ಅಜ್ಞಾತವಾಸಿ ಸಿನಿಮಾ ವಿಮರ್ಶೆ: ಒಂದು ಕೊಲೆಯ ಹಿಂದಿನ ಅಜ್ಞಾತವಾಸದ ಕಥೆ, ಒಂದೊಳ್ಳೆ ಕಥೆಗೆ ಸಿಕ್ಕಿಲ್ಲ ಪೂರಕ ಚಿತ್ರಕಥೆ
Agnathavasi Review: ಮೂರು ವರ್ಷಗಳ ಬಳಿಕ ತೆರೆ ಕಂಡಿದೆ ಜರ್ನಾದನ್ ಚಿಕ್ಕಣ್ಣ ನಿರ್ದೇಶನದ, ಹೇಮಂತ್ ಎಂ ರಾವ್ ನಿರ್ಮಾಣದ ಅಜ್ಞಾತವಾಸಿ ಸಿನಿಮಾ. ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಹೇಗಿದೆ? ಇಲ್ಲಿದೆ ಚಿತ್ರ ವಿಮರ್ಶೆ. (ಬರಹ: ಚೇತನ್ ನಾಡಿಗೇರ್).

ಕಳೆದ ವರ್ಷ ಮಲೆನಾಡ ತಣ್ಣನೆಯ ಪರಿಸರದಲ್ಲಿ ‘ಶಾಖಾಹಾರಿ’ ಚಿತ್ರದ ಮೂಲಕ ಕೊಲೆ ರಹಸ್ಯದ ಕಥೆ ಹೇಳಿದ್ದ ರಂಗಾಯಣ ರಘು, ಈಗ ಇನ್ನೊಂದು ಕೊಲೆಯ ರಹಸ್ಯದ ಕಥೆಯೊಂದಿಗೆ ಬಂದಿದ್ದಾರೆ. ಈ ಬಾರಿ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮತ್ತು ನಿರ್ಮಾಪಕ ಹೇಮಂತ್ ಎಂ. ರಾವ್ ಅವರಿಗೆ ಜೊತೆಯಾಗಿದ್ದಾರೆ. ಟ್ರೇಲರ್‌ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ಚಿತ್ರವು, 3ವರ್ಷಗಳ ಬಳಿಕ ಕೊನೆಗೂ ಬಿಡುಗಡೆಯಾಗಿದೆ. ಇಷ್ಟಕ್ಕೂ ಚಿತ್ರ ಹೇಗಿದೆ? ಇಲ್ಲಿದೆ ಉತ್ತರ.
ಅಜ್ಞಾತವಾಸಿ ಚಿತ್ರದ ಕಥೆ ಏನು?
ಮಲೆನಾಡ ಸಣ್ಣ ಹಳ್ಳಿಯಲ್ಲಿ ಒಂದು ಪೊಲೀಸ್ ಠಾಣೆ. ಆ ಠಾಣೆ ಶುರುವಾದಾಗಿನಿಂದ ಒಂದು ಕೇಸ್ ಸಹ ಇಲ್ಲ. ಹೀಗಿರುವಾಗಲೇ, ಆ ಊರಿನ ಜಮೀನ್ದಾರ ಶಂಕರಪ್ಪ (ಶರತ್ ಲೋಹಿತಾಶ್ವ) ನಿಧನರಾಗುತ್ತಾರೆ. ಅದೊಂದು ಸಹಜ ಸಾವು ಅಂದುಕೊಂಡವರಿಗೆ ಅದು ಸಹಜ ಸಾವಲ್ಲ, ಕೊಲೆ ಎಂದು ಅದೇ ಠಾಣೆಯಲ್ಲಿ ಎಷ್ಟೋ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಹೇಳುತ್ತಾರೆ. ಅವರಿಗೆ ಅದು ಕೊಲೆ ಅಂತ ಯಾಕನಿಸಿತು? ಆ ಕೊಲೆ ಯಾರು ಮಾಡಿದರು? ಅದರ ಹಿಂದಿನ ಮರ್ಮವೇನು? ಎನ್ನುವುದೇ ‘ಅಜ್ಞಾತವಾಸಿ’ಯ ಕಥೆ.
