ಅಪ್ಪು ಅವ್ರು ಬಂದ್ರು ದಾರಿ ಬಿಡಿ! ಪುನೀತ್ ರಾಜ್‌ಕುಮಾರ್ ಚೊಚ್ಚಲ ಚಿತ್ರ ಅಪ್ಪು ಮರು ಬಿಡುಗಡೆ, ಬೆಂಗಳೂರಿನಲ್ಲಿ ಫ್ಯಾನ್ಸ್ ಹಬ್ಬ
ಪುನೀತ್ ರಾಜ್‌ಕುಮಾರ್ ನಟನೆಯ ಚೊಚ್ಚಲ ಅಪ್ಪು ಸಿನಿಮಾ ಇಂದು (ಮಾ. 14) ರಾಜ್ಯಾದ್ಯಂತ ಮರು ಬಿಡುಗಡೆ ಆಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಪುನೀತ್ ಅಭಿಮಾನಿಗಳು, ಚಿತ್ರದ ಬಿಡುಗಡೆಯನ್ನು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.

Puneeth Rajkumar Appu Movie Re Released: ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಅಪ್ಪು ಇಂದು ( ಮಾರ್ಚ್ 14) ರಾಜ್ಯಾದ್ಯಂತ ಮರು ಬಿಡುಗಡೆ ಆಗಿದೆ. 2002ರಲ್ಲಿ ತೆರೆಕಂಡಿದ್ದ ಅಪ್ಪು ಸಿನಿಮಾ ಮೂಲಕ ಹೀರೋ ಆಗಿ ಬಣ್ಣದ ಲೋಕಕ್ಕೆ ಬಂದಿದ್ದ ಪುನೀತ್ ರಾಜ್‌ಕುಮಾರ್, ಮೊದಲ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಪಟ್ಟ ಪಡೆದಿದ್ದರು. ಇದೀಗ 23 ವರ್ಷಗಳ ಬಳಿಕ ಈ ಸಿನಿಮಾ ಮರು ಬಿಡುಗಡೆ ಆಗಿದ್ದು, ರಾಜ್ಯಾದ್ಯಂತ ಅಂದಿನ ಕ್ರೇಜ್ ಮರು ಸೃಷ್ಟಿಯಾಗಿದೆ. ಅದರಲ್ಲೂ ಬೆಂಗಳೂರು ಅಪ್ಪುಮಯವಾಗಿದೆ!
ಅಣ್ಣಾವ್ರ ಆಶೀರ್ವಾದದೊಂದಿಗೆ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್‌ನಲ್ಲಿ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ಅಪ್ಪು ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಗುರುಕಿರಣ್ ಸಂಗೀತ ನೀಡಿದ್ದ ಹಾಡುಗಳು ಇಂದಿಗೂ ಫೇಮಸ್. ನಾಯಕಿಯಾಗಿ ಚಂದನವನಕ್ಕೆ ಬಲಗಾಲಿಟ್ಟವರು ನಟಿ ರಕ್ಷಿತಾ. ಹೀಗೆ ಮೂಡಿಬಂದ ಸಿನಿಮಾ, ಶತದಿನೋತ್ಸವ ಆಚರಿಸಿಕೊಂಡಿತ್ತು. ಕಲೆಕ್ಷನ್ ವಿಚಾರದಲ್ಲಿಯೂ ಈ ಚಿತ್ರ ಸದ್ದು ಮಾಡಿತ್ತು. ಈಗ ದಶಕಗಳ ಬಳಿಕ, ಪುನೀತ್ ರಾಜ್‌ಕುಮಾರ್ ಅನುಪಸ್ಥಿತಿಯಲ್ಲಿ ಅಪ್ಪು ಸಿನಿಮಾ ಮರು ಬಿಡುಗಡೆ ಆಗಿದೆ.
ಬೆಂಗಳೂರಲ್ಲಿ ಅಪ್ಪು ಹಬ್ಬ ಜೋರು
ಬೆಂಗಳೂರಿನಲ್ಲಿ ಒಂದಷ್ಟು ಚಿತ್ರಮಂದಿರಗಳಲ್ಲಿ ಬೆಳಗನಿ 6:30ಕ್ಕೆ ಅಪ್ಪು ಸಿನಿಮಾದ ಪ್ರದರ್ಶನ ಆರಂಭವಾಗಿದೆ. ಅಪ್ಪು ಸಿನಿಮಾ ತೆರೆಕಾಣುತ್ತಿರುವ ಬಹುತೇಕ ಎಲ್ಲ ಚಿತ್ರಮಂದಿರಗಳ ಮುಂದೆ ಪುನೀತ್ ರಾಜ್‌ಕುಮಾರ್ ಅವರ ಕಟೌಟ್ ನಿಲ್ಲಿಸಲಾಗಿದೆ. ಅಭಿಮಾನಿಗಳು, ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ. ಇನ್ನು ಕೆಲವರು, ಪುನೀತ್ ಭಾವಚಿತ್ರದ ಮುಂದೆ ಕಾಯಿ ಒಡೆದು ಅವರನ್ನು ಪೂಜಿಸುತ್ತಿದ್ದಾರೆ. ಜೆಪಿ ನಗರದ ವಿರೇಶ್ ಮತ್ತು ಸಿದ್ದೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಾಗರವೇ ನೆರೆದಿದ್ದು, ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಳ್ಳುತ್ತಿದ್ದಾರೆ.
ಮುಂಗಡ ಬುಕಿಂಗ್‌ನಲ್ಲಿ ಅಪ್ಪು ಮುಂದು
ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಚೊಚ್ಚಲ ಸಿನಿಮಾ ಎಂಬ ಕಾರಣಕ್ಕೂ, ಅವರ ಮೇಲಿನ ಆ ಪ್ರೀತಿಗೋ, ಸಿನಿಮಾ ಮುಂಗಡ ಬುಕಿಂಗ್ ಆರಂಭವಾದ ಬೆನ್ನಲ್ಲೇ, ಬೆಂಗಳೂರಿನ ಒಂದಷ್ಟು ಚಿತ್ರಮಂದಿರಗಳ ಮೊದಲ ಶೋ ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳು ಮತ್ತು ಮಾಲ್‌ಗಳಲ್ಲಿ ಒಟ್ಟಾರೆಯಾಗಿ 58ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಈ ಮೂಲಕ ಮರು ಬಿಡುಗಡೆ ಆದ ಬೇರಾವ ಸಿನಿಮಾಗಳಿಗೂ ಇಷ್ಟೊಂದು ಶೋಗಳು ಸಿಕ್ಕಿರಲಿಲ್ಲ.
ಪುನೀತ್ ಬರ್ತ್‌ಡೇಗೆ ಅಪ್ಪು ಟ್ರೀಟ್
ಪುನೀತ್ ರಾಜ್‌ಕುಮಾರ್ ನಮ್ಮ ನಡುವೆ ಇದ್ದಿದ್ದರೆ ಮಾರ್ಚ್ 17ರಂದು 50ನೇ ವರ್ಷದ ಬರ್ತ್‌ಡೇ ಆಚರಿಸಿಕೊಳ್ಳುತಿದ್ದರು. ಆದರೆ, ಅವರಿಲ್ಲವಾಗಿ ಇದೀಗ ಮೂರು ವರ್ಷಗಳ ಮೇಲಾಗಿದೆ. ಹೀಗಿದ್ದರೂ, ಅವರ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಹುಟ್ಟುಹಬ್ಬದ ಪ್ರಯುಕ್ತ ಒಂದಿಲ್ಲೊಂದು ಸಿನಿಮಾಗಳನ್ನು ಮರು ಬಿಡುಗಡೆ ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್. ಇದೀಗ ಅಪ್ಪು ಸರದಿ.

ವಿಭಾಗ