‘ಸಂಜು ವೆಡ್ಸ್ ಗೀತಾ 2’ ಜ 10ರಂದು ಬಿಡುಗಡೆಯಾಗೋದು ಅನುಮಾನ; ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟನೆಯ ಸಿನಿಮಾಕ್ಕೆ ಸಂಕಷ್ಟ
ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾ ' ಸಂಜು ವೆಡ್ಸ್ ಗೀತಾ 2" ಜನವರಿ 10 ಅಂದರೆ ನಾಳೆ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಈ ಸಿನಿಮಾ ಬಿಡುಗಡೆ ಆಗುತ್ತಾ? ಇಲ್ವಾ? ಎಂಬ ಪ್ರಶ್ನೆ ಮೂಡಿದೆ.
ನಾಗಶೇಖರ್ ನಿರ್ದೇಶನದ ಮತ್ತು ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಬಿಡುಗಡೆ ಮುಂದೂಡಿಕೆ ಆಗುತ್ತಿರುವ ಸುದ್ದಿಯೊಂದು ಹರಿದಾಡುತ್ತಿತ್ತು. ಅದು ನಿಜವೇ ಆದರೆ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆಗೆ ಸ್ಟೇ ಇರುವ ಕಾರಣ, ಅನಿವಾರ್ಯ ಕಾರಣಗಳಿಂದ ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ. ಚಿತ್ರವನ್ನು ಅಂದುಕೊಂಡಂತೆಯೇ ನಾಳೆ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ಹೋರಾಟ ಮುಂದುವರೆಸಿದ್ದು, ಈ ನಿಟ್ಟಿನಲ್ಲಿ ಮುಂದೇನಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ನಾಳೆ ಬಿಡುಗಡೆ ಆಗುವುದು ಅನುಮಾನ
ಚಿತ್ರತಂಡದವರು ಚಿತ್ರ ಮುಂದೂಡುತ್ತಿರುವ ವಿಷಯವನ್ನು ಸದ್ಯಕ್ಕೆ ಎಲ್ಲೂ ಬಹಿರಂಗಗೊಳಿಸದಿದ್ದರೂ, ಸದ್ಯದ ಮಟ್ಟಿಗೆ ಚಿತ್ರ ನಾಳೆ ಬಿಡುಗಡೆ ಆಗುತ್ತಿರುವುದು ಅನುಮಾನ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕವಾಗಿ, ಬಕ್‍ಮೈಶೋನಲ್ಲಿ ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಬೆರಳಣಿಕೆಯಷ್ಟು ಚಿತ್ರಮಂದಿರಗಳು ಮತ್ತು ಪ್ರದರ್ಶನಗಳು ಬಿಟ್ಟರೆ, ಮಿಕ್ಕಂತೆ ಹೆಚ್ಚು ಪ್ರದರ್ಶನಗಳನ್ನು ತೋರಿಸುತ್ತಿಲ್ಲ. ಹಾಗಾಗಿ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿರುವುದು ಸದ್ಯದ ಮಟ್ಟಿಗೆ ಬಹುತೇಕ ಖಚಿತವಾಗಿದ್ದು, ಚಿತ್ರತಂಡದಿಂದ ಅಧಿಕೃತ ಘೋಷಣೆಯೊಂದು ಹೊರಬೀಳಬೇಕಿದೆ. ಮಧ್ಯಾಹ್ನ ಮೂರರ ವೇಳೆಗೆ ಚಿತ್ರದ ಬಿಡುಗಡೆಗೆ ಸ್ಪಷ್ಟತೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
2011ರಲ್ಲಿ ಬಿಡುಗಡೆಯಾಗಿತ್ತು ‘ಸಂಜು ವೆಡ್ಸ್ ಗೀತಾ’ ಚಿತ್ರ
‘ಸಂಜು ವೆಡ್ಸ್ ಗೀತಾ’ ಚಿತ್ರವು 2011ರಲ್ಲಿ ಬಿಡುಗಡೆಯಾಗಿತ್ತು. ಸಂಜು ಮತ್ತು ಗೀತಾ ಎಂಬ ಯುವ ಪ್ರೇಮಿಗಳ ದುರಂತಕಥೆಯಾದ ‘ಸಂಜು ವೆಡ್ಸ್ ಗೀತಾ’ ದೊಡ್ಡ ಯಶಸ್ಸು ಕಂಡಿತ್ತು. ಆ ಚಿತ್ರದ ಹಾಡುಗಳು ಈಗಲೂ ಸಾಕಷ್ಟು ಜನಪ್ರಿಯವಾಗಿವೆ. ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಪ್ರೇಮಕಾವ್ಯವನ್ನು ನಾಗಶೇಖರ್ ಈ ಚಿತ್ರದಲ್ಲಿ ಹೇಳಹೊರಟಿದ್ದಾರಂತೆ.
ಪಾತ್ರವರ್ಗ
ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: Ramachari Serial: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ನಿರ್ಧಾರ ಮಾಡಿದ ಚಾರು; ವೈಶಾಖಾಳ ನಾಟಕ ತಂದಿಟ್ಟಿದೆ ಸಂಕಟ