Sanju Weds Geetha 2: 'ಸಂಜು ವೆಡ್ಸ್ ಗೀತಾ 2' ಸಿನಿಮಾ ವಿಮರ್ಶೆ; ಶ್ರೀಮಂತಿಕೆ ಮಧ್ಯೆ ಬಡವಾದ ಕಥೆ
ಇಡೀ ಚಿತ್ರ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಸುತ್ತ ಸುತ್ತುತ್ತದೆ. ಆದರೆ, ಇಬ್ಬರಿಗೂ ನಟಿಸುವುದಕ್ಕೆ ಹೆಚ್ಚು ಸ್ಕೋಪ್ ಇಲ್ಲ ಎಂದರೆ ತಪ್ಪಿಲ್ಲ. ಹಾಗಾದರೆ ಸಿನಿಮಾ ಹೇಗಿದೆ? ಇಲ್ಲಿದೆ ಓದಿ ವಿಮರ್ಶೆ.

‘ಸಂಜು ವೆಡ್ಸ್ ಗೀತಾ 2’ ಹೆಸರು ಕೇಳಿದ ತಕ್ಷಣ 2011ರಲ್ಲಿ ಬಿಡುಗಡೆಯಾದ ನಾಗಶೇಕರ್ ನಿರ್ದೇಶನದ ಶ್ರೀನಗರ ಕಿಟ್ಟಿ, ರಮ್ಯಾ ಅಭಿನಯದ ‘ಸಂಜು ವೆಡ್ಸ್ ಗೀತಾ’ ಚಿತ್ರದ ಮುಂದುವರೆದ ಭಾಗ ಎಂದನಿಸಬಹುದು. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಹೆಸರು ಬಿಟ್ಟರೆ ಬೇರೆ ಯಾವುದೇ ಸಂಬಂಧವಿಲ್ಲ. ‘ಸಂಜು ವೆಡ್ಸ್ ಗೀತಾ’ ಚಿತ್ರದ ಮುಂದಿನ ಭಾಗ ಖಂಡಿತ ಅಲ್ಲ. ಮುಖ್ಯ ಪಾತ್ರಧಾರಿಗಳ ಹೆಸರುಗಳು ರಿಪೀಟ್ ಆಗುವುದರ ಜೊತೆಗೆ, ಕೆಲವು ಕಲಾವಿದರು ಮತ್ತು ತಂತ್ರಜ್ಞರು ಇಲ್ಲೂ ಮುಂದುವರೆದಿದ್ದಾರೆ ಎಂಬುದು ಬಿಟ್ಟರೆ, ಮಿಕ್ಕಂತೆ ಎರಡೂ ಚಿತ್ರಗಳಿಗೆ ಯಾವುದೇ ಸಂಬಂಧವಿಲ್ಲ. ಅಲ್ಲಿ ಹಾಡುಗಳು, ಛಾಯಾಗ್ರಹಣದ ಜೊತೆಗೆ ಕಾಡುವ ಕಥೆಯೂ ಇತ್ತು. ಇಲ್ಲಿ ಅದೇ ಮಿಸ್ ಆಗಿದೆ.
‘ಸಂಜು ವೆಡ್ಸ್ ಗೀತಾ 2’ ಚಿತ್ರದ ಕಥೆ ಏನು?
ಹೆಸರೇ ಹೇಳುವಂತೆ ‘ಸಂಜು ವೆಡ್ಸ್ ಗೀತಾ 2’ ಒಂದು ಪ್ರೇಮ ಕತೆ. ಆಗರ್ಭ ಶ್ರೀಮಂತ ಗೀತಾ (ರಚಿತಾ ರಾಮ್) ರಸ್ತೆ ಒಂದರಲ್ಲಿ ಸಂಜು (ಶ್ರೀನಗರ ಕಿಟ್ಟಿ) ಎಂಬ ನೇಕಾರನನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಾಳೆ. ‘ಮಿಸ್ ಕರ್ನಾಟಕ’ ಸ್ಪರ್ಧೆಗೆ ಹೊರಟಿರುವ ಅವಳಿಗೆ ಸಂಜು ಒಂದು ಸೀರೆಯನ್ನು ಉಡುಗೊರೆಯಾಗಿ ಕೊಡುತ್ತಾನೆ. ಆ ಸೀರೆ ಉಟ್ಟು ಹೋಗುವ ಗೀತಾ ಸ್ಪರ್ಧೆಯಲ್ಲಿ ‘ಮಿಸ್ ಕರ್ನಾಟಕ’ ಆಗಿ ಆಯ್ಕೆಯಾಗುತ್ತಾಳೆ. ಅಲ್ಲಿಂದ ಸಂಜು ಮೇಲೆ ಅವಳ ಅವಳಿಗೆ ಪ್ರೀತಿಯಾಗುತ್ತದೆ. ಅವರಿಬ್ಬರ ಪ್ರೀತಿ ಮುಂದೆ ಏನೆಲ್ಲ ತಿರುವು ಪಡೆಯುತ್ತದೆ ಎಂಬುದೇ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಕಥೆ.
