Choomantar Review: 'ಛೂ ಮಂತರ್' ಚಿತ್ರವಿಮರ್ಶೆ- ರೋಚಕ ಕಥೆ, ಊಹೆಗೂ ನಿಲುಕದ ತಿರುವು; ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಶರಣ್
ಕನ್ನಡ ಸುದ್ದಿ  /  ಮನರಂಜನೆ  /  Choomantar Review: 'ಛೂ ಮಂತರ್' ಚಿತ್ರವಿಮರ್ಶೆ- ರೋಚಕ ಕಥೆ, ಊಹೆಗೂ ನಿಲುಕದ ತಿರುವು; ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಶರಣ್

Choomantar Review: 'ಛೂ ಮಂತರ್' ಚಿತ್ರವಿಮರ್ಶೆ- ರೋಚಕ ಕಥೆ, ಊಹೆಗೂ ನಿಲುಕದ ತಿರುವು; ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಶರಣ್

Choomantar Review: ಕನ್ನಡದ ಸ್ಟಾರ್ ನಟ ಶರಣ್ ಅಭಿನಯದ ಹಾರರ್, ಕಾಮಿಡಿ ಸಿನಿಮಾ ‘ಛೂ ಮಂತರ್’ ಚಿತ್ರವಿಮರ್ಶೆ ಇಲ್ಲಿದೆ. ಒಂದಕ್ಕಿಂತ ಒಂದು ರೋಚಕ ತಿರುವು ಪಡೆದುಕೊಳ್ಳುವ ಕಥೆಗಳೊಂದಿಗೆ ಶರಣ್ ಈ ಸಿನಿಮಾದಲ್ಲಿ ದ್ವಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

'ಛೂ ಮಂತರ್' ಚಿತ್ರವಿಮರ್ಶೆ
'ಛೂ ಮಂತರ್' ಚಿತ್ರವಿಮರ್ಶೆ

Choomantar Review: ಕನ್ನಡದ ಸ್ಟಾರ್ ನಟ ಶರಣ್ ಅಭಿನಯದ ಹಾರರ್, ಕಾಮಿಡಿ ಸಿನಿಮಾ ‘ಛೂ ಮಂತರ್’ ಬಿಡುಗಡೆಯಾಗಿದೆ. ಕಥೆಯಲ್ಲೊಂದು ಕಥೆ, ಆ ಕಥೆಯಲ್ಲಿ ಇನ್ನೊಂದು ಕಥೆ ಹೀಗೆ ಸಿನಿಮಾ ಮೊದಲಿನಿಂದ ಕೊನೆಯವರೆಗೂ ಸಾಕಷ್ಟು ಕುತೂಹಲವನ್ನೇ ಸೃಷ್ಟಿಸುತ್ತಾ ಸಾಗುತ್ತದೆ. ಈ ಸಿನಿಮಾದಲ್ಲಿ ಯಾವುದನ್ನೂ ನಾವು ಊಹೆ ಮಾಡಲು ಸಾಧ್ಯವಿಲ್ಲ. ಮುಂದೆ ಹೀಗಾಗಬಹುದು ಎಂಬ ಊಹೆ ಇರದ ರೀತಿಯಲ್ಲಿ ಕಥೆ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ. ಈ ಸಿನಿಮಾದಲ್ಲಿ ಸಾಕಷ್ಟು ಕಲಾವಿದರು ಪಾತ್ರ ಮಾಡಿದ್ದು ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಒಂದೇ ಒಂದು ಬಂಗ್ಲೆಯಲ್ಲಿ ನಡೆಯುವ ಕಥೆಯನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾದ ಮುಕ್ಕಾಲು ಭಾಗ ಅದೇ ಬಂಗ್ಲೆಯಲ್ಲಿ ಚಿತ್ರೀಕರಣಗೊಂಡಿದೆ.

