ನಟಿ ರಂಭಾ ದಾಂಪತ್ಯ ಜೀವನದಲ್ಲಿ ಬಿರುಕು, ಡಿವೋರ್ಸ್‌ಗೆ ಅರ್ಜಿ; ಚಿತ್ರರಂಗಕ್ಕೆ ಮರಳಲಿದ್ದಾರಾ ಬಾವ ಬಾಮೈದ ಸಿನಿಮಾ ನಾಯಕಿ?
ಕನ್ನಡದಲ್ಲಿ ಸರ್ವರ್ ಸೋಮಣ್ಣ, ಬಾವ ಬಾಮೈದ, ಅನಾಥರು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಟಿ ರಂಭಾ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಭಾರತಕ್ಕೆ ವಾಪಸ್ ಆಗುತ್ತಿರುವ ಈ ಚೆಲುವೆ ಮತ್ತೆ ಸಿನಿಮಾಗಳಲ್ಲಿ ನಟಿಸಬಹುದು ಎಂಬ ಸುದ್ದಿ ಕೇಳಿ ಬರುತ್ತಿದೆ.
ಮದುವೆ ನಂತರ ಸಿನಿಮಾಗೆ ಗುಡ್ ಬೈ ಹೇಳಿ ಪತಿ ಮಕ್ಕಳೊಂದಿಗೆ ಸೆಟಲ್ ಆಗಿರುವ ಎಷ್ಟೋ ನಟಿಯರು ಬಹಳ ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿರುವ ಅನೇಕ ಉದಾಹರಣೆಗಳಿವೆ. ಇದೀಗ ರಂಭಾ ಕೂಡಾ ಸಿನಿಮಾಗೆ ಮರಳಿ ಬರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ರಂಭಾ, ಪತಿಗೆ ಡಿವೋರ್ಸ್ ನೀಡಿ ಭಾರತಕ್ಕೆ ವಾಪಸ್ ಬರುತ್ತಿದ್ದಾರೆ ಎಂಬ ಗಾಸಿಪ್ ಕೇಳಿ ಬರುತ್ತಿದೆ.
3 ಮಕ್ಕಳ ತಾಯಿ ರಂಭಾ
2014ರಲ್ಲಿ ಸದ್ದಿಲ್ಲದೆ ಮದುವೆ ಆಗಿ ಚಿತ್ರರಂಗದಿಂದ ದೂರಾಗಿದ್ದ ಮೌರ್ಯ ಚೆಲುವೆ ಮೀರಾ ಜಾಸ್ಮಿನ್, ನಂತರ ಗುರುತೇ ಸಿಗದಷ್ಟು ಬದಲಾಗಿದ್ದರು. ಆದರೆ ಕೆಲವು ವರ್ಷಗಳ ಬಳಿಕ ಪತಿಯೊಂದಿಗೆ ಮನಸ್ತಾಪ ಉಂಟಾಗಿ ಡಿವೋರ್ಸ್ ಕೊಟ್ಟು ತೂಕ ಇಳಿಸಿಕೊಂಡು ಸಿನಿಮಾರಂಗಕ್ಕೆ ವಾಪಸ್ ಆಗಿದ್ದರು. ಈಗ ರಂಭಾ ಕೂಡಾ ಇದೇ ಹಾದಿ ಹಿಡಿದಿದ್ದಾರೆ ಎನ್ನಲಾಗುತ್ತಿದೆ. ರಂಭಾ, 3 ಮಕ್ಕಳ ತಾಯಿ. ಪತಿಯೊಂದಿಗೆ ಸಣ್ಣ ಪುಟ್ಟ ಮನಸ್ತಾಪ ಇದೆ, ಅದೆಲ್ಲವೂ ಪ್ರತಿಯೊಬ್ಬರ ಮನೆಯಲ್ಲಿ ಇರುವಂತದ್ದು ಎಂದು ರಂಭಾ ಇತ್ತೀಚೆಗೆ ಹೇಳಿಕೊಂಡಿದ್ದರು. ಆದರೆ ಈಗ ಅದೇ ಬಿರುಕು ದೊಡ್ಡದಾಗಿದ್ದು ವಿಚ್ಛೇದನಕ್ಕೆ ಬಂದು ನಿಂತಿದೆ, ಶೀಘ್ರದಲ್ಲೇ ರಂಭಾ ಕಾನೂನಿನ ಪ್ರಕಾರ ಡಿವೋರ್ಸ್ ಪಡೆದು ಮಕ್ಕಳೊಂದಿಗೆ ಭಾರತಕ್ಕೆ ಬಂದು ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ರಂಭಾ ಇದುವರೆಗೂ ಡಿವೋರ್ಸ್ ಬಗ್ಗೆ ತುಟಿ ಬಿಚ್ಚಿಲ್ಲ.
