ಮತ್ತೊಂದು ರಕ್ತಪಾತದ ಕಥೆಯ ಮುನ್ಸೂಚನೆ ಕೊಟ್ಟ ದುನಿಯಾ ವಿಜಯ್; ಕಾಟೇರ ಕಥೆಗಾರನ ಹೊಸ ಚಿತ್ರಕ್ಕೆ ಲ್ಯಾಂಡ್‌ಲಾರ್ಡ್ ಶೀರ್ಷಿಕೆ
Landlord Movie: ದುನಿಯಾ ವಿಜಯ್ ಮತ್ತು ಕಾಟೇರ ಸಿನಿಮಾ ಕಥೆಗಾರ ಜಡೇಶ್ ಕಂಪಿ ಕಾಂಬಿನೇಷನ್ ಸಿನಿಮಾ ಈ ಹಿಂದೆಯೇ ಘೋಷಣೆ ಆಗಿತ್ತು. ಇದೀಗ ವಿಜಿ ಬರ್ತ್‌ಡೇ ನೆಪದಲ್ಲಿ ಇದೇ ಸಿನಿಮಾದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಅನಾವರಣವಾಗಿದೆ.

Duniya Vijay Landlord Movie: ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ ಎರಡು ಬ್ಯಾಕ್ ಟು ಬ್ಯಾಕ್ ಹಿಟ್ ಪಡೆದುಕೊಂಡಿದ್ದಾರೆ. ಸಲಗ ಮತ್ತು ಭೀಮ ಚಿತ್ರಗಳಲ್ಲಿನ ನಟನೆಯ ಜತೆಗೆ ನಿರ್ದೇಶಕನಾಗಿಯೂ ಗೆದ್ದು ಬೀಗಿದ್ದಾರೆ. ಇಂತಿಪ್ಪ ದುನಿಯಾ ವಿಜಯ್ ಮುಂದಿನ ಸಿನಿಮಾ ಯಾವುದು, ಶೀರ್ಷಿಕೆ ಏನು ಎಂಬ ಕೌತುಕ ಎಲ್ಲರಲ್ಲಿಯೂ ಇತ್ತು. ಅದರಂತೆ ಈ ಹಿಂದೆಯೇ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದ ನಿರ್ದೇಶಕ ಜಡೇಶ್ ಹಂಪಿ ಮತ್ತು ದುನಿಯಾ ವಿಜಯ್ ಕಾಂಬಿನೇಷನ್‌ನ ಸಿನಿಮಾ ಇದೀಗ, ಫಸ್ಟ್ ಲುಕ್ ಜತೆಗೆ ಶೀರ್ಷಿಕೆಯನ್ನೂ ಬಿಡುಗಡೆ ಮಾಡಿದೆ.
ಈಗಾಗಲೇ ಸ್ಯಾಂಡಲ್‌ವುಡ್ ನಟ ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್‌ಮನ್ ಸಿನಿಮಾ, ಶರಣ್ ಜತೆಗಿನ ಗುರುಶಿಷ್ಯರು ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಜಡೇಶ್ ಹಂಪಿ, ಕಾಟೇರ್ ಚಿತ್ರಕ್ಕೆ ಅದ್ಭುತ ಕಥೆ ಒದಗಿಸಿದ್ದರು. ಈಗ ದುನಿಯಾ ವಿಜಯ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. "ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ" ಎಂಬ ಟ್ಯಾಗ್‌ಲೈನ್ ಮೂಲಕ ಫಸ್ಟ್ ಪೋಸ್ಟರ್ ಈ ಹಿಂದೆ ಬಿಡುಗಡೆ ಆಗಿತ್ತು. ಈಗ ಇದೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಮೊದಲ ನೋಟದಲ್ಲಿಯೇ ಇದೊಂದು ರಕ್ತಸಿಕ್ತ ಕಥೆ ಎಂಬುದು ಕಾಣಿಸಿದೆ.