ಶರಣ್, ಚಿಕ್ಕಣ್ಣ, ಅದಿತಿ ಪ್ರಭುದೇವ್ ಇವರೆಲ್ಲರ ಒಂದು ತಂಡ ದೆವ್ವಗಳನ್ನು ಬಿಡಿಸುವ ಅಥವಾ ಆತ್ಮಗಳ ಚಟುವಟಿಕೆಯ (ಪ್ಯಾರಾನಾರ್ಮಲ್) ಬಗ್ಗೆ ಅಧ್ಯಯನ ಮಾಡಿ ಪರಿಹಾರ ಕೊಡುವ ತಂಡವಾಗಿರುತ್ತದೆ. ಆದರೆ ಅದರಲ್ಲಿ ಕೂಡ ಕುತೂಹಲಕಾರಿ ಅಂಶ ಇದೆ. ತಂಡದೊಳಗೇ ಒಬ್ಬಳಾಗಿದ್ದ ಕ್ಲಾರಾ (ಅದಿತಿ) ತಮ್ಮ ಪೂರ್ವಜರ ಆಸ್ತಿಯನ್ನು ಉಳಿಸಿಕೊಳ್ಳಲು ಗೌತಮ್‌ (ಶರಣ್‌) ತಂಡವನ್ನು ಸೇರಿಕೊಂಡಿರುತ್ತಾಳೆ. ಆದರೆ ಈ ಬಗ್ಗೆ ಸಿನಿಮಾ ಮುಗಿಯಲು ಕೊನೆಯ 30 ನಿಮಿಷಗಳಿರುವವರೆಗೂ ಯಾವ ಸುಳಿವೂ ಸಿಗುವುದಿಲ್ಲ.

ದ್ವಿಪಾತ್ರದಲ್ಲಿ ಶರಣ್ ಅಭಿನಯ

ಡೈನಾಮೊ ಎಂಬ ಒಂದು ವಿಶೇಷ ಪಾತ್ರದಲ್ಲಿ ಶರಣ್ ಕಾಣಿಸಿಕೊಂಡಿದ್ದಾರೆ. ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲೂ ಶರಣ್ ಅಭಿನಯಿಸಿದ್ದಾರೆ. ಅವರಿಗೆ ಚಿಕ್ಕಣ್ಣ ತುಂಬಾ ಚೆನ್ನಾಗಿ ಸಾಥ್‌ ನೀಡಿದ್ದಾರೆ. ಚಿಕ್ಕಣ್ಣ ಇರುವ ಪ್ರತಿ ದೃಶ್ಯಗಳಲ್ಲೂ ಮನರಂಜನೆ ತುಂಬಿ ತುಳುಕಿದೆ. ಒಂದೊಂದು ಮಾತೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಶರಣ್ ಇದ್ದಾರೆ ಎಂದರೆ ಅದು ಕಾಮಿಡಿ ಸಿನಿಮಾ ಎಂದು ಮೊದಲು ತಿಳಿದುಕೊಳ್ಳಬಹುದಿತ್ತು, ಆದರೆ ಇತ್ತೀಚೆಗೆ ಅವರು ಹಾರರ್ ಸ್ಟಾರ್‌ ಎಂಬ ಬಿರುದು ಪಡೆದುಕೊಳ್ಳುವ ಮಟ್ಟಿಗೆ ಭಯಾನಕ ದೃಶ್ಯಗಳಿರುವ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಈ ಸಿನಿಮಾದಲ್ಲೂ ಅಷ್ಟೇ ಕಾಮಿಡಿಗಿಂತ ಹಾರರ್ ಕಥನವೇ ಹೆಚ್ಚಾಗಿದೆ. ಕಾಮಿಡಿ ಸಿನಿಮಾ ಎನ್ನುವುದಕ್ಕಿಂತ ಹಾರರ್ ಸಿನಿಮಾ ಎನ್ನಬಹುದು.

ಒಂದೇ ಬಂಗ್ಲೆಯಲ್ಲಿ ನಡೆಯುವ ಕಥೆ

ಮುಖ್ಯವಾಗಿ ಮಾರ್ಗನ್ ಹಾಂಟೆಡ್‌ ಹೌಸ್‌ನ ಬಗ್ಗೆ ಈ ಸಿನಿಮಾ ಇದೆ. ಅಲ್ಲಿ ಸತ್ತ ಹಲವರು ಆತ್ಮವಾಗಿ ಆ ಮನೆಯಲ್ಲಿ ನೆಲೆಸಿ ಆ ಮಾರ್ಗನ್ ಬಂಗ್ಲೆಯಲ್ಲಿ ಯಾರೂ ವಾಸ ಮಾಡಲು ಸಾಧ್ಯವಾಗದ ಮಟ್ಟಿಗೆ ಕಾಟ ಆರಂಭವಾಗಿರುತ್ತದೆ. ಕೋಟ್ಯಾಂತರ ಬೆಲೆ ಬಾಳುವ ನಿಧಿ ಇರುವ ಆ ಬಂಗ್ಲೆಯಲ್ಲಿ ಏನಾಗುತ್ತದೆ ಎಂಬುದೇ ಚಿತ್ರದ ಉದ್ದಕ್ಕೂ ಇದೆ. ಗುರುಕಿರಣ್, ಹಾಗೂ ಪ್ರಥಮ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಸಿನಿಮಾದ ಕೊನೆಯಲ್ಲಿ ವಿಷ್ಣುವರ್ಧನ್ ಎಂಟ್ರಿ!

ಸಿನಿಮಾ ಇನ್ನೇನು ಮುಗಿಯುತ್ತದೆ ಎಂದು ಎಲ್ಲರಿಗೂ ಅನಿಸುವಾಗ ಕಥೆಯಲ್ಲಿ ಇನ್ನೊಂದು ತಿರುವು ಇದೆ. ಮುಂದೆ ಛೂ ಮಂತರ್ 2 ಸಿನಿಮಾ ಬರುವುದರಲ್ಲಿ ಅನುಮಾನ ಇಲ್ಲ ಎಂದೆನಿಸುತ್ತದೆ. ಆ ಬಗ್ಗೆ ಸಿನಿಮಾದ ಕೊನೆಯಲ್ಲಿ ಸುಳಿವು ನೀಡಿದ್ದಾರೆ. ವಿಶೇಷವಾಗಿ ಸಿನಿಮಾದ ಕೊನೆಯಲ್ಲಿ ನಟ ವಿಷ್ಣುವರ್ಧನ್ ಧ್ವನಿ ಮತ್ತು ಅವರೇ ಅಭಿನಯಿಸುತ್ತಿದ್ದಾರೆ ಎಂಬಷ್ಟು ನೈಜವಾದ ಚಿತ್ರಣ ಕಟ್ಟಿಕೊಟ್ಟಿದ್ದು ಇದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ಶರಣ್ ಅವರ ಬಳಿ ಫೋನ್‌ಕಾಲ್‌ನಲ್ಲಿ ಮಾತನಾಡಿ “ಇನ್ನೊಂದು ಸಮಸ್ಯೆ ಆರಂಭವಾಗಿದೆ ಅದಕ್ಕೆ ನಿನ್ನ ಸಹಾಯ ಬೇಕು” ಎಂದು ಹೇಳುವ ದೃಶ್ಯವಿದೆ. ಗ್ರಾಫಿಕ್ಸ್‌ ದೃಶ್ಯಗಳೂ ಚೆನ್ನಾಗಿವೆ.

ಚಿತ್ರತಂಡ

ಶರಣ್, ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್, ನರಸಿಂಹ ಜಾಲಹಳ್ಳಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನವಿರುವ "ಛೂ ಮಂತರ್" ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಸಿನಿಮಾ: ಛೂ ಮಂತರ್

ನಿರ್ದೇಶನ: ನವನೀತ್

ಪಾತ್ರವರ್ಗ: ಶರಣ್, ಅದಿತಿ, ಚಿಕ್ಕಣ್ಣ, ಮೇಘನಾ ಗಾಂವ್ಕರ್, ಪ್ರಭು ಮುಂಡ್ಕರ್

ನಿರ್ಮಾಣ: ತರುಣ್ ಶಿವಪ್ಪ

ಸ್ಟಾರ್: 3.5/5

ವಿಮರ್ಶೆ: ಸುಮಾ ಕಂಚೀಪಾಲ್

Whats_app_banner