ಯುವ ರಾಜ್‌ಕುಮಾರ್ ಡಿವೋರ್ಸ್ ವಿಷಯ ಶಿವರಾಜ್ ಕುಮಾರ್‌ಗೆ ಗೊತ್ತಿರಲಿಲ್ವಂತೆ; ಈ ರೀತಿ ಆಗಿದ್ದರೆ ಮನಸ್ಸಿಗೆ ಬೇಜಾರಾಗುತ್ತೆ ಎಂದ ಶಿವಣ್ಣ
Yuva Rajkumar Sridevi Byrappa divorce case: ಕನ್ನಡ ನಟ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ವಿವಾಹ ವಿಚ್ಛೇದನ ದೊಡ್ಮನೆ ಕುಟುಂಬದ ಅಭಿಮಾನಿಗಳಿಗೆ ಆಘಾತ ತಂದಿದೆ. ನನಗೆ ಈ ವಿಚಾರ ತಿಳಿದಿರಲಿಲ್ಲ ಎಂದು ಶಿವರಾಜ್ ಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಡಿವೋರ್ಸ್ ವಿಚಾರ ಕೇಳಿ ದೊಡ್ಮನೆ ಕುಟುಂಬದ ಅಭಿಮಾನಿಗಳಿಗೆ ಆತಂಕವಾಗಿದೆ. ಇದೇ ಸಂದರ್ಭದಲ್ಲಿ ಈ ವಿಷಯ ದೊಡ್ಮನೆ ಕುಟುಂಬದ ಹಿರಿಯರಿಗೆ ತಿಳಿದಿಲ್ಲವೇ? ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪರ ಜತೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿಲ್ಲವೇ? ಇತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಮಾಧ್ಯಮಗಳಿಗೆ ಶಿವಮೊಗ್ಗದಲ್ಲಿ ಶಿವರಾಜ್ ಕುಮಾರ್ ಅವರು "ಯುವ ರಾಜ್‌ಕುಮಾರ್ ಡಿವೋರ್ಸ್ ವಿಚಾರ ನನಗೆ ಈಗಷ್ಟೇ ತಿಳಿಯಿತು" ಎಂದಿದ್ದಾರೆ.
ಡಿವೋರ್ಸ್ ಕುರಿತು ಶಿವರಾಜ್ ಕುಮಾರ್ ಏನಂದ್ರು?
ವಿವಿಧ ಮಾಧ್ಯಮ ವರದಿಗಳ ಪ್ರಕಾರ ಅಮೆರಿಕದಲ್ಲಿರುವ ಶ್ರೀದೇವಿ ಭೈರಪ್ಪ ಅವರು ಡಿವೋರ್ಸ್ ನೋಟಿಸ್‌ಗೆ ಸಮ್ಮತಿ ಸೂಚಿಸಿದ್ದಾರೆ. ಈ ವಿಷಯದ ಕುರಿತು ಶಿವಮೊಗ್ಗದಲ್ಲಿದ್ದ ಶಿವರಾಜ್ ಕುಮಾರ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿವೆ. "ಸದ್ಯ ನನಗೆ ಈ ವಿಚಾರದ ಕುರಿತು ಮಾಹಿತಿ ಇಲ್ಲ. ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಡಿವೋರ್ಸ್ ಮಾಹಿತಿ ಸದ್ಯ ಇಲ್ಲ. ಏನೂ ತಿಳಿಯದೆ ಮಾತನಾಡುವುದು ಸರಿಯಲ್ಲ. ಈಗಷ್ಟೇ ಮೊಬೈಲ್‌ನಲ್ಲಿ ನೋಡಿ ವಿಷಯ ತಿಳಿದುಕೊಂಡೆ. ಎಲ್ಲಾದರೂ ಈ ರೀತಿ ಆಗಿದ್ದರೆ ಮನಸ್ಸಿಗೆ ಬೇಜಾರಾಗುತ್ತದೆ" ಎಂದು ಶಿವಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಯುವ ರಾಜ್ ಕುಮಾರ್ ತಮ್ಮ ಕುಟುಂಬದ ಹಿರಿಯಣ್ಣ ಚಿಕ್ಕಪ್ಪ ಶಿವಣ್ಣನ ಜತೆ ತಮ್ಮ ಕುಟುಂಬದ ಸಮಸ್ಯೆಯ ಬಗ್ಗೆ ಮಾತನಾಡಿಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಸೂಕ್ಷ್ಮ ವಿಚಾರದ ಕುರಿತು ತಮ್ಮ ಕಡೆಯಿಂದ ಮಾಹಿತಿ ನೀಡುವುದು ಬೇಡವೆಂದು ಶಿವಣ್ಣ "ನನಗೆ ವಿಷಯ ಗೊತ್ತಿಲ್ಲ" ಎಂಬ ಉತ್ತರಿಸಿ ಮಾಧ್ಯಮಗಳ ಹೆಚ್ಚಿನ ಪ್ರಶ್ನೆಗಳಿಂದ ತಪ್ಪಿಸಿಕೊಂಡಿರಲೂಬಹುದು ಎನ್ನಲಾಗುತ್ತಿದೆ.