ಗಾಢವಾಗಿ ಮುಟ್ಟದ ಕಥೆ
‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ಹತ್ತು ವರ್ಷಗಳ ಅಂತರದಲ್ಲಿ ನಡೆಯುವ ಒಂದು ಪ್ರೇಮಕಥೆ ಇದೆ. ಅಪರಿಚಿತರಾಗಿ ಭೇಟಿಯಾಗುವ ಸಂಜು ಮತ್ತು ಗೀತಾ ಪರಸ್ಪರ ಬೇಟಿಯಾಗಿ, ನಂತರ ಅವರಿಬ್ಬರ ಮಧ್ಯೆ ಗೆಳೆತನ ಬೆಳೆದು, ಪ್ರೇಮಿಗಳಾಗಿ, ದಂಪತಿಗಳಾಗಿ ಅಲ್ಲಿಂದ ಮುಂದಿನ 10 ವರ್ಷಗಳಲ್ಲಿ ಅವರಿಬ್ಬರ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಎರಡು ತಾಸುಗಳಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕ ನಾಗಶೇಖರ್ ಮಾಡಿದ್ದಾರೆ. ಪ್ರೇಮ ಕಥೆಗಳಿಗೆ ಹೆಸರುವಾಸಿಯಾದ ನಾಗಶೇಖರ್ ಇಲ್ಲಿ ಇನ್ನೊಂದು ಪ್ರೇಮ ಕಥೆಯನ್ನು ಹೇಳಿದ್ದರಾದರೂ, ಅದು ಗಾಢವಾಗಿ ಮುಟ್ಟುವುದಿಲ್ಲ. ಚಿತ್ರದಲ್ಲಿ ಹಲವು ವಿಷಯಗಳಿವೆ. ಪ್ರಮುಖವಾಗಿ ಸಂಜು ಮತ್ತು ಗೀತಾ ಇಬ್ಬರ ಪ್ರೇಮ ಕಥೆಯ ಜೊತೆಗೆ, ಅವರ ದಾಂಪತ್ಯದಲ್ಲಿ ಸಾಕಷ್ಟು ನೋವುಗಳಿವೆ. ಇದರ ಜೊತೆಗೆ ಶಿಡ್ಲಘಟ್ಟದ ನೇಕಾರರ ಹಲವು ಸಮಸ್ಯೆಗಳನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ನಾಗಶೇಖರ್ ಮಾಡಿದ್ದಾರೆ. ಆದರೆ, ಚಿತ್ರ ಎಲ್ಲೂ ಸಹ ಪ್ರೇಕ್ಷಕರನ್ನು ಗಾಢವಾಗಿ ತಟ್ಟುವುದೇ ಇಲ್ಲ. ಚಿತ್ರ ನೀರಸವಾಗಿ ಸಾಗುತ್ತದೆ. ಪ್ರೇಕ್ಷಕರ ಮನಮುಟ್ಟುವಂತಹ ಇನ್ನೂ ಕೆಲವು ದೃಶ್ಯಗಳು ಚಿತ್ರಕ್ಕೆ ಅವಶ್ಯಕವಾಗಿತ್ತು.
ನಟನೆಗೆ ಹೆಚ್ಚು ಸ್ಕೋಪ್ ಇಲ್ಲ
ಇಡೀ ಚಿತ್ರ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಸುತ್ತ ಸುತ್ತುತ್ತದೆ. ಆದರೆ, ಇಬ್ಬರಿಗೂ ನಟಿಸುವುದಕ್ಕೆ ಹೆಚ್ಚು ಸ್ಕೋಪ್ ಇಲ್ಲ ಎಂದರೆ ತಪ್ಪಿಲ್ಲ. ಇನ್ನು, ಸಂಪತ್ ರಾಜ್, ರಂಗಾಯಣ ರಘು, ತಬಲಾ ನಾಣಿ, ಸಾಧು ಕೋಕಿಲ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಆದರೆ, ಯಾರಿಗೂ ಹೆಚ್ಚು ದೃಶ್ಯಗಳಿಲ್ಲ. ಇದ್ದರೂ ನಟನೆಗೆ ಪ್ರಾಮುಖ್ಯತೆ ಇಲ್ಲ. ಸಾಧು ಕೋಕಿಲ ಮತ್ತು ತಬಲ ನಾಣಿ ಅವರ ಕಾಮಿಡಿ ವರ್ಕೌಟ್ ಆಗಿಲ್ಲ. ಗಂಭೀರವಾದ ದೃಶ್ಯದ ಅವರಿಬ್ಬರ ದ್ವಂದ್ವಾರ್ಥದ ಸಂಭಾಷಣೆ ಇರುವ ಕಾಮಿಡಿ ಕಿರಿಕಿರಿ ಉಂಟು ಮಾಡುತ್ತದೆ. ಇನ್ನು, ರಾಗಿಣಿ ಯಾರು? ಯಾಕೆ ಬರುತ್ತಾರೆ? ಎಂಬುದು ಕೊನೆಯವರೆಗೂ ಗೊತ್ತಾಗುವುದಿಲ್ಲ.
