಟವಾದರೂ ಕನ್ನಡದಲ್ಲಿ ದೊರೆತ ಯಶಸ್ಸು ದೊರೆಲಿಲ್ಲ.

ಹಾಗೇ ಆ ಕಾಲದಲ್ಲೇ ಸಿನಿಮಾವನ್ನು ಕಲರ್‌ನಲ್ಲಿ ತೆಗೆಯಬೇಕೆಂಬ ಕೆಸಿಎನ್‌ ಗೌಡರ ಆಸೆಯನ್ನು ನಂತರ ಅವರ ಕಿರಿಯ ಪುತ್ರ ಕೆಸಿಎನ್‌ ಮೋಹನ್‌ ನನಸು ಮಾಡಿದರು. ಅದಕ್ಕಾಗಿ ಸುಮಾರು 2 ಕೋಟಿ ರೂಪಾಯಿ ಖರ್ಚು ಮಾಡಿದ್ದರು. 50 ವರ್ಷಗಳ ಹಿಂದೆ ಕಪ್ಪು ಬಿಳುಪಿನಲ್ಲಿ ರಿಲೀಸ್‌ ಆದ ಸಿನಿಮಾ ಮತ್ತೆ ಕಲರ್‌ನಲ್ಲಿ ರೀ ರಿಲೀಸ್‌ ಆದಾಗ ಕೂಡಾ 100 ದಿನಗಳು ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಸಿನಿಮಾ ಕಥೆ ಇಂದಿಗೂ ಸಿನಿಪ್ರಿಯರ ಕಣ್ಣಿಗೆ ಕಟ್ಟಿದಂತೆ ಇದೆ. ಚಿತ್ರದ ಹಾಡುಗಳು ಕೂಡಾ ಇಂದಿಗೂ ಸಂಗೀತಪ್ರಿಯರ ಕಿವಿಯಲ್ಲಿ ಗುನುಗುಟ್ಟುತ್ತಿದೆ.

Whats_app_banner