Agnathavasi Twitter Review: ಕನ್ನಡದ ಅಜ್ಞಾತವಾಸಿ ಪ್ರೇಕ್ಷಕರಿಗೆ ಇಷ್ಟವಾಯ್ತಾ; ಸಿನಿಮಾ ನೋಡಿದವರು ಹೇಳಿದಿಷ್ಟು
ಕನ್ನಡ ಸುದ್ದಿ  /  ಮನರಂಜನೆ  /  Agnathavasi Twitter Review: ಕನ್ನಡದ ಅಜ್ಞಾತವಾಸಿ ಪ್ರೇಕ್ಷಕರಿಗೆ ಇಷ್ಟವಾಯ್ತಾ; ಸಿನಿಮಾ ನೋಡಿದವರು ಹೇಳಿದಿಷ್ಟು

Agnathavasi Twitter Review: ಕನ್ನಡದ ಅಜ್ಞಾತವಾಸಿ ಪ್ರೇಕ್ಷಕರಿಗೆ ಇಷ್ಟವಾಯ್ತಾ; ಸಿನಿಮಾ ನೋಡಿದವರು ಹೇಳಿದಿಷ್ಟು

Agnathavasi Twitter Review: ಟ್ರೈಲರ್ ಮೂಲಕ ಸದ್ದು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಷನ್‌ ಸೃಷ್ಟಿಸಿದ್ದ ಕನ್ನಡದ ಅಜ್ಞಾತವಾಸಿ ಸಿನಿಮಾ ಇಂದು (ಏಪ್ರಿಲ್ 11) ಬಿಡುಗಡೆಯಾಗಿದೆ. ರಂಗಾಯಣ ರಘು ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ ನೋಡಿ ಪ್ರೇಕ್ಷಕರು ಏನಂದ್ರು, ಇಲ್ಲಿದೆ ಟ್ವಿಟರ್ ರಿವ್ಯೂ.

ಚಿತ್ರ ಸ್ಲೋ ಆದ್ರೂ, ಕ್ಲೈಮ್ಯಾಕ್ಸ್ ಸೂಪರ್‌; ಅಜ್ಞಾತವಾಸಿ ಸಿನಿಮಾ ಟ್ವಿಟರ್ ರಿವ್ಯೂ
ಚಿತ್ರ ಸ್ಲೋ ಆದ್ರೂ, ಕ್ಲೈಮ್ಯಾಕ್ಸ್ ಸೂಪರ್‌; ಅಜ್ಞಾತವಾಸಿ ಸಿನಿಮಾ ಟ್ವಿಟರ್ ರಿವ್ಯೂ

Agnathavasi Twitter Review: ಕಳೆದ 3 ವರ್ಷಗಳಿಂದ ಬಿಡುಗಡೆಗಾಗಿ ಕಾಯುತ್ತಿದ್ದ ಅಜ್ಞಾತವಾಸಿ ಸಿನಿಮಾಕ್ಕೆ ಇಂದು (ಏಪ್ರಿಲ್ 11) ಬಿಡುಗಡೆಯ ಭಾಗ್ಯ ಸಿಕ್ಕಿದೆ. ‘ಗುಳ್ಟು‘ ಖ್ಯಾತಿಯ ಜರ್ನಾದನ ಚಿಕ್ಕಣ್ಣ ನಿರ್ದೇಶಿಸಿರುವ, ಸಪ್ತ ಸಾಗರದಾಚೆ ಎಲ್ಲೋ ಸರಣಿ ಸಿನಿಮಾ ಖ್ಯಾತಿಯ ಹೇಮಂತ್ ಎಂ ರಾವ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ರಂಗಾಯಣ ರಘು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಆರಂಭವಾಗಿ 3 ವರ್ಷ ಕಳೆದಿತ್ತು. ಚಿತ್ರ ಬಿಡುಗಡೆಗೆ ಮಾರುಕಟ್ಟೆ ಅನುಕೂಲವಾಗಿರಲಿಲ್ಲ, ಆ ಕಾರಣಕ್ಕೆ ಈಗ ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿರ್ಮಾಪಕ ಹೇಮಂತ್ ರಾವ್ ಇತ್ತೀಚೆಗೆ ಹೇಳಿಕೊಂಡಿದ್ದರು.

ಅಜ್ಞಾತವಾಸಿ ಸಿನಿಮಾದಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕೃಷ್ಣರಾಜ್ ಎನ್ನುವವರು ಈ ಸಿನಿಮಾಕ್ಕೆ ಚಿ‌ತ್ರಕಥೆ ಬರೆದಿದ್ದಾರೆ.

