ಕಿಚ್ಚ ಸುದೀಪ್ ಮ್ಯಾಕ್ಸ್ ಚಿತ್ರದಿಂದ UI ಸಿನಿಮಾ ಕಲೆಕ್ಷನ್‌ಗೆ ಪೆಟ್ಟು ಬಿತ್ತಾ? ಉಪೇಂದ್ರ ಪ್ರತಿಕ್ರಿಯೆ ಹೀಗಿದೆ
ಉಪೇಂದ್ರ ಅವರ UI (ಡಿ 20) ಮತ್ತು ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ (ಡಿ 25) ಸಿನಿಮಾ, ಒಂದೇ ವಾರದ ಅಂತರದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕನ್ನಡದ ಬಹುನಿರೀಕ್ಷಿತ ಸಿನಿಮಾಗಳು. ಇದೀಗ ಮ್ಯಾಕ್ಸ್ ಸಿನಿಮಾದಿಂದ UI ಕಲೆಕ್ಷನ್‌ಗೆ ಹೊಡೆತ ಬಿತ್ತಾ? ಎಂಬ ಪ್ರಶ್ನೆಗೆ ಉಪೇಂದ್ರ ಉತ್ತರ ನೀಡಿದ್ದಾರೆ.
Upendra About UI Collection: ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ ಎಂಬ ಸುದ್ದಿಯೊಂದು ಎರಡು ವರ್ಷಗಳ ಹಿಂದೆಯೇ ಕೇಳಿಬಂದಿತ್ತು. ಅದಕ್ಕೆ ಪೂರಕವಾಗಿ ಚಿತ್ರೀಕರಣ ಸ್ಥಳದಲ್ಲಿ ಉಪೇಂದ್ರ ಮತ್ತು ಸನ್ನಿ, ಮಾನಿಟರ್ ನೋಡುತ್ತಿರುವ ಫೋಟೋ ಸಹ ಸೋಷಿಯಲ್ ಮೀಡಿಯಾದಲ್ಲಿ ಓಡಾಡಿತ್ತು. ಆದರೆ, ‘UI’ ಚಿತ್ರ ಬಿಡುಗಡೆಯಾದಾಗ, ಪ್ರೇಕ್ಷಕರು ಶಾಕ್ ಆಗಿದ್ದರು. ಏಕೆಂದರೆ, ಇಡೀ ಚಿತ್ರದಲ್ಲಿ ಸನ್ನಿ ಲಿಯೋನ್ ಎಲ್ಲೂ ಕಂಡಿರಲಿಲ್ಲ. ಈ ನಡುವೆ, ಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿದ್ದಕ್ಕೆ, UI ಸಿನಿಮಾ ಕಲೆಕ್ಷನ್ ಕಡಿಮೆ ಆಯ್ತಾ? ಈ ಎರಡು ಪ್ರಶ್ನೆಗಳಿಗೆ ಉಪೇಂದ್ರ ಉತ್ತರಿಸಿದ್ದಾರೆ.
ಇಷ್ಟಕ್ಕೂ ಸನ್ನಿ ಲಿಯೋನ್ ಮಾಯವಾಗಿದ್ದೆಲ್ಲಿ? ಚಿತ್ರೀಕರಣದಲ್ಲಿ ಭಾಗಿಯಾಗಿದ್ದರೂ ಅವರ ದೃಶ್ಯಗಳು ಕಟ್ ಆಗಿದ್ದೇಕೆ? ದೃಶ್ಯಗಳು ಸೇರಿಸಿದರೆ ಚಿತ್ರ ಉದ್ಧ ಆಗುತ್ತದೆ ಎಂಬ ಕಾರಣಕ್ಕೆ ಕಟ್ ಆಯಿತಾ? ಎಂಬಂತಹ ಪ್ರಶ್ನೆಗಳು ಬರುವುದು ಸಹಜ. ಆದರೆ, ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸಿಯೇ ಇಲ್ಲ ಎನ್ನುತ್ತಾರೆ ಉಪೇಂದ್ರ.
ಸನ್ನಿ ಲಿಯೋನ್ ಸಿನಿಮಾದಲ್ಲಿಲ್ಲ..
ಇತ್ತೀಚೆಗೆ ನಡೆದ ಚಿತ್ರದ ಸಂತೋಷ ಕೂಟದಲ್ಲಿ ಚಿತ್ರದಿಂದ ಸನ್ನಿ ಮಾಯವಾಗಿದ್ದು ಏಕೆ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಉಪೇಂದ್ರ, ‘ಚಿತ್ರದಲ್ಲಿ ಸನ್ನಿ ನಟಿಸಿಯೇ ಇಲ್ಲ, ಅದೊಂದು ಭ್ರಮೆ. ಈ ಚಿತ್ರ ಹೇಗೆ ಸೃಷ್ಟಿ ಆಯಿತು ಗೊತ್ತಿಲ್ಲ. ಸನ್ನಿ ಲಿಯೋನ್ ಚಿತ್ರದಲ್ಲಿ ನಟಿಸಿದ್ದಾರೆ ಎಂದು ನಾನೆಲ್ಲೂ ಹೇಳಿಲ್ಲ. ಹಾಗಂತ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಮಾಡಿಲ್ಲ. ಚಿತ್ರದಲ್ಲಿ ಕೆಲವು ಧ್ವನಿಗಳಿವೆ. ಅದನ್ನು ಕೇಳಿಸಿಕೊಂಡು ಸನ್ನಿ ಚಿತ್ರದಲ್ಲಿ ನಟಿಸಿರಬಹುದು ಎಂಬ ಅಭಿಪ್ರಾಯ ಬಂದಿರಬಹುದೇನೋ?’ ಎಂದರು ಉಪೇಂದ್ರ.
