ಅಂಬಾನಿ ಮದುವೆಯಲ್ಲಿ ಯಶ್ ಮತ್ತು ಅಟ್ಲಿ ಏನೆಲ್ಲ ಮಾತನಾಡಿರಬಹುದು? ಅಭಿಮಾನಿಗಳ ಗೆಸ್ ಹೀಗಿದೆ ನೋಡಿ
ಅನಂತ್ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಕನ್ನಡದ ಕೆಜಿಎಫ್ ನಟ ಯಶ್ ಮತ್ತು ಜವಾನ್ ನಿರ್ದೇಶಕ ಅಟ್ಲಿ ಜತೆಯಾಗಿ ಕುಳಿತ ವಿಡಿಯೋ ಕೆಲವು ದಿನಗಳ ಹಿಂದೆಯೇ ವೈರಲ್ ಆಗಿತ್ತು. ಇವರಿಬ್ಬರು ಮುಂದಿನ ದಿನಗಳಲ್ಲಿ ಜತೆಗೆ ಕೆಲಸ ಮಾಡುವ ಕುರಿತು ಮಾತನಾಡಿರಬಹುದೇ ಎಂದು ಅಭಿಮಾನಿಗಳು ಚಿಂತಿಸುತ್ತಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮದಲ್ಲಿ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಸಾಕಷ್ಟು ಸೆಲೆಬ್ರಿಟಿಗಳು ಇತರೆ ಸೆಲೆಬ್ರಿಟಿಗಳ ಜತೆ ಕುಳಿತು, ನಿಂತು ಉಭಯ ಕುಶಲೋಪರಿ ಮಾತನಾಡಿದರು. ಈ ಮದುವೆ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಅಟ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿತ್ತು. ಜವಾನ್ ನಿರ್ದೇಶಕರ ಜತೆ ಯಶ್ ಏನಾದರೂ ಸಿನಿಮಾ ಮಾಡಲಿದ್ದಾರೆಯೇ? ಯಶ್‌ನ ಮುಂದಿನ ಸಿನಿಮಾಕ್ಕೆ ಅಟ್ಲಿ ಆಕ್ಷನ್ ಕಟ್ ಹೇಳುತ್ತಾರೆಯೇ? ಇತ್ಯಾದಿ ಊಹಾಪೋಹಗಳು ಎದ್ದಿವೆ. ಇವರಿಬ್ಬರು ಜತೆಯಾಗಿ ಸಿನಿಮಾ ಮಾಡುವ ಸಾಧ್ಯತೆಯ ಕುರಿತು ನೆಟ್ಟಿಗರು ಬಿಸಿಬಿಸಿ ಚರ್ಚೆ ಮಾಡುತ್ತಿದ್ದಾರೆ.
ಎಕ್ಸ್‌ನಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ ಯಶ್ ಮತ್ತು ಅಟ್ಲಿ ಟೇಬಲ್ ಮುಂದೆ ಕುಳಿತು ಮಾತನಾಡುವ ದೃಶ್ಯವಿದೆ. ಯಶ್ ಪತ್ನಿ ರಾಧಿಕಾ ಪಂಡಿತ್ ಮತ್ತು ಅಟ್ಲಿ ಪತ್ನಿ ಕೃಷ್ಣ ಪ್ರಿಯ ಕೂಡ ಅಲ್ಲಿದ್ದರು. ಜುಲೈ 13ರಂದು ನಡೆದ ಶುಭ ಆಶೀರ್ವಾದ ಕಾರ್ಯಕ್ರಮದಲ್ಲಿ ಇವರು ಜತೆಯಾಗಿ ಕುಳಿತು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಯಶ್ ಅವರ ಹೊಸ ಗಡ್ಡದ ಶೈಲಿಯೂ ಎಲ್ಲರನ್ನೂ ಸೆಳೆದಿತ್ತು.
ಮುಂಬರುವ ಸಿನಿಮಾ ಟಾಕ್ಸಿಕ್‌ನಲ್ಲಿ ಯಶ್ ಹೇಗಿರಲಿದೆ ಎಂಬ ಸೂಚನೆಯೂ ಅಭಿಮಾನಿಗಳಿಗೆ ಈ ಸಂದರ್ಭದಲ್ಲಿ ದೊರಕಿತ್ತು. ಇದೇ ಸಮಯದಲ್ಲಿ ಅಟ್ಲಿ ಜತೆ ಮುಂದಿನ ಸಿನಿಮಾದ ಕುರಿತು ಚರ್ಚಿಸುತ್ತಿರಬಹುದೇ ಎಂಬ ಕುತೂಹಲವೂ ಮೂಡಿತ್ತು. "ಮದುವೆ ಕಾರ್ಯಕ್ರಮದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಭಾಗವಹಿಸಿದ್ದಾರೆ. ಯಶ್ ಮತ್ತು ಅಟ್ಲಿ ಏನು ಮಾತನಾಡುತ್ತಿದ್ದಾರೆ" ಎಂದು ಒಬ್ಬರು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ. "ಇವರಿಬ್ಬರು ಜತೆಯಾಗಿ ಮಾಡುವ ಸಿನಿಮಾ ಹೇಗಿರಬಹುದು ಎಂದು ಊಹಿಸಿ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ನೆಟ್ಟಿಗರ ಊಹೆ
- ಇವರಿಬ್ಬರು ಮುಂದೆ ಒಟ್ಟಾಗಿ ಮಾಡಬಹುದಾದ ಸಿನಿಮಾದ ಕುರಿತು ಚರ್ಚಿಸುತ್ತಿರಬಹುದು.
- ಮದುವೆ ತುಂಬಾ ಗ್ರ್ಯಾಂಡ್ ಆಗಿ ಮಾಡಿದ್ದಾರೆ ಅಲ್ವ ಎಂದು ಮಾತನಾಡುತ್ತಿರಬಹುದು.
- ಟಾಕ್ಸಿಕ್ ಸಿನಿಮಾದ ಕಥೆ ಏನು ಎಂದು ಅಟ್ಲಿ ಕೇಳುತ್ತ ಇರಬಹುದು.
- ಜವಾನ್‌ನಂತಹ ಇನ್ನೊಂದು ಸಿನಿಮಾ ಮಾಡೋಣ್ವ ಎನ್ನುತ್ತಿರಬಹುದು.
- ನನಗೆ ವಿವಿಧ ಮಿಕ್ಸ್ ಅಪ್ ಸ್ಟೋರಿಯ ಸಿನಿಮಾ ಮಾಡಬೇಡಿ ಎಂದು ಯಶ್ ಹೇಳುತ್ತಿರಬಹುದು.
- ಈ ಲುಕ್‌ನಲ್ಲಿ ಚೆನ್ನಾಗಿ ಕಾಣ್ತೀರಿ ಯಶ್ ಎನ್ನುತ್ತಿರಬಹುದು.
ಹೀಗೆ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋಗಳಲ್ಲಿ ಫಾಲೋವರ್ಸ್‌ಗಳು ಥರೇವರಿ ಕಾಮೆಂಟ್ ಮಾಡಿದ್ದಾರೆ. ಬಹುತೇಕರು ಯಶ್ ಮತ್ತು ಅಟ್ಲಿ ಜತೆಯಾಗುವುದು ಬೇಡ, ಅವರು ಹಲವು ಸಿನಿಮಾಗಳ ಕಥೆಯನ್ನು ಮಿಕ್ಸ್ ಮಾಡಿ ಒಂದು ಸಿನಿಮಾ ಮಾಡ್ತಾರೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ಅಟ್ಲಿಯ ಮುಂಬರುವ ಸಿನಿಮಾಗಳು
ಜವಾನ್ ಬಳಿಕ ತನ್ನ ಮುಂದಿನ ಸಿನಿಮಾ ಯಾವುದೆಂದು ಅಟ್ಲಿ ಇನ್ನೂ ಘೋಷಿಸಿಲ್ಲ. ಸದ್ಯ ಇವರು ಬೇಬಿ ಜಾನ್ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ತನ್ನ ತಮಿಳು ಸಿನಿಮಾ ಥೇರಿಯ ಹಿಂದಿ ರಿಮೇಕ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಮೂಲ ಸಿನಿಮಾದಲ್ಲಿ ವಿಜಯ್ ಮತ್ತು ಸಮಂತಾ ರುತ್ ಪ್ರಭು ನಟಿಸಿದ್ದಾರೆ. 2023ರಲ್ಲಿ ಶಾರೂಖ್ ಖಾನ್ ನಾಯಕ ನಟನಾಗಿರುವ ಅಟ್ಲಿ ನಿರ್ದೇಶನದ ಜವಾನ್ ಸಿನಿಮಾ ಸೂಪರ್‌ಹಿಟ್ ಆಗಿತ್ತು.
ಕನ್ನಡ ನಟ ಯಶ್ ಮುಂಬರುವ ಸಿನಿಮಾ
ಯಶ್ ಅವರು ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 2023ರಲ್ಲಿ ಘೋಷಣೆಯಾಗಿತ್ತು. 2025ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2ನಲ್ಲಿ ನಟಿಸಿದ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದರು.
ವಿಭಾಗ