ಅದ್ವೈತ ಛಾಯಾಗ್ರಾಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ, ಭರತ್ ಎಂ.ಸಿ ಸಂಕಲನಕಾರರಾಗಿ, ಉಲ್ಲಾಸ್ ಹೈದೂರು ಕಲಾ ನಿರ್ದೇಶಕರಾಗಿ ಅಜ್ಞಾತವಾಸಿ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎನ್ ಹರಿಕೃಷ್ಣ ಸಹ ನಿರ್ದೇಶಕರಾಗಿ ದುಡಿದಿದ್ದು, ಜಿ.ಬಿ. ಭರತ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

1997ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಕಥಾಹಂದರ ಚಿತ್ರದಲ್ಲಿದೆ. ಹಾಗಾದರೆ ಅಜ್ಞಾತವಾಸಿ ಸಿನಿಮಾ ಹೇಗಿದೆ, ಸಿನಿಮಾ ನೋಡಿದವರು ನೀಡಿದ ಟ್ವಿಟರ್ ರಿವ್ಯೂ ಇಲ್ಲಿದೆ.

ಹೇಗಿದೆ ಅಜ್ಞಾತವಾಸಿ: ಟ್ವಿಟರ್ ರಿವ್ಯೂ

ಅಜ್ಞಾತವಾಸಿ ರೇಖಾತ್ಮಕವಲ್ಲದ ನಿಧಾನಗತಿಯ ನಿಗೂಢ ಚಿತ್ರ. ಇದು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ. ಆದರೆ ಇದಕ್ಕೆಲ್ಲಾ ಕ್ಲೈಮ್ಯಾಕ್ಸ್‌ನಲ್ಲಿ ಫಲ ಸಿಗುತ್ತದೆ. ಬೆಳ್ಳಿ ತೆರೆಯಲ್ಲಿ ಸಿನಿಮಾ ನೋಡಲು ಹೇಮಂತ್‌ ರಾವ್ ಹಾಗೂ ಜರ್ನಾದನ ಚಿಕ್ಕಣ್ಣ ಮುಖ್ಯ ಕಾರಣ. ಶಾಖಾಹಾರಿ ನಂತರ ರಂಗಾಯಣ ರಘು ಒಂದು ಅದ್ಭುತ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಬರೆದುಕೊಂಡಿರುವ ಸಂತೋಷ್ ಎಚ್‌ಎನ್‌ ಚಿತ್ರಕ್ಕೆ 5ರಲ್ಲಿ 3 ಅಂಕ ನೀಡಿದ್ದಾರೆ.

ಮಲೆನಾಡು, ನಿಗೂಢ ಹಾಗೂ ಹುಚ್ಚುತನ. ಬಹುಹಂತದ ಕ್ರೈಂ ಸಿನಿಮಾ ಸರಿಯಾದ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಕ್ರೈಂ ಥ್ರಿಲ್ಲರ್ ಜಾನರ್‌ನ ಕಥೆಗಳು ಈಗಾಗಲೇ ಸಾಕಷ್ಟು ಬಂದಿವೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ನಿರ್ದೇಶನ ಮಾಡಿ ತೆರೆ ಮೇಲೆ ತಂದಾಗ ಮಾತ್ರ ಹೊಸತಾಗಿ ಕಾಣಿಸುತ್ತದೆ. ಜರ್ನಾದನ್ ಚಿಕ್ಕಣ್ಣ ಆ ಪ್ರಯತ್ನ ಮಾಡಿದ್ದಾರೆ. ಕಥೆಯನ್ನು ಎಳೆಯದೇ ಎರಡು ಗಂಟೆಗಳ ಕಾಲ ಬೋರು ಹೊಡಿಸದಂತೆ ಅದ್ಭುತವಾಗಿ ಮಾಡಿದ್ದಾರೆ. ಮೊದಲ ಫ್ರೇಮ್‌ನಿಂದಲೂ ಚಿತ್ರ ನಿಮ್ಮನ್ನು ಸೆಳೆಯತ್ತದೆ. ಛಾಯಾಗ್ರಹಣವೂ ಅದ್ಭುತವಾಗಿದೆ. ಹಿನ್ನೆಲೆ ಸಂಗೀತವು ವಿಶೇಷ ರೋಮಾಂಚನ ನೀಡುತ್ತದೆ. ಕ್ಲೈಮ್ಯಾಕ್ಸ್ ಅಷ್ಟೊಂದು ಇಷ್ಟವಾಗಿಲ್ಲ, ಕ್ರೈ ಥ್ರಿಲ್ಲರ್ ಸಿನಿಮಾ ಇಷ್ಟಪಡುವವರು ಥಿಯೇಟರ್‌ಗೆ ಹೋಗಿ ನೋಡಬಹುದು ಎಂದು ಭಾರ್ಗವಿ ಎನ್ನುವವರು ಬರೆದುಕೊಂಡಿದ್ದಾರೆ.