ಆಂಧ್ರಪ್ರದೇಶಕ್ಕೆ ಸೇರಿದ ವಿಜಯಲಕ್ಷ್ಮೀ
ರಂಭಾ ಮೊದಲ ಹೆಸರು ವಿಜಯಲಕ್ಷ್ಮೀ. ಈ ಚೆಲುವೆ ಆಂಧ್ರಪ್ರದೇಶದ ವಿಜಯವಾಡಕ್ಕೆ ಸೇರಿದವರು. ರಂಭಾ ಆಗಲೇ ನೋಡಲು ಬಹಳ ಆಕರ್ಷಕವಾಗಿದ್ದರು. ಶಾಲೆಯ ಕಾರ್ಯಕ್ರಮದಲ್ಲಿ ರಂಭಾ ನಾಟಕವೊಂದರಲ್ಲಿ ನಟಿಸಿದ್ದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ನಿರ್ದೇಶಕ ಹರಿಹರನ್ ಅವಿರಗೆ ರಂಭಾ ನಟನೆ ಇಷ್ಟವಾಗಿ ಆಕೆಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು. 'ಸರ್‌ಗಮ್' ಎಂಬ ಮಲಯಾಳಂ ಸಿನಿಮಾ ಮೂಲಕ ರಂಭಾ ಚಿತ್ರರಂಗಕ್ಕೆ ಬಂದರು. ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ವಿಜಯಲಕ್ಷ್ಮೀ ಹೆಸರನ್ನು ರಂಭಾ ಎಂದು ಬದಲಿಸಲಾಯ್ತು. ಅಲ್ಲಿಂದ ಆಚೆಗೆ ರಂಭಾ ಲಕ್ ಖುಲಾಯಿಸಿತು. ರಂಭಾ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮಾತ್ರವಲ್ಲದೆ, ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸರ್ವರ್ ಸೋಮಣ್ಣ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ
1993ರಲ್ಲಿ ತೆರೆ ಕಂಡಿದ್ದ ಜಗ್ಗೇಶ್ ಅಭಿನಯದ ಸರ್ವರ್ ಸೋಮಣ್ಣ ಚಿತ್ರದ ಮೂಲಕ ರಂಭಾ ಕನ್ನಡಕ್ಕೆ ಬಂದರು. ಕೆಂಪಯ್ಯ ಐಪಿಎಸ್, ಓ ಪ್ರೇಮವೇ, ಪಾಂಚಾಲಿ, ಭಾವ ಬಾಮೈದ, ಸಾಹುಕಾರ, ಪಾಂಡುರಂಗ ವಿಠಲ, ಗಂಡುಗಲಿ ಕುಮಾರರಾಮ, ಅನಾಥರು ಸಿನಿಮಾದಲ್ಲಿ ನಟಿಸಿದ್ದಾರೆ. ಭಾವ ಭಾಮೈದ ಚಿತ್ರದ ಪ್ರೀತಿ ನೀನಿಲ್ಲದೆ ನಾ ಹೇಗಿರಲಿ ಹಾಡು ಇಂದಿಗೂ ಯವಜನರ ಇಷ್ಟದ ಹಾಡು. ಹಿಂದಿಯಲ್ಲಿ ಕೂಡಾ ರಂಭಾ ನಟಿಸಿದ್ದು ಸಲ್ಮಾನ್ ಖಾನ್ ಜೊತೆ ಬಂಧನ್ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.
2010ರಲ್ಲಿ ಮದುವೆ ಆಗಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ಚೆಲುವೆ
2010ರಲ್ಲಿ ರಂಭಾ, ಮನೆಯಲ್ಲಿ ನೋಡಿದ ಉದ್ಯಮಿ ಇಂದ್ರಕುಮಾರ್ ಎಂಬುವರನ್ನು ಮದುವೆ ಆಗಿ ಕೆನಡಾದ ಒಂಟಾರಿಯೋ ರಾಜಧಾನಿ ಟೊರೊಂಟೊಗೆ ಹೋಗಿ ಸೆಟಲ್ ಆದರು. ರಂಭಾಗೆ ಲಾವಣ್ಯ ಹಾಗೂ ಸಾಶಾ ಎಂಬ ಇಬ್ಬರು ಹೆಣ್ಣು ಮಕ್ಕಳು, ಶಿವನ್ ಎಂಬ ಒಬ್ಬ ಗಂಡು ಮಗ ಇದ್ದಾರೆ. ಸಿನಿಮಾಗಳಿಂದ ದೂರ ಇದ್ದರೂ ರಂಭಾ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರು. ತಮ್ಮ, ಮಕ್ಕಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ. ರಂಭಾ ಮತ್ತೆ ಚಿತ್ರರಂಗಕ್ಕೆ ಬರುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದರೂ, ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿರುವ ವಿಚಾರ ಕೇಳಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವಿಭಾಗ