ರಮೇಶ್ ಅರವಿಂದ್ ನಟನೆಯ ಅಮೆರಿಕಾ ಅಮೆರಿಕಾ ಸಿನಿಮಾ ಬಿಡುಗಡೆಯಾಗಿ 28 ವರ್ಷ; ನಾಗತಿಹಳ್ಳಿ ಚಂದ್ರಶೇಖರ್ ಹೃದಯಸ್ಪರ್ಶಿ ನೆನಪು
28 Years for America America: ಕನ್ನಡಿಗರ ಮನದಲ್ಲಿ ಇಂದಿಗೂ ಹಸಿರಾಗಿರುವ ಸಿನಿಮಾ 1997ರಲ್ಲಿ ಬಿಡುಗಡೆಯಾದ ‘ಅಮೆರಿಕಾ ಅಮೆರಿಕಾ‘. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಸಿನಿಮಾ ಬಿಡುಗಡೆಯಾಗಿ 28 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಹೃದಯಸ್ಪರ್ಶಿ ಬರಹ ಹಂಚಿಕೊಂಡಿದ್ದಾರೆ ನಾಗತಿಹಳ್ಳಿ.

ಕನ್ನಡದ ಅತ್ಯುತ್ತಮ ಚಿತ್ರಗಳು ಎಂದು ಬಂದರೆ ಕೆಲವೊಂದು ಸಿನಿಮಾಗಳು ಎಂದೆಂದಿಗೂ ಟಾಪ್‌ನಲ್ಲೇ ಇರುತ್ತವೆ. ಅಂತಹವುಗಳ ಸಾಲಿಗೆ ಸೇರುವುದು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಮೆರಿಕಾ ಅಮೆರಿಕಾ‘. ರಮೇಶ್ ಅರವಿಂದ್, ಅಕ್ಷಯ್ ಆನಂದ್, ಹೇಮಾ ಪಂಚಮುಖಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರವೂ ಕನ್ನಡಿಗರ ಮನಸ್ಸಿನಾಳದಲ್ಲಿ ಕೂತು ಬಿಟ್ಟಿದ್ದೆ. ಈಗಲೂ ಕೂಡ ಇಂತಹ ಚಿತ್ರಗಳು ಮತ್ತೆ ಬರಬೇಕು ಎಂದು ಜನರು ಅಗ್ರಹಿಸುವಷ್ಟು ಇಷ್ಟವಾದ ಸಿನಿಮಾ.
ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 28 ವರ್ಷ ಕಳೆದಿವೆ. 1977ರ ಏಪ್ರಿಲ್ 11 ರಂದು ಅಮೆರಿಕಾ ಅಮೆರಿಕಾ ಸಿನಿಮಾ ಬಿಡುಗಡೆಯಾಗಿತ್ತು. ತ್ರಿಕೋನ ಪ್ರೇಮಕಥೆಯ ಈ ಚಿತ್ರದಲ್ಲಿ ದತ್ತಣ್ಣ, ವೈಶಾಲಿ ಕಾಸರವಳ್ಳಿ ಹಾಗೂ ಶಿವರಾಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ವಿಶ್ವ ಪ್ರಿಯ ಫಿಲ್ಮಸ್ ಬ್ಯಾನರ್‌ನಡಿ ಜಿ. ನಂದಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದ ಶೇ 70 ರಿಂದ 80 ರಷ್ಟು ಭಾಗ ಅಮೆರಿಕಾದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಮನೋಮೂರ್ತಿ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ರಾಷ್ಟ್ರ ಪ್ರಶಸ್ತಿಯೂ ಸಿನಿಮಾಕ್ಕೆ ಸಂದಿದೆ.
ಅಮೆರಿಕಾ ಅಮೆರಿಕಾ ಚಿತ್ರಕ್ಕೆ 28 ವರ್ಷವಾದ ಹಿನ್ನೆಲೆಯಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾಮಾಜಿಕ ಜಾಲತಾಣಗಳಲ್ಲಿ ಹೃದಯಸ್ಪರ್ಶಿ ಬರಹವೊಂದನ್ನು ಹಂಚಿಕೊಂಡಿದ್ದಾರೆ.
ಚಿತ್ರದ ಪೋಸ್ಟರ್ ಮೇಲೆ ‘ನಂಬುವುದೇ ಕಷ್ಟ, 28 ವಸಂತಗಳು ಆಗಿ ಹೋದವೇ? ಆತ್ಮದ ಅಭಿವ್ಯಕ್ತಿಗೆ ಅವಕಾಶ ಕೊಟ್ಟ ಈ ಕಲಾಕೃತಿಯನ್ನು ಮೆಚ್ಚಿದ ಪ್ರತಿ ಮನಸ್ಸಿಗೂ ಅಂತರಾಳದ ನಮನ‘ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಒಂದು ದೀರ್ಘ ಬರಹವನ್ನು ಹಂಚಿಕೊಂಡಿದ್ದಾರೆ.
ನಾಗತಿಹಳ್ಳಿಯವರು ಬರೆದ ಹೃದಯಸ್ಪರ್ಶಿ ಬರಹ
ಇದು ಶುಭದಿನ. ನನ್ನ ಪಾಲಿಗೆ ಧನ್ಯತೆ, ಸಾರ್ಥಕತೆ ಮತ್ತು ಕೃತಜ್ಞತೆಗಳ ಸಂತೃಪ್ತಿಯ ದಿನ. 11 ಏಪ್ರಿಲ್ 1997ರ ಮುಂಜಾನೆ ಭಯ, ಹಿಂಜರಿಕೆಗಳಿಂದ ಕನ್ನಡಿಗರೆದುರು ಮಂಡಿಸಿದ ಈ ನನ್ನ ದೃಶ್ಯಕಾವ್ಯವನ್ನು ಮಹಾಜನತೆ ಕಣ್ಣಿಗೊತ್ತಿಕೊಂಡು ಆನಂದಿಸಿದರು. ಸತತ ಒಂದು ವರ್ಷ ದಿನವಹಿ ನಾಲ್ಕು ಪ್ರದರ್ಶನಗಳು. ವಿಶ್ವಾದ್ಯಂತ ಮೊದಲ ಅದ್ದೂರಿ ಪ್ರದರ್ಶನ ಕಂಡ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ; ಬಹುಭಾಷಾ ಅವತರಣಿಕೆಗಳು; ರಾಜ್ಯ, ರಾಷ್ಟ್ರಪ್ರಶಸ್ತಿಗಳ ಗೌರವ. ಗೆಳೆಯ ರಮೇಶ್ ಅರವಿಂದ್ ಹೇಳುವಂತೆ ಇದು ಕೇಳಿದ್ದೆಲ್ಲ ಕೊಟ್ಟ ಕಲ್ಪವೃಕ್ಷ- ಕಾಮಧೇನು! ಅಣ್ಣಾವ್ರು ತಮ್ಮ ಮನೆಯಲ್ಲೇ ಆಡಿಯೋ ಬಿಡುಗಡೆ ಮಾಡಿದ್ದು; ಅವರು ದಾದಾ ಫಾಲ್ಕೆ ಪ್ರಶಸ್ತಿ ಪಡೆದ ವೇದಿಕೆಯಲ್ಲಿ ನಾನೂ ಪ್ರಶಸ್ತಿ ಪಡೆದಿದ್ದು; ಪೂರ್ಣಚಂದ್ರ ತೇಜಸ್ವಿಯವರು ಪ್ರಶಸ್ತಿ ಪಡೆದ ವೇದಿಕೆಯಲ್ಲಿ ನಾನೂ ಈ ಕೃತಿಗೆ ಮಂಗಳೂರಿನ ಮಹತ್ವದ ‘ಸಂದೇಶ’ ಪ್ರಶಸ್ತಿ ಪಡೆದದ್ದು, ಅಸಂಖ್ಯ ಪ್ರಶಸ್ತಿಗಳು. ನೂರಾರು ಹೆತ್ತವರು ತಮ್ಮ ಹೆಣ್ಣುಮಗುವಿಗೆ ‘ಭೂಮಿಕಾ’ ಎಂದು ಹೆಸರಿಟ್ಟದ್ದು; ಚಿತ್ರೀಕರಿಸಿದ ಹಲವು ತಾಣಗಳು ಪ್ರವಾಸೀ ತಾಣಗಳಂತಾದದ್ದು…ಸವಿ ನೆನಪುಗಳ ಶಾಶ್ವತ ಸರಮಾಲೆ.
…..ಹಿಡಿಯಷ್ಷು ವಿಷಾದಗಳೂ ಇವೆ. ಅಣ್ಣಾವ್ರು ನಿರ್ಗಮಿಸಿದರು. ಜತೆಗೆ ಚಿತ್ರದಲ್ಲಿ ಅಭಿನಯಿಸಿದ್ದ ವೈಶಾಲಿ ಕಾಸರವಳ್ಳಿ, ಸಿ.ಆರ್. ಸಿಂಹ, ಕಲಾನಿರ್ದೇಶಕ ಭದ್ರಾವತಿ ರಾಜು, ಗಾಯಕ ರಾಜು ಅನಂತಸ್ವಾಮಿ, ಅಮೆರಿಕೆಯಲ್ಲಿ ಹಲವು ಬಗೆಯಲ್ಲಿ ನೆರವಾಗಿದ್ದ ಹರಿಹರೇಶ್ವರ, ನಾಗಲಕ್ಷ್ಮಿ ಹರಿಹರೇಶ್ವರ, ರವೀಂದ್ರನಾಥ್ ಸಹ ನಿರ್ಗಮಿಸಿದರು. ಆಗೆಲ್ಲ ಏಕಪರದೆಗಳ ಸುಂದರಿಯರದೇ ಸಾಮ್ರಾಜ್ಯ.ಸಾವಿರ ಪ್ರದರ್ಶನ ನೀಡಿದ್ದ ಮೈಸೂರಿನ ಶಾಂತಲೆ ತೀರಿಕೊಂಡಳು. ಮಂಡ್ಯದ ಮತ್ತು ಬೆಂಗಳೂರಿನ ಶಾಂತಿ,ನಂದಾಗಳು ಇಲ್ಲವಾದರು. ಚಾಮರಾಜಪೇಟೆಯ ಉಮಾ ಹಾಸಿಗೆ ಹಿಡಿದು ಮಲಗಿ ಬಹುಕಾಲವಾಯಿತು.
ಕೊಟ್ರೇಶಿಯಂಥ ಕಲಾತ್ಮಕ ಚಿತ್ರ ನಿರ್ಮಿಸಿದ್ದ ಜಿ. ನಂದಕುಮಾರ್ ಈ ನನ್ನ ಹುಚ್ಚು ಸಾಹಸಕ್ಕೆ ಹಣ ಹೂಡಿದ್ದರು.ಅವರನ್ನು ಮತ್ತು ನನ್ನ ಎಲ್ಲ ಕಲಾವಿದ ತಂತ್ರಜ್ಞರನ್ನೂ ರಾಜಶ್ರೀ ಪಿಕ್ಚರ್ಸ್ ಸಂಸ್ಥೆಯನ್ನೂ ಮಾಧ್ಯಮ ಬಂಧುಗಳನ್ನೂ ಮುಖ್ಯವಾಗಿ ನೋಡಿದ ಈಗಲೂ ನೋಡುತ್ತಿರುವ ಮೆಚ್ಚುತ್ತಿರುವ ನಿಮ್ಮನ್ನು ಪ್ರೀತಿಯಿಂದ ನೆನೆಯುತ್ತಿದ್ದೇನೆ. ಆಗ ನನಗೆ ಮುವ್ವತ್ತೊಂಬತ್ತು. ಈಗ ಅರವತ್ತೇಳು. ಕಾಲ ಬದಲಾಗಿದೆ.ಮತ್ತೊಂದು ಕಾವ್ಯವನ್ನು ಸೃಷ್ಟಿಸಲು ಹೊರಟಿದ್ದೇನೆ. ಜತೆಗೆ ನೀವಿದ್ದೀರಿ ಎಂಬ ನಂಬುಗೆ.
ನೂರು ಜನ್ಮಕೂ ಶಾಶ್ವತ ಚಿತ್ರ ಎಂದ ಅಭಿಮಾನಿಗಳು
ಇವರ ಪೋಸ್ಟ್‌ಗೆ ಹಲವರು ಲೈಕ್ ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ಸಿನಿ ಅಭಿಮಾನಿಗಳು ನಾಗತಿಹಳ್ಳಿ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ‘ನೂರು ಜನ್ಮಕೂ ನೂರಾರು ಜನ್ಮಕೂ... ಆತ್ಮಾರ್ಪಣೆಯ ಪ್ರೇಮನಿವೇದನೆ....! ಆತ್ಮಸ್ಪರ್ಶಿ ಪ್ರೇಮ ಸಂವೇದನೆ ‘ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಈ ಭೂಮಿ ಇರುವವರೆಗೂ ಈ ಚಿತ್ರ ಶಾಶ್ವತವಾಗಿ ಇರುತ್ತೆ ಸರ್, ನೂರು ಜನ್ಮಕ್ಕೂ ನೂರಾರು ಜನ್ಮಕೂ ಈ ಚಿತ್ರ ಶಾಶ್ವತ‘ ಎಂದ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಸರ್ ಈಗಲೂ ಸಮಯ ಸಿಕ್ಕಾಗ ಈ ಪ್ರೇಮ ಗ್ರಂಥವನ್ನ ನೋಡ್ತಾ ಇರ್ತೀನಿ, ಪ್ರತೀ ಸಲ ನೋಡಿದಾಗಲೆಲ್ಲ ಒಂದೇ ರೀತಿ ಕಂಬನಿಗಳು. ನಿಮ್ಮ ಕನ್ನಡ ಸಂಭಾಷಣೆಯ ಅಭಿಮಾನಿ ನಾನು‘ ಎಂದು ನಾಗತಿಹಳ್ಳಿಯವರ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