ಅಜ್ಞಾತವಾಸಿ ಒಂದು ದಿಟ್ಟ ಸಿನಿಮೀಯ ಪ್ರಯತ್ನವಾಗಿದೆ. ಜರ್ನಾದನ ಚಿಕ್ಕಣ್ಣ ಅವರು ಅವರು ತಮ್ಮ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರಕಥೆಯನ್ನು ನೀಡಿದ್ದಾರೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಅಜ್ಞಾತವಾಸಿ ಕೇವಲ ಸಿನಿಮಾವಲ್ಲ, ಇದು ಸಸ್ಪೆನ್ಸ್ ಡ್ರಾಮಾದಿಂದ ಆವೃತವಾದ ಭಾವನಾತ್ಮಕ ಸವಾರಿ. ಆರಂಭವಾದ ಶಾಂತವಾದ ಸಮುದ್ರದಂತೆ ಭಾಸವಾದರೂ ನಂತರ ಕಥೆ ನಿರ್ದೇಶನ ನಿಮ್ಮನ್ನು ಹಿಡಿದು ಕೂರಿಸುತ್ತದೆ. ಚಿತ್ರದಲ್ಲಿ ಸಾಕಷ್ಟು ತಿರುವುಗಳಿವೆ. ಚಿತ್ರದ ನಿರ್ದೇಶನ ತೀಕ್ಷ್ಣವಾಗಿದೆ. ಎಲ್ಲಾ ನಟರು ಅದ್ಭುತವಾಗಿ ನಟಿಸಿದ್ದಾರೆ. ನಿಧಾನಗತಿಯ ನಿರೂಪಣೆಯ ಹೊರತಾಗಿಯೂ ಇದು ಆತ್ಮ ಮತ್ತು ಸಸ್ಪೆನ್ಸ್ ಹೊಂದಿರುವ ಘನ ಭಾವನಾತ್ಮಕ ಥ್ರಿಲ್ಲರ್ ಚಿತ್ರವಾಗಿದೆ ಎಂದು ರಿವ್ಯೂ ನೀಡಿದ್ದಾರೆ ನಮ್ಮ ಸಿನಿಮಾ ಟ್ವಿಟ ಖಾತೆ ನಿರ್ವಹಿಸುವವರು. ಅವರು ಈ ಸಿನಿಮಾಕ್ಕೆ 5ಕ್ಕೆ 3.75 ಅಂಕ ನೀಡಿದ್ದಾರೆ.

ಅಜ್ಞಾತವಾಸಿ ಕೇವಲ ಥ್ರಿಲ್ಲರ್ ಸಿನಿಮಾವಲ್ಲ, ಇದರಲ್ಲಿ ಹಲವು ಪದರಗಳಿವೆ. ರಂಗಾಯಣ ರಘು ಅವರ ನಟನೆ ತುಂಬಾ ಸೂಕ್ಷ್ಮವಾಗಿದೆ ಮತ್ತು ಪಾತ್ರಕ್ಕೆ ಸೂಕ್ತವಾಗಿದೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಟ್ರೇಲರ್ ಇಷ್ಟವಾದರೆ ತಪ್ಪದೇ ಸಿನಿಮಾ ನೋಡಿ ಎಂದು ಸಿನಿ ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ.

ಒಟ್ಟಾರೆ ಚಿತ್ರದ ಬಗ್ಗೆ ಪಾಸಿಟಿವ್ ಮಾತುಗಳಿವೆ. ಕ್ರೈ ಥ್ರಿಲ್ಲರ್ ಸಿನಿಮಾ ಇಷ್ಟ ಪಡುವವರಿಗೆ ಒಂದೊಳ್ಳೆ ಚಿತ್ರ ಕನ್ನಡದಲ್ಲಿ ಬಂದಿದೆ ಎನ್ನಬಹುದು. ಚಿತ್ರ ನಿಧಾನ ಅನ್ನಿಸಿದ್ರೂ ಎಲ್ಲೂ ಬೋರ್ ಹೊಡಿಸೊಲ್ಲ ಅನ್ನೋದು ಹಲವರ ಅಭಿಪ್ರಾಯ. ಜರ್ನಾದನ್ ಚಿಕ್ಕಣ್ಣ, ಹೇಮಂತ್ ರಾವ್ ಪ್ರಯತ್ನ ಗೆಲ್ಲುತ್ತಾ ಸೋಲುತ್ತಾ ಕಾದು ನೋಡಬೇಕಿದೆ. 

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner