ನಟಿಯರಿಗೆ ಸಂಭಾವನೆ ತಾರತಮ್ಯ ಏಕೆ? ಕನ್ನಡ ಚಿತ್ರರಂಗದ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ ಮೋಹಕತಾರೆ ರಮ್ಯಾ
Actress Ramya: ಸ್ಯಾಂಡಲ್‌ವುಡ್‌ನಲ್ಲಿ ನಟರಿಗೆ ಹೋಲಿಸಿದರೆ ನಟಿಯರಿಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ನಟಿ ರಮ್ಯಾ ಹೇಳಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಮಹಿಳೆ ಮತ್ತು ಪುರುಷರಿಗೆ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗುತ್ತದೆ. ಇಲ್ಲಿ ನಟಿಯರಿಗೆ ಸಾಕಷ್ಟು ಸಮಸ್ಯೆಗಳು ಇವೆ ಎಂದು ಅವರು ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ನಟರಿಗೆ ಹೋಲಿಸಿದರೆ ನಟಿಯರಿಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ನಟಿ ರಮ್ಯಾ ಹೇಳಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಮಹಿಳೆ ಮತ್ತು ಪುರುಷರಿಗೆ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗುತ್ತದೆ. ಇಲ್ಲಿ ನಟಿಯರಿಗೆ ಸಾಕಷ್ಟು ಸಮಸ್ಯೆಗಳು ಇವೆ. ಇಲ್ಲಿನ ತೊಂದರೆಗಳ ಕುರಿತು ಯಾರೂ ಧೈರ್ಯವಾಗಿ ಬಾಯಿಬಿಡುವ ಧೈರ್ಯ ಮಾಡುತ್ತಿಲ್ಲ ಎಂದು ರಾಜಕಾರಣಿಯಾಗಿ ಬದಲಾಗಿರುವ ನಟಿ ರಮ್ಯಾ ಹೇಳಿದ್ದಾರೆ. ಅವರು ನಿನ್ನೆ (ಗುರುವಾರ) ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಮಹಿಳೆ ಹಾಗ ಸಿನಿಮಾ" ಎಂಬ ಗೋಷ್ಠಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರಿಗೆ 5 ಕೋಟಿ, ನನಗೆ 1 ಕೋಟಿ ಸಂಭಾವನೆ
"ಒಂದು ಸಿನಿಮಾ ಸಕ್ಸಸ್ ಪಡೆದ ಬಳಿಕ ನಾಯಕ ನಟರು ತಮ್ಮ ಸಂಭಾವನೆಯನ್ನು ಶೇಕಡ 50ರಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ಕಲಾವಿದೆಯರ ಸಂಭಾವನೆ ಶೇಕಡ 5ರಷ್ಟು ಹೆಚ್ಚುತ್ತದೆ ಅಷ್ಟೇ. ನನ್ನ ಜತೆ ಆರಂಭದಲ್ಲಿ ಸಿನಿಮಾ ಮಾಡುತ್ತಿದ್ದ ನಟರು ನನಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದರು. ನನ್ನ ಜತೆ ಕೆಲಸ ಮಾಡುತ್ತಿದ್ದ ಅನೇಕರು ಸೂಪರ್‌ಸ್ಟಾರ್ ಆಗಿದ್ದಾರೆ. ಒಂದು ಸಿನಿಮಾ ಹಿಟ್ ಆದ ಬಳಿಕ ನನಗಿಂತ ಐದು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು" ಎಂದು ರಮ್ಯಾ ಹೇಳಿದ್ದಾರೆ. "ಅದೇ ನಟನ ಜತೆ ಮುಂದಿನ ಸಿನಿಮಾ ಮಾಡಿದಾಗ ಆ ನಟನ ಸಂಭಾವನೆ ಐದು ಕೋಟಿ ರೂಪಾಯಿ ಇರುತ್ತಿತ್ತು. ನನ್ನ ಸಂಭಾವನೆ 1 ಕೋಟಿ ರೂಪಾಯಿ ಇರುತ್ತಿತ್ತು" ಎಂದು ಅವರು ಹೇಳಿದ್ದಾರೆ.
ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿಲ್ಲ
"ಸಂಭಾವನೆ ವಿಷಯ ಮಾತ್ರವಲ್ಲ, ಸ್ಯಾಂಡಲ್‌ವುಡ್‌ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿಲ್ಲ. ಮಲಯಾಳಂನಲ್ಲಿ ಎಷ್ಟು ಅದ್ಭುತವಾದ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತವೆ. ಆದರೆ, ಕನ್ನಡದಲ್ಲಿ ಹಾಗೆ ಇಲ್ಲ. ಈಗಲೂ ನಾವು ಮಹಿಳಾ ಪ್ರಧಾನ ಸಿನಿಮಾವೆಂದರೆ ಪೊಲೀಸ್ ಡ್ರೆಸ್ ಹಾಕಿಕೊಂಡು ರೌಡಿಗಳನ್ನು ಹೊಡೆಯುವ ಚಿತ್ರಗಳನ್ನು ಮಾಡುತ್ತೇವೆ. ಸಿನಿಮಾ ನೋಡುವುದು ನಾಯಕರನ್ನು ನೋಡಲು ಎಂಬ ಮನಸ್ಥಿತಿಯಿಂದ ಹೊರಬರುವ ಅಗತ್ಯವಿದೆ" ಎಂದ ಮೋಹಕತಾರೆ ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.
"ಮಲಯಾಳಂನಲ್ಲಿ ನಟಿಯರಿಗೆ ವೈವಿಧ್ಯಮಯ ಪಾತ್ರಗಳು ದೊರಕುತ್ತವೆ. ಬೇಸರವೆಂದರೆ, ಕನ್ನಡ ಸಿನಿಮಾದಲ್ಲಿ ಇಂತಹ ಅವಕಾಶಗಳು ದೊರಕುತ್ತಿಲ್ಲ. ಮಹಿಳೆಯರಿಗೆ ಉತ್ತಮ ಪಾತ್ರಗಳನ್ನು ಬರೆಯಲಾಗುತ್ತಿಲ್ಲ. ನಾನು ನಾಯಕ ಪ್ರಧಾನ ಚಿತ್ರಗಳಲ್ಲಿ ನಟಿಸಲು ಬಯಸುತ್ತಿಲ್ಲ. ನಾನು 20 ವರ್ಷಗಳ ಹಿಂದೆ ಈ ರೀತಿ ನಟಿಸುತ್ತಿದ್ದೆ. ಆದರೆ, ಚಿತ್ರರಂಗದಲ್ಲಿ ಈಗಲೂ ಅದೇ ಪರಿಸ್ಥಿತಿಯಿದೆ. ಏನೂ ಬದಲಾಗಿಲ್ಲ. ಕನ್ನಡ ಚಿತ್ರರಂಗ ಮಲಯಾಳಂ ಸಿನಿಮಾವನ್ನು ನೋಡಿ ಕಲಿಯಬೇಕು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಾಸ್ತವಕ್ಕೆ ಹತ್ತಿರವಾಗಿರುವ ಸಿನಿಮಾಗಳು
"ನಮ್ಮಲ್ಲಿ ನೈಜ್ಯವಾಗಿ ಕಾಣುವ ಚಿತ್ರಗಳು ಬರುತ್ತಿಲ್ಲ. ಮಲಯಾಳಂನಲ್ಲಿ ಈ ರೀತಿ ಇಲ್ಲ. ವಾಸ್ತವಕ್ಕೆ ಹತ್ತಿರವಾಗಿರುವ ಚಿತ್ರಗಳಿಗೆ ಅಲ್ಲಿ ಆದ್ಯತೆ ನೀಡಲಾಗುತ್ತದೆ. ಮಹಿಳೆಗೆ ಸ್ಟ್ರಾಂಗ್ ಕ್ಯಾರೆಕ್ಟರ್ ನೀಡುವುದು ಎಂದರೆ ಪೊಲೀಸ್ ಉಡುಗೆ ತೊಟ್ಟು ರೌಡಿಗಳ ವಿರುದ್ಧ ಫೈಟಿಂಗ್ ಮಾಡುವುದಲ್ಲ. ನಿರ್ಮಾಪಕರು ಮಹಿಳಾ ಕೇಂದ್ರಿತ ಸಿನಿಮಾಗಳನ್ನು ಮಾಡಬೇಕು. ಆದರೆ, ಹಣಕಾಸು ಅಪಾಯಗಳು, ವ್ಯವಹಾರದ ಆತಂಕದಿಂದ ನಿರ್ಮಾಪಕರು ಹಿಂದೆ ಸರಿಯಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಚಿತ್ರಮಂದಿರಕ್ಕೆ ಬಂದು ಮಹಿಳಾ ಕೇಂದ್ರಿತ ಸಿನಿಮಾಗಳನ್ನು ನೋಡಬೇಕು. ಪುರುಷರೇ ಚಿತ್ರ ನಿರ್ಮಿಸಲು ಏಕೆ ಕಾಯಬೇಕು. ನಾನು 2023ರಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಮಹಿಳಾ ಕೇಂದ್ರಿತ ಸಿನಿಮಾ ಮಾಡಿದೆ. ಇದಕ್ಕೆ ಹಲವು ಪ್ರಶಸ್ತಿಗಳು ಬಂದಿವೆ. ಆದರೆ, ವಾಣಿಜ್ಯಿಕವಾಗಿ ಈ ಚಿತ್ರ ಯಶಸ್ಸು ಪಡೆಯಲಿಲ್ಲ. ಎಷ್ಟು ಮಹಿಳೆಯರು ಈ ಸಿನಿಮಾ ನೋಡಿದ್ರಿ? ಚಿತ್ರಮಂದಿರಗಳಲ್ಲಿ ಬಂದು ಸಿನಿಮಾ ನೋಡಿ ಏಕೆ ಪ್ರೋತ್ಸಾಹ ನೀಡಿಲ್ಲ?" ಎಂದು ಅವರು ಪ್ರಶ್ನಿಸಿದ್ದಾರೆ.
ನಟನೆಗೆ ವಾಪಸ್ ಬರುವಿರಾ ಎಂಬ ಪ್ರಶ್ನೆಗೂ ರಮ್ಯಾ ಉತ್ತರಿಸಿದ್ದಾರೆ. "ನಾನು ಸ್ಕ್ರಿಪ್ಟ್‌ಗೆ ಕಾಯುತ್ತಿರುವೆ. ಹಲವು ಪ್ರಾಜೆಕ್ಟ್‌ಗಳು ನನ್ನಲ್ಲಿ ಇವೆ. ಅವುಗಳಲ್ಲಿ ಒಂದರಲ್ಲಿ ನಾನು ನಟಿಸುವ ಸಾಧ್ಯತೆ ಇದೆ" ಎಂದು ಅವರು ಹೇಳಿದ್ದಾರೆ.
ವಿಭಾಗ