Kannada Film: 2025ಕ್ಕೆ ಕಾದಿವೆ ಸ್ಟಾರ್ ನಟರ ಒಂದಷ್ಟು ಸಿನಿಮಾಗಳು; ಇಲ್ಲಿದೆ ಸ್ಯಾಂಡಲ್‌ವುಡ್‌ನ ಮುಂಬರಲಿರುವ ಮೂವಿ ಲಿಸ್ಟ್
Upcoming Kannada Films: ಹೊಸ ವರ್ಷ ಬಂದಾಯ್ತು ಈ ವರ್ಷ ಮನರಂಜನೆ ನೀಡಲು ಕೆಲ ಮೂವಿಗಳು ಈಗಾಗಲೇ ಸಜ್ಜಾಗಿದ್ದು, ಬಿಡುಗಡೆ ದಿನಾಂಕ ನಿಗದಿಯಾಗಿಲ್ಲ. 2025ಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಲಿಸ್ಟ್ ಇಲ್ಲಿದೆ. ಬರಹ: ಚೇತನ್ ನಾಡಿಗೇರ್
Upcoming Kannada Films: ಕಳೆದ ವರ್ಷ 2024 ಹೊಸ ಉತ್ಸಾಹದೊಂದಿಗೆ ಪ್ರಾರಂಭವಾಗಿತ್ತು. ಅದಕ್ಕೆ ಕಾರಣ, ‘ಕಾಟೇರ’ ಚಿತ್ರದ ಯಶಸ್ಸು. 2023ರ ಡಿಸೆಂಬರ್ 29ರಂದು ಈ ಸಿನಿಮಾ ಬಿಡುಗಡೆಯಾಯಿತು. ಹೊಸ ವರ್ಷಕ್ಕೆ ಹೊಸ ಮುನ್ನುಡಿ ಬರೆಯಿತು. ಆದರೆ, ನಂತರದ ದಿನಗಳು ಕನ್ನಡ ಚಿತ್ರರಂಗಕ್ಕೆ ಅಷ್ಟೇನೂ ಚೆನ್ನಾಗಿರಲಿಲ್ಲ. ಜನಪ್ರಿಯ ನಟರ ಒಂದಿಷ್ಟು ನಿರೀಕ್ಷಿತ ಚಿತ್ರಗಳು ಬಿಡುಗುಡೆಯಾಗಲಿಲ್ಲ. ಬಿಡುಗಡೆಯಾಗಿದ್ದೆಲ್ಲಾ ಹೊಸಬರ ಚಿತ್ರಗಳೇ. ನಿರೀಕ್ಷಿತ ಚಿತ್ರಗಳೇನಿದ್ದರೂ ಬಿಡುಗಡೆಯಾಗಿದ್ದು ಆಗಸ್ಟ್ ನಂತರವೇ. ಮೊದಲ ಚಿತ್ರವಾಗಿ ‘ಭೀಮ’ ಬಿಡುಗಡೆಯಾಯಿತು. ಆ ನಂತರ ‘ಕೃಷ್ಣಂ ಪ್ರಣಯ ಸಖಿ’, ‘ಬಘೀರ’, ‘ಭೈರತಿ ರಣಗಲ್’, ‘UI’ ಮತ್ತು ‘ಮ್ಯಾಕ್ಸ್’ ಚಿತ್ರಗಳು ಬಿಡುಗಡೆಯಾದವು.
