ಮತ್ತೆ ತೆಲುಗಿಗೆ ಹೊರಟ ಉಪೇಂದ್ರ, ರಾಮ್ ಪೋತಿನೇನಿ ಚಿತ್ರದಲ್ಲಿ ರಿಯಲ್ ಸ್ಟಾರ್ ನಟನೆ; ಕನ್ನಡ ಸಿನಿಮಾ ಬಿಡುಗಡೆ ಯಾವಾಗ?
ಮೂರು ವರ್ಷಗಳ ನಂತರ ಉಪೇಂದ್ರ, ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಮ್ ಪೋತಿನೇನಿ ಅಭಿನಯದ 22ನೇ ಚಿತ್ರದಲ್ಲಿ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರದ ಮೊದಲ ಝಲಕ್, ಮೇ 15ರಂದು ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಈ ಚಿತ್ರವನ್ನು ‘ರಾಪೋ 22’ ಎಂದು ಕರೆಯಲಾಗುತ್ತಿದ್ದು, ಚಿತ್ರದ ಹೆಸರು ಘೋಷಣೆಯಾಗಬೇಕಿದೆ. (ವರದಿ: ಚೇತನ್ ನಾಡಗೇರ್)

ಉಪೇಂದ್ರಗೆ ತೆಲುಗು ಹೊಸದಲ್ಲ. 27 ವರ್ಷಗಳ ಹಿಂದೆಯೇ ಅವರು ‘ಕನ್ಯಾದಾನಂ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ನಂತರ ‘ರಾ’, ‘ಟಾಸ್’, ‘ಸನ್ ಆಫ್ ಸತ್ಯಮೂರ್ತಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. 2022ರಲ್ಲಿ ಬಿಡುಗಡೆಯಾದ ‘ಘನಿ’ ಎಂಬ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಆ ನಂತರ ಅವರು ತೆಲುಗು ಚಿತ್ರದಲ್ಲಿ ನಟಿಸಿರಲಿಲ್ಲ.
ಈಗ ಮೂರು ವರ್ಷಗಳ ನಂತರ ಉಪೇಂದ್ರ, ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಮ್ ಪೋತಿನೇನಿ ಅಭಿನಯದ 22ನೇ ಚಿತ್ರದಲ್ಲಿ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರದ ಮೊದಲ ಝಲಕ್, ಮೇ 15ರಂದು ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಈ ಚಿತ್ರವನ್ನು ‘ರಾಪೋ 22’ ಎಂದು ಕರೆಯಲಾಗುತ್ತಿದ್ದು, ಚಿತ್ರದ ಹೆಸರು ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ.
ಈ ವಿಷಯವನ್ನು ಟ್ವೀಟ್ ಮಾಡಿರುವ ಅವರು, ‘ರಾಮ್ ಪೋತಿನೇನಿ ಅಭಿನಯದ 22ನೇ ಚಿತ್ರದಲ್ಲಿ ಸೂರ್ಯ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಕಾತುರನಾಗಿದ್ದೇನೆ. ಚಿತ್ರದ ಮೊದಲ ನೋಟ ಇದೇ ಮೇ 15ರಂದು ಬಿಡುಗಡೆಯಾಗುತ್ತಿದೆ’ ಎಂದು ಹೇಳಿದ್ದಾರೆ.
ರಾಮ್ ಪೋತಿನೇನಿ ಅಭಿನಯದ ಈ ಚಿತ್ರವನ್ನು ಮಹೇಶ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಮಹೇಶ್ ಬಾಬು ಇದಕ್ಕೂ ಮೊದಲು ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ನಿರ್ದೇಶನ ಮಾಡಿದ್ದರು. ಈಗ ರಾಮ್ ಅಭಿನಯದ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದು, ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದೆ. ನವೀನ್ ಯರ್ನೇನಿ ಮತ್ತು ವೈ. ರವಿಶಂಕರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಉಪೇಂದ್ರ ಅವರ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡವು, ಅವರನ್ನು ಬರಮಾಡಿಕೊಂಡಿದೆ. ಈ ಚಿತ್ರದಲ್ಲಿ ಅವರು ಸೂರ್ಯ ಕುಮಾರ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಜನರ ಮಧ್ಯೆ ಅವರು ನಿಂತಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಈ ಚಿತ್ರದಲ್ಲಿ ಅವರು ಸೂಪರ್ ಸ್ಟಾರ್ ಒಬ್ಬರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನು, ಇತ್ತೀಚೆಗೆ ಉಪೇಂದ್ರ ಅನಾರೋಗ್ಯದಿಂದ ದಾಖಲಾಗಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದ ಅವರು, ‘ನಾನು ಆರೋಗ್ಯವಾಗಿದ್ದೇನೆ. ಸಾಮಾನ್ಯ ಚೆಕಅಪ್‍ಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ ಅಷ್ಟೇ. ಯಾವುದೇ ಊಹಾಪೋಹಗಳಿಗೆ ಕಿವಿಕೊಟ್ಟು ಗೊಂದಲಕ್ಕಿಡಾಗಬೇಡಿ’ ಎಂದು ಸ್ಪಷ್ಟನೆ ನೀಡಿದ್ದರು.
ಕನ್ನಡ ಸಿನಿಮಾ ಬಿಡುಗಡೆ ಯಾವಾಗ?
‘ಯು/ಐ’ಚಿತ್ರದ ನಂತರ ಉಪೇಂದ್ರ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿಲ್ಲ. ‘45’ ಚಿತ್ರವು ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದ್ದು, ಅದರ ಜೊತೆಗೆ ನಾಗಣ್ಣ ನಿರ್ದೇಶನದ ‘ಭಾರ್ಗವ’ ಎಂಬ ಚಿತ್ರದಲ್ಲಿ ನಟಿಸುವುದಕ್ಕೆ ಉಪೇಂದ್ರ ಗ್ರೀನ್ ಸಿಗ್ನಲ್ ನೀಡಿದ್ದಾರೆ. ‘ಸೂರಪ್ಪ’ ಬಾಬು ನಿರ್ಮಾಣದ ಈ ಚಿತ್ರದಲ್ಲಿ ಅಂಕಿತಾ ಅಮರ್ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರವು ಸದ್ಯದಲ್ಲೇ ಪ್ರಾರಂಭವಾಗಲಿದೆ.
(ವರದಿ: ಚೇತನ್ ನಾಡಗೇರ್)