ಚಿತ್ರಕ್ಕೆ ಲ್ಯಾಂಡ್‌ಲಾರ್ಡ್ ಶೀರ್ಷಿಕೆ
ಜನವರಿ 20ರಂದು ದುನಿಯಾ ವಿಜಯ್ ಅವರ ಬರ್ತ್‌ಡೇ. ಈ ಹಿನ್ನೆಲೆಯಲ್ಲಿ #VK29 ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಚಿತ್ರಕ್ಕೆ ಲ್ಯಾಂಡ್‌ಲಾರ್ಡ್ ಎಂಬ ಟೈಟಲ್ ಇಡಲಾಗಿದ್ದು, ಹೊಸ ಅವತಾರದಲ್ಲಿಯೇ ದುನಿಯಾ ವಿಜಯ್ ಕಂಡಿದ್ದಾರೆ. ನಿಗಿನಿಗಿ ಬೆಂಕಿಯ ನಡುವೆಯೇ ಎರಡೂ ಕೈಗಳಲ್ಲಿ ಕೊಡಲಿ ಹಿಡಿದುಕೊಂಡು ಕಕಡು ಕೋಪದ ಮುಖಭಾವದಲ್ಲಿ ಎದುರಾಗಿದ್ದಾರೆ. ಊರ ತೇರಿಗೆ ಬೆಂಕಿ ಬಿದ್ದರೆ, ಕೈಯಲ್ಲಿ ಬೆಂಕಿ ಹಿಡಿದು ಊರ ಗುಡಿಯ ಮುಂದೆ ಹಳ್ಳಿ ಮಂದಿ ನಿಂತಿದ್ದಾರೆ. ಒಟ್ಟಾರೆಯಾಗಿ ರಗಡ್ ಅವತಾರದಲ್ಲಿಯೇ ವಿಜಯ್ ಕಾಣಿಸಿದ್ದಾರೆ.
ಕೆ ಎಸ್ ಸೂರಜ್ ಗೌಡ ಮತ್ತು ಕೆ ವಿ ಸತ್ಯಪ್ರಕಾಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರೆ, ಜಡೇಶ್ ಕೆ ಹಂಪಿ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಅಜನೀಶ್ ಲೋಕನಾಥ್ ಸಂಗೀತ, ಸ್ವಾಮಿ ಜೆ ಗೌಡ ಅವರ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಫಸ್ಟ್ ಲುಕ್ ಮೂಲಕ ತಾಂತ್ರಿಕ ವರ್ಗದ ಪರಿಚಯ ಆಗಿದೆ. ಚಿತ್ರದ ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ರಿವೀಲ್ ಮಾಡಲಿದೆ ಚಿತ್ರತಂಡ.
ಬರ್ತ್‌ಡೇ ಆಚರಣೆಗೆ ವಿಜಯ್ ಬ್ರೇಕ್
"ಪ್ರತಿ ವರ್ಷವೂ ನನ್ನ ಹುಟ್ಟು ಹಬ್ಬವನ್ನು ನಿಮ್ಮ ಮನೆಯ ,ಊರಿನ ಹಬ್ಬವನ್ನಾಗಿ ನೀವುಗಳು ಅಂದರೆ ನನ್ನ ಅಭಿಮಾನಿಗಳು ಆಚರಣೆ ಮಾಡ್ತಾ ಇದ್ರಿ. ಈ ಬಾರಿಯೂ ನಿಮ್ಮ ಜತೆ ನಾನು ಹುಟ್ಟು ಹಬ್ಬವನ್ನು ಆಚರಿಸಬೇಕು ಎಂಬ ಆಸೆ ಇತ್ತು ಆದರೆ ಕೆಲಸ ಎಂಬ ಜವಬ್ದಾರಿ ನನ್ನ ಬೆನ್ನೆರಿದೆ. ತಾವೆಲ್ಲರೂ ನಾನು ಮಾಡುವ ಕೆಲಸಕ್ಕೆ ನನ್ನ ಜತೆ ನಿಂತು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದೀರ. ಪ್ರತಿ ಬಾರಿಯಂತೆ ಈ ಬಾರಿ ನಾನು ಹುಟ್ಟುಹಬ್ಬದ ದಿನ ನನ್ನ ತಾಯಿ, ತಂದೆ ಸಮಾಧಿ ಬಳಿ ಸಿಗುವುದಿಲ್ಲ.ಅಂದು ಜಡೇಶ್ ಕೆ ಹಂಪಿ ನಿರ್ದೇಶನ ಮಾಡುತ್ತಿರುವ VK29 ಚಿತ್ರೀಕರಣದಲ್ಲಿರುತ್ತೇನೆ. ನಿಮ್ಮ ಪ್ರೀತಿ ಅಭಿಮಾನದ ನಿರೀಕ್ಷೆಯಂತೆ ಅಂದೇ VK 29 ಚಿತ್ರದ ಫಸ್ಟ್ ಲುಕ್ ನಿಮಗಾಗಿ ಬಿಡುಗಡೆ ಮಾಡ್ತಿದ್ದೇವೆ. ವಿಶೇಷ ಮನವಿ: ಶನಿವಾರ ಭಾನುವಾರ ನಾನೂ ಊರಲ್ಲಿ ಇರುವುದಿಲ್ಲ.. ದಯವಿಟ್ಟು ಯಾರೂ ಕೂಡ ಮನೆ ಬಳಿ ಬಂದು ಕಾಯಬೇಡಿ. ಧನ್ಯವಾದಗಳು" ಎಂದಿದ್ದಾರೆ.