ಹಬ್ಬದ ಸೀಸನ್‍ಗೆ ‘ಕೆಡಿ – ದಿ ಡೆವಿಲ್’
ಈ ವರ್ಷವೂ ಅದಕ್ಕೆ ಹೊರತಲ್ಲ. ಈಗಾಗಲೇ ಒಂದಿಷ್ಟು ಚಿತ್ರಗಳು ಬಿಡುಗಡೆ ಆಗುವುದಕ್ಕೆ ಸಜ್ಜಾಗಿದ್ದರೂ, ನಿರೀಕ್ಷಿತ ಚಿತ್ರಗಳು ಕಡಿಮೆಯೇ. ಜನಪ್ರಿಯ ಸ್ಟಾರ್ ನಟರ ಚಿತ್ರಗಳು ಕಡಿಮೆಯೇ. ಬಹುಶಃ ಈ ವರ್ಷದ ಮೊದಲ ಚಿತ್ರವಾಗಿ ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್’ ಚಿತ್ರವು ಬಿಡುಗಡೆಯಾಗುತ್ತದೆ. ಕಳೆದ ವರ್ಷವೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರೀಕರಣ ಮುಗಿಯದ ಕಾರಣ, ಚಿತ್ರ ಈ ವರ್ಷ ಬಿಡುಗಡೆಯಾಗಲಿದೆ. ಈ ವರ್ಷದ ಹಬ್ಬದ ಸೀಸನ್‍ನಲ್ಲಿ ಚಿತ್ರ ಬಿಡುಗಡೆ ಎಂದು ನಿರ್ದೇಶಕ ಪ್ರೇಮ್ ಹೇಳಿಕೊಂಡಿದ್ದಾರೆ. ಆದರೆ ಅದು ಯುಗಾದಿ ಹಬ್ಬಕ್ಕೋ, ವರಮಹಾಲಕ್ಷ್ಮೀ ಹಬ್ಬಕ್ಕೋ ಗೊತ್ತಿಲ್ಲ. ವರಮಹಾಲಕ್ಷ್ಮೀ ಹಬ್ಬವೇನಾದರೂ ಆದರೆ, ಚಿತ್ರ ಬಿಡುಗಡೆಗೆ ಇನ್ನೂ ಎಂಟು ತಿಂಗಳು ಕಾಯಬೇಕು.
ಏಪ್ರಿಲ್-ಮೇ ಹೊತ್ತಿಗೆ ‘45’
ಅರ್ಜುನ್ ಜನ್ಯ ನಿರ್ದೇಶನದ ಬಹುನಿರೀಕ್ಷಿತ ಚಿತ್ರವೆಂದರೆ ಅದು ‘45’. ಈ ಚಿತ್ರಕ್ಕೆ ಜನ ಕಾಯುತ್ತಿರುವುದಕ್ಕೂ ಕಾರಣವಿದೆ. ಪ್ರಮುಖವಾಗಿ, ಈ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಜೊತೆಯಾಗಿ ನಟಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶಿಸುತ್ತಿದ್ದಾರೆ. ಹಾಗಾಗಿ, ಸಹಜವಾಗಿಯೇ ನಿರೀಕ್ಷೆ ಮತ್ತು ಕುತೂಹಲಗಳಿವೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯುತ್ತಾ ಬಂದಿವೆ. ಚಿತ್ರದ ಬಿಡುಗಡೆ ದಿನಾಂಕ ಮಾತ್ರ ಘೋಷಣೆಯಾಗಿಲ್ಲ. ಬಹುಶಃ ಏಪ್ರಿಲ್ ಅಥವಾ ಮೇನಲ್ಲಿ ಬಿಡುಗಡೆ ಎಂದು ಹೇಳಲಾಗುತ್ತಿದೆ.
‘ಡೆವಿಲ್’ ಆಗಿ ಬರಲಿರುವ ದರ್ಶನ್
ದರ್ಶನ್ ಅಭಿನಯದ ‘ಡೆವಿಲ್’, ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರಿದ್ದರಿಂದ, ಅಂದುಕೊಂಡಂತೆ ಚಿತ್ರೀಕರಣ ನಡೆಯಲಿಲ್ಲ. ಇದೀಗ ದರ್ಶನ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ, ಇನ್ನೂ ಚಿಕಿತ್ಸೆ ಪಡೆಯುತ್ತಿರುವುದರಿಂದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿಲ್ಲ. ಬಹುಶಃ ಫೆಬ್ರವರಿಯಿಂದ ಚಿತ್ರೀಕರಣದಲ್ಲಿ ಭಾಗಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರತೀ ವರ್ಷದ ಮೊದಲ ದಿನ ಅವರು ಕೆಲಸ ಮಾಡುವುದರಿಂದ, ಇಂದು ಸಹ ಚಿತ್ರದ ಡಬ್ಬಿಂಗ್ ಮಾಡುವ ಮೂಲಕ ಕೆಲಸ ಮುಂದುವರೆಸಲಿದ್ದಾರೆ ಎಂದು ಹೇಳಲಾಗಿದೆ. ಫೆಬ್ರವರಿಯಲ್ಲಿ ಅಂದುಕೊಂಡಂತೆ ಚಿತ್ರೀಕರಣ ಪ್ರಾರಂಭವಾಗಿ ಮುಗಿದರೆ, ಐಪಿಎಲ್ ಮುಗಿದ ಮೇಲೆ ಚಿತ್ರ ಬಿಡುಗಡೆ ಆಗುವ ನಿರೀಕ್ಷೆ ಇದೆ.
‘ರಾಚಯ್ಯ’ನಾಗಿ ಬರಲಿದ್ದಾರೆ ‘ದುನಿಯಾ ವಿಜಯ್
‘ದುನಿಯಾ’ ವಿಜಯ್ ಅಭಿನಯದ ‘ರಾಚಯ್ಯ’ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಪ್ರಾರಂಭವಾಗಿದ್ದು, ಬಹುತೇಕ ಭಾಗದ ಚಿತ್ರೀಕರಣ ಮುಗಿದಿದೆ ಎಂದು ಹೇಳಲಾಗಿದೆ. ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸಿ, ಆ ಚಿತ್ರವನ್ನು ತೆರೆಗೆ ತರುವುದಕ್ಕೆ ಚಿತ್ರತಂಡ ಮುಂದಾಗಿದೆ. ಜಡೇಶ್ ಹಂಪಿ ನಿರ್ದೇಶನದ ಈ ಚಿತ್ರ ಸಹ ಬಹುಶಃ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆ ಆದರೆ ಆಶ್ಚರ್ಯವಿಲ್ಲ.
ದೇಶದ ನಿರೀಕ್ಷಿತ ಚಿತ್ರವಾದ ‘ಕಾಂತಾರ – ಅಧ್ಯಾಯ 1’
‘ಕಾಂತಾರ – ಅಧ್ಯಾಯ 1’ ಚಿತ್ರವು ಅಕ್ಟೋಬರ್ 02ರಂದು ಬಿಡುಗಡೆ ಆಗಲಿದೆ ಎಂದು ಕೆಲವು ತಿಂಗಳುಗಳ ಹಿಂದೆಯೇ ನಟ-ನಿರ್ದೇಶಕ ರಿಷಭ್ ಶೆಟ್ಟಿ ಘೋಷಣೆ ಮಾಡಿದ್ದಾರೆ. ಈ ಚಿತ್ರವು ವರ್ಷದ ನಿರೀಕ್ಷಿತ ಚಿತ್ರವಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಅತೀ ನಿರೀಕ್ಷಿತ ಚಿತ್ರವೂ ಹೌದು. ಕಾರಣ, ‘ಕಾಂತಾರ’ ಚಿತ್ರದ ಯಶಸ್ಸು. 20224ರಲ್ಲಿ ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಈ ಚಿತ್ರವು ನಂತರದ ದಿನಗಳಲ್ಲಿ ಅದೆಷ್ಟು ಯಶಸ್ವಿಯಾಯಿತೆಂದರೆ, ದೊಡ್ಡ ಗಳಿಕೆ ಮಾಡುವುದಷ್ಟೇ ಅಲ್ಲ, ಬೇರೆ ಭಾಷೆಗಳಿಗೂ ಸಹ ಡಬ್ ಆಗಿ ಅಲ್ಲೂ ಜನಪ್ರಿಯವಾಯಿತು. ‘ಕಾಂತಾರ – ಅಧ್ಯಾಯ 1’ ಚಿತ್ರವು ‘ಕಾಂತಾರ’ದ ಪ್ರೀಕ್ವೆಲ್ ಆದ್ದರಿಂದ, ಬರೀ ರಾಜ್ಯದಲ್ಲಷ್ಟೇ ಅಲ್ಲ, ಇಡೀ ದೇಶದ ನಿರೀಕ್ಷಿತ ಚಿತ್ರವಾಗಿದೆ.
ಶಿವಣ್ಣ ವಾಪಸ್ಸಾದ ಮೇಲೆ ‘ಉತ್ತರಕಾಂಡ’
ಶಿವರಾಜಕುಮಾರ್ ಮತ್ತು ಧನಂಜಯ್ ಅಭಿನಯದ ‘ಉತ್ತರಕಾಂಡ’ ಚಿತ್ರವು ನಿಂತಿಲ್ಲ ಎಂದು ನಿರ್ಮಾಪಕ ಕಾರ್ತಿಕ್ ಗೌಡ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸದ್ಯ ಶಿವರಾಜಕುಮಾರ್ ಅವರು ಚಿಕಿತ್ಸೆಯಲ್ಲಿರುವುದರಿಂದ ಚಿತ್ರ ನಿಂತಿದ್ದು, ಅವರು ವಾಪಸ್ಸಾದ ಮೇಲೆ ಚಿತ್ರ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ. ಅದರಂತೆ ಚಿತ್ರವು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಪುನಃ ಶುರುವಾಗುವ ಸಾಧ್ಯತೆ ಇದೆ. ಅಂದುಕೊಂಡಂತೆ ಆದರೆ, ಈ ವರ್ಷದ ಕೊನೆಗೆ ಚಿತ್ರ ಬಿಡುಗಡೆ ಆಗಲಿದೆ.
‘ಟಾಕ್ಸಿಕ್’ ಬಿಡುಗಡೆ ಮಾಹಿತಿ ಇಲ್ಲ
ಏಪ್ರಿಲ್ 10ರಂದು ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮೊದಲೇ ಘೋಷಣೆ ಮಾಡಿತ್ತು. ಆದರೆ, ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲ. ದೊಡ್ಡ ಚಿತ್ರವಾದ್ದರಿಂದ, ಚಿತ್ರೀಕರಣ ಮುಗಿಯುವುದಕ್ಕೆ ಇನ್ನಷ್ಟು ಸಮಯ ಬೇಕಿದೆ. ಎಲ್ಲವನ್ನೂ ಮುಗಿಸಿ, ವರ್ಷದ ಕೊನೆಗಾದರೂ ಚಿತ್ರ ಬಿಡುಗಡೆಯಾಗಬಹುದಾ? ಎಂಬ ಆಸೆಯಿಂದ ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಒಂದು ಪಕ್ಷ ಮಿಸ್ ಆದರೆ, ಮುಂದಿನ ವರ್ಷವಂತೂ ಚಿತ್ರ ಬಿಡುಗಡೆ ಆಗುವುದರಲ್ಲಿ ಅನುಮಾನವಿಲ್ಲ.
ಇನ್ನಷ್ಟು, ಮತ್ತಷ್ಟು ಚಿತ್ರಗಳು
ಇದು ದೊಡ್ಡ ಸ್ಟಾರ್ ನಟರ ಚಿತ್ರಗಳ ಪಟ್ಟಿ ಮಾತ್ರ. ಇದಲ್ಲದೆ ಶ್ರೀನಗರ ಕಿಟ್ಟಿ ಅಭಿನಯದ ‘ಸಂಜು ವೆಡ್ಸ್ ಗೀತಾ 2’, ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’, ಪ್ರಜ್ವಲ್ ಅಭಿನಯದ ‘ಕರಾವಳಿ’, ಯುವ ರಾಜಕುಮಾರ್ ಅಭಿನಯದ ‘ಎಕ್ಕ’, ಗಣೇಶ್ ಮತ್ತು ರಮೇಶ್ ಅರವಿಂದ್ ಅಭಿನಯದ ‘ಯುವರ್ಸ್ ಸಿನ್ಸಿಯರ್ಲಿ ರಾಮ್’, ಧನಂಜಯ್ ಅಭಿನಯದ ‘ಅಣ್ಣ ಫ್ರಮ್ ಮೆಕ್ಸಿಕೋ’ ಮುಂತಾದ ಹಲವು ಚಿತ್ರಗಳು ಪಟ್ಟಿಯಲ್ಲಿದೆ. ಈ ಪೈಕಿ ಕೆಲವು ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆಯಾದರೆ, ಇನ್ನೂ ಕೆಲವು ಚಿತ್ರಗಳ ಘೋಷಣೆಯಾಗಿಲ್ಲ.
ಬರಹ: ಚೇತನ್ ನಾಡಿಗೇರ್
ಇದನ್ನೂ ಓದಿ: ಕಿಚ್ಚನ ಮ್ಯಾಕ್ಸ್ vs ಉಪ್ಪಿಯ ಯುಐ! 2024ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡದ ಸಿನಿಮಾ ಯಾವುದು?
ವಿಭಾಗ