Dr Bro: ಕಂಡೋರ್ ಗಾಡೀಲಿ ಸುತ್ತಾಡೋದೇ ಮಜ ಎನ್ನುತ್ತ ಹೊಸ ಸಿನಿಮಾವೊಂದರ ಪ್ರಚಾರಕ್ಕಿಳಿದ ಡಾಕ್ಟರ್ ಬ್ರೋ
#ಪಾರು ಪಾರ್ವತಿ ಚಿತ್ರ ಒಂದಷ್ಟು ವಿಚಾರಕ್ಕೆ ಸದ್ದು ಮಾಡುತ್ತಿದೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಕಿಚ್ಚ ಸುದೀಪ್ ಅನಾವರಣ ಮಾಡಿದ್ದರು. ಈಗ ಇದೇ ಚಿತ್ರದ ಪ್ರಚಾರಕ್ಕೆ ಡಾಕ್ಟರ್ ಬ್ರೋ (Dr Bro) ಕೈ ಜೋಡಿಸಿದ್ದಾರೆ.

Paru Parvathi Movie: ಕನ್ನಡಿಗರಿಗೆ ಬೆರಳ ತುದಿಯಲ್ಲಿಯೇ ಜಗತ್ತು ತೋರಿಸುತ್ತಿದ್ದಾರೆ ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್. ಈಗಾಗಲೇ 25ಕ್ಕೂ ಹೆಚ್ಚು ದೇಶಗಳಿಗೆ ತೆರಳಿರುವ ಗಗನ್, ಇತ್ತೀಚೆಗಷ್ಟೇ ನೇಪಾಳಕ್ಕೆ ತೆರಳಿ ಅಲ್ಲಿನ ಜನ, ಜೀವನದ ಜತೆಗೆ ಬದುಕು ಬವಣೆಯನ್ನೂ ನೋಡುಗರತ್ತ ದಾಟಿಸಿದ್ದರು. ಹೀಗೆ ಸುತ್ತಾಟದ ನಡುವೆಯೇ, ಈಗ ಸಣ್ಣ ಗ್ಯಾಪ್‌ನಲ್ಲಿ ಮೊದಲ ಸಲ ಸಿನಿಮಾ ಪ್ರಚಾರದ ಕಡೆ ಹೊರಳಿದ್ದಾರೆ ಡಾ. ಬ್ರೋ. ಹಾಗಂತ ಸಿನಿಮಾದಲ್ಲಿ ನಟಿಸಿದ್ದಾರಾ ಎಂದಲ್ಲ. ಬದಲಿಗೆ ನಾಳೆ ತೆರೆಕಾಣಲಿರುವ ಪಾರು ಪಾರ್ವತಿ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಏಟೀನ್ ಥರ್ಟಿ ಸಿಕ್ಸ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಪಿ.ಬಿ. ಪ್ರೇಂನಾಥ್ ನಿರ್ಮಿಸಿರುವ ಸಿನಿಮಾ "#ಪಾರು ಪಾರ್ವತಿ". ರೋಹಿತ್ ಕೀರ್ತಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇವರ ಜತೆಗೆ ಪೂನಂ ಸರ್‌ನಾಯಕ್ ಹಾಗೂ ಫವಾಜ್ ಅಶ್ರಫ್ ಸಹ ಪ್ರಮುಖಪಾತ್ರದಲ್ಲಿದ್ದಾರೆ.
"#ಪಾರು ಪಾರ್ವತಿ" ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನಾವರಣ ಮಾಡಿದ್ದರು. ಟ್ರೇಲರ್‌ಗೂ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಇದೇ ಚಿತ್ರ ಜನವರಿ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇಂತಿಪ್ಪ ಸಿನಿಮಾದ ಪ್ರಚಾರದಲ್ಲೀಗ ವ್ಲಾಗರ್ ಡಾ ಬ್ರೋ ಜತೆಯಾಗಿದ್ದಾರೆ.
ಡಾ ಬ್ರೋ ಹೇಳಿದ್ದೇನು?
"#ಪಾರು ಪಾರ್ವತಿ" ಸಿನಿಮಾ ಪ್ರಯಾಣದ ಹಾದಿಯಲ್ಲಿ ಸಾಗುವ ಸಿನಿಮಾ. ಈ ಕಥೆಗೆ ಸೂಕ್ತ ಎಂಬ ಕಾರಣಕ್ಕೆ, ಡಾ ಬ್ರೋ ಅವರಿಂದ ಪ್ರಮೋಷನ್ ಮಾಡಿಸಿದೆ ಚಿತ್ರತಂಡ. ಚಿತ್ರದಲ್ಲಿ ಬಳಸಿದ ಕಾರ್‌ನಲ್ಲಿಯೇ ನಾಯಕಿ ದೀಪಿಕಾ ದಾಸ್ ಜತೆಗೆ ತಾವೇ ಕಾರ್ ಡ್ರೈವ್ ಮಾಡಿದ್ದಾರೆ ಡಾ. ಬ್ರೋ. "ಏನು ಹೊಸ ಕಾರ್ ತೆಗೆದುಕೊಂಡಿದ್ದಾನೆ ಅಂದುಕೊಂಡ್ರಾ? ಇಲ್ಲ, ಇದು ಕಂಡೋವ್ರ ಕಾರು. ಕಂಡವ್ರ ಕಾರಲ್ಲಿ ಸುತ್ತಾಡೋದೆ ಮಜ ಕಣ್ರಿ. ನೆಕ್ಸ್ಟ್ ಯಾವ ಜಾಗಕ್ಕೆ ಹೋಗಬೇಕು ಪ್ಲಾನ್ ಮಾಡೋಣ ಬನ್ನಿ. ನಾನು ಹೋಗಿಲ್ಲ. ಈ ಕಾರು ಹೋಗಿದೆ" ಅಷ್ಟೊತ್ತಿಗೆ ದೀಪಿಕಾ ದಾಸ್ ಆಗಮನವಾಗಿದೆ. "ಏನ್ ಮೇಡಂ.. ನೀವೇನ್ ಇಲ್ಲಿ. ನಿಮ್ಮ ಸಿನಿಮಾ ಪ್ರಮೋಷನ್ನೇ ನಡೀತಿದೆ. ಬರ್ರಿ.." ಎಂದು ಅದೇ ಕಾರಲ್ಲಿ ಕರೆದೊಯ್ದಿದ್ದಾರೆ. "ರೋಡ್ ಆಫ್ ರೋಡು, ಟ್ರಾವೆಲ್ಲು, ಫುಲ್ ಫನ್ನು.. ಇದೇ ಜನವರಿ 31ಕ್ಕೆ ನಿಮ್ಮ ಹತ್ತಿರ ಚಿತ್ರಮಂದಿರಗಳಲ್ಲಿ" ಎಂದು ಕೊನೆಗೆ ಹೇಳಿದ್ದಾರೆ.
ಅಡ್ವೆಂಚರ್ ಕಾಮಿಡಿ ಜಾನರ್‌ನ ಈ ಪ್ರವಾಸ ಕಥನಕ್ಕೆ ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಕಾಂಡದಲ್ಲಿ ಚಿತ್ರೀಕರಣ ನಡೆದಿದೆ. ಅಬಿನ್ ರಾಜೇಶ್ ಛಾಯಾಗ್ರಹಣ, ಆರ್ ಹರಿ ಸಂಗೀತ ನಿರ್ದೇಶನ ಹಾಗೂ ಸಿ.ಕೆ.ಕುಮಾರ ಅವರ ಸಂಕಲನ "#ಪಾರು ಪಾರ್ವತಿ" ಚಿತ್ರಕ್ಕಿದೆ.
