ವಾಮನ ಸಿನಿಮಾ ಹಾಡಿ ಹೊಗಳಿದ ದರ್ಶನ್; ಜೈಲಿಂದ ಹೊರ ಬಂದ ಬಳಿಕ ಮೊದಲ ಬಾರಿಗೆ ಮಾಧ್ಯಮದವರ ಜೊತೆ ಮಾತುಕತೆ
ನಟ ದರ್ಶನ್ ಜೈಲಿನಿಂದ ಹೊರ ಬಂದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಧನ್ವೀರ್ ಅಭಿನಯದ ‘ವಾಮನ‘ ಸಿನಿಮಾ ನೋಡಿದ ದರ್ಶನ ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ತಾವು ಪ್ಯಾನ್ ಇಂಡಿಯಾಗಾಗಿ ಸಿನಿಮಾ ಮಾಡೋದಲ್ಲ ಎಂದು ಕೂಡ ಹೇಳಿದ್ದಾರೆ.

ನಟ ಧನ್ವೀರ್ ಅಭಿನಯದ ಬಹುನಿರೀಕ್ಷಿತ ವಾಮನ ಸಿನಿಮಾ ಇಂದು (ಏಪ್ರಿಲ್ 10) ಬಿಡುಗಡೆಯಾಗಿದೆ. ಈ ಸಿನಿಮಾ ನೋಡುವ ಸಲುವಾಗಿ ನಟ ದರ್ಶನ ನಿನ್ನೆ (ಏಪ್ರಿಲ್ 9) ರಾತ್ರಿ ಜಿಟಿ ಮಾಲ್‌ಗೆ ಬಂದಿದ್ದರು. ಸಿನಿಮಾ ನೋಡಿದ ಬಳಿಕ ಅವರು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ ನಟ ದರ್ಶನ್.
ಸ್ನೇಹಿತ ಧನ್ವೀರ್ ನಟನೆಯ ವಾಮನ ಚಿತ್ರವನ್ನು ನೋಡಿ ಹೊರ ಬಂದ ನಂತರ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಮೊದಲಾರ್ಧಗಿಂತ ದ್ವಿತಿಯಾರ್ಧ ಹೆಚ್ಚು ಇಂಟರೆಸ್ಟಿಂಗ್ ಆಗಿದೆ ಎಂದಿದ್ದಾರೆ ದರ್ಶನ್. ಸಿನಿಮಾ ಬಗ್ಗೆ ಸಾಕಷ್ಟು ಪಾಸಿಟಿವ್ ಮಾತುಗಳನ್ನು ಹೇಳಿರುವ ದರ್ಶನ್ ವಾಮನ ‘ಸಿನಿಮಾ ತುಂಬಾ ಚೆನ್ನಾಗಿದೆ. ಟ್ರೈಲರ್ ನೋಡಿ ಇದು ಮಾಸ್ ಸಿನಿಮಾ ಅಂದುಕೊಂಡಿರುತ್ತಾರೆ. ಆದರೆ ಇದು ಮದರ್ ಸೆಂಟಿಮೆಂಟ್ ಇರುವ ಚಿತ್ರ. ನನಗೆ ಚಿತ್ರ ತುಂಬಾ ಇಷ್ಟ ಆಯ್ತು. ಚಿತ್ರದಲ್ಲಿ ಒಳ್ಳೊಳ್ಳೆ ಹಾಡುಗಳಿವೆ. ಧನ್ವೀರ್ ಸಾಕಷ್ಟು ಪಳಗಿದ್ದಾರೆ. ಒಟ್ಟಾರೆ ಈ ಚಿತ್ರ ತುಂಬಾ ಚೆನ್ನಾಗಿದೆ‘ ಎಂದು ಮನಸಾರೆ ಹೊಗಳಿದ್ದಾರೆ.
ಜೈಲಿನಿಂದ ಹೊರ ಬಂದ ಬಳಿಕ ಅಷ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ದರ್ಶನ ಈಗ ಸ್ನೇಹಿತ ಹಾಗೂ ಶಿಷ್ಯ ಧನ್ವೀರ್ ಸಿನಿಮಾ ನೋಡುವ ಸಲುವಾಗಿ ಮಾಲ್‌ಗೆ ಬಂದಿದ್ದರು. ದರ್ಶನ್‌ಗಾಗಿ ನಿನ್ನೆ ವಿಶೇಷ ಶೋ ವ್ಯವಸ್ಥೆ ಮಾಡಲಾಗಿತ್ತು. ಅಭಿಮಾನಿಗಳನ್ನು ಆಗಾಗ ಭೇಟಿ ಮಾಡುತ್ತಿದ್ದ ದರ್ಶನ ಮಾಧ್ಯಮಗಳ ಮುಂದೆ ಬಂದಿರಲಿಲ್ಲ. ಈಗ ಧನ್ವೀರ್ ಸಿನಿಮಾ ಕಾರಣದಿಂದ ಮಾಧ್ಯಮಗಳ ಮುಂದೆ ಬಂದು ಮಾತನಾಡಿದ್ದಾರೆ. ದರ್ಶನ್ ಹಾಗೂ ಧನ್ವೀರ್ ಆಪ್ತ ಸ್ನೇಹಿತರು ಎಂದು ಹೊಸ ವಿಷಯವೇನಲ್ಲ. ಧನ್ವೀರ್ ಅವರನ್ನು ದರ್ಶನ್ ಶಿಷ್ಯ ಎಂದು ಕೂಡ ಕರೆಯುತ್ತಾರೆ. ದರ್ಶನ್ ಜೈಲಿಗೆ ಹೋದ ಸಂದರ್ಭ ಅವರ ಜೊತೆಗೆ ನಿಂತ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಧನ್ವೀರ್ ಕೂಡ ಒಬ್ಬರು.
ಇದೇ ವೇಳೆ ‘ಕರ್ನಾಟಕದ ಎಲ್ಲಾ ಜನತೆ ಸಿನಿಮಾ ನೋಡಿ. ವಾಮನ ಅಂದ್ರೆ ಬಲಿ ಚಕವರ್ತಿ ಬಳಿ ಭಿಕ್ಷೆ ಬೇಡಲು ಬರುವವನು. ಈ ವಾಮನ ಚಿತ್ರರಂಗದಲ್ಲಿ ಕಾಲಿಡಲು ಜಾಗ ಕೇಳುತ್ತಿದ್ದಾನೆ‘ ಎಂದು ಅವರು ಹೇಳಿದ್ದಾರೆ.
ಧನ್ವೀರ್, ಚಿಕ್ಕಣ ಜೊತೆ ಸಿನಿಮಾ ಮಾಡ್ತೀನಿ ಎಂದ ದರ್ಶನ್
ಧನ್ವೀರ್ ಹಾಗೂ ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ತಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ‘ದರ್ಶನ್ ಹಾಗೂ ಧನ್ವೀರ್ ಜೊತೆಯಾಗಿ ಸಿನಿಮಾ ಮಾಡೋಕೆ ಒಳ್ಳೆ ಕಥೆ ಸಿಗಬೇಕು. ಉತ್ತಮ ನಿರ್ದೇಶಕರು ಸಿಕ್ಕರೆ ಖಂಡಿತ ಮಾಡ್ತೀವಿ. ಚಿಕ್ಕಣ್ಣ ಜೊತೆಗೂ ಸಿನಿಮಾ ಮಾಡ್ತೀನಿ. ಒಳ್ಳೆ ಕಥೆ ಸಿಕ್ಕರೆ ಎಲ್ಲರೂ ಒಟ್ಟಿಗೆ ಸಿನಿಮಾ ಮಾಡ್ತೀವಿ‘ ಎಂದು ಹೇಳಿದ್ದಾರೆ.
ನಾವು ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡೊಲ್ಲ
ಈ ನಡುವೆ ದರ್ಶನ್ ನಾವು ಸಿನಿಮಾ ಮಾಡೋದು ಕನ್ನಡ ಜನತೆಗಾಗಿ, ಪ್ಯಾನ್ ಇಂಡಿಯಾಕ್ಕಾಗಿ ಅಲ್ಲ ಅನ್ನೋ ಮಾತು ಹೇಳಿದ್ದಾರೆ. ದರ್ಶನ್ ಮೊದಲಿನಿಂದಲೂ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಗಮನ ಹರಿಸಿದವರಲ್ಲ. ಮೊದಲಿನಿಂದಲೂ ಪರಭಾಷೆ ಸಿನಿಮಾ ಮಾಡುವುದಿಲ್ಲ ಎಂದು ಹೇಳಿಕೊಂಡು ಬಂದಿದ್ದು ಮಾತ್ರವಲ್ಲ, ಅದರಂತೆ ನಡೆದುಕೊಂಡಿದ್ದಾರೆ ಕೂಡ. ‘ನಾವು ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡೊಲ್ಲ, ನಾವು ಸಿನಿಮಾ ಮಾಡೋದು ಕನ್ನಡ ಜನತೆಗೆ, ಇಲ್ಲಿರುವ ಥಿಯೇಟರ್‌ಗಳಿಗೆ. ನಾವು ಪರಭಾಷೆ ಸಿನಿಮಾ ಮಾಡೊಲ್ಲ‘ ಎಂಬ ಮಾತನ್ನು ನಿನ್ನೆ ಪುನರುಚ್ಚರಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡುವಾಗ ದರ್ಶನ ಯಾವುದೇ ವೈಯಕ್ತಿಕ ಮಾತುಕತೆಗೆ ಅವಕಾಶ ನೀಡಿರಲಿಲ್ಲ. ಸಿನಿಮಾ ಹೊರತು ಪಡಿಸಿ ಬೇರೆ ಯಾವುದು ವಿಚಾರವನ್ನೂ ಅವರು ಮಾತನಾಡಲಿಲ್ಲ.
