Year End 2024: ದರ್ಶನ್‌, ಯಶ್‌, ರಿಷಬ್‌, ರಕ್ಷಿತ್‌ ಶೆಟ್ಟಿ... ಈ ವರ್ಷ ಬೆಳ್ಳಿಪರದೆಯಿಂದ ದೂರ ಉಳಿದವರು ಯಾರ್ಯಾರು?
ಕನ್ನಡ ಸುದ್ದಿ  /  ಮನರಂಜನೆ  /  Year End 2024: ದರ್ಶನ್‌, ಯಶ್‌, ರಿಷಬ್‌, ರಕ್ಷಿತ್‌ ಶೆಟ್ಟಿ... ಈ ವರ್ಷ ಬೆಳ್ಳಿಪರದೆಯಿಂದ ದೂರ ಉಳಿದವರು ಯಾರ್ಯಾರು?

Year End 2024: ದರ್ಶನ್‌, ಯಶ್‌, ರಿಷಬ್‌, ರಕ್ಷಿತ್‌ ಶೆಟ್ಟಿ... ಈ ವರ್ಷ ಬೆಳ್ಳಿಪರದೆಯಿಂದ ದೂರ ಉಳಿದವರು ಯಾರ್ಯಾರು?

2024ನೇ ವರ್ಷ ಮಗೀತಾ ಬಂತು. ಕನ್ನಡದ ಒಂದಷ್ಟು ಸ್ಟಾರ್‌ ನಟರು ಈ ವರ್ಷ ಚಿತ್ರಮಂದಿರಗಳಿಗೆ ಆಗಮಿಸಿ, ಚಿತ್ರರಸಿಕರನ್ನು ರಂಜಿಸಿದರು. ಆದರೆ, ಇನ್ನು ಕೆಲವರು ಈ ವರ್ಷವೂ ಆಗಮಿಸಲಿಲ್ಲ. ಹಾಗಂತ ಅವರೇನು ಚಿತ್ರರಂಗದಿಂದ ದೂರವಿಲ್ಲ. ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಇವರೇ ನೋಡಿ ಈ ವರ್ಷ ಬೆಳ್ಳಿತೆರೆಯಿಂದ ದೂರ ಉಳಿದವರು.

ಈ ವರ್ಷ ಬೆಳ್ಳಿಪರದೆಯಿಂದ ದೂರ ಉಳಿದವರು ಯಾರ್ಯಾರು?
ಈ ವರ್ಷ ಬೆಳ್ಳಿಪರದೆಯಿಂದ ದೂರ ಉಳಿದವರು ಯಾರ್ಯಾರು?

Year End 2024: 2024 ಮುಗಿಯುವುದಕ್ಕೆ ಇನ್ನೊಂದೇ ದಿನ ಇದೆ. ಈ ವರ್ಷ ಯಾವೆಲ್ಲಾ ಚಿತ್ರಗಳು ಬಿಡುಗಡೆಯಾದವು? ಅವು ಎಷ್ಟು ಗಳಿಸಿದವು? ಯಾರೆಲ್ಲಾ ಮಿಂಚಿದರು ಎಂಬ ವಿಷಯಗಳು ಈಗಾಗಲೇ ಚರ್ಚೆಯಾಗಿದೆ. ಈ ವರ್ಷ ಮಿಂಚಿದವರ ಜೊತೆ ಒಂದಿಷ್ಟು ಹೀರೋಗಳ ಚಿತ್ರಗಳು ಬಿಡುಗಡೆ ಆಗಲಿಲ್ಲ. ಅವರ ಚಿತ್ರಗಳು ಬಿಡುಗಡೆ ಆಗಲಿಲ್ಲ ಎಂದ ಮಾತ್ರಕ್ಕೆ ಅವರು ಚಿತ್ರರಂಗದಿಂದ ದೂರ ಇದ್ದರು, ಚಿತ್ರಗಳಲ್ಲಿ ನಟಿಸಲಿಲ್ಲ ಎಂದರ್ಥವಲ್ಲ. ಅವರು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದರು. ಆದರೆ, ಅವರ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆ ಆಗಲಿಲ್ಲ. ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

‘ಟಾಕ್ಸಿಕ್‍’ನಲ್ಲಿ ಯಶ್‍ ಬ್ಯುಸಿ

ಯಶ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಎರಡೂವರೆ ವರ್ಷಗಳೇ ಆಗಿವೆ. 2022ರಲ್ಲಿ ಬಿಡುಗಡೆಯಾದ ‘ಕೆಜಿಎಫ್‍ 2’ ಚಿತ್ರದ ನಂತರ ಯಶ್‍ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿಲ್ಲ. ಹಾಗಂತ ಅವರು ಸುಮ್ಮನೆ ಕೂತಿಲ್ಲ. KVN ಪ್ರೊಡಕ್ಷನ್ಸ್ ನಿರ್ಮಾಣದ ಮತ್ತು ಗೀತೂ ಮೋಹನ್‍ ದಾಸ್‍ ನಿರ್ದೇಶನದ ‘ಟಾಕ್ಸಿಕ್‍’ ಚಿತ್ರದಲ್ಲಿ ಯಶ್‍ ನಟಿಸುತ್ತಾರೆ ಎಂದು ಸುದ್ದಿಯಾಯಿತು. ಅಷ್ಟೇ ಅಲ್ಲ, 2025ರ ಏಪ್ರಿಲ್‍ನಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರ ತಡವಾಗಿ ಶುರುವಾಗಿದ್ದರಿಂದ ಮತ್ತು ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿರುವುದರಿಂದ, ಚಿತ್ರ ಅಂದುಕೊಂಡಂತೆ ಬಿಡುಗಡೆ ಆಗುವುದಿಲ್ಲ. 2025ರಲ್ಲಿ ‘ಟಾಕ್ಸಿಕ್‍’ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ, ಯಾವಾಗ ಎಂಬ ಅಧಿಕೃತ ಘೋಷಣೆ ಆಗಿಲ್ಲ. ಈ ಮಧ್ಯೆ, ‘ರಾಮಾಯಣ’ ಚಿತ್ರದಲ್ಲಿ ಯಶ್‍ ನಟಿಸುತ್ತಿದ್ದು, ಚಿತ್ರವು 2026ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ಅಭಿಮಾನಿಗಳಿಗೆ ‘ಡೆವಿಲ್‍’ ಕಾಟ ಮಿಸ್ ಆಯ್ತು

ಡಿಸೆಂಬರ್ 20ಕ್ಕೆ ದರ್ಶನ್‍ ಅಭಿನಯದ ‘ದಿ ಡೆವಿಲ್‍’ ಚಿತ್ರ ಬಿಡುಗಡೆ ಆಗಬೇಕಿತ್ತು. ಒಂದಿಷ್ಟು ಚಿತ್ರೀಕರಣವೂ ಆಗಿತ್ತು. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್‍ ತಿಂಗಳಲ್ಲಿ ದರ್ಶನ್‍ ಜೈಲುಪಾಲಾದ ಕಾರಣ, ಚಿತ್ರೀಕರಣ ಮುಂದುವರೆಯಲಿಲ್ಲ. ದರ್ಶನ್ ಇದೀಗ ಜಾಮೀನಿನ ಮೇಲೆ ಹೊರಬಂದಿದ್ದಾರಾದರೂ, ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಿಕಿತ್ಸೆ ಸಂಪೂರ್ಣವಾದ ನಂತರ ಅವರು ಪುನಃ ಚಿತ್ರೀಕರಣದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರಕಾಶ್‍ ನಿರ್ದೇಶನದ ‘ದಿ ಡೆವಿಲ್‍’ ಚಿತ್ರವು 2025ರಲ್ಲಿ ಸಂಪೂರ್ಣವಾಗಿ ಬಿಡುಡೆಯಾಗಲಿದೆ.

ರಿಚರ್ಡ್ ಆಂಟನಿ ಅಧ್ಯಯನದಲ್ಲಿ ರಕ್ಷಿತ್‍ ಶೆಟ್ಟಿ

ರಕ್ಷಿತ್‍ ಶೆಟ್ಟಿ ಅಭಿನಯದ ಎರಡು ಚಿತ್ರಗಳು ಕಳೆದ ವರ್ಷ ಬಿಡುಗಡೆಯಾಗಿದ್ದವು. ಆ ಚಿತ್ರಗಳ ಬಿಡುಗಡೆಯ ನಂತರ ರಕ್ಷಿತ್‍ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟನಿ’ ಶುರುವಾಗಲಿದೆ ಎಂಬ ಸುದ್ದಿ ಇತ್ತು. ಇನ್ನು, ಈ ವರ್ಷದ ಮೇ ತಿಂಗಳಲ್ಲಿ ಚಿತ್ರ ಪ್ರಾರಂಭವಾಗಿಯೇ ಬಿಡುತ್ತದೆ ಎಂದು ರಕ್ಷಿತ್‍ ಹೇಳಿದ್ದರು. ಆದರೆ, ಚಿತ್ರ ಇದುವರೆಗೂ ಶುರುವಾಗಿಲ್ಲ. ಇತ್ತೀಚೆಗೆ ರಕ್ಷಿತ್‍ ಹೇಳಿಕೊಂಡಿರುವಂತೆ, ಅವರು ಚಿತ್ರದ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರಂತೆ. ಬಹುಶಃ ಮುಂದಿನ ವರ್ಷ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ.

‘ಕಾಂತಾರ’ದ ಮೊದಲ ಅಧ್ಯಾಯದಲ್ಲಿ ರಿಷಬ್‌ ಶಟ್ಟಿ

ಕಳೆದ ವರ್ಷದ ಕೊನೆಯಲ್ಲೇ ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ರ ಮುಹೂರ್ತವಾಗಿತ್ತು. ಈ ವರ್ಷದಿಂದ ಕುಂದಾಪುರದ ಬಳಿ ಚಿತ್ರೀಕಣವೂ ಪ್ರಾರಂಭವಾಗಿದೆ. ‘ಕಾಂತಾರ’ ಚಿತ್ರಕ್ಕಿಂತ ಇದರ ಕ್ಯಾನ್ವಾಸ್‍ ದೊಡ್ಡದಾಗಿದ್ದು, ಚಿತ್ರೀಕರಣದಲ್ಲಿ ರಿಷಬ್‌‍ ತೊಡಗಿಸಿಕೊಂಡಿದ್ದಾರೆ. 2025ರ ಅಕ್ಟೋಬರ್ 02ರಂದು ಚಿತ್ರ ಬಿಡುಗಡೆಯಾಗುತ್ತದೆ ಎಂದು ಘೋಷಿಸಲಾಗಿದ್ದು, ಅಂದುಕೊಂಡಂತೆಯೇ ಚಿತ್ರ ಮುಗಿಸುವ ನಿಟ್ಟಿನಲ್ಲಿ ರಿಷಬ್ ಕಾರ್ಯಪ್ರವೃತ್ತರಾಗಿದ್ದಾರೆ. ಈ ಮಧ್ಯೆ, ರಿಷಬ್ ಎರಡು ಪ್ಯಾನ್‍ ಇಂಡಿಯಾ ಚಿತ್ರಗಳನ್ನು ಒಪ್ಪಿಕೊಂಡಿದ್ದು, 2026 ಮತ್ತ 2027ರಲ್ಲಿ ಆ ಚಿತ್ರಗಳು ಬಿಡುಗಡೆ ಆಗಲಿವೆ.

ಚಿತ್ರಗಳಿದ್ದರೂ ಬಿಡುಗಡೆ ಆಗಲಿಲ್ಲ

ಯಶ್‍, ದರ್ಶನ್‍, ರಕ್ಷಿತ್‍ ಮತ್ತು ರಿಷಬ್‌ ಶೆಟ್ಟಿ ಅಭಿನಯದ ಚಿತ್ರಗಳ್ಯಾವುವೂ ಈ ವರ್ಷ ಬಿಡುಗಡೆಗೆ ಇರಲಿಲ್ಲ. ಅವರೆಲ್ಲರೂ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಪ್ರಜ್ವಲ್ ದೇವರಾಜ್‍ ಅಭಿನಯದ ಮೂರು ಚಿತ್ರಗಳು ಬಿಡುಗಡೆಗೆ ಇದ್ದರೂ, ಅವ್ಯಾವೂ ಬಿಡುಗಡೆ ಆಗಲಿಲ್ಲ ಎಂಬುದು ವಿಚಿತ್ರ. ಹೌದು, ಪ್ರಜ್ವಲ್‍ ಅಭಿನಯದ ‘ಮಾಫಿಯಾ’, ‘ಗಣ’ ಮತ್ತು ‘ರಾಕ್ಷಸ’ ಚಿತ್ರಗಳು ತಯಾರಾಗಿ ವರ್ಷದ ಮೇಲಾಗಿದೆ. ಆದರೆ, ಪ್ರಜ್ವಲ್ ಅಭಿನಯದ ಈ ಚಿತ್ರಗಳ ವ್ಯಾಪಾರವಾಗದ ಕಾರಣ ಚಿತ್ರತಂಡಗಳು ಬಿಡುಗಡೆ ಮಾಡಲಿಲ್ಲ. ಈ ಚಿತ್ರಗಳ ಹೊರತಾಗಿ, ಪ್ರಜ್ವಲ್‍ ಇನ್ನೂ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ‘ಚೀತಾ’. ಇನ್ನೊಂದು ‘ಕರಾವಳಿ’. ಈ ಚಿತ್ರಗಳ ಚಿತ್ರೀಕರಣ ಸಹ ಮುಕ್ತಾಯದ ಹಂತಕ್ಕೆ ಬಂದಿದೆ. ಮುಂದಿನ ವರ್ಷ ಪ್ರಜ್ವಲ್ ಅಭಿನಯದ ಮೂರಾದರೂ ಚಿತ್ರಗಳು ಬಿಡುಗಡೆ ಆಗುವ ಸಾಧ್ಯತೆ ಇದೆ.

ಹಳಬರ ಪೈಕಿ ಈ ವರ್ಷ ‘ಅಪ್ಪಾ ಐ ಲವ್‍ ಯೂ’ ಎಂಬ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಮಿಕ್ಕಂತೆ ‘ನೆನಪಿರಲಿ’ ಪ್ರೇಮ್‍ ಪೂರ್ಣಪ್ರಮಾಣ ನಾಯಕರಾಗಿ ಅಭಿನಯಿಸಿದ ಯಾವೊಂದು ಚಿತ್ರವೂ ಬಿಡುಗಡೆ ಆಗಲಿಲ್ಲ. ‘ಯುದ್ಧಕಾಂಡ’ ಎಂಬ ಚಿತ್ರವನ್ನು ಕಳೆದ ವರ್ಷವೇ ಅಜೇಯ್‍ ರಾವ್ ಶುರು ಮಾಡಿದ್ದರು. ಈ ವರ್ಷವೂ ಆ ಚಿತ್ರ ಬಿಡುಗಡೆಯಾಗಲಿಲ್ಲ. ಇನ್ನು, ನಿಖಿಲ್‍ ಕುಮಾರಸ್ವಾಮಿ ರಾಜಕೀಯದಲ್ಲಿ ಮುಂದುವರೆದ ಕಾರಣ, ಈ ವರ್ಷ ಬಿಡುಗಡೆ ಆಗಬೇಕಿದ್ದ ಅವರ ಅಭಿನಯದ ಚಿತ್ರ ಬಿಡುಗಡೆ ಆಗಲಿಲ್ಲ.

ಹೀಗೆ ಗೈರುಹಾಜರಾದವರ ಪೈಕಿ ಕೆಲವರ ಚಿತ್ರಗಳು ಮುಂದಿನ ವರ್ಷ ಬಿಡುಗಡೆ ಆಗಲಿವೆ. ಮುಂದಿನ ವರ್ಷ ಯಾರು ಬರುತ್ತಾರೆ? ಯಾರು ಗೈರಾಗುತ್ತಾರೆ? ಎಂಬುದು ಇನ್ನೊಂದಿಷ್ಟು ಸಮಯ ಸರಿದ ನಂತರ ತಿಳಿಯಲಿದೆ.

(ಲೇಖನ: ಚೇತನ್‌ ನಾಡಿಗೇರ್)

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner