ವೀರ ಚಂದ್ರಹಾಸ ಸಿನಿಮಾ ವಿಮರ್ಶೆ: ದೈವಬಲ ವರ್ಸಸ್ ಆತ್ಮಬಲದ ರೋಚಕ ಕಥೆ, ಯಕ್ಷಗಾನದ ವಿಭಿನ್ನ ಅನುಭವ
ವೀರ ಚಂದ್ರಹಾಸ ಸಿನಿಮಾ ವಿಮರ್ಶೆ: ಚಂದ್ರಹಾಸನ ಕಥೆ ಹಳೆಯದಾದರೂ, ಈ ಪ್ರಸಂಗವನ್ನು ಹಲವು ವರ್ಷಗಳಿಂದ ಆಡುತ್ತಿದ್ದರೂ ಸಿನಿಮಾ ವೀಕ್ಷಕರಿಗೆ ಇದೊಂದು ವಿಭಿನ್ನ ಅನುಭವ. ಏಕೆಂದರೆ, ಇಂಥದ್ದೊಂದು ಪ್ರಯತ್ನ ಕನ್ನಡ ಹಿರಿತೆರೆಯಲ್ಲಿ ಇದುವರೆಗೂ ಆಗಿರಲಿಲ್ಲ. ಒಂದು ಜನಪ್ರಿಯ ಯಕ್ಷಗಾನ ಪ್ರಸಂಗವನ್ನು ಇಟ್ಟುಕೊಂಡು ಸಿನಿಮಾ ರೂಪ ನೀಡಿದ್ದಾರೆ ರವಿ ಬಸ್ರೂರು.

ವೀರ ಚಂದ್ರಹಾಸ ಸಿನಿಮಾ ವಿಮರ್ಶೆ: ರವಿ ಬಸ್ರೂರು ತಮ್ಮ ನಿರ್ದೇಶನದ ಪ್ರತೀ ಚಿತ್ರದಲ್ಲೂ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ಬಾರಿ ವಿಶ್ವ ಸಿನಿಮಾದಲ್ಲೇ ಮೊದಲ ಬಾರಿಗೆ ಯಕ್ಷಗಾನವನ್ನು ತೆರೆಯ ಮೇಲೆ ತರುವುದಷ್ಟೇ ಅಲ್ಲ, ಬಹಳ ಜನಪ್ರಿಯವಾದ ಪ್ರಸಂಗವನ್ನು ಸಿನಿಮಾ ಮಾಡಿದ್ದಾರೆ. ಚಂದ್ರಹಾಸನ ಕಥೆ ಹೊಸದೇನಲ್ಲ. ಈಗಾಗಲೇ ಕೆಲವು ದಶಕಗಳ ಹಿಂದೆಯೇ ಚಂದ್ರಹಾಸನ ಕುರಿತು ಚಿತ್ರವೊಂದು ಬಂದಿದೆ. ಹೀಗಿರುವಾಗ, ಈ ‘ವೀರ ಚಂದ್ರಹಾಸ’ ಎಷ್ಟು ವಿಭಿನ್ನ? ನೀವೇ ನೋಡಿ.
ಚಿತ್ರದ ಕಥೆ ಏನು?
ಕುಂತಳ ಸಾಮ್ರಾಜ್ಯದ ಮಹಾಮಂತ್ರಿಯಾದ ದುಷ್ಟಬುದ್ಧಿಗೆ, ಸಾಮ್ರಾಟನಾಗಬೇಕೆಂಬ ಆಸೆ ಇರುತ್ತದೆ. ಹೀಗಿರುವಾಗಲೇ, ಅನಾಥ ಬಾಲಕ ಚಂದ್ರಹಾಸ ಮುಂದೊಂದು ದಿನ ಸಾಮ್ರಾಟನಾಗುತ್ತಾನೆ ಎಂಬ ಭವಿಷ್ಯ ದುಷ್ಟಬುದ್ಧಿಗೆ ತಿಳಿಯುತ್ತದೆ. ಇದರಿಂದ ಸಿಟ್ಟಾಗುವ ದುಷ್ಟಬುದ್ಧಿ, ಚಂದ್ರಹಾಸನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆದರೆ, ಕಟುಕರಿಂದ ಪಾರಾಗುವ ಚಂದ್ರಹಾಸ, ರಾಜವಂಶದಲ್ಲಿ ಬೆಳೆಯುತ್ತಾನೆ. ಹಲವು ವರ್ಷಗಳ ನಂತರ ಪುನಃ ದುಷ್ಟಬುದ್ಧಿ ಮತ್ತು ಚಂದ್ರಹಾಸನ ಭೇಟಿಯಾಗುತ್ತದೆ. ತನ್ನ ಶತ್ರು ಚಂದ್ರಹಾಸ ಸತ್ತಿಲ್ಲ ಎಂಬ ವಿಷಯ ತಿಳಿದ್ದು ದುಷ್ಟಬುದ್ಧಿ ಇನ್ನಷ್ಟು ಸಿಟ್ಟಾಗಿ, ಅವನನ್ನು ಕೊಲ್ಲಿಸುವುದಕ್ಕೆ ಮತ್ತೊಂದು ಪ್ರಯತ್ನ ಮಾಡುತ್ತಾನೆ. ಈ ಬಾರಿಯಾದರೂ ಅವನು ತನ್ನ ಪ್ರಯತ್ನದಲ್ಲಿ ಸಫಲನಾಗುತ್ತಾನಾ? ಎನ್ನುವುದು ಚಿತ್ರದ ಕಥೆ.
ಹೇಗಿದೆ ಚಿತ್ರ?
ಚಂದ್ರಹಾಸನ ಕಥೆ ಹಳೆಯದಾದರೂ, ಈ ಪ್ರಸಂಗವನ್ನು ಹಲವು ವರ್ಷಗಳಿಂದ ಆಡುತ್ತಿದ್ದರೂ ಸಿನಿಮಾ ವೀಕ್ಷಕರಿಗೆ ಇದೊಂದು ವಿಭಿನ್ನ ಅನುಭವ. ಏಕೆಂದರೆ, ಇಂಥದ್ದೊಂದು ಪ್ರಯತ್ನ ಕನ್ನಡ ಹಿರಿತೆರೆಯಲ್ಲಿ ಇದುವರೆಗೂ ಆಗಿರಲಿಲ್ಲ. ಒಂದು ಜನಪ್ರಿಯ ಯಕ್ಷಗಾನ ಪ್ರಸಂಗವನ್ನು ಇಟ್ಟುಕೊಂಡು ಸಿನಿಮಾ ರೂಪ ನೀಡಿದ್ದಾರೆ ರವಿ ಬಸ್ರೂರು. ಒಂದು ಯಕ್ಷಗಾನ ಪ್ರಸಂಗವನ್ನು ಚಿತ್ರೀಕರಿಸಿದರೆ ಹೇಗಿರುತ್ತದೋ, ಹಾಗೇ ಇದೆ. ಇಲ್ಲಿ ಸಂಭಾಷಣೆ, ವೇಷಭೂಷಣ, ಪದ್ಯಗಳು, ಪಾತ್ರಧಾರಿಗಳು ಎಲ್ಲವೂ ಯಕ್ಷಗಾನದ್ದೇ. ಒಂದಿಷ್ಟು ದೃಶ್ಯಗಳನ್ನು ಗ್ರಾಫಿಕ್ಸ್ ಮೂಲಕ ಆಧುನಿಕ ಸ್ಪರ್ಶ ಕೊಟ್ಟಿದ್ದಾರಾದರೂ ಮಿಕ್ಕೆಲ್ಲವೂ ಸಂಪೂರ್ಣ ಯಕ್ಷಗಾನವಾಗಿದೆ. ಒಂದು ಪ್ರಾಂತ್ಯಕ್ಕೆ ಸೀಮಿತವಾಗಿದ್ದ, ಇತ್ತೀಚಿನ ದಿನಗಳಲ್ಲಿ ಬೇರೆ ಕಡೆಗೂ ಪಸರಿಸುತ್ತಿದ್ದ ಒಂದು ಕಲೆಯನ್ನು ಸಿನಿಮಾ ಮೂಲಕ ಜಗತ್ತಿನಾದ್ಯಂತ ವಿಸ್ತರಿಸುವ ಪ್ರಯತ್ನವನ್ನು ಈ ಚಿತ್ರದ ಮೂಲಕ ರವಿ ಬಸ್ರೂರು ಮಾಡಿದ್ದಾರೆ. ಅವರ ಈ ಪರಿಕಲ್ಪನೆಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಯಕ್ಷಗಾನ ಪ್ರಸಂಗಗಳನ್ನು ನೋಡುತ್ತಾ ಬಂದವರಿಗೆ ಇದು ವಿಶೇಷವೆಂದನಿಸದಿರಬಹುದು. ಆದರೆ, ನೋಡದಿರುವವರಿಗೆ ಇದೊಂದು ವಿಭಿನ್ನ ಅನುಭವ.
ಇದೊಂದು ದೈವಬಲ ಮತ್ತು ಆತ್ಮಬಲದ ರೋಚಕ ಕಥೆ. ಒಂದು ಕಡೆ ವಿಧಿ ಚಂದ್ರಹಾಸನ ಭವಿಷ್ಯವನ್ನು ರೂಪಿಸಿದರೆ, ವಿಧಿಲಿಖಿತವನ್ನು ಮನುಷ್ಯ ತನ್ನ ಬುದ್ಧಿಶಕ್ತಿ ಮತ್ತು ಬಾಹುಬಲದಿಂದ ಬದಲಾಯಿಸಿಕೊಳ್ಳಬಲ್ಲ ಎಂದು ನಿರೂಪಿಸುವ ಪ್ರಯತ್ನವನ್ನು ದುಷ್ಟಬುದ್ಧಿ ಮಾಡುತ್ತಾನೆ. ಒಂದು ಗಂಭೀರವಾದ ಕಥೆಯನ್ನು ಮಧ್ಯೆ ಮಧ್ಯೆ ಹಾಸ್ಯ ಸೇರಿಸಿ ಚಿತ್ರ ಮಾಡಿದ್ದಾರೆ ರವಿ ಬಸ್ರೂರು. ಹಿನ್ನೆಲೆ ಸಂಗೀತ ಮತ್ತು ಪದ್ಯಗಳನ್ನು ಬಹಳ ಚೆನ್ನಾಗಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದ ಅಂತ್ಯದಲ್ಲಿ ಹೊಸ ವಿಲನ್‍ಗಳು ಎಂಟ್ರಿ ಕೊಟ್ಟು ‘ಕೆಜಿಎಫ್’ ನೆನಪಾಗುತ್ತದೆ. ಚಿತ್ರದ ಮುಂದುವರೆದ ಭಾಗಕ್ಕೆ ಲೀಡ್ ಕೊಡುತ್ತದೆ.
ಗಮನಸೆಳೆಯುವ ದುಷ್ಟಬುದ್ಧಿ
ಒಂದಿಷ್ಟು ವಿಶೇಷ ಅತಿಥಿ ಪಾತ್ರಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಯಕ್ಷಗಾನ ಕಲಾವಿದರನ್ನೇ ಬಳಸಿಕೊಳ್ಳಲಾಗಿದೆ. ಚಂದ್ರಹಾಸನ ಪಾತ್ರ ಮಾಡಿರುವ ಶಿಥಿಲ್ ಶೆಟ್ಟಿ, ದುಷ್ಟಬುದ್ಧಿಯಾಗಿ ಕಾಣಿಸಿಕೊಂಡಿರುವ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಗಮನಸೆಳೆಯುತ್ತಾರೆ. ಅದರಲ್ಲೂ ಪ್ರಸನ್ನ ಶೆಟ್ಟಿಗಾರ್ ತಮ್ಮ ಅಭಿನಯದಿಂದ ಇಷ್ಟವಾಗುತ್ತಾರೆ. ಉದಯ ಹೆಗಡೆ ಕಡಬಾಳ್, ನಾಗಶ್ರೀ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶಿವರಾಜಕುಮಾರ್ ಪಾತ್ರಕ್ಕೆ ಧ್ವನಿ ಹೊಂದಿಕೆಯಾಗಿಲ್ಲ. ಚಂದನ್ ಶೆಟ್ಟಿ, ಪುನೀತ್ ರುದ್ರನಾಗ್, ‘ಗರುಡ’ ರಾಮ್ ಕೆಲವು ಕ್ಷಣಗಳ ಕಾಲ ತೆರೆಯ ಮೇಲೆ ಕಾಣಿಸಿಕೊಂಡು ಮಾಯವಾಗುತ್ತಾರೆ. ತಾಂತ್ರಿಕವಾಗಿ ಚಿತ್ರ ಶ್ರೀಮಂತವಾಗಿದೆ. ಗ್ರಾಫಿಕ್ಸ್, ಕಲಾ ನಿರ್ದೇಶನ, ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ.
‘ವೀರ ಚಂದ್ರಹಾಸ’ ಚಿತ್ರವನ್ನು ಬೇರೆ ಚಿತ್ರಗಳ ಜೊತೆಗೆ ಹೋಲಿಸುವಂತಿಲ್ಲ. ಇದೊಂದು ವಿಭಿನ್ನ ಪ್ರಯೋಗ ಮತ್ತು ಪ್ರಯತ್ನ. ಹೊಸ ಪ್ರಯೋಗಗಳನ್ನು ಇಷ್ಟಪಡುವವರು ‘ವೀರ ಚಂದ್ರಹಾಸ’ ಚಿತ್ರವನ್ನು ಒಮ್ಮೆ ನೋಡಬೇಕು.
ಸಿನಿಮಾ: ವೀರ ಚಂದ್ರಹಾಸ
ಜಾನರ್: ಪೌರಾಣಿಕ
ನಿರ್ದೇಶನ: ರವಿ ಬಸ್ರೂರು
ನಿರ್ಮಾಣ: ಎನ್.ಎಸ್. ರಾಜಕುಮಾರ್
ಸಂಗೀತ: ರವಿ ಬಸ್ರೂರು
ಛಾಯಾಗ್ರಹಣ: ಕಿರಣ್ ಕುಮಾರ್
ವಿಮರ್ಶೆ: ಚೇತನ್ ನಾಡಿಗೇರ್