ಇದು ಅಪ್ಪಟ ತಂತ್ರಜ್ಞರ ಸಿನಿಮಾ
‘ಸಂಜು ವೆಡ್ಸ್ ಗೀತಾ 2’ ಅಪ್ಪಟ ತಂತ್ರಜ್ಞರ ಸಿನಿಮಾ. ಇಡೀ ಸಿನಿಮಾದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಗಮನ ಸೆಳೆಯುವುದು ಛಾಯಾಗ್ರಾಹಕ ಸತ್ಯ ಹೆಗಡೆ. ಸತ್ಯ ಅವರು ಇಡೀ ಚಿತ್ರವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಬೆಟ್ಟ-ಗುಡ್ಡಗಳಿರಲಿ, ಕತ್ತಲು ತುಂಬಿದ ಕೋಣೆ ಇರಲಿ … ಇಡೀ ಚಿತ್ರವನ್ನು ಸತ್ಯ ಹೆಗಡೆ ಸುಂದರಗೊಳಿಸಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತದಲ್ಲಿ ಮೂಡಿಬಂದಿರುವ ‘ಮಳೆಯಂತೆ ಬಾ …’, ‘ಅವನು ಸಂಜು ಇವಳು ಗೀತಾ …’ ಮುಂತಾದ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಚಿತ್ರಕಥೆಯೇ ಹಾಗಿರುವುದರಿಂದ ಆ್ಯಂಥೋನಿ ಸಂಕಲನದ ಬಗ್ಗೆ ಹೆಚ್ಚು ಮಾತನಾಡುವಂತಿಲ್ಲ.
ನಿರ್ಮಾಪಕ ಛಲವಾದಿ ಕುಮಾರ್ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ರೋಲ್ಸ್ ರಾಯ್ಸ್ ಕಾರು, ಹೆಲಿಕಾಪ್ಟರ್, ಸ್ವಿಟ್ಜರ್ಲ್ಯಾಂಡ್ ಪರಿಸರ ಇವೆಲ್ಲವೂ ಇದೆ. ಚಿತ್ರಕ್ಕೆ ಏನು ಬೇಕೋ ಅವೆಲ್ಲವನ್ನೂ ಅವರು ಕೊಟ್ಟಿದ್ದಾರೆ. ಆದರೆ, ಅದಕ್ಕೆ ತಕ್ಕ ಹಾಗೆ ಒಂದು ಗಟ್ಟಿ ಕಥೆ ಇಲ್ಲ. ಶ್ರೀಮಂತಿಕೆ, ಸುಂದರ ದೃಶ್ಯಗಳು ಮತ್ತು ಗುನುಗುವ ಹಾಡುಗಳ ಜೊತೆಗೆ ಒಳ್ಳೆಯ ಕಥೆಯೂ ಸೇರಿದ್ದರೆ, ಚಿತ್ರ ಪ್ರೇಕ್ಷಕರು ಇಟ್ಟ ನಿರೀಕ್ಷೆ ಹುಸಿಯಾಗುತ್ತಿರಲಿಲ್ಲ.
ಸಿನಿಮಾ: ಸಂಜು ವೆಡ್ಸ್ ಗೀತಾ 2
ಜಾನರ್: ಲವ್‍ಸ್ಟೋರಿ
ನಿರ್ದೇಶನ: ನಾಗಶೇಖರ್
ನಿರ್ಮಾಣ: ಛಲವಾದಿ ಕುಮಾರ್
ಸಂಗೀತ: ಶ್ರೀಧರ್ ಸಂಭ್ರಮ್
ಛಾಯಾಗ್ರಹಣ: ಸತ್ಯ ಹೆಗಡೆ
ಸಿನಿಮಾದ ಅವಧಿ: 122 ನಿಮಿಷ
ಎಚ್‍ಟಿ ಕನ್ನಡ ರೇಟಿಂಗ್: 2.5/5
ವಿಮರ್ಶೆ: ಚೇತನ್ ನಾಡಿಗೇರ್
