ಶ್ರೀಮುರಳಿ ನಟನೆಯ ಬಘೀರ ಸಿನಿಮಾ ತಮಿಳು, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗ್ತಿಲ್ಲ; ಪ್ಯಾನ್ ಇಂಡಿಯಾ ಚಿತ್ರಕ್ಕೆ ಏನ್ ಪ್ರಾಬ್ಲಂ?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ಶ್ರೀಮುರಳಿ ನಟನೆಯ ಬಘೀರ ಸಿನಮಾ ಇದೇ ಅಕ್ಟೋಬರ್ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಡಾ ಸೂರಿ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರ ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿಲ್ಲ.

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮತ್ತು ಡಾ ಸೂರಿ ಆಕ್ಷನ್ ಕಟ್ ಹೇಳಿರುವ ಬಘೀರ ಸಿನಿಮಾ (Bagheera Movie)) ಇದೇ ಅಕ್ಟೋಬರ್ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ಶ್ರೀಮುರಳಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಮಾಡುವ ನಿರ್ಧಾರದ ಕುರಿತು ಚಿತ್ರತಂಡ ತುಸು ಬದಲಾವಣೆ ಮಾಡಿದೆ. ಈ ತಿಂಗಳ ಅಂತ್ಯದಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಹಿಂದಿ ಭಾಷೆಯಲ್ಲಿ ಬಘೀರ ಬಿಡುಗಡೆಯಾಗುತ್ತಿಲ್ಲ
"ಈ ದೀಪಾವಳಿ ವೇಳೆಯಲ್ಲಿ ಭೂಲ್ ಬುಲಯ್ಯ ಮತ್ತು ಸಿಂಗಂ ಎಗೈನ್ ಎಂಬ ಎರಡು ಪ್ರಮುಖ ಹಿಂದಿ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇವು ಪ್ರಮುಖ ಪ್ರಾಂಚೈಸಿಗಳ ಸಿನಿಮಾ. ಇದೇ ಕಾರಣಕ್ಕೆ ಹಿಂದಿ ಬೆಲ್ಟ್ ಪ್ರದೇಶಗಳಲ್ಲಿ ಚಿತ್ರಮಂದಿರಗಳು ದೊರಕುವುದು ಕಷ್ಟ. ಈ ಎರಡು ಫಿಲ್ಮ್ ಬಾಕ್ಸ್ ಆಫೀಸ್‌ನಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುವ ಸೂಚನೆ ಇದೆ. ಈ ಸಿನಿಮಾಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ನಂತರದ ವಾರಗಳಲ್ಲಿ ಬಘೀರ ಬಿಡುಗಡೆ ಮಾಡಲಾಗುವುದು" ಎಂದು ನಿರ್ದೇಶಕ ಡಾ ಸೂರಿ ಹೇಳಿದ್ದಾರೆ.
ತಮಿಳಿನಲ್ಲೂ ಬಿಡುಗಡೆಯಾಗದು ಬಘೀರ
ತಮಿಳು ಭಾಷೆಯಲ್ಲಿ ಬಘೀರ ಸಿನಿಮಾ ಬಿಡುಗಡೆಯಾಗದೆ ಇರುವುದಕ್ಕೂ ಇದೇ ಕಾರಣ. ಕಾಲಿವುಡ್‌ನಲ್ಲೂ ದೀಪಾವಳಿ ವೇಳೆ ಪ್ರಮುಖ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅಮರನ್ ಮತ್ತು ಬ್ಲಡಿ ಬೆಗ್ಗರ್ ಎಂಬ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ, ತೆಲಂಗಾಣ ಮತ್ತು ಆಂಧ್ರಪ್ರದೇಶ ಬೆಲ್ಟ್‌ನಲ್ಲಿ ಪ್ರಮುಖ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಬಘೀರ ಸಿನಿಮಾವು ಕೆಜಿಎಫ್ ಮತ್ತು ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಆಧರಿಸಿರುವುದರಿಂದ ತೆಲುಗು ವರ್ಷನ್ ಅಕ್ಟೋಬರ್ 31ರಂದೇ ಬಿಡುಗಡೆ ಮಾಡಲು ಚಿತ್ರತಂಡ ಉದ್ದೇಶಿಸಿದೆ.
ಅಕ್ಟೋಬರ್ 31ರಂದು ಬಿಡುಗಡೆಯಾಗಬೇಕಿರುವುರಿಂದ ಬಘೀರ ಸಿನಿಮಾವು ಈ ವಾರ ಸೆನ್ಸಾರ್ ಮಂಡಳಿಯ ಮುಂದೆ ಬರಲಿದೆ. ಈ ಸಿನಿಮಾದ ರನ್ ಟೈಮ್ 2 ಗಂಟೆಗಳು ಮತ್ತು 37 ನಿಮಿಷಗಳು. ಇದು ಆಕ್ಷನ್ ಸಿನಿಮಾವಾಗಿದ್ದರೂ ಕುಟುಂಬ ಸಮೇತ ನೋಡಬಹುದಾದ ಸಾಕಷ್ಟು ಅಂಶಗಳು ಚಿತ್ರದಲ್ಲಿವೆ ಎಂದು ನಿರ್ದೇಶಕರು ಹೇಳಿದ್ದಾರೆ. ಇದು ಭಾವನಾತ್ಮಕ ಪ್ರಯಾಣವೂ ಆಗಿರಲಿದೆ ಎಂದು ಅವರು ಹೇಳಿದ್ದಾರೆ.
ಈ ಚಿತ್ರದಲ್ಲಿ ಶ್ರೀಮುರಳಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ವೇದಾಂತ್ ಹೆಸರಿನ ಈ ಪೊಲೀಸ್ ಸಮಾಜದಲ್ಲಿರುವ ರಾಕ್ಷಸರ ವಿರುದ್ಧ ಹೋರಾಡುತ್ತಾನೆ. ಶ್ರೀಮುರಳಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಆಕೆಗೆ ಈ ಸಿನಿಮಾದಲ್ಲಿ ಗಮನಾರ್ಹ ಪಾತ್ರವಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಸುಧಾರಾಣಿ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್ ಮತ್ತು ಗರುಡಾ ರಾಮ್ ಮುಂತಾದವರೂ ಬಘೀರದ ಪ್ರಮುಖ ಪಾತ್ರಗಳಲ್ಲಿದ್ದಾರೆ.