ಮಾಕ್ಸ್ ಬಗ್ಗೆ ತುಟಿ ಬಿಚ್ಚದ ಉಪೇಂದ್ರ
ಸುದೀಪ್ ಅಭಿನಯದ ‘ಮ್ಯಾಕ್ಸ್’ ಬಿಡುಗಡೆಯಾದ್ದರಿಂದ, ‘UI’ ಚಿತ್ರದ ಕಲೆಕ್ಷನ್‍ಗೆ ಪೆಟ್ಟು ಬಿದ್ದಿತಾ ಎಂಬ ಪ್ರಶ್ನೆಯೂ ಎಲ್ಲರಲ್ಲಿ ಇದೆ. ಈ ಕುರಿತು ಮಾತನಾಡುವ ಉಪೇಂದ್ರ, ‘ನಮಗೆ ನಮ್ಮ ಸಿನಿಮಾ ಬಿಟ್ಟು, ಬೇರೆ ಸಿನಿಮಾಗಳ ಬಿಡುಗಡೆ ಬಗ್ಗೆ ಗೊತ್ತಿಲ್ಲ. ನಮಗೆ ನಮ್ಮ ಚಿತ್ರದ ಬಗ್ಗೆ ಮಾತ್ರ ಗೊತ್ತು. ಇದೊಂದು ದೊಡ್ಡ ಮಾರುಕಟ್ಟೆ. ಪ್ರತೀ ವಾರ ಸಿನಿಮಾಗಳು ಬಿಡುಗಡೆಯಾಗುತ್ತಿರುತ್ತವೆ. ಬೇರೆ ಚಿತ್ರಗಳಿಗೂ ನಮಗೂ ಸಂಬಂಧ ಇಲ್ಲ. ನಾವು ನಮ್ಮ ಚಿತ್ರದ ಕುರಿತು ಮಾತನಾಡಬಹುದು ಅಷ್ಟೇ’ ಎಂದರು.
ಇನ್ನು, ಚಿತ್ರದ ಕಲೆಕ್ಷನ್ ಎಷ್ಟಾಗಿದೆ ಎಂಬ ಪ್ರಶ್ನೆಗೆ ಉತ್ತರಿಸದ ಅವರು, ‘ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಎಷ್ಟು ಗಳಿಕೆ ಆಗಿದೆ ಎಂಬುದು ಮುಂದಿನ ದಿನಗಳಲ್ಲಿ ಲೆಕ್ಕ ಹಾಕಬೇಕು. ನಿರ್ಮಾಪಕರು ಖುಷಿಯಾಗಿದ್ದಾರೆ. ಚಿತ್ರದ ಗಳಿಕೆ ಚೆನ್ನಾಗಿದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಹಾಗಿದ್ದರೂ ಯಾಕೆ ಸಂಶಯ? ಯಾಕೆ ನಂಬುವುದಿಲ್ಲ? ಎಂದು ಪ್ರಶ್ನಿಸಿದರು.
‘UI’ ಚಿತ್ರವನ್ನು ಬೇರೆ ರಾಜ್ಯಗಳಲ್ಲಿ ಇನ್ನಷ್ಟು ತಲುಪಿಸಬಹುದಾಗಿತ್ತು ಎಂದು ಒಪ್ಪಿಕೊಳ್ಳುವ ಅವರು, ‘ಸಿನಿಮಾದ ಕಾಪಿ ಮೊದಲೇ ಬಂದಿದ್ದರೆ, ಇನ್ನೂ ಚೆನ್ನಾಗಿ ಪ್ರಚಾರ ಮಾಡಬಹುದಿತ್ತು. ಆದರೂ ನಮ್ಮ ಕೈಯಲ್ಲಿ ಸಾಧ್ಯವಾದಷ್ಟೂ ಪ್ರಚಾರ ಮಾಡಿದ್ದೇವೆ. ಚಿತ್ರದಲ್ಲಿ ಸಾಕಷ್ಟು ಕೆಲಸಗಳಿದ್ದರಿಂದ, ಕೊನೆಯ ಕ್ಷಣದಲ್ಲಿ ಎಲ್ಲಾ ಕಡೆ ಹೋಗಿ ಪ್ರಚಾರ ಮಾಡುವುದಕ್ಕೆ ಸಾಧ್ಯವಾಗಲಿಲ್ಲ’ ಎಂದರು.
‘UI’ ಚಿತ್ರಕ್ಕೆ ಉಪೇಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ, ರವಿಶಂಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ಮೇಧಿನಿ ಕೆಳಮನೆ ಮುಂತಾದವರು ನಟಿಸಿದ್ದಾರೆ.
(ವರದಿ: ಚೇತನ್ ನಾಡಿಗೇರ್)
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.