ಡಾಲಿ ಧನಂಜಯ್‌ಗೆ ‘ಕೋಟಿ’ ಸಂಭಾವನೆ ಇದ್ರೂ ಬೆಂಗ್ಳೂರಲ್ಲಿಲ್ಲ ಸ್ವಂತ ಸೂರು; ಕಾರಣ ಕೇಳಿದ್ರೆ ನೀವೇ ಭೇಷ್ ಅಂತೀರಾ
ನಟ ಡಾಲಿ ಧನಂಜಯ್ ಕೈಯಲ್ಲಿ ಕಾಸು ಓಡಾಡಿದರೂ, ಈ ನಟನ ಬಳಿ ಬೆಂಗಳೂರಲ್ಲಿ ಸ್ವಂತ ಮನೆಯಿಲ್ಲ ಎಂಬುದು ಎಷ್ಟೋ ಮಂದಿಗೆ ತಿಳಿಯದ ವಿಷಯ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದರೂ, ಕೋಟಿ ಕೋಟಿ ಸಂಭಾವನೆ ಪಡೆದರೂ, ಬೆಂಗಳೂರಿನಲ್ಲಿ ತಮ್ಮದೇ ಆದ ಸೂರು ನಿರ್ಮಿಸಿಕೊಂಡಿಲ್ಲ ಧನಂಜಯ್! ಅಷ್ಟಕ್ಕೂ ಕಾರಣ ಏನಿರಬಹುದು?

Daali Dhananjay: ಗಾಡ್‌ಫಾದರ್ ನೆರಳಿಲ್ಲದೆ, ಚಿತ್ರರಂಗದ ನಂಟಿಲ್ಲದೆ ಸಿನಿಮಾರಂಗದಲ್ಲಿ ಬೆಳೆದು ನಿಲ್ಲುವುದು ಸಣ್ಣ ಕೆಲಸವಲ್ಲ. ಅದು ಮಹತ್ತರ ಸಾಧನೆಯೇ ಸರಿ. ಇಂದಿಗೂ ಭಾರತದ ಪ್ರತಿ ಚಿತ್ರರಂಗದಲ್ಲೂ, ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಸೂಪರ್‌ಸ್ಟಾರ್‌ಗಳಾದ ಎಷ್ಟೋ ಕಲಾವಿದರಿದ್ದಾರೆ. ಕನ್ನಡದಲ್ಲೂ ಸಾಕಷ್ಟು ಮಂದಿ ಹೆಮ್ಮರವಾಗಿದ್ದಾರೆ. ಅವರಷ್ಟೇ ಅಲ್ಲ, ತಮ್ಮ ಜತೆಗೆ ಇತರರನ್ನೂ ಪ್ರೋತ್ಸಾಹಿಸುವ ಕೆಲಸ ಅವರಿಂದ ಆಗುತ್ತಿದೆ. ಆ ಪೈಕಿ ನಟ ಡಾಲಿ ಧನಂಜಯ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಡೈರೆಕ್ಟರ್ ಸ್ಪೇಷಲ್ ಚಿತ್ರದಿಂದ ನಾಯಕನಾಗಿ ಚಂದನವನಕ್ಕೆ ಬಂದ ಧನಂಜಯ್, ಅದಾದ ಬಳಿಕ ಜಯನಗರ 4th ಬ್ಲಾಕ್ ಕಿರು ಸಿನಿಮಾದಲ್ಲೂ ನಟಿಸಿ ಗಮನ ಸೆಳೆದರು. ಒಂದಾದ ಮೇಲೊಂದು ಸಿನಿಮಾ ಮಾಡಿದರೂ, ಯಶಸ್ಸು ಬೆನ್ನಿಗಂಟಲಿಲ್ಲ. ಬಿದ್ದಲ್ಲೇ ಮೇಲೆ ಏಳಬೇಕು ಎಂದು ಶಪಥ ಮಾಡಿ, ಟಗರು ಸಿನಿಮಾ ಮೂಲಕ ನಿರ್ದೇಶಕ ದುನಿಯಾ ಸೂರಿ, ಧನಂಜಯ್‌ಗೆ ದೊಡ್ಡ ಬ್ರೇಕ್ ನೀಡಿದರು. ಅದಾದ ಬಳಿಕ ಮತ್ತೆ ಹಿಂದೆ ತಿರುಗಿ ನೋಡದ ಅವರು, ಸದ್ಯ ಚಂದನವನದ ಬಹು ಬೇಡಿಕೆಯ ನಟರಲ್ಲೊಬ್ಬರು. ಕೈಯಲ್ಲಿ ಸಾಲು ಸಾಲು ಸಿನಿಮಾಗಳನ್ನು ಹಿಡಿದಿರುವ ನಟ ಧನಂಜಯ್, ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿ ಚಿತ್ರ ನಿರ್ಮಾಣ ಆರಂಭಿಸಿದ್ದಾರೆ.
