ʻಆವತ್ತು ಆ ನಿರ್ಮಾಪಕನ ಮಾತಿಂದ ಟ್ರಿಗರ್ ಆಯ್ತು, ಕೋಪ ತಡೆದುಕೊಂಡೆʼ; ಆರಂಭದ ದಿನಗಳಲ್ಲಿನ ಅವಮಾನದ ಬಗ್ಗೆ ಯಶ್ ಮಾತು
“ಮುರಳಿ ಮಾಸ್ಟರ್ ಇರಬಹುದು, ಪ್ರಕಾಶ್ ಅವ್ರು, ಯೋಗರಾಜ್ ಭಟ್ ಸರ್ ಇರಬಹುದು. ನನ್ನ ಜೀವನದಲ್ಲಿ ಇವರೆಲ್ಲ ರಾತ್ರಿ ಹಗಲು ಕೆಲಸ ಮಾಡಿದ್ದಾರೆ. ನಿದ್ದೆಗೆಟ್ಟು ನನ್ನನ್ನು ಬೆಳೆಸಿದ್ದಾರೆ. ಒಬ್ಬ ವ್ಯಕ್ತಿ ಯಾವತ್ತೂ ತಾನಾಗಿಯೇ ಬೆಳೆದು ಬಿಡಲ್ಲ. ಅವರ ಸುತ್ತಮುತ್ತ ಸಾಕಷ್ಟು ಜನ ಪಿಲ್ಲರ್‌ಗಳಾಗಿ ನಿಂತಿರ್ತಾರೆ” ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ ನಟ ಯಶ್.

Toxic Actor Yash: ಸ್ಯಾಂಡಲ್‌ವುಡ್ ನಟ, ರಾಕಿಂಗ್ ಸ್ಟಾರ್ ಯಶ್ ಸದ್ಯ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಕನಸು ಕಂಡಿದ್ದಾರೆ. ಟಾಕ್ಸಿಕ್ ಸಿನಿಮಾ ಮೂಲಕ ಹಾಲಿವುಡ್‌ನತ್ತಲೂ ಚಿತ್ತ ನೆಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಟಾಕ್ಸಿಕ್ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆ ಆಗಿದೆ. 2026 ಮಾರ್ಚ್ 19ರಂದು ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಇದೆಲ್ಲದರ ನಡುವೆಯೇ ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾ ಬಿಡುಗಡೆ ಪೂರ್ವ ಇವೆಂಟ್‌ನಲ್ಲಿ, ಚಿತ್ರದ ಟ್ರೇಲರ್ ಲಾಂಚ್ ಮಾಡಿದ ನಟ ಯಶ್, ಕಿರುತೆರೆ, ಎದುರಿಸಿದ ಒಂದಷ್ಟು ಅವಮಾನ, ಅದಾದ ಮೇಲೆ ಮೊಗ್ಗಿನ ಮನಸ್ಸು ಸಿನಿಮಾ ಚಾನ್ಸ್ ಸಿಕ್ಕಿದ್ದು.. ಹೀಗೆ ತಮ್ಮ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ʻಹೊಸಬರಿದ್ದಾಗ ಆರಂಭದಲ್ಲಿ ಅವಮಾನ ಸಹಜ..ʼ
"ಯಾವುದೋ ಒಂದು ಸಿನಿಮಾದಲ್ಲಿ ಅವಕಾಶ ಬಂತು. ಒಬ್ರು ಮ್ಯಾನೇಜರ್ ಹೇಳಿ ಕಳಿಸಿದ್ರು. ಶೂಟಿಂಗ್‌ನಲ್ಲಿ ಇದ್ದಿದ್ದರಿಂದ ಹೋಗೋಕೆ ಆಗಿರಲಿಲ್ಲ. ಒಂದು ದಿನ ಆದಮೇಲೆ ಹೋದೆ. ಕೆಳಗಡೆ ಪ್ರೊಡಕ್ಷನ್ ಮ್ಯಾನೇಜರ್ ಸಿಕ್ಕಿದ್ರು. ಏನ್ ಸರ್ ಕೈಗೇ ಸಿಗಲ್ವಲ್ಲ ನೀವು, ನಿಮ್ಮ ನಂಬರ್ ಎಲ್ಲಿ ಅಂತ ಹುಡುಕೋದು. ನಮ್ ಡೈರೆಕ್ಟರ್, ಪ್ರೊಡ್ಯೂಸರ್ ನೀವೇ ಬೇಕು ಅಂತ ಕಾಯ್ತಿದ್ದಾರೆ ಅಂದ್ರು. ನಾನು ಸರಿ ಅಂತ, ಹೊಟೇಲ್ ಒಳಗೆ ಹೋದೆ. ಅವ್ರು ನನ್ನ ನೋಡಿ, ಯಾರು? ಎಂದು ಹೇಳಿದ್ರು. ಆಗ ನನಗೆ ಸ್ವಲ್ಪ ಟ್ರಿಗರ್ ಆಯ್ತು. ಅದೆಲ್ಲವನ್ನು ತಡೆದಿಟ್ಟುಕೊಂಡೆ. ನಿಮ್ಮ ಫೋಟೋ ಇದ್ಯಾ ಅಂದ್ರು. ಇಲ್ಲ ಸರ್ ಅಂದೆ. ಯಾರು ನನ್ನ ಕೆಲಸ ಕೊಡ್ತಾರೋ ನಾನು ಹೋಗಿ ಭಕ್ತಿಯಿಂದ ಆಕ್ಟ್ ಮಾಡ್ತಿನಿ ಅಂದೆ. ಕಥೆ ಕೇಳಿದೆ, ಕಥೆ ಹೇಳಲಿಲ್ಲ. ಬಿಟ್ಟು ಬಂದೆ"
"ಕೊನೇ ಕ್ಷಣಕ್ಕೆ ಚಾನ್ಸ್ ಸಿಕ್ತು"
"ಸ್ವಲ್ಪ ದಿನಕ್ಕೆ ಈ ನಿರ್ಮಾಪಕ ಗಂಗಣ್ಣ ಮೊಗ್ಗಿನ ಮನಸ್ಸು ಸಿನಿಮಾ ಅನೌನ್ಸ್ ಮಾಡಿದ್ರು. ರಾಧಿಕಾ ಪಂಡಿತ್ ನನ್ನ ಫ್ರೆಂಡ್. ರಾಧಿಕಾ ಆ ಸಿನಿಮಾದಲ್ಲಿ ನಟಿಸ್ತಿದ್ದದ್ದು ಗೊತ್ತಿತ್ತು. ಅವಳಿಗೆ ವಿಷ್ ಮಾಡಿದ್ದೆ. ಲಾಸ್ಟ್ ಶೆಡ್ಯೂಲ್ ಶೂಟಿಂಗ್ ಇದೆ ಅಂತ ಅಂದಿದ್ದಳು. ಹೀಗಿರುವಾಗಲೇ ನನಗೆ ಇವರ ಆಫೀಸ್‌ನಿಂದ ಫೋನ್ ಬಂತು. ಅರೇ ಪಿಕ್ಚರ್ ಮುಗಿದೋಗಿದೆ. ಈಗ್ಯಾಕೆ ಕಾಲ್ ಬಂದಿದೆ ಅಂತ ನೆಗ್ಲೆಕ್ಟ್ ಮಾಡಿದ್ದೆ. ಮತ್ತೆ ಫೋನ್ ಬಂತು. ರಾಧಿಕಾಗೆ ಫೋನ್ ಮಾಡಿ ಕೇಳಿದೆ. ಆಕ್ಟ್ ಮಾಡಬೇಕಿರೋರ ಕಾಲು ಏಟಾಗಿದೆ ಅಂತ ನನಗೆ ಚಾನ್ಸ್ ಸಿಕ್ಕಿತು" ಎಂದಿದ್ದಾರೆ ಯಶ್.
"ಅವರ ಮೇಲೆ ಇಂದಿಗೂ ಅದೇ ಗೌರವ..."
"ಆವತ್ತು ಅವರ ಆಫೀಸ್ ಒಳಗೆ ಹೋದೆ. ನಿರ್ದೇಶಕರು ಸಿಕ್ಕಿದ್ರು. ಕಥೆ ಹೇಳಿದ್ರು. ಎಲ್ಲ ಹಾಡುಗಳನ್ನೂ ಕೇಳಿಸಿದ್ರು. ಆವತ್ತು ಶಶಾಂಕ್ ಅವರು ನನ್ನನ್ನು ನಡೆಸಿಕೊಂಡ ರೀತಿಗೆ ಅಂದಿನಿಂದ ಅವರ ಮೇಲೆ ಅದೇ ಗೌರವ ಇದೆ. ಅದಾದ ಮೇಲೆ ಮುಂಗಾರುಮಳೆ ನಿರ್ಮಾಪಕರು ಕೃಷ್ಣಪ್ಪ ಅವರ ಚೇಂಬರ್‌ಗೆ ಕರೆದುಕೊಂಡು ಹೋಗಿದ್ದರು. ಅವರು ನನ್ನನ್ನು ನೋಡಿ ಗುರುತು ಹಿಡಿದು ಮಾತನಾಡಿಸಿದ್ದರು. ಆ ವ್ಯಕ್ತಿ ಅವತ್ತು ನಡೆದುಕೊಂಡ ರೀತಿಗೆ ಅವರ ಮೇಲೆ ಇವತ್ತಿನ ವರೆಗೂ ಅದೇ ಗೌರವವಿದೆ. ಆ ಸಂಸ್ಥೆ, ಹೊಸ ಕಲಾವಿದನಿಗೆ ಚಾನ್ಸ್ ಕೊಟ್ಟಿದ್ದಕ್ಕೇನೇ. ಇಂದು ಏನೇನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ"
"ಇವರೆಲ್ಲ ನನ್ನ ಜೀವನದ ಪಿಲ್ಲರ್‌ಗಳು"
"ಅದಾದ ಮೇಲೆ ಜರ್ನಿ ಬೆಳೀತಾ ಬಂತು. ಈ ವೇದಿಕೆ ಮೇಲೆ ಬಂದಾಗ ಖುಷಿಯಾಯ್ತು. ಮುರಳಿ ಮಾಸ್ಟರ್ ಇರಬಹುದು, ಪ್ರಕಾಶ್ ಅವ್ರು, ಯೋಗರಾಜ್ ಭಟ್ ಸರ್ ಇರಬಹುದು. ನನ್ನ ಜೀವನದಲ್ಲಿ ಇವರೆಲ್ಲ ರಾತ್ರಿ ಹಗಲು ಕೆಲಸ ಮಾಡಿದ್ದಾರೆ. ನಿದ್ದೆಗೆಟ್ಟು ನನ್ನನ್ನು ಬೆಳೆಸಿದ್ದಾರೆ. ಒಬ್ಬ ವ್ಯಕ್ತಿ ಯಾವತ್ತೂ ತಾನಾಗಿಯೇ ಬೆಳೆದು ಬಿಡಲ್ಲ. ಅವರ ಸುತ್ತಮುತ್ತ ಸಾಕಷ್ಟು ಜನ ಪಿಲ್ಲರ್‌ಗಳಾಗಿ ನಿಂತಿರ್ತಾರೆ. ಅವರೆಲ್ಲರೂ ಬೆವರು ಹರಿಸಿ, ಒಬ್ಬನ್ನ ಮುಂದೆ ತಳ್ಳಿರ್ತಾರೆ. ಆ ತಳ್ಳಿ ನಿಂತಿರುವವನು ನಾನು. ಅದನ್ನು ತಲೆಯಲ್ಲಿಟ್ಟುಕೊಂಡು, ಜವಾಬ್ದಾರಿ ಇಟ್ಟುಕೊಂಡು ಇನ್ನೂ ಮುಂದೆ ಹೋಗಿ ಅವರು ಖುಷಿಪಡುವ ರೀತಿ ಬೆಳಿಬೇಕು ಅಂತ ಹೇಳ್ತಿನಿ" ಎಂದಿದ್ದಾರೆ ಯಶ್.