ಯುವ ರಾಜ್‌ಕುಮಾರ್ ಡಿವೋರ್ಸ್ ನೀಡಿದ್ಯಾಕೆ?
ಪತ್ನಿ ಶ್ರೀದೇವಿ ಭೈರಪ್ಪಗೆ ಡಿವೋರ್ಸ್ ನೀಡಲು ಏನು ಕಾರಣ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಟಿವಿ9 ಸೇರಿದಂತೆ ವಿವಿಧ ಟಿವಿ ಮಾಧ್ಯಮಗಳಲ್ಲಿನ ವರದಿ ಪ್ರಕಾರ ಕನ್ನಡದ ಖ್ಯಾತ ನಟಿಯೊಬ್ಬರ ಜತೆ ಯುವ ರಾಜ್‌ಕುಮಾರ್‌ಗೆ ಇರುವ ಆಪ್ತತೆ ಕೂಡ ಈ ಡಿವೋರ್ಸ್‌ಗೆ ಕಾರಣವಾಗಿರಬಹುದು ಎನ್ನಲಾಗಿದೆ. ಈ ವಿಚಾರದ ಕುರಿತು ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ. ವರದಿಗಳ ಪ್ರಕಾರ, ಯುವ ರಾಜ್‌ಕುಮಾರ್‌ಗೆ ಖ್ಯಾತ ನಟಿ ಜತೆಗೆ ಇರುವ ಸಂಬಂಧ ಹೊರಗಡೆ ಬಹಿರಂಗವಾಗಿಲ್ಲ. ಆದರೆ, ಆಪ್ತರ ವಲಯದಲ್ಲಿ ಗುಸುಗುಸು ಇತ್ತಂತೆ. ಈ ವಿಷಯದಿಂದಲೇ ದೊಡ್ಮನೆ ಕುಡಿಯ ಕುಟುಂಬದಲ್ಲಿ ಬಿರುಕು ಬಿಟ್ಟಿದೆ. ಈ ಘಟನೆಯ ಬಳಿಕ ಶ್ರೀದೇವಿ ವಿದೇಶಕ್ಕೆ ಹೋಗಿದ್ದಾರೆ. ಕೆಲವು ತಿಂಗಳುಗಳಿಂದ ಬೇರೆಬೇರೆಯಾಗಿ ವಾಸಿಸುತ್ತಿದ್ದಾರೆ. ಈ ವರ್ಷ ಯುವ ಸಿನಿಮಾ ಬಿಡುಗಡೆ ಕಾರ್ಯಕ್ರಮಗಳಲ್ಲಿಯೂ ಶ್ರೀದೇವಿ ಭೈರಪ್ಪ ಕಾಣಿಸಿಕೊಂಡಿರಲಿಲ್ಲ. ಆದರೆ, ಯುವ ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಶ್ರೀದೇವಿ ಉಪಸ್ಥಿತರಿದ್ದರು.
ಸುಮಾರು ಏಳು ವರ್ಷಗಳ ಸ್ನೇಹ, ಪ್ರೀತಿಯಲ್ಲಿದ್ದ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಬಳಿಕ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಿದ್ದರು. ಮೇ 26, 2019ರಂದು ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹವಾಗಿದ್ದರು. ದೊಡ್ಮನೆ ಕುಟುಂಬದ ಮದುವೆಯಾದ ಕಾರಣ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು ಮದುವೆಗೆ ಹಾಜರಾಗಿದ್ದರು. ಶ್ರೀದೇವಿ ಭೈರಪ್ಪ ಅವರ ಹುಟ್ಟೂರು ಮೈಸೂರು. ಮೈಸೂರಿನ ನಿರ್ಮಲಾ ಕಾನ್ವೆಂಟ್ ಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದಾರೆ. ಇವರ ಕುರಿತು ಸಂಪೂರ್ಣ ವಿವರ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.