ಹೇಗಿದೆ ಸಿನಿಮಾ?
‘ಅಜ್ಞಾತವಾಸಿ’ಯ ಕಥೆ ಏನು ಎಂದರೆ, ಒಟ್ಟುಗೂಡಿಸಿ ಈ ರೀತಿ ಹೇಳಬಹುದು. ಆದರೆ, ಚಿತ್ರ ನಿಜಕ್ಕೂ ಇಷ್ಟು ಸರಳವಲ್ಲ. ಇಲ್ಲಿ ಹಲವು ಪದರಗಳಿವೆ, ಹಲವು ವಿಷಯಗಳಿವೆ ಮತ್ತು ಪಾತ್ರಗಳಿವೆ. ಒಟ್ಟಾರೆ ಚಿತ್ರದ ಪರಿಸರ ಮತ್ತು ಪಾತ್ರಧಾರಿಗಳನ್ನು ಪರಿಚಯಿಸುವುದಕ್ಕೇ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ. ಕೆಲವೊಮ್ಮೆ ಒಂದೇ ದೃಶ್ಯವನ್ನು ಎರಡು ಬಾರಿ ತೆರೆಯ ಮೇಲೆ ತೋರಿಸುತ್ತಾರೆ. ಆ ದೃಶ್ಯಗಳು ಯಾಕೆ ರಿಪೀಟ್ ಆಗುತ್ತವೆ? ಅದರ ಹಿನ್ನೆಲೆ ಏನು? ಅದಕ್ಕೆ ಸಮಂಜಸ ಉತ್ತರವಿಲ್ಲ. ಬಹುಶಃ ಅದೇ ಚಿತ್ರದ ದೊಡ್ಡ ಮೈನಸ್ ಪಾಯಿಂಟ್ ಎಂದರೆ ತಪ್ಪಿಲ್ಲ.
ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ
‘ಅಜ್ಞಾತವಾಸಿ’ ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. 90ರ ದಶಕದ ಕೊನೆಯಲ್ಲಿ ನಡೆಯುವ ಕಥೆಗೆ 70ರ ದಶಕದ ಫ್ಲಾಶ್‍ಬ್ಯಾಕ್ ಸಹ ಇದೆ. ಅಲ್ಲಿ ನಡೆದ ಒಂದು ಘಟನೆಯ ಚಿತ್ರದ ಪ್ರಮುಖ ತಿರುಳು. ಇದರ ಜೊತೆಗೆ 90ರ ದಶಕದಲ್ಲಿ ನಡೆಯುವ ಪರಿವರ್ತನೆಯೂ ಇದೆ. ಪತ್ರದಿಂದ ಇಮೇಲ್‍ಗಾಗುವ ಪರಿವರ್ತನೆಯನ್ನು ಸಹ ಕಟ್ಟಿಕೊಡಲಾಗಿದೆ. ಅದರ ಮೂಲಕ ಒಂದು ಪ್ರೇಮಕಥೆಯನ್ನೂ ಹೇಳಲಾಗಿದೆ. ಇವೆಲ್ಲವನ್ನೂ ಬೆಸೆದು ಒಂದು ಕಥೆ ಮಾಡಲಾಗಿದೆ.
ಕಥೆಗೆ ಕೊಟ್ಟ ಪ್ರಾಮುಖ್ಯತೆ ಚಿತ್ರಕಥೆಗೂ ಬೇಕಿತ್ತು
ಚಿತ್ರದಲ್ಲಿ ಒಂದೊಳ್ಳೆಯ ಕಥೆ ಇದೆ. ಆದರೆ, ಅದಕ್ಕೆ ಪೂರಕವಾದ ಚಿತ್ರಕಥೆ ಹೆಣೆಯುವಲ್ಲಿ ಚಿತ್ರತಂಡ ಸೋತಿದೆ. ಮೊದಲೇ ಹೇಳಿದಂತೆ ಚಿತ್ರದಲ್ಲಿ ಹಲವು ವಿಷಯಗಳಿವೆ. ಆದರೆ, ಅದ್ಯಾವುದೂ ಗಾಢವಾಗಿ ತಟ್ಟುವುದೇ ಇಲ್ಲ. ಮೊದಲಾರ್ಧ ಬಹಳ ನಿಧಾನವಾಗಿ ಸಾಗುವ ಚಿತ್ರ, ಪ್ರತಿಯೊಂದನ್ನು ವಿಷಯವನ್ನೂ ಸುದೀರ್ಘವಾಗಿ ಕಟ್ಟಿಕೊಡುವ ಚಿತ್ರ, ದ್ವಿತೀಯಾರ್ಧದಲ್ಲಿ ಅದರಲ್ಲೂ ಕೊನೆಕೊನೆಗೆ ಬಹಳ ವೇಗವಾಗಿ ಸಾಗುತ್ತದೆ. ಇದರಿಂದ ಭಾವನಾತ್ಮಕ ಸನ್ನಿವೇಶಗಳು ಅವಸವಸರವಾಗಿ ಮುಗಿದು ಹೋಗುತ್ತದೆ. ಕೆಲವು ಬೇಡದ ವಿಷಯಗಳಿಗೆ ಸಿಗುವ ವಿವರಣೆ, ಕೆಲವು ಗಾಢವಾದ ವಿಷಯಗಳಿಗೂ ಸಿಕ್ಕಿದ್ದರೆ, ಆಗ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗಿರರುತ್ತಿತ್ತು.
ಗಮನ ಸೆಳೆಯುವ ಅಂಶಗಳೆಂದರೆ …
ಚಿತ್ರದಲ್ಲಿ ಗಮನ ಸೆಳೆಯುವ ಅಂಶಗಳೆಂದರೆ ಅದು ಅಭಿನಯ ಮತ್ತು ತಾಂತ್ರಿಕ ವಿಷಯಗಳು. ‘ಶಾಖಾಹಾರಿ’ ಚಿತ್ರದ ನಂತರ ರಂಗಾಯಣ ರಘು ಬಹಳ ಗಂಭೀರವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅವರ ಪಾತ್ರಕ್ಕೆ ಹಲವು ಮಜಲುಗಳಿವೆ ಮತ್ತು ಎಲ್ಲವನ್ನೂ ಅದ್ಭುತವಾಗಿ ಅವರು ನಿಭಾಯಿಸಿದ್ದಾರೆ. ಶರತ್ ಲೋಹಿತಾಶ್ವ, ರವಿಶಂಕರ್ ಗೌಡ, ಯಮುನಾ ಶ್ರೀನಿಧಿ, ಸಿದ್ದು ಮೂಲಿಮನಿ, ಪಾವನಾ ಗೌಡ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಒಂದು ಪ್ರಮುಖ ಪಾತ್ರ ಚಿತ್ರದುದ್ದಕ್ಕೂ ಅಲ್ಲಲ್ಲಿ ಪ್ರಸ್ತಾಪವಾಗುತ್ತದಾದರೂ, ಚಿತ್ರದಲ್ಲಿ ಎಲ್ಲೂ ಕಾಣಿಸುವುದಿಲ್ಲ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಚರಣ್ ರಾಜ್ ಹಿನ್ನೆಲೆ ಸಂಗೀತ ಚಿತ್ರವನ್ನು ಇನ್ನಷ್ಟು ರಂಗು ಹೆಚ್ಚಿಸುತ್ತದೆ.
ಸಿನಿಮಾ: ಅಜ್ಞಾತವಾಸಿ
ಜಾನರ್: ಸಸ್ಪೆನ್ಸ್ ಥ್ರಿಲ್ಲರ್
ನಿರ್ದೇಶನ: ಜನಾರ್ಧನ್ ಚಿಕ್ಕಣ್ಣ
ನಿರ್ಮಾಣ: ಹೇಮಂತ್ ಎಂ. ರಾವ್
ಸಂಗೀತ: ಚರಣ್ ರಾಜ್
ಛಾಯಾಗ್ರಹಣ: ಅದ್ವೈತ ಗುರುಮೂರ್ತಿ
ಸಿನಿಮಾದ ಅವಧಿ: 122 ನಿಮಿಷಗಳು
ಎಚ್‍ಟಿ ಕನ್ನಡ ರೇಟಿಂಗ್: 3/5
ಸಿನಿಮಾ ವಿಮರ್ಶೆ: ಚೇತನ್ ನಾಡಿಗೇರ್
