Bank Janardhan: ಸಿನಿಮಾ, ಕಿರುತೆರೆ, ರಂಗಭೂಮಿಯಲ್ಲಿ ನಟಿಸಿ, ಕನ್ನಡಿಗರನ್ನು ನಗೆಗಡಲಲ್ಲಿ ತೇಲಿಸಿ ಮರೆಯಾದ ಬ್ಯಾಂಕ್ ಜನಾರ್ಧನ್‌
ಕನ್ನಡ ಸುದ್ದಿ  /  ಮನರಂಜನೆ  /  Bank Janardhan: ಸಿನಿಮಾ, ಕಿರುತೆರೆ, ರಂಗಭೂಮಿಯಲ್ಲಿ ನಟಿಸಿ, ಕನ್ನಡಿಗರನ್ನು ನಗೆಗಡಲಲ್ಲಿ ತೇಲಿಸಿ ಮರೆಯಾದ ಬ್ಯಾಂಕ್ ಜನಾರ್ಧನ್‌

Bank Janardhan: ಸಿನಿಮಾ, ಕಿರುತೆರೆ, ರಂಗಭೂಮಿಯಲ್ಲಿ ನಟಿಸಿ, ಕನ್ನಡಿಗರನ್ನು ನಗೆಗಡಲಲ್ಲಿ ತೇಲಿಸಿ ಮರೆಯಾದ ಬ್ಯಾಂಕ್ ಜನಾರ್ಧನ್‌

Bank Janardhan Profile: ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆಯಲ್ಲಿ ಭಿನ್ನ, ವಿಭಿನ್ನ ಪಾತ್ರಗಳಿಗೆ ಜೀವ ತುಂಬುವ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಖ್ಯಾತ ನಟ ಬ್ಯಾಂಕ್ ಜನಾರ್ಧನ್‌ ನಮ್ಮೆಲ್ಲರನ್ನು ಅಗಲಿದ್ದಾರೆ. 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಹಾಸ್ಯಪಾತ್ರಗಳ ಮೂಲಕ ಪರಿಚಿತರಾದವರು.

ಬ್ಯಾಂಕ್ ಜನಾರ್ಧನ್‌
ಬ್ಯಾಂಕ್ ಜನಾರ್ಧನ್‌ (PC: Google )

ಅಳಿಸುವುದು ಸುಲಭ, ಆದರೆ ನಗಿಸುವುದು ಬಹಳ ಕಷ್ಟ ಎಂಬ ಮಾತಿದೆ. ಆದರೆ ತಮ್ಮ ವಿಭಿನ್ನ ಹಾಸ್ಯಪಾತ್ರಗಳು ಹಾಗೂ ಸಂಭಾಷಣೆಯ ಮೂಲಕವೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ನಟ ಬ್ಯಾಂಕ್ ಜನಾರ್ಧನ್‌. ತರ್ಲೆ ನನ್ ಮಗ, ಶ್ ಮುಂತಾದ ಸಿನಿಮಾಗಳಲ್ಲಿನ ಇವರ ಪಾತ್ರಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿವೆ. ಕನ್ನಡದ ಪ್ರಸಿದ್ಧ ಹಾಸ್ಯನಟರ ಸಾಲಿನಲ್ಲಿ ಬ್ಯಾಂಕ್ ಜನಾರ್ಧನ್‌ ಅವರ ಹೆಸರು ಅಗ್ರಸ್ಥಾನದಲ್ಲಿರುತ್ತದೆ. ದೊಡ್ಡಣ್ಣ ಟೆನ್ನಿಸ್‌ಕೃಷ್ಣರಂತಹ ಆ ಕಾಲದ ಹಾಸ್ಯನಟರಿಂದ ಹಿಡಿದು ಸಾಧುಕೋಕಿಲ, ಬುಲೆಟ್ ಪ್ರಕಾಶ್ ಅವರ ಜೊತೆಗೂ ತೆರೆ ಹಂಚಿಕೊಂಡು ಕನ್ನಡಿಗರ ಮೊಗದಲ್ಲಿ ನಗು ಅರಳಿಸಿರುವ ಧೀಮಂತ ಇವರು. ಕಿರುತೆರೆಯಲ್ಲೂ ನಟಿಸಿ ಸೈ ಎನ್ನಿಸಿಕೊಂಡವರು. 

ಬ್ಯಾಂಕ್ ಜನಾರ್ಧನ್‌ ಹಿನ್ನೆಲೆ 

ಹೆಸರು ಜನಾರ್ಧನ್‌ ಆದರೆ ಇವರು ಬ್ಯಾಂಕ್ ಜನಾರ್ಧನ್‌ ಎಂದೇ ಖ್ಯಾತಿ ಗಳಿಸಿದವರು. 1949ರಲ್ಲಿ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಜನಿಸುತ್ತಾರೆ ಜನಾರ್ಧನ್‌. ರಂಗಭೂಮಿಯ ಮೂಲಕ ನಟನೆ ಆರಂಭಿಸುವ ಇವರು ಹಾಸ್ಯಪಾತ್ರಗಳ ಮೂಲಕವೇ ಕನ್ನಡಿಗರಿಗೆ ಹೆಚ್ಚು ಪರಿಚಿತರು. 90ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ, ಅದಕ್ಕೂ ಮೊದಲು ರಂಗಭೂಮಿಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿರುತ್ತಾರೆ. ಗೌಡ್ರ ಗದ್ದಲ ಎಂಬ ನಾಟಕದಲ್ಲಿನ ಪಾತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಡುತ್ತದೆ, ಮಾತ್ರವಲ್ಲ ಆ ಪಾತ್ರದಿಂದಲೇ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ. 

