ಕನ್ನಡ ಸುದ್ದಿ  /  ಮನರಂಜನೆ  /  ಯಶ್‌ ಅಭಿಮಾನಿಗಳ ಸಾವು, ಸಂತ್ರಸ್ತ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೆರವು ನೀಡಿದ ಯಶೋಮಾರ್ಗ ಫೌಂಡೇಶನ್‌

ಯಶ್‌ ಅಭಿಮಾನಿಗಳ ಸಾವು, ಸಂತ್ರಸ್ತ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೆರವು ನೀಡಿದ ಯಶೋಮಾರ್ಗ ಫೌಂಡೇಶನ್‌

ಟಾಕ್ಸಿಕ್‌ ನಟ ಯಶ್‌ ಹುಟ್ಟುಹಬ್ಬದಂದು ವಿದ್ಯುತ್‌ ತಂತಿ ಸ್ಪರ್ಶಿಸಿ ಮೃತಪಟ್ಟ ಅಭಿಮಾನಿಗಳ ಕುಟುಂಬಕ್ಕೆ ಯಶ್‌ ಮತ್ತು ರಾಧಿಕಾ ಪಂಡಿತ್‌ ಅವರ ಯಶೋಮಾರ್ಗ ಫೌಂಡೇಶನ್‌ ಮೂಲಕ ನೆರವಿನ ಹಸ್ತ ನೀಡಲಾಗಿದೆ. ಮೃತಪಟ್ಟ ಅಭಿಮಾನಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳ ಚೆಕ್‌ ನೀಡಲಾಗಿದೆ.

ಸಂತ್ರಸ್ತ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೆರವು ನೀಡಿದ ಯಶೋಮಾರ್ಗ
ಸಂತ್ರಸ್ತ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೆರವು ನೀಡಿದ ಯಶೋಮಾರ್ಗ

ಬೆಂಗಳೂರು: ಯಶ್‌ ಹುಟ್ಟುಹಬ್ಬದ ಸಂಭ್ರಮದಲ್ಲಿ ಬ್ಯಾನರ್‌ ಕಟ್ಟುವಾಗ ಗದಗದಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ಮೃತಪಟ್ಟ ಅಭಿಮಾನಿಗಳ ಕುಟುಂಬಕ್ಕೆ ನೆರವಿನ ಚೆಕ್‌ ಅನ್ನು ರಾಕಿಂಗ್‌ ಸ್ಟಾರ್‌ ತಲುಪಿಸಿದ್ದಾರೆ. ಘಟನೆ ನಡೆದ ಕೆಲವೇ ದಿನಗಳಲ್ಲಿ ಪ್ರತಿ ಕುಟುಂಬಕ್ಕೂ ತಲಾ 5 ಲಕ್ಷ ರೂಪಾಯಿ ನೀಡಿ ನೆರವಿನ ಹಸ್ತ ಚಾಚಿದ್ದಾರೆ. ಯಶ್‌ ಅವರು ಸಾಮಾಜಿಕ ಸೇವೆಗಾಗಿ ಸ್ಥಾಪಿಸಿರುವ ಯಶೋಮಾರ್ಗ ಫೌಂಡೇಶನ್‌ ವತಿಯಿಂದ ಮೃತಪಟ್ಟ ಕುಟುಂಬಕ್ಕೆ ನೆರವು ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೊರಣಗಿ ಗ್ರಾಮದಲ್ಲಿ ಯಶ್‌ ಹುಟ್ಟುಹಬ್ಬದ ಹಿಂದಿನ ರಾತ್ರಿ ಕೆಲವು ಯುವಕರು ಬ್ಯಾನರ್‌ ಕಟ್ಟುತ್ತಿದ್ದರು. ಆ ಸಂದರ್ಭದಲ್ಲಿ ಅಚಾನಕಾಗಿ ವಿದ್ಯುತ್‌ ತಂತಿ ಸ್ಪರ್ಶಿಸಿ ಮೂವರು ಯುವಕರು ಮೃತಪಟ್ಟಿದ್ದರು. ಇದೀಗ ಯಶೋಮಾರ್ಗ ಫೌಂಡೇಶನ್‌ ಕಡೆಯಿಂದ ಯಶ್‌ ಆಪ್ತರು ಮೃತಪಟ್ಟ ಅಭಿಮಾನಿಗಳಿಗೆ ನೆರವಿನ ಚೆಕ್‌ ಹಸ್ತಾಂತರ ಮಾಡಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಆಪ್ತರು ಚೆಕ್‌ ನೀಡುವ ಸಂದರ್ಭದಲ್ಲಿ ಮೃತಪಟ್ಟ ಅಭಿಮಾನಿಗಳ ಕುಟುಂಬಸ್ಥರು ಬಿಕ್ಕಿಬಿಕ್ಕಿ ಅತ್ತ ದೃಶ್ಯ ಹೃದಯ ವಿದ್ರಾವಕವಾಗಿತ್ತು. ಯಶ್‌ ಆಪ್ತರಾದ ಚೇತನ್‌ ಮತ್ತು ರಾಕೇಶ್‌ ಅವರು ಮೃತಪಟ್ಟ ಅಭಿಮಾನಿಗಳ ಕುಟುಂಬಸ್ಥರಿಗೆ ಚೆಕ್‌ ನೀಡಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ತನ್ನ ಹುಟ್ಟುಹಬ್ಬದ ದಿನವಾದ ಜನವರಿ 8ರಂದು ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಈ ಕಾರಣದಿಂದ ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗದು ಎಂದು ಹೇಳಿದ್ದರು.. ಕರ್ನಾಟಕದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಶ್‌ ಹುಟ್ಟುಹಬ್ಬವನ್ನು ತಮ್ಮ ತಮ್ಮ ಊರಲ್ಲಿ ಆಚರಿಸುತ್ತಿದ್ದರು.

ಗದಗದ ಸೊರಣಗಿಯಲ್ಲಿ ಯಶ್‌ ಹುಟ್ಟುಹಬ್ಬದ ಹಿಂದಿನ ದಿನ ರಾತ್ರಿ ಯುವಕರು ಬ್ಯಾನರ್‌ ಕಟ್ಟುತ್ತಿದ್ದಾಗ ಬ್ಯಾನರ್‌ ವಿದ್ಯುತ್‌ ತಂತಿಗೆ ತಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್‌ ಪ್ರವಹಿಸಿ ಮೂರು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ವಿಷಯ ತಿಳಿದ ತಕ್ಷಣ ಯಶ್‌ ಶೂಟಿಂಗ್‌ ಕ್ಯಾನ್ಸಲ್‌ ಮಾಡಿ ಗದಗಕ್ಕೆ ಆಗಮಿಸಿದ್ದರು.

ಈ ಮೂವರು ಮಾತ್ರವಲ್ಲದೆ ಯಶ್‌ ಬೆಂಗಾವಲು ಪಡೆಯ ವಾಹನವನ್ನು ಹಿಂಬಾಲಿಸಿದ ನಿಖಿಲ್‌ ಎಂಬ ಯುವಕನೂ ಸ್ಕೂಟರ್‌ನಿಂದ ಬಿದ್ದು ಮೃತಪಟ್ಟಿದ್ದನು.

ಕೆಜಿಎಫ್‌ ಮೂಲಕ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ನಟ ಯಶ್‌ ಅವರು ಯಶೋಮಾರ್ಗ ಫೌಂಡೇಶನ್‌ ಮೂಲಕ ಸೋಷಿಯಲ್‌ ವರ್ಕ್‌ ಮಾಡುತ್ತಿದ್ದಾರೆ. ಯಶ್‌ ಮತ್ತು ರಾಧಿಕಾ ಪಂಡಿತ್‌ ನಡೆಸುವ ಈ ಯಶೋಮಾರ್ಗದ ಮೂಲಕ ಹಲವು ಉತ್ತಮ ಕೆಲಸಗಳನ್ನು ಮಾಡಲಾಗಿದೆ. ರೈತರು, ಬಡವರು ಸೇರಿದಂತೆ ಕಷ್ಟದಲ್ಲಿ ಇರುವವರಿಗೆ ಈಗಾಗಲೇ ಸಂಸ್ಥೆ ನೆರವು ನೀಡಿದೆ. ಅಷ್ಟೇ ಅಲ್ಲ, ನೀರಿನ ಸಮಸ್ಯೆ ಎದುರಿಸುತ್ತಿರುವ ಜನರಿಗೆ ನೀರಿನ ವ್ಯವಸ್ಥೆ, ಕೃಷಿ ಅಭಿವೃದ್ಧಿಗೂ ಯೋಜನೆಗಳನ್ನು ಹಾಕಿಕೊಂಡು ಕಾರ್ಯನಿರ್ವಹಿಸುತ್ತಿದೆ.

IPL_Entry_Point