ನಟನೆ ಜತೆಗೆ ನಿರ್ಮಾಣದಲ್ಲೂ ಮುಂದು
ಡಾಲಿ ಪಿಕ್ಚರ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿ, ಮೊದಲ ಚಿತ್ರವಾಗಿ ಬಡವ ರಾಸ್ಕಲ್ ಮೂಡಿಬಂದಿತ್ತು. ಆ ಯಶಸ್ಸಿನ ಬಳಿಕ ಸಾಲು ಸಾಲು ಚಿತ್ರಗಳ ನಿರ್ಮಾಣದಲ್ಲಿ ಬಿಜಿಯಾಗಿದ್ದಾರವರು. ಅವಕಾಶದ ಹಪಹಪಿಯಲ್ಲಿದ್ದ ಹೊಸಬರನ್ನು ಚಿತ್ರೋದ್ಯಮಕ್ಕೆ ಕರೆತರುತ್ತಿದ್ದಾರೆ ಧನಂಜಯ್. ಹೆಡ್ ಬುಷ್, ಟಗರು ಪಲ್ಯ ಚಿತ್ರಗಳನ್ನು ನಿರ್ಮಿಸಿರುವ ಡಾಲಿ, ಸದ್ಯ ಜೆಸಿ ಮತ್ತು ವಿದ್ಯಾಪತಿ ಸಿನಿಮಾ ನಿರ್ಮಾಣದಲ್ಲೂ ಬಿಜಿಯಾಗಿದ್ದಾರೆ. ಇದೆಲ್ಲದರ ಜತೆಗೆ ಬಹುನಿರೀಕ್ಷಿತ ಉತ್ತರಕಾಂಡ ಮತ್ತು ಅಣ್ಣಾ ಫ್ರಂ ಮೆಕ್ಸಿಕೋ ಚಿತ್ರದ ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದಾರೆ ಧನಂಜಯ್. ಪರಮೇಶ್ವರ್ ಗುಂಡ್ಕಲ್ ನಿರ್ದೇಶನದ ಕೋಟಿ ಹೆಸರಿನ ಚಿತ್ರವೂ ಇನ್ನೇನು ಮುಂದಿನ ತಿಂಗಳು ಬಿಡುಗಡೆ ಆಗಲಿದೆ.
ಬಾಡಿಗೆ ಮನೆಯಲ್ಲಿಯೇ ವಾಸ
ಹೀಗೆ ಒಂದಾದ ಮೇಲೊಂದು ಸಿನಿಮಾ ಶೂಟಿಂಗ್ ಮತ್ತು ನಿರ್ಮಾಣದಲ್ಲಿ ಬಿಜಿಯಾಗಿರುವ ಧನಂಜಯ್, ಸಂಭಾವನೆ ವಿಚಾರದಲ್ಲೂ ಕೋಟಿ ವೀರ! ಇತ್ತೀಚಿನ ದಿನಗಳಲ್ಲಿ ಧನಂಜಯ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೇ ಫಸಲನ್ನೇ ತೆಗೆಯುತ್ತಿವೆ. ಕೈಯಲ್ಲಿ ಕಾಸು ಓಡಾಡಿದರೂ, ಈ ನಟನ ಬಳಿ ಬೆಂಗಳೂರಲ್ಲಿ ಸ್ವಂತ ಮನೆಯಿಲ್ಲ ಎಂಬುದು ಎಷ್ಟೋ ಮಂದಿಗೆ ತಿಳಿಯದ ವಿಷಯ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದರೂ, ಕೋಟಿ ಕೋಟಿ ಸಂಭಾವನೆ ಪಡೆದರೂ, ಬೆಂಗಳೂರಿನಲ್ಲಿ ತಮ್ಮದೇ ಆದ ಸೂರು ನಿರ್ಮಿಸಿಕೊಂಡಿಲ್ಲ ಧನಂಜಯ್! ಇಂದಿಗೂ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ.
ಭೂಮಿನೇ ಬಾಡಿಗೆ ಮನೆ!
ಸ್ವಂತ ಸೂರಿನ ಬಗ್ಗೆ ನಟ ಧನಂಜಯ್ ಅವರದೇ ಆದ ವ್ಯಾಖ್ಯಾನ ನೀಡುತ್ತಾರೆ. ಈ ಭೂಮಿನೇ ಬಾಡಿಗೆ ಮನೆ, ಯಾವಾಗ ಏನಾಗಲಿದೆಯೋ ಗೊತ್ತಿಲ್ಲ. ಅದೇ ದುಡ್ಡಲ್ಲಿ ಸಿನಿಮಾ ಮಾಡಿದರೆ, ಒಂದಷ್ಟು ಜನರಿಗೆ ಕೆಲಸವಾದರೂ ಸಿಗುತ್ತೆ. ಅವರಿಗೂ ಜೀವನ ಆಗುತ್ತೆ ಎಂದು ದುಡಿದ ದುಡ್ಡನ್ನೇ ಚಿತ್ರೋದ್ಯಮದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಮೂಲಕ ಸದ್ಯಕ್ಕೆ ಮನೆ ಕೊಳ್ಳುವ ಯಾವ ಇರಾದೆಯೂ ತಮಗಿಲ್ಲ ಎಂದಿದ್ದಾರೆ. ಪಕ್ಕಾ ಮಿಡಲ್ ಕ್ಲಾಸ್‌ನಿಂದ ಬಂದ ಧನಂಜಯ್, ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದು, ಕೇವಲ 23 ಸಾವಿರಕ್ಕೆ ಇನ್‌ಫೋಸಿಸ್‌ನಲ್ಲಿ ಕೆಲಸ ಆರಂಭಿಸಿದ್ದರು. ಬಣ್ಣದ ಲೋಕದ ಸೆಳೆತವೇ ಅವರಿಗೆ ಇದ್ದಿದ್ದರಿಂದ ಆ ಕೆಲಸ ಬಿಟ್ಟು, ಈಗ ಕನ್ನಡದ ಬಹುಬೇಡಿಕೆಯ ನಟರಲ್ಲೊಬ್ಬರಾಗಿದ್ದಾರೆ.