ಬೊಕ್ಕ ತಲೆ, ವಿಭಿನ್ನ ಆಂಗಿಕ ಹಾವಭಾವ ಹಾಗೂ ಡೈಲಾಗ್‌ಗಳ ಮೂಲಕ ಇವರು ಜನರನ್ನು ರಂಜಿಸುತ್ತಿದ್ದರು. ಉಪೇಂದ್ರ ಹಾಗೂ ಜಗ್ಗೇಶ್ ಅವರ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಇವರಿಗೆ ಖ್ಯಾತಿ ತಂದುಕೊಟ್ಟಿದ್ದು ‘ಶ್‌‘ ಹಾಗೂ ‘ತರ್ಲೆ ನನ್ ಮಗ‘ ಸಿನಿಮಾ. ಪಾಪಾ ಪಾಂಡು ಧಾರಾವಾಹಿಯಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದರು.

ಜನಾರ್ಧನ್ ನಟಿಸಿರುವ ಸಿನಿಮಾಗಳು 

1985ರಲ್ಲಿ ಪಿತಾಮಹಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರೆ. ನಂತರ ಬೆಟ್ಟದ ತಾಯಿ, ತಾಳಿಯ ಆಣೆ, ಬಜಾರ್ ಭೀಮಾ, ತಾಯಿಗೊಬ್ಬ ಕರ್ಣ, ಪ್ರಜಾ ಪ್ರಭುತ್ವ, ಜಯನಾಯಕ, ರಾಜ ಯುವರಾಜ, ಜಾಕಿ, ಡಾಕ್ಟರ್ ಕೃಷ್ಣ, ದೇವ, ರಾಜರಾಜ್ಯದಲ್ಲಿ ರಾಕ್ಷಸರು, ಪೊಲೀಸನ ಹೆಂಡ್ತಿ, ಗೌರಿ ಗಣೇಶ, ಬೊಂಬಾಟ್ ಹೆಂಡ್ತಿ, ಗಣೇಶ ಸುಬ್ರಹ್ಮಣ್ಯ, ಎಚ್‌2ಒ, ರಕ್ತಕಣ್ಣೀರು, ರಂಗ ಎಸ್‌ಎಸ್‌ಎಲ್‌ಸಿ, ಕಾಶೀ ಫ್ರಂ ವಿಲೇಜ್‌, ಕೋಟಿಗೊಬ್ಬ 2, ಮಠ ಸೇರಿ 800ಕ್ಕೂ ಅಧಿಕ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿ ಜನರನ್ನು ರಂಜಿಸಿದ್ದಾರೆ.  2023ರಲ್ಲಿ ಬಿಡುಗಡೆಯಾದ ‘ಉಂಡೆ ನಾಮ’ ಬ್ಯಾಂಕ್ ಜನಾರ್ಧನ್‌ ನಟಿಸಿದ ಕೊನೆಯ ಸಿನಿಮಾ.

ಬ್ಯಾಂಕ್ ಜನಾರ್ಧನ್ ಎಂಬ ಹೆಸರು ಬರಲು ಕಾರಣ 

ಬ್ಯಾಂಕ್ ಉದ್ಯೋಗಿ ಕಾರಣ ಇವರಿಗೆ ಬ್ಯಾಂಕ್ ಜನಾರ್ಧನ್ ಎನ್ನುವ ಹೆಸರು ಬರುತ್ತದೆ. ಆ ಕಾಲದಲ್ಲಿ ಎಸ್ಸೆಸ್ಸೆಲ್ಸಿ ಓದಿದ್ದ ಇವರಿಗೆ ಬ್ಯಾಂಕ್ ಉದ್ಯೋಗ ದೊರೆಯುತ್ತದೆ. ನಂತರ ರಂಗಭೂಮಿ ಕಡೆಗೆ ಮನಸ್ಸು ಸೆಳೆಯತ್ತದೆ. ಇವರು ಸಿನಿಮಾಕ್ಕೆ ಬರಲು ಕಾರಣರಾದವರು ಖ್ಯಾತ ಹಾಸ್ಯನಟ ಧೀರೇಂದ್ರ ಗೋಪಾಲ್‌. ನಂತರ ಇವರ ಬದುಕನ್ನ ಬದಲಿಸಿದವರು ಕಾಶೀನಾಥ್‌.

2023ರಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಇವರು ನಂತರ ಚೇತರಿಸಿಕೊಳ್ಳುತ್ತಾರೆ. ಆದರೆ ನಟನೆಯಿಂದ ದೂರ ಉಳಿಯುತ್ತಾರೆ. ಆದರೆ ವಯೋ ಸಹಜ ಕಾಯುಲೆಗಳು ಇವರನ್ನು ಬಾಧಿಸುತ್ತಲೇ ಇದ್ದವು. ಹೀಗಾಗಿ ಆಸ್ಪತ್ರೆಗೆ ಸೇರುವ ಬ್ಯಾಂಕ್ ಜನಾರ್ದನ್ ಇಂದು (ಏಪ್ರಿಲ್ 14) ಮಧ್ಯರಾತ್ರಿ ಕೊನೆಯುಸಿರು ಎಳೆಯುತ್ತಾರೆ. ಇವರ ಸಾವಿಗೆ ಚಿತ್ರರಂಗ ಕಂಬನಿ ಹಾಗೂ ಕರುನಾಡ ಜನತೆ ಕಂಬನಿ ಮಿಡಿದಿದೆ. 

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner