Duniya Vijay birthday: ‘ಪ್ಲೀಸ್ ನನ್ನನ್ನು ವಿಜಿ, ದುನಿಯಾ ವಿಜಿ ಅಂತ ಕರೀಬೇಡಿ’; ಅಮ್ಮ ಇಟ್ಟ ಈ ಹೆಸರನ್ನೇ ಬಳಸಿ ಎಂದ ನಟ
ನಟ ದುನಿಯಾ ವಿಜಯ್ ತಮ್ಮ 50ನೇ ಬರ್ತ್‌ಡೇ ದಿನವೇ ಮತ್ತೊಮ್ಮೆ ಹೆಸರಿನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ದಯಮಾಡಿ ವಿಜಿ, ದುನಿಯಾ ವಿಜಿ ಎಂದೆಲ್ಲ ಕರೆಯಬೇಡಿ ಎಂದಿದ್ದಾರೆ. ಆ ಹೆಸರು ವರ್ಕ್ ಆಗಲಿಲ್ಲ. ಅದರ ಬದಲು ಅಮ್ಮ ಇಟ್ಟ ಹೆಸರನ್ನೇ ಬಳಸಿ ಎಂದಿದ್ದಾರೆ.
Duniya Vijay kumar Birthday: ದುನಿಯಾ ಸಿನಿಮಾ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಅದೇ ಹೆಸರಿನ ಜತೆಗೇ ಅಂಟಿಕೊಂಡು ಎರಡು ದಶಕ ಸಾಗಿದ ನಟ ವಿಜಯ್. ಇದೇ ನಟನೀಗ ಬರ್ತ್‌ಡೇ ಖುಷಿಯಲ್ಲಿದ್ದಾರೆ. 50ನೇ ವರ್ಷದ ಹುಟ್ಟುಹಬ್ಬವನ್ನು ಅಷ್ಟೇ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಎಲ್ಲೋ ಒಂದು ಕಡೆ ಬೃಹತ್ ವೇದಿಕೆ ಹಾಕಿ, ಅಭಿಮಾನಿಗಳನ್ನು ಅಲ್ಲಿಗೆ ಕರೆಸಿಕೊಂಡು ಅವರ ಜತೆಗೆ ಬರ್ತ್‌ಡೇ ಆಚರಣೆ ಮಾಡದೇ, ಅಪ್ಪ ಅಮ್ಮನ ಸಮಾಧಿ ಬಳಿಯೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಜತೆಗೆ ಅಮ್ಮ ಇಟ್ಟ ಹೆಸರನ್ನೇ ಇನ್ಮೇಲೆ ಬಳಸಿ ಎಂದು ಮನವಿ ಮಾಡಿದ್ದಾರೆ.
ಚಿತ್ರೋದ್ಯಮದ ಸಲುವಾಗಿ ನಟ, ನಟಿಯರು ತಮ್ಮ ಅಸಲಿ ಹೆಸರು ಮುಚ್ಚಿಟ್ಟು ಸ್ಕ್ರೀನ್ ನೇಮ್ ಬೇರೆಯದನ್ನೇ ಇಟ್ಟುಕೊಂಡ ಸಾಕಷ್ಟು ಉದಾಹರಣೆಗಳಿವೆ. ಅದೇ ರೀತಿ ನಟ ದುನಿಯಾ ವಿಜಯ್ ಸಹ, ಯಶಸ್ಸು ಕಂಡ ಮೊದಲ ಸಿನಿಮಾ ದುನಿಯಾ ಹೆಸರನ್ನೇ ಉಳಿಸಿಕೊಂಡು ಬಂದಿದ್ದರು. ಇದೀಗ ಇದೇ ನಟ ಆ ಹೆಸರನ್ನು ಬದಲಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆ ಬದಲಾವಣೆಗೆ ಕಾರಣವನ್ನೂ ತಿಳಿಸಿದ್ದಾರೆ. ಬರ್ತ್‌ಡೇ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಅಮ್ಮ ಇಟ್ಟ ಹೆಸರೇ ಇನ್ಮುಂದೆ ಇರಬೇಕು ಎಂದಿದ್ದಾರೆ.
ಅಮ್ಮನ ಕೊನೇ ಮಾತು ಅದೇ ಆಗಿತ್ತು..
ಇಲ್ಲಿಯವರೆಗೂ ದುನಿಯಾ ವಿಜಯ್, ವಿಜಿ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ನಟನೀಗ ಇನ್ನು ಮುಂದೆ ವಿಜಯ್ ಕುಮಾರ್ ಎಂದು ಪೂರ್ತಿಯಾಗಿಯೇ ಕರೀರಿ, ಬಳಸಿ ಎಂದಿದ್ದಾರೆ. "ನನ್ನ ಹೆಸರೇ ವಿಜಯ್ ಕುಮಾರ್. ಅಮ್ಮ ಸಾಯುವ ಸಮಯದಲ್ಲೂ ಹೇಳಿದ್ದರು. ಸಾಕಪ್ಪ, ಎಲ್ಲರಿಗೂ ಕೇಳಿಕೋ ವಿಜಿ ಹೆಸರು ಹಾಕಬೇಡ ಅಂತ ಹೇಳು. ಹಾಕಿದ್ರೆ ವಿಜಯ್ ಹಾಕು ಅಂತ ಹೇಳು. ವಿಜಯ್ ಕುಮಾರ್ ಅಂತ ಫುಲ್ ಹೆಸರನ್ನು ಇಟ್ಟುಕೋ. ಇಲ್ಲಿಯವರೆಗೂ ತುಂಬ ಕಷ್ಟ ಅನುಭವಿಸಿದ್ದೀಯಾ. ಇನ್ಮೇಲಾದ್ರೂ ಚೆನ್ನಾಗಿರು.
"ವಿಜಯ್ ಕುಮಾರ್ ಎಂದೇ ನಾನು ಘೋಷಿಸಿಕೊಂಡೆ. ಅಷ್ಟೊತ್ತಿಗೆ ಅಮ್ಮ ತೀರಿಹೋದರು. ಅಲ್ಲಿಂದ ಗೆಲುವು ಸಿಗುತ್ತಿದೆ. ವಿಜಿ ಎಂಬುದು ನನಗೆ ಯಾಕೋ ವರ್ಕ್ ಆಗಲಿಲ್ಲ. ಅಮ್ಮ ಇಟ್ಟ ಹೆಸರೇ ಕೆಲಸ ಮಾಡ್ತಿದೆ. ಹಾಗಾಗಿ ಎಲ್ಲರೂ ದಯಮಾಡಿ ವಿಜಯ್ ಅಥವಾ ವಿಜಯ್ ಕುಮಾರ್ ಎಂದೇ ಬಳಸಿ" ಎಂದು ವಿಜಯ್ ಕುಮಾರ್ ಮನವಿ ಮಾಡಿದ್ದಾರೆ. ಇದರ ಜತೆಗೆ ಇಂದು (ಜ. 20) ಆನೇಕಲ್ ಬಳಿಯ ಕುಂಬಾರಹಳ್ಳಿಯಲ್ಲಿಯೇ ತಮ್ಮ ಅಭಿಮಾನಿಗಳಿಗಾಗಿಯೇ ವಿಶೇಷ ಔತಣಕೂಟದ ವ್ಯವಸ್ಥೆಯನ್ನೂ ಮಾಡಿದ್ದು, ಕಳೆದ ರಾತ್ರಿಯಿಂದಲೇ ಆಗಮಿಸಿದ ಫ್ಯಾನ್ಸ್ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ವಿಜಯ್.
ಜೈಲು ಹಕ್ಕಿಗಳಿಗೆ ಮುಕ್ತಿ ಕೊಡಿಸಿದ್ದ ಭೀಮ
ದುನಿಯಾ ವಿಜಯ್ ಪ್ರತಿ ವರ್ಷ ತಮ್ಮ ಬರ್ತಡೇ ದಿನದಂದು ಜೈಲಿನಲ್ಲಿರುವ ಅಪರಾಧಿಗಳನ್ನು ಬಿಡುಗಡೆ ಮಾಡಿಸುತ್ತಾರೆ. ಅಂದರೆ, ಬೇರೆ ಯಾರೋ ಮಾಡಿದ ತಪ್ಪಿಗೆ ಜೈಲು ಸೇರಿದವರನ್ನು, ಹಣ ಕಟ್ಟಲಾಗದೇ ಜೈಲಿನಲ್ಲಿಯೇ ಉಳಿದ ಅಮಾಯಕರನ್ನು, ಬಡವರನ್ನು ಪ್ರತಿ ವರ್ಷ ತಾವೇ ಕೈಲಾದ ಹಣಕಾಸಿನ ಸಹಾಯ ಮಾಡಿ ಹೊರ ಕರೆತರುತ್ತಾರೆ. ಈ ಸಲವೂ ಒಟ್ಟು ಆರು ಮಂದಿ ಪುರುಷರು, ಓರ್ವ ಮಹಿಳೆಯನ್ನು ಬೆಂಗಳೂರಿನ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಿಸಿದ್ದಾರೆ. ಇತ್ತೀಚೆಗಷ್ಟೇ ಇದೇ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿಜಯ್ ಹೇಳಿಕೊಂಡಿದ್ದರು. ಇದೀಗ ಅಂದು ಹೇಳಿದಂತೆ ಜೈಲು ಹಕ್ಕಿಗಳನ್ನು ಬಿಡುಗಡೆ ಮಾಡಿಸಿದ್ದಾರೆ.